ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಇನ್ನು ಮುಂದೆ ಕಾರ್ಯಕರ್ತರಿಗೆ ಅಧಿಕಾರ ಕೊಡಿ. ನಿಜವಾದ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿಗಳನ್ನು ನೀಡಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿವಿಮಾತು ಹೇಳಿದರು.
ಇಷ್ಟು ದಿನ ಏನಾಯ್ತು ಆಯ್ತು, ಯಾರಿಗೆ ಏನು ಬೇಕೋ ಅದನ್ನು ಮಾಡಿಕೊಂಡರು. ಇನ್ನು ಮುಂದೆ ಕಾರ್ಯಕರ್ತರಿಗೆ ಅಧಿಕಾರ ಕೊಡಿ. ನಿಜವಾದ ಕಾರ್ಯಕರ್ತರನ್ನು ಗುರುತಿಸಿ. ಪಕ್ಷಕ್ಕಾಗಿ ಕಷ್ಟಪಟ್ಟ ಎಲ್ಲರನ್ನೂ ಸಮಾಧಾನ ಮಾಡಿ, ಎಲ್ಲರ ಮನೆಗೂ ಹೋಗಿ ಒಂದುಗೂಡಿಸಿ ಕೆಲಸ ಮಾಡಿ ಎಂದು ಸಲಹೆ ಮಾಡಿದರು.
ಡಿ. ಕೆ. ಶಿವಕುಮಾರ್ ಮತ್ತು ಬಿ. ಕೆ. ಹರಿಪ್ರಸಾದ್ ಅವರು ಒಂದಾಗಿ, ಒಗ್ಗಟ್ಟಾಗಿ ನಡೆಯಿರಿ. ನಿಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಬಂದರೂ ಒಳಗೆ ಕೂತು ಚರ್ಚೆ ಮಾಡಿ. ಇಡೀ ಪಕ್ಷದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ, ಎಐಸಿಸಿಗೆ ಕೆಟ್ಟ ಹೆಸರು ತರಬೇಡಿ. ಅಧಿಕಾರ ಹಸ್ತಾಂತರ ಸುಸೂತ್ರವಾಗಿ ನಡೆದಿದೆ. ಅದಕ್ಕಾಗಿ ಸುರ್ಜೇವಾಲಾಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.
ಸಾವಿರಾರು ವರ್ಷಗಳಿಂದ ಆಡಳಿತ ಮಾಡುವವರೇ ಮುಂದುವರಿಯಬೇಕು ಎಂಬುದು ಬಿಜೆಪಿಯವರ ಉದ್ದೇಶ. ಇದಕ್ಕಾಗಿಯೇ ಆರ್ಎಸ್ಎಸ್, ಎಬಿವಿಪಿ ಅವರಿಗೇ ಬೆಂಬಲಿಸುವುದು. ಮೋದಿ ಕರ್ನಾಟಕಕ್ಕೆ ಏನು ಕೊಟ್ಟಿದ್ದಾರೆ? ನಿರುದ್ಯೋಗ, ಬೆಲೆ ಏರಿಕೆಯೇ ಅವರ ಸಾಧನೆ. ಮುಂದಿನ ದಿನಗಳಲ್ಲಿ ಮೋದಿ ಅವರಿಗೆ ದೊಡ್ಡ ಸಂಕಟವೊಂದು ಬರುತ್ತದೆ ಕಾದು ನೋಡಿ ಎಂದರು.
‘ಸಿಎಂ ಡಿ.ಕೆ. ಶಿವಕುಮಾರ್ ಈಗ ಯುವಕರು. ಯುವಕರು ಅನ್ನೋ ಹಾಗೇನಿಲ್ಲ, ಅವನಿಗೂ ಮೊಮ್ಮಗಳು ಬಂದಿದ್ದು, ಅಜ್ಜ ಆಗಿದ್ದಾರೆ. ಆದರೆ, ಯುವಕರಂತೆ ಓಡಾಡ್ತಾರೆ. ಬಿ. ಕೆ ಹರಿಪ್ರಸಾದ್, ಡಿ. ಕೆ. ಶಿವಕುಮಾರ್ ಇಬ್ಬರೂ ಒಟ್ಟಿಗೆ ಕೆಲಸ ಮಾಡುತ್ತಾರೆ. ಅವರಿಗೆ ಮಾರ್ಗದರ್ಶನ ಮಾಡುವುದಕ್ಕೆ ಎಲ್ಲ ನಾಯಕರಿದ್ದಾರೆ,’ ಎಂದು ಕಿವಿಮಾತು ಹೇಳಿದರು.

