ಬೆಂಗಳೂರು : ರೈತರ ವಿರೋಧದ ನಡುವೆಯೂ ಬಿಡದಿ ಟೌನ್ಶಿಪ್ ಯೋಜನೆಗಾಗಿ ಭೂ ಸ್ವಾಧೀನಕ್ಕೆ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಸರ್ಕಾರ ಭೂಸ್ವಾಧೀನ ನಿರ್ಧಾರದ ವಿರುದ್ಧ ಜೂನ್ 20ರಂದು ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಈ ಹೋರಾಟದಲ್ಲಿ ಏಳರಿಂದ ಎಂಟು ಜಿಲ್ಲೆಗಳ ರೈತರು ಭಾಗವಹಿಸುವ ನಿರೀಕ್ಷೆಯಿದೆ.
ಈ ಯೋಜನೆಯ ಮೊದಲ ಹಂತದಲ್ಲಿ ರಾಮನಗರ ಹಾಗೂ ಹಾರೋಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ 500 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಕ್ರಮ ಆರಂಭಿಸಿದೆ. ಯೋಜನಾ ವ್ಯಾಪ್ತಿಯ 9 ಕಂದಾಯ ಗ್ರಾಮಗಳ ಪೈಕಿ ಪ್ರಾರಂಭಿಕವಾಗಿ 3 ಗ್ರಾಮಗಳ 518 ಎಕರೆ ಭೂಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಪ್ರಕಟ ಮಾಡಿದೆ. ಬಿಡದಿ ಹೋಬಳಿಯ ಕೆಂಪಯ್ಯನಪಾಳ್ಯ, ಮಂಡಲಹಳ್ಳಿ ಹಾಗೂ ವಡೇರಹಳ್ಳಿ ಗ್ರಾಮದ ಸುಮಾರು 754 ರೈತರ ಜಮೀನುಗಳ ಭೂಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ರೈತರು ಸೂಕ್ತ ದಾಖಲೆ ಸಲ್ಲಿಸಿ ಪರಿಹಾರ ಪಡೆದುಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಸೂಚನೆ ನೀಡಿದ್ದು, ಪ್ರತಿ ಎಕರೆಗೆ ಕನಿಷ್ಠ 2.14 ಕೋಟಿ ರೂ. ದರ ನಿಗದಿ ಮಾಡಿದೆ. ರೈತರ ಜಮೀನು ಒಕ್ಕಲೆಬ್ಬಿಸಿ ಟೌನ್ಶಿಪ್ ನಿರ್ಮಾನ ಮಾಡದಂತೆ ಕಳೆದ ಒಂದೂವರೆ ವರ್ಷದಿಂದ ಯೋಜನೆ ವಿರೋಧಿಸಿ ರೈತರು ನಿರಂತರ ಹೋರಾಟ ಡುತ್ತಿದ್ದಾರೆ. ಆದರೆ ಬಿಡದಿ ಟೌನ್ ಶಿಪ್ ಯೋಜನೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡಿರೋ ಸಿಎಂ ಡಿ.ಕೆ ಶಿವಕುಮಾರ್, ಪಟ್ಟು ಬಿಡದೇ ಟೌನ್ ಶಿಪ್ ನಿರ್ಮಾಣದ ಪ್ರಕ್ರಿಯೆ ಮುಂದುವರೆಸಿದ್ದಾರೆ.
ಎಚ್ಡಿಕೆ ವಿರೋಧ: ಬಿಡದಿ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸಲು ಟೌನ್ ಶಿಪ್ ನೆಪದಲ್ಲಿ ನೋಟಿಫೈ ಮಾಡಿರುವ ಭೂಮಿಯ ಮಾಲೀಕರು ಅಸಲಿ ರೈತರೋ ಅಲ್ಲವೋ ಎಂಬುದನ್ನು ತೀರ್ಮಾನಿಸಲು ಸ್ವತಃ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ ನನ್ನೊಂದಿಗೆ ಆ ನೊಂದ ಹಳ್ಳಿಗಳಿಗೆ ಬರಲಿ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.
ರೈತರ ತೀವ್ರ ವಿರೋಧದ ನಡುವೆಯೂ ಬಿಡದಿ ಟೌನ್ ಶಿಪ್ ಯೋಜನೆ ಭೂ ಸ್ವಾಧೀನಕ್ಕೆ ರಾಜ್ಯ ಕಾಂಗ್ರೆಸ್ ಸರಕಾರವು ಅಂತಿಮ ಅಧಿಸೂಚನೆ ಹೊರಡಿಸಿರುವ ನಡೆಯನ್ನು ತೀವ್ರವಾಗಿ ಖಂಡಿಸಿದ ಕೇಂದ್ರ ಸಚಿವರು, ಈ ರೈತದ್ರೋಹದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು. ಭೂಮಿ ಕಳೆದುಕೊಳ್ಳುತ್ತಿರುವ ಅನ್ನದಾತ ಪರವಾಗಿ ನಾನು ಹೋರಾಡುತ್ತೇನೆ ಎಂದು ಘೋಷಿಸಿದರು.
ಸರಕಾರ ಅಂತಿಮ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ. 470 ದಿನಗಳಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿರುವುದು ಫಲವತ್ತಾದ ಕೃಷಿ ಭೂಮಿ. ಅದನ್ನು ಕಸಿದುಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡಲು ಈ ಸರಕಾರ ಹೊರಟಿದೆ. ಈಗ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಸರಕಾರ ಮಾಡುತ್ತಿದೆ. ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಎಫ್ಐಆರ್ ಹಾಕಲಾಗುತ್ತಿದೆ. ಗೃಹ ಸಚಿವರು ನೋಡಿದರೆ ಯಾವುದೇ ಎಫ್’ಐಆರ್ ಹಾಕಿಲ್ಲ ಎಂದು ಹೇಳುತ್ತಿದ್ದಾರೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಸರ್ಕಾರವೇ ದೌರ್ಜನ್ಯ ದರ್ಪ ನಡೆಸುತ್ತಿದೆ ಎಂದು ಸಚಿವ ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.
ನಾವು ಈ ಯೋಜನೆಯನ್ನು ಮಾಡಿಯೇ ಮಾಡುತ್ತೇವೆ. ಜನರು ಬೇಕಾದರೆ ಕಾನೂನು ಹೋರಾಟ ಮಾಡಿಕೊಳ್ಳಲಿ ಎಂದು ಹೇಳಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಯನ್ನು ಕಟು ಶಬ್ದಗಳಲ್ಲಿ ಖಂಡಿಸಿದ ಕೇಂದ್ರ ಸಚಿವರು; ರೈತರ ಮೇಲೆ ಈ ಸರಕಾರಕ್ಕೆ ಎಷ್ಟು ಗೌರವ ಇದೆ ಎಂಬುದಕ್ಕೆ ಈ ಹೇಳಿಕೆ ಒಂದೇ ಸಾಕು ಎಂದರು.

