ಬೆಂಗಳೂರು : ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರನೇ ಟಿ20 ಪಂದ್ಯದಲ್ಲಿ, ಹರ್ಮನ್‌ಪ್ರೀತ್ ಕೌರ್ ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ ಅವರನ್ನು ಹಿಂದಿಕ್ಕುವ ಮೂಲಕ ಮಹಿಳಾ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಧಿಕ ಪಂದ್ಯಗಳನ್ನು ಆಡಿದ ಆಟಗಾರ್ತಿ ಎಂಬ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆಯಲಿರುವ 2026ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ, ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಇದಕ್ಕೂ ಮುನ್ನ ಬಲಿಷ್ಠ ಸಿದ್ಧತೆ ನಡೆಸಿರುವ ಭಾರತ ತಂಡ, ಇಂಗ್ಲೆಂಡ್ ನೆಲದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿದೆ. ಭಾರತ ಈ ಸರಣಿಯನ್ನು 1-2 ಅಂತರದಿಂದ ಸೋತಿದ್ದರೂ, ಟಾಂಟನ್‌ನ ಕೂಪರ್ ಅಸೋಸಿಯೇಟ್ಸ್ ಕೌಂಟಿ ಗ್ರೌಂಡ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಬೃಹತ್ ವಿಶ್ವ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಹರ್ಮನ್‌ಪ್ರೀತ್ ಕೌರ್ ತಮ್ಮ ವೃತ್ತಿಜೀವನದ 368ನೇ ಅಂತರರಾಷ್ಟ್ರೀಯ ಪಂದ್ಯವನ್ನು ಆಡಲು ಮೈದಾನಕ್ಕಿಳಿದರು. ಇದರೊಂದಿಗೆ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್ ಸೇರಿದಂತೆ ಸಾರ್ವಕಾಲಿಕವಾಗಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಅವರು ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 367 ಪಂದ್ಯಗಳನ್ನು ಆಡಿರುವ ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಅಂತರರಾಷ್ಟ್ರೀಯ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಅಗ್ರ ಆಟಗಾರ್ತಿಯರ ಪಟ್ಟಿ
| ಸ್ಥಾನ | ಆಟಗಾರ್ತಿ | ದೇಶ | ಒಟ್ಟು ಪಂದ್ಯಗಳು |
| 1 | ಹರ್ಮನ್‌ಪ್ರೀತ್ ಕೌರ್ | ಭಾರತ | 368 |
| 2 | ಸೂಜಿ ಬೇಟ್ಸ್ | ನ್ಯೂಜಿಲೆಂಡ್ | 367 |
| 3 | ಎಲ್ಲಿಸ್ ಪೆರ್ರಿ | ಆಸ್ಟ್ರೇಲಿಯಾ | 357 |
| 4 | ಮಿತಾಲಿ ರಾಜ್ | ಭಾರತ | 333 |
| 5 | ಸೋಫಿ ಡಿವೈನ್ | ನ್ಯೂಜಿಲೆಂಡ್ | 313 |
ಟಿ20 ಮಹಿಳಾ ವಿಶ್ವಕಪ್ 2026 ರ ನಂತರ ಸೂಜಿ ಬೇಟ್ಸ್ ನಿವೃತ್ತಿ ಹೊಂದುತ್ತಿರುವುದರಿಂದ, ಈ ಪಟ್ಟಿಯಲ್ಲಿ ಬದಲಾವಣೆಗಳು ಮುಂದುವರಿಯಲಿವೆ. ಇದೇ ತಿಂಗಳು ನಡೆಯಲಿರುವ ವಿಶ್ವಕಪ್ ನಂತರವೂ ಹರ್ಮನ್‌ಪ್ರೀತ್ ಕೌರ್ ಆಟವನ್ನು ಮುಂದುವರಿಸಲು ನಿರ್ಧರಿಸಿದರೆ, ಅವರು ನ್ಯೂಜಿಲೆಂಡ್ ಆಟಗಾರ್ತಿಯನ್ನು ಕಾಯಂ ಆಗಿ ಹಿಂದಿಕ್ಕಿ ಅಗ್ರಸ್ಥಾನದಲ್ಲಿ ಉಳಿಯಲಿದ್ದಾರೆ.
ಹರ್ಮನ್‌ಪ್ರೀತ್ ಕೌರ್ 2009ರ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನವರೆಗೆ ಅವರು ಎಂದಿಗೂ ಹಿಂತಿರುಗಿ ನೋಡಿಲ್ಲ ಮತ್ತು ವಿಶ್ವದ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

