ಕಡ್ಡಾಯ ಕನ್ನಡ ಕಲಿಕೆಗೆ ಸಿಬಿಎಸ್ಇ ಅಡ್ಡಗಾಲು, ಎನ್ಒಸಿ ನಿಯಮ ಪರಿಷ್ಕರಣೆಯಾಗಲಿ : ಪುರುಷೋತ್ತಮ ಬಿಳಿಮಲೆ

ಬೆಂಗಳೂರು : ರಾಜ್ಯದಲ್ಲಿ 2015 ರಿಂದಲೂ ಜಾರಿಯಲ್ಲಿರುವ ಕನ್ನಡ ಭಾಷಾ ಕಲಿಕಾ ಕಾಯ್ದೆಗೆ ವಿರುದ್ಧವಾಗುವ ರೀತಿಯಲ್ಲಿ ಸಿ ಬಿ ಎಸ್ ಇ ಮಂಡಳಿ ಮೇ 15ರಲ್ಲಿ ತನ್ನ ಅಧೀನದ ಎಲ್ಲ ಶಾಲಾ ಮುಖ್ಯಸ್ಥರುಗಳಿಗೆ ಸೂಚನೆ ನೀಡಿರುವ ಕ್ರಮ ಆಕ್ಷೇಪಾರ್ಹವಾಗಿದ್ದು, ಮಂಡಳಿ ಹೊರಡಿಸಿರುವ ಆದೇಶವನ್ನು ತಕ್ಷಣವೇ ಹಿಂಪಡೆದು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರವನ್ನು ರಾಜ್ಯ ಸರ್ಕಾರವು ಒತ್ತಾಯಿಸಬೇಕೆಂದು ಹಾಗೂ ನಿರಾಕ್ಷೇಪಣಾ ಪತ್ರ ನೀಡಿಕೆ (ಎನ್.ಒ.ಸಿ.) ನಿಯಮಗಳ ಸಮಗ್ರ ಪರಿಷ್ಕರಣೆಗೆ ಮುಂದಾಗಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.

ಈ ಕುರಿತಂತೆ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಪತ್ರ ಬರೆದಿರುವ ಅವರು, ಶಿಕ್ಷಣವು ಭಾರತೀಯ ಸಂವಿಧಾನದ ಸಮವರ್ತಿ ಪಟ್ಟಿಗೆ ಸೇರಿರುವ ವಿಷಯವಾಗಿರುವುದರಿಂದ ಈ ವಿಷಯದಲ್ಲಿ ರಾಜ್ಯ ಸರ್ಕಾರವನ್ನು ವಿಶ್ವಾಸಕ್ಕೇ ತೆಗೆದುಕೊಳ್ಳದೆ ಮಂಡಳಿ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದು, ರಾಜ್ಯವು ಜಾರಿಗೊಳಿಸಿರುವ ಭಾಷಾ ಕಾನೂನುಗಳನ್ನು ದುರ್ಬಲಗೊಳಿಸುವ ಅಥವಾ ಅದರ ವಿರುದ್ಧ ಆದೇಶಗಳನ್ನು ಹೊರಡಿಸಿರುವ ಈ ಕ್ರಮ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.

ಕನ್ನಡ ಭಾಷಾ ಕಲಿಕಾ ಕಾಯ್ದೆಯು ರಾಜ್ಯದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡದ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ಕನ್ನಡವನ್ನು ಮೊದಲ ಅಥವಾ ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಳ್ಳುವ ಅನಿವಾರ್ಯತೆ ಪ್ರತಿ ವಿದ್ಯಾರ್ಥಿಗೆ ಇದ್ದು, ನಾಡಿನಲ್ಲಿ ಕನ್ನಡ ಉಳಿಯುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎನ್ನುವ ಅಂಶವನ್ನು ಸ್ಮರಿಸಿರುವ ಬಿಳಿಮಲೆ, ರಾಜ್ಯದಲ್ಲಿ ಸಿ ಬಿ ಎಸ್ ಇ ಶಾಲೆಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಒಮ್ಮೆ ನಿರಾಕ್ಷೇಪಣಾ ಪತ್ರವನ್ನು ನೀಡಿದ ಬಳಿಕ ಈ ಶಾಲೆಗಳ ಮೇಲೆ ಶಿಕ್ಷಣ ಇಲಾಖೆಯ ನಿಯಂತ್ರಣ ಸೀಮಿತವಾಗುವ ಹಿನ್ನೆಲೆಯಲ್ಲಿ ಸಿ ಬಿ ಎಸ್ ಇ ಮಂಡಳಿಯ ಈ ಕ್ರಮವು ಗಂಭೀರವಾಗಿದ್ದು, ಈ ಬಗ್ಗೆ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರವು ಸಿ ಬಿ ಎಸ್ ಇ ಶಾಲೆಗಳಿಗೆ ನೀಡುವ ಎನ್.ಒ.ಸಿ. ನಿಯಮಾವಳಿಗಳನ್ನು ಕನ್ನಡ ಪರವಾಗಿ ಮತ್ತಷ್ಟು ಕಠಿಣಗೊಳಿಸಬೇಕೆಂದು ಶಿಕ್ಷಣ ಸಚಿವರನ್ನು ಆಗ್ರಹಿಸಿರುವ ಬಿಳಿಮಲೆ, ಈ ಕುರಿತು ಸರ್ಕಾರಕ್ಕೆ ಕೆಳಕಂಡ ಸಲಹೆಗಳನ್ನು ನೀಡಿದ್ದಾರೆ.

  1. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಿ ಬಿ ಎಸ್ ಇ ಶಾಲೆ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಬದಿಗಿಡುವ ವ್ಯವಸ್ಥೆಗೆ ಕೂಡಲೇ ಕಡಿವಾಣ ಹಾಕಬೇಕು. ಸಿ ಬಿ ಎಸ್ ಇ ಮಂಡಳಿ ಉಲ್ಲೇಖಿಸಿದಂತೆ ಆರ್ 1/ ಆರ್ 2 ವಿಷಯ ಕಡ್ಡಾಯವಾಗಿ ಕನ್ನಡವೇ ಇರಬೇಕು.
  2. ರಾಜ್ಯ ಸರ್ಕಾರವು ಅನುಷ್ಠಾನ ಮಾಡುವ ಎನ್.ಒ.ಸಿ. ವ್ಯವಸ್ಥೆಯನ್ನು ವಾರ್ಷಿಕ ನವೀಕರಣಕ್ಕೆ ಒಳಪಡಿಸಬೇಕು. ಕನ್ನಡ ಬೋಧನೆ, ವಿದ್ಯಾರ್ಥಿಗಳ ಕನ್ನಡ ಆಯ್ಕೆ, ಕನ್ನಡ ಶಿಕ್ಷಕರ ನೇಮಕಾತಿ ಮತ್ತು ಭಾಷಾ ಅನುಷ್ಠಾನದ ಸಮಗ್ರ ವರದಿಯನ್ನು ಸಹ ಆಧಾರಿಸಿ ಎನ್.ಒ.ಸಿ. ನವೀಕರಣ ವ್ಯವಸ್ಥೆಯನ್ನು ಜಾರಿ ಮಾಡಬೇಕು.
  3. ಕನ್ನಡ ಅನುಷ್ಠಾನದಲ್ಲಿ ಲೋಪ ಕಂಡುಬಂದಲ್ಲಿ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು ರದ್ದುಪಡಿಸುವ ಅಧಿಕಾರವನ್ನು ರಾಜ್ಯ ಸರ್ಕಾರವು ಕಾಯ್ದಿರಿಸಿಕೊಳ್ಳಬೇಕು.
  4. ಎಲ್ಲ ಸಿ.ಬಿ.ಎಸ್.ಇ ಶಾಲೆಗಳಲ್ಲಿ ಅರ್ಹ ಕನ್ನಡ ಶಿಕ್ಷಕರ ನೇಮಕಾತಿಯನ್ನು ಕಡ್ಡಾಯಗೊಳಿಸಬೇಕು. ಕನ್ನಡ ವಿಷಯವನ್ನು ಕೇವಲ ಪಠ್ಯಕ್ರಮದಲ್ಲಿ ಸೇರಿಸುವುದಷ್ಟೇ ಅಲ್ಲದೇ, ಸಮರ್ಪಕ ಬೋಧನಾ ವ್ಯವಸ್ಥೆ ಜಾರಿಯಾಗಬೇಕು.
  5. ರಾಜ್ಯದ ಭಾಷಾ ನೀತಿಯನ್ನು ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನುಬದ್ಧ ನಿಯಂತ್ರಣ ಕ್ರಮಗಳನ್ನು ರೂಪಿಸುವ ಅಗತ್ಯವಿದ್ದು, ಈ ಸಂಬಂಧ ಸದನ ಸಮಿತಿಯೊಂದನ್ನು ಅಥವಾ ತಜ್ಞರ ಸಮಿತಿಯೊಂದನ್ನು ರಚಿಸಿ ಸಮಗ್ರ ಶಿಫಾರಸ್ಸುಗಳನ್ನು ಪಡೆದು ಜಾರಿಗೆ ತರಬೇಕು.

ಕರ್ನಾಟಕದಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಂದು ವಿದ್ಯಾರ್ಥಿಯು ಕನ್ನಡದೊಂದಿಗೆ ಬಾಂಧವ್ಯವನ್ನು ಹೊಂದುವಂತೆ ಮಾಡುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದಿರುವ ಬಿಳಿಮಲೆ, ಕನ್ನಡದ ಹಿತಾಸಕ್ತಿಗೆ ವಿರುದ್ಧವಾಗಿರುವ ಯಾವುದೇ ಕ್ರಮದ ಎದುರು ರಾಜ್ಯ ಸರ್ಕಾರವು ದೃಢ ನಿಲುವನ್ನು ತಾಳುವ ಅನಿವಾರ್ಯತೆ ಇದೆ ಎಂದಿದ್ದಾರೆ.

More articles

Latest article

Most read