ಜೈಪುರ : ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026 ರ 64 ನೇ ಪಂದ್ಯದಲ್ಲಿ ಇಂದು ರಾಜಸ್ಥಾನ್ ರಾಯಲ್ಸ್ (RR) ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗುತ್ತಿವೆ. ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯವು ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಅತ್ಯಂತ ನಿರ್ಣಾಯಕವಾಗಿದೆ.
ಟೂರ್ನಿಯ 63 ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಜಯಭೇರಿ ಬಾರಿಸುವುದರೊಂದಿಗೆ ಪ್ಲೇಆಫ್ಸ್‌ನ ಮೊದಲ ಮೂರು ಸ್ಥಾನಗಳು ಈಗಾಗಲೇ ಖಚಿತವಾಗಿವೆ. ಇನ್ನುಳಿದ ಏಕೈಕ ಸ್ಥಾನಕ್ಕಾಗಿ ಸದ್ಯ ಐದು ತಂಡಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಪ್ರಸ್ತುತ 12 ಅಂಕಗಳನ್ನು ಹೊಂದಿರುವ ರಾಜಸ್ಥಾನ್ ರಾಯಲ್ಸ್, ಪ್ಲೇಆಫ್ಸ್ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ. ರಾಜಸ್ಥಾನ್ ತಂಡಕ್ಕೆ ಇನ್ನು ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಎರಡರಲ್ಲೂ ಗೆದ್ದರೆ 16 ಅಂಕಗಳೊಂದಿಗೆ ಸುಲಭವಾಗಿ ಅಗ್ರ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಲಿದೆ. ಆದರೆ, ಇಂದು ಒಂದೊಮ್ಮೆ ಸೋತರೆ ಇತರ ತಂಡಗಳ ಫಲಿತಾಂಶದ ಮೇಲೆ ಅವಲಂಬಿತವಾಗಬೇಕಾಗುತ್ತದೆ.
ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್ ಈಗಾಗಲೇ ಪ್ಲೇಆಫ್ಸ್ ರೇಸ್‌ನಿಂದ ಹೊರಬಿದ್ದಿದ್ದರೂ, ಕಳೆದ ಪಂದ್ಯದಲ್ಲಿ ಸಿಎಸ್ಕಿ ವಿರುದ್ಧ ಭರ್ಜರಿ ಜಯ ಸಾಧಿಸಿ ಬಲಿಷ್ಠ ಫಾರ್ಮ್‌ನಲ್ಲಿದೆ. ಹೀಗಾಗಿ ಇಂದು ಕೇವಲ ಪ್ರತಿಷ್ಠೆಗಾಗಿ ಆಡಲಿರುವ ಲಕ್ನೋ, ರಾಜಸ್ಥಾನ್ ತಂಡಕ್ಕೆ ಅನಿರೀಕ್ಷಿತ ಶಾಕ್ ನೀಡುವ ತವಕದಲ್ಲಿದೆ.
ಪಂದ್ಯದ ವಿವರಗಳು
ಮೈದಾನ: ಸವಾಯಿ ಮಾನ್ಸಿಂಗ್ ಕ್ರೀಡಾಂಗಣ, ಜೈಪುರ
ಟಾಸ್ ಸಮಯ: ರಾತ್ರಿ 7:00 ಗಂಟೆಗೆ
ಪಂದ್ಯ ಆರಂಭ: ರಾತ್ರಿ 7:30 ಗಂಟೆಗೆ
ಪಂದ್ಯದ ಭವಿಷ್ಯ
ಮುಖಾಮುಖಿ ದಾಖಲೆಗಳಲ್ಲಿ ರಾಜಸ್ಥಾನ್ ರಾಯಲ್ಸ್ ಮೇಲುಗೈ ಹೊಂದಿದ್ದರೂ, ಸದ್ಯ ಸತತ ಮೂರು ಪಂದ್ಯಗಳನ್ನು ಸೋತು ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಅಚ್ಚರಿಯೆಂದರೆ, ಈ ಸೀಸನ್‌ನಲ್ಲಿ ಜೈಪುರದ ತಮ್ಮದೇ ಹೋಮ್ ಗ್ರೌಂಡ್‌ನಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಆರ್‌ಆರ್ ಸೋಲೊಪ್ಪಿಕೊಂಡಿದೆ.
ಜೈಪುರದಲ್ಲಿ ಸಂಜೆಯ ವೇಳೆ ಭಾರಿ ಪ್ರಮಾಣದ ಇಬ್ಬನಿ ಬೀಳುವ ಸಾಧ್ಯತೆಯಿರುವುದರಿಂದ ಟಾಸ್ ಪ್ರಮುಖ ಪಾತ್ರ ವಹಿಸಲಿದೆ. ಎರಡನೇ ಬ್ಯಾಟಿಂಗ್ ಮಾಡುವ ತಂಡಕ್ಕೆ ಪಿಚ್ ಹೆಚ್ಚು ಸಹಕರಿಸಲಿದೆ. ಒಂದು ವೇಳೆ ಟಾಸ್ ಗೆದ್ದು ಲಕ್ನೋ ಚೇಸಿಂಗ್ ಆಯ್ದುಕೊಂಡರೆ, ಯಾವುದೇ ಒತ್ತಡವಿಲ್ಲದೆ ಮುಕ್ತವಾಗಿ ಆಡಿ ರಾಜಸ್ಥಾನ್ ರಾಯಲ್ಸ್ ತಂಡದ ಪ್ಲೇಆಫ್ಸ್ ಕನಸಿಗೆ ತಣ್ಣೀರೆರಚುವ ಸಾಧ್ಯತೆ ದಟ್ಟವಾಗಿದೆ.
ಸಂಭಾವ್ಯ ತಂಡಗಳು
ರಾಜಸ್ಥಾನ್ ರಾಯಲ್ಸ್ (RR) ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ರವಿ ಸಿಂಗ್, ಡೊನೊವನ್ ಫೆರೇರಾ, ಶುಭಂ ದುಬೆ, ಜೋಫ್ರಾ ಆರ್ಚರ್, ಆಡಮ್ ಮಿಲ್ನೆ, ರವೀಂದ್ರ ಜಡೇಜಾ, ಸಂದೀಪ್ ಶರ್ಮಾ, ಶಿಮ್ರಾನ್ ಹೆಟ್ಮೆಯರ್, ತುಷಾರ್ ದೇಶಪಾಂಡೆ, ನಾಂದ್ರೆ ಬರ್ಗರ್.
ಲಕ್ನೋ ಸೂಪರ್ ಜೈಂಟ್ಸ್ (LSG) ಮಿಚೆಲ್ ಮಾರ್ಷ್, ನಿಕೋಲಸ್ ಪೂರನ್, ಐಡೆನ್ ಮಾರ್ಕ್ರಾಮ್, ರಿಷಭ್ ಪಂತ್ (ನಾಯಕ/ವಿಕೆಟ್ ಕೀಪರ್), ಮುಕುಲ್ ಚೌಧರಿ, ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮೊಹಮ್ಮದ್ ಶಮಿ, ಮಯಾಂಕ್ ಯಾದವ್, ಆಯುಷ್ ಬದೋನಿ, ಆವೇಶ್ ಖಾನ್, ಮೊಹ್ಸಿನ್ ಖಾನ್, ಅರ್ಜುನ್ ತೆಂಡೂಲ್ಕರ್.

