ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಪ್ರಧಾನಿ ನರೇಂದ್ರ ಮೋದಿಯವರ ಆರ್ಥಿಕ ನೀತಿಗಳು ಮತ್ತು ಇತ್ತೀಚಿನ ಹೇಳಿಕೆಗಳ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಜನರಿಂದ ತ್ಯಾಗವನ್ನು ನಿರೀಕ್ಷಿಸುವ ಆಡಳಿತವನ್ನು “ಮೋದಿ ಮ್ಯಾಜಿಕ್” ಎಂದು ವ್ಯಂಗ್ಯವಾಡಿದ್ದು,ಇದೇನಾ ಅಚ್ಚೇ ದಿನ್ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಬಂಗಾರ ತ್ಯಜಿಸುವುದು ಅಚ್ಚೆ ದಿನ್, ಬದುಕು ತ್ಯಜಿಸುವುದು ಅಮೃತ್ ಕಾಲ್” ಎಂದು ಹೇಳಿ, ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಜನರ ಮೇಲೆ ಹೊಣೆಗಾರಿಕೆಯನ್ನು ಹಾಕುತ್ತಿದೆ ಎಂದು ಆರೋಪಿಸಿದರು.
ಕೋವಿಡ್ ಕಾಲದ ನಿರ್ವಹಣೆಯನ್ನು ಉಲ್ಲೇಖಿಸಿದ ಖರ್ಗೆ, “ಆ ಸಮಯದಲ್ಲಿ ತಟ್ಟೆ ಬಡಿಯಿರಿ, ದೀಪ ಹಚ್ಚಿರಿ ಎಂದು ಹೇಳುತ್ತಲೇ ಲಕ್ಷಾಂತರ ಜನರ ಜೀವ ಹಾನಿಯಾಯಿತು” ಎಂದು ಟೀಕಿಸಿದರು. ಅದೇ ರೀತಿ ನೋಟು ಅಮಾನತು ಸಂದರ್ಭದಲ್ಲಿ 50 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ ಎಂದು ಹೇಳಿ ಜನರನ್ನು ಸಂಕಷ್ಟಕ್ಕೆ ತಳ್ಳಲಾಗಿದೆ ಎಂದರು.
ಇತ್ತೀಚೆಗೆ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮಿತವಾಗಿ ಬಳಸಿ, ಸರಳ ಜೀವನ ನಡೆಸಿ ಎಂಬ ಸಲಹೆಗಳನ್ನು ನೀಡಲಾಗುತ್ತಿದೆ ಎಂದು ಹೇಳಿದ ಅವರು, “ಇವು ಭವಿಷ್ಯದಲ್ಲಿ ಇನ್ನೂ ಕಠಿಣ ಆರ್ಥಿಕ ಪರಿಸ್ಥಿತಿಯ ಸೂಚನೆಗಳೇ?” ಎಂದು ಪ್ರಶ್ನಿಸಿದರು.
2024ರಲ್ಲಿ “ಕಾಂಗ್ರೆಸ್ ಮಹಿಳೆಯರಮಂಗಳಸೂತ್ರ ಕಸಿಯುತ್ತದೆ” ಎಂದು ಮೋದಿಯವರು ಹೇಳಿದ್ದರು. ಆದರೆ ಈಗ ಬಂಗಾರದ ಮೇಲಿನ ಆಮದು ಸುಂಕವನ್ನು 6%ರಿಂದ 15%ಕ್ಕೆ ಏರಿಸಿರುವುದು ಹಾಗೂ ಬಂಗಾರದ ಬೆಲೆ ಏರಿಕೆಯ ನಡುವೆಯೇ ಖರೀದಿಸಬೇಡಿ ಎನ್ನುವುದು ವಿರೋಧಾಭಾಸವಲ್ಲವೇ ಎಂದು ಪ್ರಶ್ನಿಸಿದ್ದಾರೆ. ಈಗ ಮಂಗಳಸೂತ್ರ ಕಸಿಯಲು ಕೈ ಹಾಕಿದವರು ಯಾರು?” ಎಂದು ಅವರು ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.
ಇಂಧನ ಬೆಲೆ ಏರಿಕೆಯ ಮೇಲೂ ಖರ್ಗೆ ಕಿಡಿಕಾರಿದ್ದು, ಗ್ಯಾಸ್ ಬೆಲೆಗಳ ಏರಿಕೆಯ ನಂತರ ಈಗ ಇಂಧನ ತೈಲಗಳ ಬೆಲೆಯಲ್ಲೂ “ಸರ್ಜಿಕಲ್ ಸ್ಟ್ರೈಕ್” ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ. ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಕೂಡ ಪ್ರಶ್ನೆ ಎತ್ತಿರುವ ಅವರು, ದೇಶ ಎಕನಾಮಿಕಲ್ ಎಮರ್ಜೆನ್ಸಿ ಸ್ಥಿತಿಯಲ್ಲಿದೆಯೇ? ಖಜಾನೆಯ ಸ್ಥಿತಿ ಏನು? ಇಂಧನ ಭದ್ರತೆಗೆ ಸರ್ಕಾರ ಕೈಗೊಂಡ ಕ್ರಮಗಳೇನು?” ಎಂದು ಪ್ರಶ್ನಿಸಿದ್ದಾರೆ.
ಚಿನ್ನ ಖರೀದಿಸಬೇಡಿ ಎಂಬ ಸಲಹೆ ನೀಡುವ ಮೊದಲು, ಭಾರತದ ಸುಮಾರು 85 ಬಿಲಿಯನ್ ಡಾಲರ್ ಮೌಲ್ಯದ ಜ್ಯುವೆಲ್ಲರಿ ಉದ್ಯಮದ ಮೇಲೆ ಅವಲಂಬಿತವಾಗಿರುವ ಕುಟುಂಬಗಳ ಬಗ್ಗೆ ಸರ್ಕಾರ ಯೋಚಿಸಬೇಕಿತ್ತು ಎಂದು ಹೇಳಿದರು.
ಈ ಎಲ್ಲಾ ವಿಷಯಗಳ ಕುರಿತು ಪ್ರಧಾನಮಂತ್ರಿಗಳು ಶ್ವೇತಪತ್ರ ಹೊರಡಿಸಬೇಕು, ಇಲ್ಲವೇ ವಿಶೇಷ ಅಧಿವೇಶನ ಕರೆಯಬೇಕು ಅಥವಾ ಕನಿಷ್ಠ ಪತ್ರಿಕಾಗೋಷ್ಠಿ ನಡೆಸಿ ನೈಜ ಪರಿಸ್ಥಿತಿಯನ್ನು ದೇಶದ ಜನತೆಗೆ ತಿಳಿಸಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.

