ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ವಿಭಾಗದ ಬಗ್ಗೆ ಚರ್ಚಿಸುವಾಗ ಜಸ್ಪ್ರೀತ್ ಬುಮ್ರಾ ಅವರನ್ನು ತಪ್ಪಾಗಿ ‘ಚುಮ್ರಾ’ ಎಂದು ಕರೆದ ವೀರೇಂದ್ರ ಸೆಹ್ವಾಗ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಭಾರತದ ದಂತಕಥೆ ವೀರೇಂದ್ರ ಸೆಹ್ವಾಗ್ ಅವರು ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ‘ಚುಮ್ರಾ’ ಎಂದು ಕರೆದ ಕಾರಣಕ್ಕಾಗಿ ನೆಟ್ಟಿಗರಿಂದ ಟೀಕೆಗೆ ಗುರಿಯಾಗಿದ್ದಾರೆ. ಐಪಿಎಲ್ 2026ರ ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೂ ಮೊದಲು, ಸೆಹ್ವಾಗ್ ‘ಕ್ರಿಕ್ಬಜ್’ ಕಾರ್ಯಕ್ರಮದಲ್ಲಿ ಮುಂಬೈ ತಂಡದ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬುಮ್ರಾ ಹೆಸರನ್ನು ‘ಚುಮ್ರಾ’ ಎಂದು ಉಚ್ಚರಿಸಿದರು. ತಕ್ಷಣವೇ ಅವರು ತಮ್ಮ ತಪ್ಪನ್ನು ಸರಿಪಡಿಸಿಕೊಂಡರೂ ಸಹ, ಆ ವಿಡಿಯೋ ತುಣುಕು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಎಡವಟ್ಟಿನಿಂದ ಅಸಮಾಧಾನಗೊಂಡಿರುವ ಬುಮ್ರಾ ಅಭಿಮಾನಿಗಳು ಸೆಹ್ವಾಗ್ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ.
ಐಪಿಎಲ್ 2026ರಲ್ಲಿ ಬುಮ್ರಾ ಅಸ್ಥಿರ ಪ್ರದರ್ಶನ
ಐಸಿಸಿ ಶ್ರೇಯಾಂಕದಲ್ಲಿ ಅಗ್ರಸ್ಥಾನದಲ್ಲಿದ್ದರೂ, ಪ್ರಸಕ್ತ ಐಪಿಎಲ್ 2026ರಲ್ಲಿ ಬುಮ್ರಾ ಅವರ ಪ್ರದರ್ಶನ ಅಷ್ಟೇನೂ ಆಶಾದಾಯಕವಾಗಿಲ್ಲ. ಈ ಸೀಸನ್ನಲ್ಲಿ ಆಡಿದ 11 ಪಂದ್ಯಗಳಲ್ಲಿ ಅವರು ಕೇವಲ 3 ವಿಕೆಟ್ ಪಡೆದಿದ್ದಾರೆ. ಅವರ ಸರಾಸರಿ 116.33 ರಷ್ಟಿದ್ದು, ಎಕಾನಮಿ ರೇಟ್ 8.5ಕ್ಕಿಂತ ಹೆಚ್ಚಿದೆ.
ಆರಂಭಿಕ ಐದು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆಯಲು ವಿಫಲವಾಗಿದ್ದ ಅವರು, ನಂತರ ಗುಜರಾತ್ ಟೈಟಾನ್ಸ್ ಮತ್ತು ಸಿಎಸ್ಕೆ ವಿರುದ್ಧ ತಲಾ ಒಂದು ವಿಕೆಟ್ ಪಡೆದಿದ್ದರು. ಆದರೆ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 54 ರನ್ ಬಿಟ್ಟುಕೊಟ್ಟು ದುಬಾರಿಯಾದರು. ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲೂ 45 ರನ್ ನೀಡಿ ನಿರಾಸೆ ಮೂಡಿಸಿದರು. ಮುಂಬೈ ಇಂಡಿಯನ್ಸ್ ಈಗಾಗಲೇ ಪ್ಲೇ-ಆಫ್ ರೇಸ್ನಿಂದ ಹೊರಬಿದ್ದಿದ್ದರೂ, ಬುಮ್ರಾ ಉಳಿದ ಪಂದ್ಯಗಳಲ್ಲಿ ಲಯಕ್ಕೆ ಮರಳಿ ಪ್ರಭಾವಶಾಲಿ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.

