ಬೆಂಗಳೂರು : “ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಜಿಎ) ವ್ಯಾಪ್ತಿಯಲ್ಲಿ ಈವರೆಗೂ 23 ಲಕ್ಷ ಖಾತಾಗಳನ್ನು ಬಿಡುಗಡೆ ಮಾಡಲಾಗಿದ್ದು, ದೇಶದಲ್ಲೇ ಇದೊಂದು ದಾಖಲೆ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಜಿಬಿಎ ವ್ಯಾಪ್ತಿಯ ಎಲ್ಲಾ ಐದು ಪಾಲಿಕೆಗಳಲ್ಲಿ ಮೇ 16 ರಿಂದ ಪ್ರತಿ ಶನಿವಾರ ಸುಮಾರು 50 ಕಡೆಗಳಲ್ಲಿ ಓಪನ್ ಹೌಸ್ ಕೌಂಟರ್ ತೆರೆದು. ‘ನಮ್ಮ ಇ ಖಾತಾ’ ಆಂದೋಲನ ನಡೆಸಲಾಗುವುದು. ಜನರಿಗೆ ಭೂಮಿ ಗ್ಯಾರಂಟಿ ನೀಡಲಾಗುವುದು” ಎಂದರು.
ಪಾಲಿಕೆ ಕಚೇರಿಗಳಲ್ಲಿ ಜನಸಂದಣಿ ಉಂಟಾಗಬಹುದು ಎಂದು ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಈ ಆಂದೋಲನ ಹಮ್ಮಿಕೊಳ್ಳಲಾಗುವುದು. ಪ್ರತಿ ವಾರ ಅಂದಾಜು 5 ಸಾವಿರ ಜನರ ದೂರುಗಳಿಗೆ ಪರಿಹಾರ ನೀಡಲಾಗುವುದು. ಪ್ರತಿ ಪಾಲಿಕೆಗಳಲ್ಲಿ 5-10 ಕೌಂಟರ್ ಗಳನ್ನು ತೆರೆಯಲಾಗುವುದು. ದಟ್ಟಣೆ ಇರುವ ಕಡೆ ಹೆಚ್ಚು ಕೌಂಟರ್ ಗಳು, ಕಡಿಮೆ ದಟ್ಟಣೆ ಇರುವ ಕಡೆ ಕಡಿಮೆ ಕೌಂಟರ್ ಗಳನ್ನು ತೆರೆಯಲಾಗುವುದು ಎಂದು ಹೇಳಿದರು.
ಕೌಂಟರ್ ಗಳ ಬಗ್ಗೆ ಜಾಹೀರಾತು, ಕಟೌಟ್, ವೆಬ್ ಸೈಟ್ ಸೇರಿದಂತೆ ಎಲ್ಲಾ ಕಡೆ ಮಾಹಿತಿ ನೀಡಲಾಗುವುದು. ದಾಖಲೆ ತಕರಾರು ಇರುವ ಕಡೆ, ಅನುಮಾನ ಇರುವ ಕಡೆ ಕಂದಾಯ ಅಧಿಕಾರಿಗಳು ತೆರಳಿ ಸ್ಥಳ ಪರಿಶೀಲನೆ ನಡೆಸಿ ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಬಗೆಹರಿಸಲಾಗುವುದುಎಂದರು.
ಫೋಟೋ, ಸ್ಕೆಚ್, ನಕ್ಷೆ, ಜಿಪಿಎಸ್ ಸೇರಿದಂತೆ ಭಾವಚಿತ್ರ ಎಲ್ಲವೂ ದಾಖಲೆಯಲ್ಲಿ ಇರುವುದು. ಆಧಾರ್ ಸೇರಿದಂತೆ ನಿಗದಿತ ಸಂಖ್ಯೆ ನೀಡಿದರೆ ಈ ದಾಖಲೆಗಳನ್ನು ಯಾರು ಬೇಕಾದರೂ ನೋಡಬಹುದು. ಕಂದಾಯ ಅಧಿಕಾರಿ, ಡೆಪ್ಯುಟಿ ಸೆಕ್ರೆಟರಿ, ಜಂಟಿ ಕಾರ್ಯದರ್ಶಿ ಇದರ ಜವಾಬ್ದಾರಿ ಹೊಂದಿರುತ್ತಾರೆ. ಎರಡನೇ, ನಾಲ್ಕನೇ ಶನಿವಾರ ಕೆಲಸ ಮಾಡುವ ಅಧಿಕಾರಿಗಳಿಗೆ ಪರ್ಯಾಯವಾಗಿ ಇನ್ನೊಂದು ದಿನ ರಜೆ ನೀಡಲಾಗುವುದು ಎಂದರು.
10 ತಿಂಗಳಲ್ಲಿ 23 ಲಕ್ಷಕ್ಕೂ ಹೆಚ್ಚು ಖಾತೆ : ಸ್ವಾಧೀನ ಪತ್ರ ಹೊಂದಿರುವ ಅಪಾರ್ಟ್ಮೆಂಟ್ ಗಳ ಖಾತೆಗಳನ್ನು ಸ್ವಯಂಚಾಲಿತವಾಗಿ ಮಾಡಿಕೊಡಲಾಗುವುದು. 10 ತಿಂಗಳಲ್ಲಿ ಆನ್ ಲೈನ್ ಮೂಲಕ 23 ಲಕ್ಷಕ್ಕೂ ಹೆಚ್ಚು ಖಾತೆಗಳನ್ನು ಮಾಡಿರುವುದು ಇಡೀ ದೇಶದಲ್ಲಿ ದಾಖಲೆ ಬರೆದಿದೆ. 37,480 ಫ್ಲಾಟ್ ಗಳಿಗೆ ಓಸಿ ನೀಡಲಾಗಿದೆ.
10 ಲಕ್ಷ ಜನರಿಗೆ ಈಗಾಗಲೇ ವಾಟ್ಸಪ್ ಮೂಲಕ ಖಾತೆಗಳ ಡಿಜಿಟಲ್ ಪ್ರತಿ ಕಳಿಸಲಾಗಿದೆ. ಮಿಕ್ಕವರಿಗೆ ಕಳಿಸಲಾಗುತ್ತದೆ. ಭೌತಿಕ ಪ್ರತಿಗಳನ್ನು ಮನೆಗಳಿಗೆ ಕಳಿಸಲಾಗುತ್ತದೆ. ನಮ್ಮ ಈ ಭೂಮಿ ಗ್ಯಾರಂಟಿ ಮೆಚ್ಚಿ ಕೇಂದ್ರ ಸರ್ಕಾರ ರಾಷ್ಟ್ರೀಯ ಇ ಆಡಳಿತ ಚಿನ್ನದ ಪ್ರಶಸ್ತಿ ನೀಡಿದೆ. ನಾವು ಇಂತಹ ದಾಖಲೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರ ಎಣಿಸಿರಲಿಲ್ಲ. 13 ಲಕ್ಷ ಇ ಖಾತೆಗಳನ್ನು ಆಸ್ತಿ ತೆರಿಗೆ ಆದಾರದಲ್ಲಿ ಸೃಷ್ಟಿಸಿ ಒಂದೇ ದಿನದಲ್ಲಿ ಎಸ್ ಎಂಎಸ್ ಮೂಲಕ ನೀಡಲಾಗಿದೆ ಎಂದರು.
“ಅನೇಕ ಕಡೆ ತಿದ್ದುವ, ನಕಲು ಮಾಡುವ ಅವಕಾಶವಿತ್ತು ಅದಕ್ಕೆಲ್ಲಾ ಕಡಿವಾಣ ಹಾಕಿ ಬೆರಳ ತುದಿಯಲ್ಲಿ ಅತ್ಯುತ್ತಮ ಸೇವೆಯನ್ನು ಜನರಿಗೆ ನೀಡಲಾಗಿದೆ. 200 ಜನ ಸಿಬ್ಬಂದಿ 10 ತಿಂಗಳ ಕಾಲ ಈ ಕೆಲಸ ನಿರ್ವಹಣೆ ಮಾಡಲಾಗಿದೆ. ಇದಕ್ಕೆ ಸುಮಾರು 2 ಕೋಟಿ ಹಣ ಖರ್ಚು ಮಾಡಲಾಗಿದೆ. ಇದರಿಂದ ಸರಿಯಾದ ಆಸ್ತಿ ದಾಖಲೆ ಸೇರಿದಂತೆ ನಮ್ಮ ನಿವೇಶನದ ಸರಿಯಾದ ಅಳತೆ ಸಿಕ್ಕಿದೆ ಎಂದು ನಿವೃತ್ತ ಅಧಿಕಾರಿಗಳು, ಜನರು ನನಗೆ ಈ ಮೇಲ್ ಮಾಡಿದ್ದಾರೆ” ಎಂದರು.
“ಬಿ ಖಾತೆಯಿಂದ ಎ ಖಾತೆ ನೀಡುವ ಅಭಿಯಾನ ಪ್ರಾರಂಭ ಮಾಡಲಾಗುವುದು. ಕೆಳ ಹಂತದ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇರುವ ಕಾರಣಕ್ಕೆ ಮನೆ ಬಾಗಿಲಿಗೆ ತೆರಳಿ ಖಾತೆ ನೀಡಲಾಗುವುದು. ಅನೇಕ ಕಡೆ 10 ರಿಂದ 5 ಸಾವಿರ ಲಂಚ ಬೇಡಿಕೆ ಬಂದಿದೆ ಎನ್ನುವ ದೂರು ಬಂದಿದೆ. ಇದರ ಬಗ್ಗೆ ನಾನೂ ತನಿಖೆ ನಡೆಸಿದ್ದೇನೆ. ಅದಕ್ಕೆ ಈ ದುರುಪಯೋಗ ತಪ್ಪಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ. ನಾವು ಪಾರದರ್ಶಕ, ಪರಿಶುದ್ದ ಆಡಳಿತ ನೀಡಬೇಕು ಎಂದು ಹೊರಟಿದ್ದೇವೆ” ಎಂದರು.
ಸಾರ್ವಜನಿಕರಿಂದ ಸರಿಯಾದ ಪ್ರತಿಕ್ರಿಯೆ ವ್ಯಕ್ತವಾಗಿದೆಯೇ ಎಂದು ಕೇಳಿದಾಗ, “ಯಾರು ಆಸ್ತಿಯನ್ನು ಮಾರಾಟ ಮಾಡಬೇಕು ಎಂದು ಹೊರಡುತ್ತಾರೋ ಅವರಿಗೆ ಇದು ಬೇಕಾಗಿದೆ. ಯಾರೂ ಪ್ರಶ್ನೆ ಮಾಡುತ್ತಿಲ್ಲ ಎಂದು ಸುಮ್ಮನಿದ್ದಾರೋ ಅವರು ಹಾಗೆಯೇ ಇದ್ದಾರೆ. ಕೆಲವರಿಗೆ ಸರಿಯಾದ ಮಾಹಿತಿಯಿಲ್ಲ, ದಾಖಲೆಯಿಲ್ಲ. ನಾವು ಕೇಳಿದ ದಾಖಲೆಗಳನ್ನು ನೀಡಿದರೆ ಮಾಡಿಕೊಡಲಾಗುವುದು” ಎಂದರು.
“ಬೆಂಗಳೂರು ಬೆಳೆಯುತ್ತಿದೆ. ಕಂದಾಯ ಸೈಟ್ ಗಳನ್ನು ತೆಗದುಕೊಂಡವರು ಸಾಲ ತೆಗೆದುಕೊಳ್ಳಲು ದಾಖಲೆಗಳಿಲ್ಲದೇ ಒದ್ದಾಡುತ್ತಿದ್ದಾರೆ. ಓಸಿ ನೀಡುತ್ತಿಲ್ಲ, ಮನೆ ಕಟ್ಟಲು ಪ್ಲಾನ್ ಗಳನ್ನು ಕೊಡಲು ಆಗುತ್ತಿಲ್ಲ” ಎಂದರು.
ನಿಗದಿತ ದರ ಹೆಚ್ಚಳ ಎಂದು ಜನರು ಮುಂದೆ ಬರುತ್ತಿಲ್ಲ ಎಂದು ಕೇಳಿದಾಗ, “ಎಲ್ಲವನ್ನು ಉಚಿತವಾಗಿ ನೀಡಲು ಆಗುವುದಿಲ್ಲ. ಆಸ್ತಿ ಮೌಲ್ಯ ಹೆಚ್ಚಾಗಿದೆಯಲ್ಲ. ಬಂಗಾರಪ್ಪ ಅವರ ಕಾಲದಲ್ಲಿ 50/80 ನಿವೇಶನ ನೀಡಿದ್ದರು. ಆಗ 99 ಸಾವಿರ ಕಟ್ಟಿದ್ದೆ. ಈಗ ಅದರ ಮಾರುಕಟ್ಟೆ ಬೆಲೆ ಚದರ ಅಡಿಗೆ 20 ಸಾವಿರವಿದೆ. ಅಂದರೆ 8-9 ಕೋಟಿ ಆಯಿತು. ಈ ಹಿಂದೆ ಕೋರಮಂಗಲದಲ್ಲಿ ಹೌಸಿಂಗ್ ಬೋರ್ಡ್ ಇಂದ 600 ರೂಪಾಯಿಗೆ ಮನೆ ಕಟ್ಟಿಕೊಡಲಾಗಿತ್ತು. ಈಗ ಮೌಲ್ಯ ಹೆಚ್ಚಾಗಿಲ್ಲವೇ? ಈಗ ಅದೇ ಜಾಗಗಳು 10 ಸಾವಿರ ಚದರ ಅಡಿಗೆ ಆಗಿದೆ” ಎಂದರು.

