ದಿಲ್ಲಿ ಏ.24: ನಿರೀಕ್ಷೆಯಂತೆ ಆಮ್ ಆದ್ಮಿ ಪಾರ್ಟಿ (AAP) ನ ಪ್ರಮುಖ ನಾಯಕ ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಪಕ್ಷದ ಮುಖಂಡರಾದ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೊಂದಿಗೆ ಭಾರತೀಯ ಜನತಾ ಪಾರ್ಟಿ (BJP) ಸೇರಲು ನಿರ್ಧರಿಸಿರುವುದಾಗಿ ಘೋಷಿಸಿದ್ದಾರೆ.
ಮಾಧ್ಯಮಗೋಷ್ಠಿಯಲ್ಲಿಂದು ಮಾತನಾಡಿದ ರಾಘವ್ ಚಡ್ಡಾ, ಆಮ್ ಆದ್ಮಿ ಪಕ್ಷದಲ್ಲಿ ನನ್ನ ಪಯಣ ಮುಗಿದಿದೆ. ದೇಶದ ಅಭಿವೃದ್ಧಿ ಮತ್ತು ಜನರ ಸೇವೆಗಾಗಿ ಭಾರತೀಯ ಜನತಾ ಪಕ್ಷ ಸೇರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಅವರೂ ತಮ್ಮ ನಿರ್ಧಾರವನ್ನು ಘೋಷಿಸಿದ್ದಾರೆ.
ಈ ಬದಲಾವಣೆಯು ಪಂಜಾಬ್ ರಾಜಕೀಯದಲ್ಲಿ ದೊಡ್ಡ ಪರಿಣಾಮ ಬೀರಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಎಎಪಿಯಲ್ಲಿ ಯುವ ಮುಖವಾಗಿ ಗುರುತಿಸಲ್ಪಟ್ಟಿದ್ದ ರಾಘವ್ ಚಡ್ಡಾ ಇತ್ತೀಚೆಗೆ ಪಕ್ಷದಿಂದ ದೂರ ಉಳಿಯುತ್ತ ಬಂದಿದ್ದರು. ಪಕ್ಷದ ರಾಜ್ಯಸಭಾ ಉಪನಾಯಕನ ಹುದ್ದೆಯಿಂದ ಅವರನ್ನು ತೆರವುಗೊಳಿಸಲಾಗಿತ್ತು.
ಪಂಜಾಬ್ನಿಂದ ರಾಜ್ಯಸಭಾ ಸದಸ್ಯರಾಗಿದ್ದ ಆಮ್ ಆದ್ಮಿ ಪಕ್ಷದ ಸಂದೀಪ್ ಪಾಠಕ್ ಕೂಡ ಪಕ್ಷ ತೊರೆದು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ. ವಿಶೇಷವೆಂದರೆ ಇತ್ತೀಚೆಗೆ ಚಡ್ಡಾ ಅವರ ಸ್ಥಾನಕ್ಕೆ ಡೆಪ್ಯುಟಿ ಲೀಡರ್ ಆಗಿ ನೇಮಕಗೊಂಡಿದ್ದ ಅಶೋಕ್ ಮಿತ್ತಲ್ ಕೂಡ ಬಿಜೆಪಿ ಸೇರಲು ಮುಂದಾಗಿದ್ದಾರೆ.
ಆಮ್ ಆದ್ಮಿ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗುತ್ತಿದ್ದು ಮೂವರು ರಾಜ್ಯಸಭಾ ಸದಸ್ಯರು ಪಕ್ಷ ತೊರೆಯಲು ನಿರ್ಧರಿಸಿರುವುದು ತೀವ್ರ ರಾಜಕೀಯ ಬಿರುಗಾಳಿ ಎಬ್ಬಿಸಿದೆ. ಭಾರತೀಯ ಜನತಾ ಪಾರ್ಟಿ ಈ ನಾಯಕರನ್ನು ಸ್ವಾಗತಿಸುವುದರ ಮೂಲಕ ಪಂಜಾಬ್ನಲ್ಲಿ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲು ಯೋಜಿಸುತ್ತಿದೆ ಎಂದು ಹೇಳಲಾಗುತ್ತಿದೆ.

