ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಕರವೇ ಮಹಿಳಾ ಮುಖಂಡರೊಬ್ಬರಿಗೆ ವ್ಯಕ್ತಿಯೋರ್ವ ನಿಮ್ಮ ಖಾಸಗಿ ಅಂಗದಲ್ಲಿ 50 ಎಂಎಂ ರಾಡ್ ನುಗ್ಗಿಸಿ ಸಾಯಿಸುತ್ತೇನೆ ಎಂದು ಬರೆದಿದ್ದಲ್ಲದೇ, ಅತ್ಯಾಚಾರದ ಬೆದರಿಕೆಯನ್ನೂ ಒಡ್ಡಿದ್ದಾನೆ. ಈ ಹಿನ್ನಲೆ ಕಾನೂನು ಕ್ರಮಕ್ಕೆ ಮುಂದಾಗಿರುವುದಾಗಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಹೇಳಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಕೆಟ್ಟ, ಮಾನಹಾನಕಾರಿ, ಬೆದರಿಕೆಯ ಕಮೆಂಟ್ ಗಳನ್ನು ಮಾಡುವ ವಿಕೃತರ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಕಾನೂನು ಸಮರ ನಡೆಸುತ್ತಿದ್ದು, ಈಗಾಗಲೇ ಹಲವರ ವಿರುದ್ಧ ದೂರುಗಳನ್ನು ದಾಖಲಿಸಿದ್ದೇವೆ. ಬಹುತೇಕ ಪ್ರಕರಣಗಳಲ್ಲಿ ಎಫ್.ಐ.ಆರ್. ಆಗಿದ್ದು ಪೊಲೀಸರು ಸದ್ಯದಲ್ಲೇ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದರು.
ಸುಭಾಷ್ ಮಲ್ಲಿ ಎಂಬ ವ್ಯಕ್ತಿ ಕರವೇಯ ಮಹಿಳೆಯ ಬಗ್ಗೆ ಹಾಗೂ ನನ್ನ ಬಗ್ಗೆ ಅವಹೇಳನಕಾರಿಯಾಗಿ ಮೇಸೇಜ್ ಹಾಕಿದ್ದಾನೆ. ಇದು ನನ್ನ ವೈಯಕ್ತಿಕ ಗೌರವಕ್ಕೆ ಹಾಗೂ ಕರವೇ ಗೌರವಕ್ಕೆ ಧಕ್ಕೆ ಉಂಟಾಗಿದೆ. ಸಂಘಟನೆಗೆ ಅವಮಾನ ಹಾಗೂ ಮಾನಹಾನಿ ಉಂಟಾಗಿದೆ. ಸುಭಾಷ್ ಮಲ್ಲಿ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕಲಂ 351 ಮತ್ತು 352 ಬಿಎನ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ನಾರಾಯಣಗೌಡರು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯಕರ ಚರ್ಚೆ, ಟೀಕೆ, ವಿಮರ್ಶೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತೂ ಸ್ವಾಗತಿಸುತ್ತದೆ. ಇಂಥ ಚರ್ಚೆಗಳಲ್ಲಿ ನಮ್ಮ ಮುಖಂಡರು, ಕಾರ್ಯಕರ್ತರು ಪಾಲ್ಗೊಳ್ಳುತ್ತಾರೆ. ಆದರೆ ಚರ್ಚೆಯ ಹೆಸರಿನಲ್ಲಿ ಕೀಳುಮಟ್ಟದ ತೇಜೋವಧೆ, ಬೆದರಿಕೆಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ. ಇಂಥವರ ವಿರುದ್ಧ ನಮ್ಮ ಕಾನೂನು ಹೋರಾಟ ಮುಂದುವರೆಯುತ್ತದೆ.
ಈ ರೀತಿಯ ನೀಚ ಮನಸ್ಥಿತಿಯ ವ್ಯಕ್ತಿಗಳು ಒಟ್ಟು ಸಮಾಜಕ್ಕೆ ಅಪಾಯಕಾರಿ. ಇವರು ತಮ್ಮ ಪರಿಸರದಲ್ಲೇ ಇರುವ ಹೆಣ್ಣುಮಕ್ಕಳನ್ನು ಯಾವ ದೃಷ್ಟಿಯಲ್ಲಿ ನೋಡಬಹುದು? ವಾಸ್ತವವಾಗಿ ಇಂಥವರ ಮನೆಯ ಹೆಣ್ಣುಮಕ್ಕಳೇ ಸುರಕ್ಷಿತವಾಗಿ ಇರುತ್ತಾರೆ ಎಂದು ನಂಬಲು ಸಾಧ್ಯವಿಲ್ಲ. ಇಂಥ ಸೈಕೋಪಾಥ್ ಗಳಿಗೆ ಸರಿಯಾದ ಶಿಕ್ಷೆ ಆಗಬೇಕು. ಇಲ್ಲವಾದಲ್ಲಿ ಇಂಥವರು ಸಮಾಜದಲ್ಲಿ ಕ್ರೂರ ಬಗೆಯ ಹಿಂಸೆಗಳಿಗೆ ಕಾರಣರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸೇರಿಕೊಂಡಿರುವ ಇಂಥ ವಿಕೃತ ಮನಸ್ಥಿತಿಯ ಜನರಿಂದಾಗಿ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವುದು ಕಷ್ಟಕರವಾಗಿದೆ. ವಿಶೇಷವಾಗಿ ಮಹಿಳೆಯರು ಈ ಪಾತಕಿಗಳ ಕೀಳುಮಟ್ಟದ ನಿಂದನೆಗಳಿಗೆ ಗುರಿಯಾಗುತ್ತಿದ್ದಾರೆ. ಇಂಥವರ ವಿಷಯದಲ್ಲಿ ಯಾವುದೇ ರೀತಿಯ ರಿಯಾಯಿತಿ ತೋರುವ ಅಗತ್ಯವಿಲ್ಲ ಎಂದು ತಿಳಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಿಂದಿ ಹೇರಿಕೆಯಂಥ ವಿಷಯಗಳನ್ನು ಕೈಗೆತ್ತಿಕೊಂಡು ಹೋರಾಟ ನಡೆಸುವಾಗೆಲ್ಲ ಕೆಲವು ನಿರ್ದಿಷ್ಟ ಶಕ್ತಿಗಳು ವಿಕೃತ ಕಮೆಂಟ್ ಗಳನ್ನು ಮಾಡುತ್ತಾರೆ. ಇವರು ಯಾರು? ಇವರ ಬೆನ್ನ ಹಿಂದೆ ಯಾರಿದ್ದಾರೆ? ಇವರನ್ನು ಪ್ರಚೋದಿಸುವ ಶಕ್ತಿಗಳು ಯಾವುವು? ಇವರ ಉದ್ದೇಶ ಏನು ಎಂಬುದೆಲ್ಲ ನಮಗೆ ಚೆನ್ನಾಗಿ ತಿಳಿದಿದೆ. ಸಿದ್ಧಾಂತವನ್ನು ಸಿದ್ಧಾಂತದಿಂದ ಎದುರಿಸಲು ಯೋಗ್ಯತೆ ಇಲ್ಲದ ಇಂಥ ಹೇಡಿಗಳು ವೈಯಕ್ತಿಕ ತೇಜೋವಧೆ ಮಾಡುವ ಮೂಲಕ ನಮ್ಮ ಬಾಯಿ ಮುಚ್ಚಿಸಲು ಯತ್ನಿಸುತ್ತಾರೆ. ಇಂಥವರಿಗೆ ಬೆದರುವ ಪ್ರಶ್ನೆಯೇ ಇಲ್ಲ. ನಮ್ಮ ಧ್ವನಿ ಇನ್ನಷ್ಟು ಹೆಚ್ಚುತ್ತದೆಯೇ ಹೊರತು ಕುಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಎಂದೆಂದಿಗೂ ಅಭಿವ್ಯಕ್ತಿ ಸ್ವಾತಂತ್ರದ ಪರವಾಗಿಯೇ ನಿಲ್ಲುತ್ತದೆ. ಜನರು ಮುಕ್ತವಾಗಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುವ ಸ್ವಾತಂತ್ರ್ಯ ಹೊಂದಿರಬೇಕು. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕೊಲೆ ಬೆದರಿಕೆ, ಅತ್ಯಾಚಾರ ಬೆದರಿಕೆಗಳನ್ನು ಒಡ್ಡುವ ವಿಕೃತರನ್ನು ಕ್ರಿಮಿನಲ್ ಗಳೆಂದೇ ಪರಿಗಣಿಸಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಸಮಾಜದಲ್ಲಿ ಈ ರೋಗ ವ್ಯಾಪಿಸುತ್ತ ಹೋದರೆ ಅದರ ಪರಿಣಾಮ ಘೋರವಾಗುತ್ತದೆ ಎಂದು ಹೇಳಿದಾರೆ.

