ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ, ಕ್ರಿಕೆಟ್ ಜಗತ್ತಿನ ಹೊಸ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಶೈಲಿಯ ಮೂಲಕ ವಿಶ್ವಾದ್ಯಂತ ಗಮನ ಸೆಳೆದಿರುವ ಈ ಎಡಗೈ ಬ್ಯಾಟ್ಸ್ಮನ್, ಈಗಾಗಲೇ ಟೀಮ್ ಇಂಡಿಯಾ ಬಾಗಿಲು ತಟ್ಟುತ್ತಿದ್ದಾರೆ.
ವೈಭವ್ ಸೂರ್ಯವಂಶಿ ಇಲ್ಲಿಯವರೆಗೆ ಆಡಿದ 6 ಪಂದ್ಯಗಳಲ್ಲಿ ಬರೋಬ್ಬರಿ 246 ರನ್ ಕಲೆಹಾಕಿದ್ದಾರೆ. ಪ್ರಸ್ತುತ ಆರೆಂಜ್ ಕ್ಯಾಪ್ ರೇಸ್ನಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೂ, ಅವರು ಉಳಿದ ಟಾಪ್3 ಆಟಗಾರರಾದ ಹೆನ್ರಿಕ್ ಕ್ಲಾಸೆನ್, ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ಅವರಿಗಿಂತ ಅತ್ಯಧಿಕ ಸ್ಟ್ರೈಕ್ ರೇಟ್ (236.54) ಹೊಂದಿದ್ದಾರೆ. ಮೈದಾನದ ನಾಲ್ಕು ದಿಕ್ಕುಗಳಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿ ಬೌಲರ್ಗಳಿಗೆ ಬೆವರಿಳಿಸುತ್ತಿದ್ದಾರೆ.
ತಮ್ಮ ಆತ್ಮವಿಶ್ವಾಸದ ಬಗ್ಗೆ ಮಾತನಾಡಿದ ವೈಭವ್, “ನಾನು ಮೈದಾನದಲ್ಲಿ ಎಷ್ಟು ಸಮಯ ಇದ್ದರೂ, ನನ್ನ ಕೌಶಲ್ಯಗಳನ್ನು ಬಳಸುವವರೆಗೆ ಮತ್ತು ಪ್ರಾಬಲ್ಯ ಸಾಧಿಸುವವರೆಗೆ, ನಾನು ಖಂಡಿತವಾಗಿಯೂ ಎದುರಾಳಿಗಳ ಕೈಯಿಂದ ಪಂದ್ಯವನ್ನು ಕಸಿದುಕೊಳ್ಳಬಲ್ಲೆ,” ಎಂದು ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅವರ ಈ ಮನೋಭಾವವು ಹಿರಿಯ ಆಟಗಾರರನ್ನೂ ಮೀರಿಸುವಂತಿದೆ.
ಅರ್ಧ ಕನಸು ಈಡೇರಿದೆ, ಗುರಿ ವಿಶ್ವಕಪ್

ಐಪಿಎಲ್ನಲ್ಲಿ ಆಡುವ ಮೂಲಕ ತಾನು ಕಂಡ ಅರ್ಧ ಕನಸನ್ನು ನನಸಾಗಿಸಿಕೊಂಡಿದ್ದೇನೆ ಎಂದು ವೈಭವ್ ಹೇಳುತ್ತಾರೆ. ಆದರೆ, ಅವರ ನಿಜವಾದ ಗುರಿ ಇರುವುದು ಭಾರತ ತಂಡದ ಪರ ವಿಶ್ವಕಪ್ ಟ್ರೋಫಿ ಗೆಲ್ಲುವುದೇ ಆಗಿದೆ. “ನನ್ನ ತಂದೆ ಹೇಳಿದಂತೆ, ಅರ್ಧ ಕನಸು ಈಡೇರಿಸಿದ್ದೆನೆ, ಆದರೆ ಉಳಿದರ್ಧ ಕನಸು—ಅಂದರೆ ಭಾರತದ ಹಿರಿಯ ತಂಡಕ್ಕಾಗಿ ವಿಶ್ವಕಪ್ ಆಡಿ ಗೆಲ್ಲುವುದು—ಇನ್ನೂ ಬಾಕಿ ಇದೆ. ಈಗ ನನ್ನ ಸಂಪೂರ್ಣ ಗಮನ ಭಾರತಕ್ಕಾಗಿ ಅತ್ಯುತ್ತಮ ಪ್ರದರ್ಶನ ನೀಡುವುದರ ಮೇಲಿದೆ,” ಎಂದು ತಮ್ಮ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.
ವೈಭವ್ ಸೂರ್ಯವಂಶಿ ಅವರ ಬೆಳವಣಿಗೆಯನ್ನು ಗಮನಿಸುತ್ತಿದ್ದರೆ, ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಬ್ಬ ಮ್ಯಾಚ್ ವಿನ್ನರ್ ಸಿಕ್ಕಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ. ಈ 15 ವರ್ಷದ ಬಾಲಕನ ನಿರ್ಭೀತಿಯ ಬ್ಯಾಟಿಂಗ್, ಮುಂಬರುವ ದಿನಗಳಲ್ಲಿ ಟೀಮ್ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಭದ್ರ ಬುನಾದಿ ಹಾಕಿಕೊಟ್ಟಿದೆ. ಈ ವರ್ಷದ ಐಪಿಎಲ್ ನಲ್ಲಿ ವೈಭವ್ ಎಷ್ಟು ಎತ್ತರಕ್ಕೆ ಬೆಳೆಯಲಿದ್ದಾರೆ ಎಂಬುದನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದಾರೆ.

