ಗುವಾಹಟಿ ( ರಾಜಸ್ಥಾನ ) ಏ.10: IPL 2026ರ 16ನೇ ಪಂದ್ಯದಲ್ಲಿ ಇಂದು ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಿಯಾನ್ ಪರಾಗ್ ನೇತೃತ್ವದ ರಾಜಸ್ಥಾನ ರಾಯಲ್ಸ್(RR) ಮತ್ತು ಡಿಫೆಂಡಿಂಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ ಈ ಪಂದ್ಯವು ಇಂದು ಗುವಾಹಟಿಯ ಎಸಿಎ (ACA) ಕ್ರೀಡಾಂಗಣದಲ್ಲಿ ನಡೆಯಲಿದೆ.
ರಾಜಸ್ಥಾನ ರಾಯಲ್ಸ್ (RR) ಮಿಂಚಿನ ಓಟ: ಈ ಸೀಸನ್‌ನಲ್ಲಿ ಆಡಿರುವ 3 ಪಂದ್ಯಗಳಲ್ಲಿ ಮೂರರಲ್ಲೂ ಗೆಲುವು ಸಾಧಿಸಿರುವ ರಾಜಸ್ತಾನ, 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶೇಷವಾಗಿ ಗುವಾಹಟಿಯನ್ನು ತನ್ನ ಭದ್ರಕೋಟೆಯನ್ನಾಗಿ ಮಾಡಿಕೊಂಡಿರುವ ರಾಯಲ್ಸ್‌ಗೆ ಇದು ಇಲ್ಲಿನ ಕೊನೆಯ ಹೋಮ್ ಪಂದ್ಯವಾಗಿದ್ದು, ಜಯದೊಂದಿಗೆ ಜೈಪುರಕ್ಕೆ ಪ್ರಯಾಣ ಬೆಳೆಸುವ ಉತ್ಸಾಹದಲ್ಲಿದೆ.
ಚಾಂಪಿಯನ್ RCB ಆರ್ಭಟ: ರಜತ್ ಪಾಟೀದಾರ್ ನೇತೃತ್ವದ ಆರ್‌ಸಿಬಿ ಈ ಬಾರಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದು ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಚೆನ್ನೈ ವಿರುದ್ಧ 250 ರನ್‌ಗಳ ಬೃಹತ್ ಮೊತ್ತ ಸೇರಿಸಿದ್ದ ಬೆಂಗಳೂರು ತಂಡವು ಸದ್ಯ ಭರ್ಜರಿ ಫಾರ್ಮ್‌ನಲ್ಲಿದೆ.
ಎರಡು ತಂಡದ ಪ್ರಮುಖ ಆಟಗಾರಾರೆಂದರೆ. ರಾಜಸ್ಥಾನ ಪರ ಯಶಸ್ವಿ ಜೈಸ್ವಾಲ್ (ಆರೆಂಜ್ ಕ್ಯಾಪ್) ಮತ್ತು ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ನೀಡುತ್ತಿದ್ದರೆ, ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅಬ್ಬರಿಸುತ್ತಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ ಈ ಎರಡೂ ತಂಡಗಳ ನಡುವಿನ ಪೈಪೋಟಿ ಯಾವಾಗಲೂ ಕುತೂಹಲಕಾರಿಯಾಗಿರುತ್ತದೆ. ಇದುವರೆಗಿನ ಅಂಕಿಅಂಶಗಳನ್ನು ಗಮನಿಸಿದರೆ ಆರ್‌ಸಿಬಿ ಸ್ವಲ್ಪ ಮೇಲುಗೈ ಸಾಧಿಸಿದೆ.
ಗುವಾಹಟಿ ಪಿಚ್ ವರದಿ:
ಬರ್ಸಾಪಾರ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಇಲ್ಲಿ ನಡೆದ ಕಳೆದ ಪಂದ್ಯಗಳಲ್ಲಿ ದೊಡ್ಡ ಮೊತ್ತ ದಾಖಲಾಗಿವೆ. ಹೀಗಾಗಿ ಇಂದಿನ ಪಂದ್ಯದಲ್ಲಿಯೂ ರನ್‌ಗಳ ಮಳೆ ನಿರೀಕ್ಷಿಸಬಹುದಾಗಿದೆ.
ಅಜೇಯ ತಂಡಗಳ ಈ ಹೋರಾಟದಲ್ಲಿ ಯಾರಿಗೆ ಮೊದಲ ಸೋಲಾಗಲಿದೆ ಅಥವಾ ರಾಜಸ್ಥಾನ ತನ್ನ ಗೆಲುವಿನ ಓಟ ಮುಂದುವರಿಸಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.

