ಆತ ಮೊದಲ ಎರಡು ರನ್ ಗಳಿಸಲು ಎಂಟು ಎಸೆತಗಳನ್ನು ತೆಗೆದುಕೊಂಡಿದ್ದ. ಚೆನ್ನಾಗಿ ಆಡುತ್ತಿದ್ದ ಆಯುಷ್ ಬದೋನಿ ಔಟಾಗಿದ್ದ. ಏಳು ವಿಕೆಟ್ ಗಳು ತೊಪತಪನೆ ಉದುರಿಹೋಗಿದ್ದವು. ಕೆಕೆ ಆರ್ ನ ಬಲಿಷ್ಠ ಬೌಲಿಂಗ್ ಪಡೆ ಕೆಂಡದುಂಡೆಗಳನ್ನೇ ಎಸೆಯುತ್ತಿದ್ದವು. ಸುನಿಲ್ ನರೈನ್ ನಾಲ್ಕು ಓವರ್ ಎಸೆದು ಕೊಟ್ಟಿದ್ದು ಕೇವಲ ಹದಿಮೂರು ರನ್ ಗಳು. ಮಿಕ್ಕ ಬೌಲರ್ ಗಳೂ ಸಹ ಒಂದೊಂದು ರನ್ ಹೊಡೆಯಲು ತಿಣುಕುವಂತೆ ಮಾಡಿದ್ದರು. ಬೌಲಿಂಗ್ ಕಾಲಂನಲ್ಲಿ ಬರೀ ಹಸಿರು ಗಿಡಗಳೇ ಕಾಣಿಸುತ್ತಿದ್ದವು. ಏಳು ವಿಕೆಟ್ ಬಿದ್ದ ಮೇಲೆ ಆಡಲು ಬಂದ ಬೌಲರ್ ಆವೇಶ್ ಖಾನ್ ನಿಂದ ಹೆಚ್ಚಿನದೇನೂ ನಿರೀಕ್ಷೆ ಮಾಡುವಂತಿರಲಿಲ್ಲ. ಹದಿನಾರು ಓವರ್ ಮುಗಿದಾಗ ಎಲ್ ಎಸ್ ಜಿ ಗೆಲ್ಲಲು 54 ರನ್ ಗಳು ಬೇಕಿದ್ದವು. ಇದ್ದಿದ್ದು ಇವನೊಬ್ಬನೇ. ಇವನಾದರೂ ಏನು? ಆಡ್ತಾ ಇದ್ದಿದ್ದೇ ಮೂರನೇ ಐಪಿಎಲ್ ಮ್ಯಾಚು. ಮೊದಲ ಎರಡು ಮ್ಯಾಚುಗಳಲ್ಲಿ ಅವನು ಗಳಿಸಿದ್ದು ಒಮ್ಮೆ 14, ಇನ್ನೊಮ್ಮೆ 2. ಆದರೆ ಇವನ ತಲೆಯಲ್ಲಿ ಬೇರೆ ಏನೋ ಸ್ಕ್ರಿಪ್ಟ್ ಓಡುತ್ತಿತ್ತು. ಬಹುಶಃ ಅದು ಯಾರಿಗೂ ಗೊತ್ತಿರಲಿಲ್ಲ. ಎಲ್ ಎಸ್ ಜಿ ಅಭಿಮಾನಿಗಳು ಟಿವಿ ಆಫ್ ಮಾಡಿಯಾಗಿತ್ತು. ಈಡನ್ ಗಾರ್ಡನ್ ನಲ್ಲಿ ನೆರೆದಿದ್ದ ಅಭಿಮಾನಿಗಳೂ ಹೊರಗೆ ಬರೋದಕ್ಕೆ ಶುರು ಮಾಡಿದ್ದರು. ಕಮೆಂಟರಿ ಮಾಡುತ್ತಿದ್ದವರು ಈ ಮ್ಯಾಚು ಕೆಕೆಆರ್ ಹೊಡೆದುಕೊಂಡು ಹೋಗಾಯ್ತು ಅಂತ ರಾಗ ಎಳೆಯುತ್ತಿದ್ದರು.
ಆದರೆ ಆ ಒಂದು ಸಿಕ್ಸರ್ ಒಂದು ವಿಚಿತ್ರವಾದ ನಿರೀಕ್ಷೆಯನ್ನು ಹುಟ್ಟಿಸಿಬಿಟ್ಟಿತು. ಎಷ್ಟು ದಿನಗಳಾಗಿದ್ದವೋ ಧೋನಿ ಶೈಲಿಯ ಹೆಲಿಕಾಪ್ಟರ್ ಶಾಟ್ ನೋಡಿ. ಮುಕುಲ್ ಚೌಧರಿ ಅಂಥದ್ದೇ ಒಂದು ಶಾಟ್ ಹೊಡೆದು ಬಿಟ್ಟ. ಅಲ್ಲಿಂದ ಅವನ ಓಟ ಶುರುವಾಗಿಬಿಟ್ಟಿತು. ಒಂದಾದ ಮೇಲೆ ಒಂದರಂತೆ ಏಳು ಸಿಕ್ಸರ್ ಗಳ ಮಾಲೆಯನ್ನು ಪೋಣಿಸಿಬಿಟ್ಟ ಈ 21 ವರ್ಷದ ಪೋರ. ಕೊನೆಯ ಎರಡು ಓವರ್ ಗಳಲ್ಲಿ ಎಸ್ ಎಸ್ ಜಿ ಗೆಲ್ಲಲು 30 ರನ್ ಗಳು ಬೇಕಾಗಿದ್ದವು. ಕ್ಯಾಮರೂನ್ ಗ್ರೀನ್ ಎಸೆದ 19ನೇ ಓವರ್ ನಲ್ಲಿ ಮುಕುಲ್ 16 ರನ್ ದೋಚಿಬಿಟ್ಟ. ಕೊನೆಯ ಓವರ್ ಎಸೆಯಲು ಬಂದವನು ವೈಭವ್ ಅರೋರ. ಸ್ಟ್ರೈಕ್ ನಲ್ಲಿ ಇದ್ದವನು ಆವೇಶ್ ಖಾನ್. ಅವನು ಮಾಡಬೇಕಿದ್ದು ಒಂದೇ ಕೆಲಸ. ಸಿಂಗಲ್ ರನ್ ತೆಗೆದುಕೊಂಡು ಮುಕುಲ್ ಗೆ ಸ್ಟ್ರೈಕ್ ಸಿಗುವಂತೆ ಮಾಡುವುದು. ಮೊದಲ ಎಸೆತದಲ್ಲೇ ಅವನು ಸಿಂಗಲ್ ತೆಗೆದುಕೊಂಡ. ಎರಡನೇ ಎಸೆತವನ್ನು ಎದುರಿಸಿದ ಮುಕುಲ್ ಸ್ಕ್ವೇರ್ ಲೆಗ್ ಮೇಲೆ ಭರ್ಜರಿ ಸಿಕ್ಸರ್ ಬಾರಿಸಿಯೇ ಬಿಟ್ಟ. ಗೆಲ್ಲಲು ಏಳು ರನ್ ಅಷ್ಟೇ ಬೇಕು, ನಾಲ್ಕು ಎಸೆತಗಳು ಉಳಿದವು.

ವೈಭವ್ ಅರೋರ ಜಾಣ ಬೌಲರ್. ವಿಕೆಟ್ ಮೇಲೆ ಯಾರ್ಕರ್ ಎಸೆದರೂ ಈ ಹುಡುಗ ಹೆಲಿಕಾಪ್ಟರ್ ಶಾಟ್ ಹೊಡೆದು ಸಿಕ್ಸರ್ ಬಾರಿಸುತ್ತಾನೆ. ಶಾರ್ಟ್ ಎಸೆದರೆ ಚೆಚ್ಚಿಯೇ ಚೆಚ್ಚುತ್ತಾನೆ. ಚೆಂಡು ಇವನ ಕೈಗೆ ಸಿಗಬಾರದು ಎಂದುಕೊಂಡು ಸತತ ಎರಡು ಎಸೆತ ವೈಡ್ ಯಾರ್ಕರ್ ಗಳನ್ನು ಎಸೆದ. ಎರಡೂ ಚೆಂಡುಗಳಲ್ಲಿ ಒಂದೂ ರನ್ ಸಿಗಲಿಲ್ಲ ಮುಕುಲ್ ಗೆ. ಪಂದ್ಯ ಮತ್ತೆ ಕೆಕೆಆರ್ ಕಡೆ ವಾಲಿದಂತೆ ತೋರುತ್ತಿತ್ತು. ವೈಭವ್ ಐದನೇ ಎಸತವನ್ನೂ ವೈಡ್ ಯಾರ್ಕರ್ ಮಾಡಲು ಯತ್ನಿಸಿದ. ಅದು ಹೆಚ್ಚು ಕಡಿಮೆ ವೈಡ್ ಯಾರ್ಕರ್ ಆಗಿತ್ತು. ಆದರೆ ಮುಕುಲ್ ಅದನ್ನು ಹೇಗೆ ಕನೆಕ್ಟ್ ಮಾಡಿದನೋ ಏನೋ ಚೆಂಡು ಕವರ್ಸ್ ಮತ್ತು ಪಾಯಿಂಟ್ಸ್ ನಡುವೆ ಸಿಕ್ಸರ್ ಆಗಿತ್ತು. ಪವಾಡದಂಥ ಹೊಡೆತ. ಅಲ್ಲಿಗೆ ಸ್ಕೋರು ಸಮಸಮವಾಗಿಹೋಯಿತು. ಕೊನೆಯ ಎಸೆತದಲ್ಲಿ ಬೇಕಿದ್ದಿದ್ದು ಒಂದೇ ರನ್. ವೈಭವ್ ಸ್ಲೋ ಬೌನ್ಸರ್ ಎಸೆದ. ಮುಕುಲ್ ಬ್ಯಾಟ್ ಬೀಸಿದರೂ ಅದು ಕನೆಕ್ಟ್ ಆಗದೇ ವಿಕೆಟ್ ಕೀಪರ್ ಕಡೆಗೆ ಚೆಂಡು ಹೋಯಿತು. ಮುಕುಲ್, ಆವೇಶ್ ರನ್ ಓಡಿದರು. ರನ್ ಔಟ್ ಮಾಡಲು ವಿಕೆಟ್ ಕೀಪರ್ ಎಸೆದ ಚೆಂಡು ವಿಕೆಟ್ ಗೆ ಬೀಳಲಿಲ್ಲ. ಎಲ್ ಎಸ್ ಜಿಗೆ ಬೇಕಿದ್ದ ರನ್ ಸಿಕ್ಕೇಬಿಟ್ಟಿತು.
ಬೇರೆಯವರ ಕಥೆ ಹಾಗಿರಲಿ, ಎಲ್ ಎಸ್ ಜಿ ಕ್ಯಾಂಪ್ ಈ ಗೆಲುವನ್ನು ಊಹಿಸಿರಲಿಲ್ಲ. ಎಲ್ ಎಸ್ ಜಿ ಓನರ್ ಸಂಜೀವ್ ಗೋಯೆಂಕಾ ಚಿಕ್ಕಮಕ್ಕಳಂತೆ ಕುಣಿದು ಕುಪ್ಪಳಿಸಿದ. ಇನ್ನೊಮ್ಮೆ ಗೋಯೆಂಕಾ ಕೈಲಿ ಬೈಸಿಕೊಳ್ಳಬೇಕಲ್ಲಪ್ಪ ಎಂಬ ಭೀತಿಯಲ್ಲಿದ್ದ ಕ್ಯಾಪ್ಟನ್ ರಿಷಬ್ ಪಂಥ್ ಗೆ ಈ ಗೆಲುವು ಅದೆಂಥ ನಿಟ್ಟುಸಿರು ತಂದುಕೊಟ್ಟಿತೋ ಏನೋ. ಅವನು ಓಡಿ ಬಂದು ಮುಕುಲ್ ನನ್ನು ಗಟ್ಟಿಯಾಗಿ ತಬ್ಬಿಕೊಂಡ. ಇಲ್ಲಿ ಇಷ್ಟೆಲ್ಲ ನಡೆಯುವಾಗ ರಾಜಸ್ತಾನದ ಒಂದು ಸಣ್ಣ ಪಟ್ಟಣ ಜುಂಜುನು ಕೂಡ ಸಂಭ್ರಮದಲ್ಲಿ ತೇಲುತ್ತಿತ್ತು. ಮುಕುಲ್ ಚೌಧರಿ ಎಂಬ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಊರು ಅದು. ಅಪ್ಪ ದಲಿಪ್ ಕುಮಾರ್ ಚೌಧರಿ ಟೀಚರ್ ಆಗಿದ್ದವನು. ಈ ದಲಿಪ್ ಗೆ ಮದುವೆಯಾಗುವ ಮೊದಲೇ ಒಂದು ವಿಚಿತ್ರ ಕನಸಿತ್ತಂತೆ. ಹುಟ್ಟುವ ಮಗನನ್ನು ಕ್ರಿಕೆಟರ್ ಮಾಡಬೇಕು ಎಂಬುದು ಅವನ ಆಸೆಯಾಗಿತ್ತಂತೆ. ಮದುವೆಯಾದ, ಮಗನೂ ಹುಟ್ಟಿದ. ಅವನ ಕನಸು ಈಡೇರಿಸಿಕೊಳ್ಳಲು ಮಗನನ್ನು ಕ್ರಿಕೆಟ್ ಕಲಿಯಲು ಹಚ್ಚಿದ. ಅದಕ್ಕಾಗಿ ಟೀಚರ್ ಕೆಲಸ ಬಿಟ್ಟ. ಆರ್ ಎಎಸ್ (ನಮ್ಮಲ್ಲಿ ಕೆಎಎಸ್ ಪರೀಕ್ಷೆಗಳು ಇದ್ದಂತೆ) ಪರೀಕ್ಷೆ ಬರೆಯಬೇಕಾಗಿದ್ದವನು ಅದನ್ನೂ ಬಿಟ್ಟ. ರಿಯಲ್ ಎಸ್ಟೇಟ್ ಕೆಲಸ ಮಾಡಿ ಮಗನನ್ನು ಬೆಳೆಸುತ್ತ ಹೋದ. ಈ ಹುಡುಗ ಜೈಪುರಲ್ಲಿ ಕ್ರಿಕೆಟ್ ಅಕಾಡೆಮಿಯಲ್ಲಿ ಕಲಿಯಲು ಹೊರಟಾಗ ತಾಯಿ ಸುನೀತಾ ಚೌಧರಿ ಮಗನ ಭವಿಷ್ಯಕ್ಕಾಗಿ ತನ್ನ ಇನ್ನೊಬ್ಬ ಮಗಳೊಂದಿಗೆ ಜೈಪುರಕ್ಕೆ ಬಂದು ನೆಲೆ ನಿಂತರು. ಮುಕುಲ್ ಚೌಧರಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ಗುರುತಿಸಿಕೊಂಡ. 2023ರಲ್ಲೇ ರಾಜಸ್ತಾನ ತಂಡಕ್ಕೆ ಪಾದಾರ್ಪಣೆ ಮಾಡಿದ. ಆದರೆ ಆರಂಭದಲ್ಲಿ ಅವನ ಬ್ಯಾಟ್ ನಿಂದ ರನ್ ಗಳು ಬಾರದೇ ಇದ್ದಾಗ ತಂಡದಿಂದ ಡ್ರಾಪ್ ಆದ. ಮತ್ತೆ ಎರಡು ವರ್ಷಗಳ ಕಾಲ ಸತತ ಪರಿಶ್ರಮ ಹಾಕಿದ ಪರಿಣಾಮ 2025ರಲ್ಲಿ ಮತ್ತೆ ತಂಡ ಸೇರಿಕೊಂಡ. 2025ರ ಸೈಯದ್ ಮುಷ್ತಾಕ್ ಅಲಿ ಟೂರ್ನಿ ಇವನ ಪಾಲಿಗೆ ವರದಾನವಾಯಿತು. ಐದು ಪಂದ್ಯಗಳಲ್ಲಿ 173 ರನ್ ಕೊಳ್ಳೆ ಹೊಡೆದ. 57 ರನ್ ಸರಾಸರಿ. 198 ಸ್ಟ್ರೈಕ್ ರೇಟ್. ಐದು ಇನ್ನಿಂಗ್ಸ್ ಗಳಲ್ಲಿ ಅವನು 13 ಸಿಕ್ಸರ್ ಚೆಚ್ಚಿದ್ದ. ಕಳೆದ ವರ್ಷ ಐಪಿಎಲ್ ಬಿಡ್ಡಿಂಗ್ ಸಮಯದಲ್ಲಿ ಇವನ ಮೇಲೆ ಹಲವು ಫ್ರಾಂಚೈಸಿಗಳು ಕಣ್ಣು ಇಟ್ಟಿದ್ದವು. ಮುಂಬೈ ಇಂಡಿಯನ್ಸ್, ರಾಜಸ್ತಾನ ರಾಯಲ್ಸ್ ಸ್ಪರ್ಧೆಯ ನಡುವೆಯೂ ಮುಕುಲ್ 2.6 ಕೋಟಿ ರುಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್ ಪಾಲಾದ.

ಐಪಿಎಲ್ ಪ್ರತಿವರ್ಷವೂ ಹಲವು ಸ್ಟಾರ್ ಗಳನ್ನು ಸೃಷ್ಟಿಸುತ್ತದೆ. ರಿಂಕೂ ಸಿಂಗ್, ರಾಹುಲ್ ತೇವಾಟಿಯಾ, ಜಿತೇಶ್ ಶರ್ಮಾ ಸಾಲಿಗೆ ಈಗ ಮುಕುಲ್ ಸೇರಿದ್ದಾನೆ. ಮ್ಯಾನ್ ಆಫ್ ದಿ ಮ್ಯಾಚ್ ಪ್ರೆಸೆಂಟೇಷನ್ ಸಂದರ್ಭದಲ್ಲಿ ಈ ಹುಡುಗ ನಗುನಗುತ್ತಾ ತನ್ನ ಬ್ಯಾಂಟಿಂಗ್ ಶೈಲಿಯ ಬಗ್ಗೆ ಹೇಳಿಕೊಂಡ. ನನಗೆ ಮೇಲೆಮೇಲೆ ಹೊಡೆದೇ ಅಭ್ಯಾಸ ಎನ್ನುತ್ತಾನೆ ಇವನು. ಅದಕ್ಕೆ ತಕ್ಕಂತೆ ಮುಕುಲ್ ಬ್ಯಾಟಿಗೆ ಸಿಕ್ಕಿದ ಚೆಂಡು ಗಾಳಿಯಲ್ಲಿ ತೇಲಿ ಬೌಂಡರಿ ಲೈನ್ ದಾಟುತ್ತವೆ. ಅವನ ಮಣಿಕಟ್ಟು ಚಮತ್ಕಾರವನ್ನೇ ಸೃಷ್ಟಿಸುತ್ತದೆ. ಬ್ಯಾಟನ್ನು ರಿವ್ರನೆ ತಿರುಗಿಸುವ ಕಲೆ ಇವನಿಗಿದೆ. ಬ್ಯಾಟ್ ಸ್ವಿಂಗ್ ಮೇಲಿನ ಅವನ ಕಂಟ್ರೋಲ್ ಅಚ್ಚರಿ ಹುಟ್ಟಿಸುತ್ತದೆ. 21 ವರ್ಷದ ಈ ಹುಡುಗ ಹೀಗೇ ಆಡುತ್ತ ಹೋದರೆ ಇತಿಹಾಸ ನಿರ್ಮಿಸುತ್ತಾನೆ. ಅವನ ಕಥೆ ಹಾಗಿರಲಿ, ಮದುವೆಗೂ ಮುನ್ನವೇ ಹುಟ್ಟುವ ಮಗನನ್ನು ಕ್ರಿಕೆಟರ್ ಮಾಡುತ್ತೇನೆ ಎಂದು ಹಠ ಹಿಡಿದ ಅಪ್ಪನೇ ಒಂದು ಅಚ್ಚರಿ. ಮುಕುಲ್ 27 ಎಸೆತಗಳಲ್ಲಿ 54 ರನ್ ಹೊಡೆದು ಸೋತೇ ಹೋಗಿದ್ದ ಮ್ಯಾಚನ್ನುಗೆಲ್ಲಿಸಿದ್ದನ್ನು ನೋಡಿ ಅಪ್ಪ ದಲಿಪ್ ಕುಮಾರ್ ಹೇಗೆ ಕುಣಿದು ಸಂಭ್ರಮಿಸಿರುತ್ತಾನೋ ಏನೋ?
– ದಿನೇಶ್ ಕುಮಾರ್ ಎಸ್.ಸಿ.

