ವಾಷಿಂಗ್ಟನ್ : ಇರಾನ್ ಮೇಲಿನ ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವುದಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಸಂಭಾಷಣೆಯ ನಂತರ ಈ ನಿರ್ಧಾರಕ್ಕೆ ಬರಲಿದೆ ಎಂದು ಟ್ರಂಪ್ ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಅವರೊಂದಿಗಿನ ಮಾತುಕತೆಯನ್ನು ಉಲ್ಲೇಖಿಸಿರುವ ಟ್ರಂಪ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ, ತಕ್ಷಣವಾಗಿ ಮತ್ತು ಸುರಕ್ಷಿತವಾಗಿ ತೆರೆಯುವುದನ್ನು ಒಪ್ಪಿಕೊಂಡರೆ, ನಾನು ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ದಾಳಿಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುತ್ತೇನೆ. ಇದು ಎರಡು ಬದಿಯಿಂದಲೂ ಸೀಸ್‌ಫೈರ್ ಆಗಿರುತ್ತದೆ! ಎಂದು ಬರೆದುಕೊಂಡಿದ್ದಾರೆ.
ಇರಾನ್ ಈಗಾಗಲೇ 10 ಅಂಶಗಳ ಪ್ರಸ್ತಾಪವನ್ನು ನೀಡಿದೆ ಎಂದು ಟ್ರಂಪ್ ಹೇಳಿದ್ದಾರೆ. ಇದು ದೀರ್ಘಕಾಲೀನ ಶಾಂತಿ ಒಪ್ಪಂದಕ್ಕೆ ಕಾರ್ಯಸಾಧ್ಯವಾದ ಆಧಾರವಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಈ ಎರಡು ವಾರಗಳ ಸಮಯವು ಸಹಾಯಕವಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಇರಾನ್‌ನಿಂದ ಬಂದ ಪ್ರಸ್ತಾಪವನ್ನು ಚರ್ಚಿಸಿ ಅಂತಿಮಗೊಳಿಸಲು ಈ ಅವಧಿ ಬಳಕೆಯಾಗುತ್ತದೆ ಎಂದು ಹೇಳಿದ್ದಾರೆ.
ಈ ನಿರ್ಧಾರಕ್ಕೆ ಪಾಕಿಸ್ತಾನದ ಮಧ್ಯಸ್ಥಿಕೆಯು ಮುಖ್ಯ ಪಾತ್ರ ವಹಿಸಿದೆ. ಶೆಹಬಾಜ್ ಶರೀಫ್ ಅವರು ಟ್ರಂಪ್ ಮುಂದೆ ಈ ಶಾಂತಿ ಪ್ರಸ್ತಾಪವನ್ನು ಮಂಡಿಸಿದ್ದರು. ಇರಾನ್ ಕೂಡ ಈ ಎರಡು ವಾರಗಳ ಕದನವಿರಾಮವನ್ನು ಒಪ್ಪಿಕೊಂಡಿದೆ ಎಂದು ವರದಿಯಾಗಿದೆ. ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತವಾಗಿ ತೆರೆಯುವುದು ಈ ಒಪ್ಪಂದದ ಮುಖ್ಯ ಷರತ್ತು.
ಈ ಬೆಳವಣಿಗೆಯಿಂದ ಜಾಗತಿಕ ತೈಲ ಬೆಲೆಗಳು ಕುಸಿಯುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿ ವಿಶ್ವದ ತೈಲ ಸಾಗಣೆಯಲ್ಲಿ ಬಹಳ ಮುಖ್ಯವಾದ ಮಾರ್ಗವಾಗಿದೆ. ಈಗಾಗಲೇ ಇರಾನ್-ಇಸ್ರೇಲ್-ಅಮೆರಿಕಾ ನಡುವಿನ ಯುದ್ಧದಿಂದಾಗಿ ಜಲಸಂಧಿ ಮುಚ್ಚಿಹೋಗಿದ್ದರಿಂದ ಜಾಗತಿಕ ಆರ್ಥಿಕತೆ ನಲುಗಿಹೋಗಿತ್ತು.
ಈ ಎರಡು ವಾರಗಳಲ್ಲಿ ಇಸ್ಲಾಮಾಬಾದ್‌ನಲ್ಲಿ ಇರಾನ್ ಮತ್ತು ಅಮೆರಿಕಾ ನಡುವೆ ಮುಂದಿನ ಮಾತುಕತೆ ನಡೆಯಲಿದೆ ಎಂದು ವರದಿಯಾಗಿದೆ. ದೀರ್ಘಕಾಲೀನ ಶಾಂತಿ ಒಪ್ಪಂದಕ್ಕೆ ಇದು ದಾರಿ ಮಾಡಿಕೊಡುವ ನಿರೀಕ್ಷೆ ಇದೆ.
ಇರಾನ್ ಯುದ್ಧದ 39ನೇ ದಿನ ಈ ದೊಡ್ಡ ಬೆಳವಣಿಗೆ ನಡೆದಿದೆ. ಟ್ರಂಪ್ ಅವರು ಮೊದಲು “ಒಂದು ಸಂಪೂರ್ಣ ನಾಗರಿಕತೆಯೇ ನಾಶವಾಗುತ್ತದೆ” ಎಂದು ತೀವ್ರ ಎಚ್ಚರಿಕೆ ನೀಡಿದ್ದರು. ಆದರೆ ಪಾಕಿಸ್ತಾನದ ಮಧ್ಯಸ್ಥಿಕೆಯಿಂದ ದಾಳಿ ತಡೆಯಲಾಗಿದೆ ಎನ್ನಲಾಗಿದೆ.

