ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿ ಸ್ವತಂತ್ರ ಧರ್ಮವೆಂದು ಮಾನ್ಯತೆ ಕೊಡಬೇಕೆಂಬ ಬೇಡಿಕೆಯನ್ನು ಈ ಹಿಂದುತ್ವವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸನಾತನಿಗಳು ಬೃಹತ್ ಹಿಂದೂ ಸಮಾವೇಶ ಏರ್ಪಡಿಸಿ, ಈ ಕನ್ನೇರಿಯನ್ನು ಕರೆಸಿ ಲಿಂಗಾಯತರ ಮೇಲೆ ದ್ವೇಷ ಕಾರತೊಡಗಿದರು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯಲ್ಲಿ “ಅದೃಶ್ಯ ಕಾಡಸಿದ್ಧೇಶ್ವರ ಮಠ” ಅಂತಾ ಒಂದಿದೆ. ಆ ಮಠಕ್ಕೆ ಕನ್ನೇರಿ ಎನ್ನುವ ಮತಾಂಧ ಸ್ವಾಮಿ ಒಕ್ಕರಿಸಿಕೊಂಡಿದ್ದಾನೆ. ಸರ್ವ ಧರ್ಮಗಳ ಸಮನ್ವಯತೆಯ ಪರಂಪರೆಯನ್ನು ಹೊಂದಿದ್ದ ಈ ಪ್ರಸಿದ್ಧ ಮಠ ಈ ತಿಕ್ಕಲು ಸ್ವಾಮಿಯಿಂದಾಗಿ ಈಗ ಬ್ರಾಹ್ಮಣ್ಯದ ಮಾಲಿನ್ಯ ತುಂಬಿಕೊಂಡಿರುವ ಕೂಪವಾಗಿ ಬದಲಾಗಿದೆ.
ಅದೇನಾಯ್ತೋ ಏನೋ, ಈ ಶೂದ್ರ ಸ್ವಾಮಿಗೆ ಇದ್ದಕ್ಕಿದ್ದಂತೆ ಪ್ರಚಾರದ ಹುಚ್ಚು ನೆತ್ತಿಗೇರಿ ಬಿಟ್ಟಿತು. ಲಿಂಗಾಯತ ಮಠಗಳ ಸ್ವಾಮಿಗಳ ವಿರುದ್ಧ ಹುಚ್ಚು ಕೆರಳಿತು. ಸಂಘ ಪರಿವಾರದ ಸಂಗಕ್ಕೆ ಬಿದ್ದು ಬಾಯಿ ಚಪಲ ಇನ್ನೂ ಜೋರಾಯಿತು. ಲಿಂಗಾಯತ ಸಮುದಾಯವನ್ನು, ಬಸವ ತತ್ವದ ಅನುಯಾಯಿಗಳನ್ನು ಅಶ್ಲೀಲ ಪದಗಳ ಮೂಲಕ ಬೈದಾಡಲು ಶುರು ಮಾಡಿತು. ವೈದಿಕತೆಯನ್ನು ಪ್ರಶ್ನಿಸಿ ಬಂಡಾಯವೆದ್ದು ವಚನಗಳ ಮೂಲಕ ಬ್ರಾಹ್ಮಣ್ಯದ ಬಂಡವಾಳವನ್ನು ಬಯಲು ಮಾಡುತ್ತಾ ಬಂದಿರುವ ಲಿಂಗಾಯತ ಧರ್ಮದ ಮೇಲೆ ಮೊದಲಿನಿಂದಲೂ ಈ ಹಿಂದುತ್ವವಾದಿ ಸನಾತನಿಗಳಿಗೆ ಆಕ್ರೋಶವಿತ್ತು. ಜಾತಿ ಧರ್ಮಗಳ ಹಂಗಿಲ್ಲದೇ ಎಲ್ಲರನ್ನೂ ಒಳಗೊಂಡು ಶಿಕ್ಷಣ ದಾಸೋಹ ಸೇವೆ ಮಾಡುತ್ತಿರುವ ಲಿಂಗಾಯತ ಮಠಗಳ ಕುರಿತು ಅಸಾಧ್ಯ ಅಸಹನೆಯಿತ್ತು. ಯಾರೋ ಒಬ್ಬ ಕುಂಕುಮಧಾರಿ ಸ್ವಾಮಿ ಲಿಂಗಾಯತರ ಮೇಲೆ ಹೀಗೆ ನಿಂದಿಸುವುದನ್ನು ತಿಳಿದು ಆನಂದಿತರಾದ ಮನುವಾದಿಗಳು ಈ ಕನ್ನೇರಿ ಸ್ವಾಮಿಗೆ ಉಘೇ ಉಘೇ ಎನ್ನತೊಡಗಿದರು. ಶೂದ್ರ ಸ್ವಾಮಿಯನ್ನು ಅಬ್ರಾಹ್ಮಣ ಲಿಂಗಾಯತ ಮಠಗಳ ವಿರುದ್ಧ ಎತ್ತಿಕಟ್ಟಿದರು. ಹಿಂದುತ್ವವಾದಿ ಸಮ್ಮೇಳನ ವೇದಿಕೆಗಳಲ್ಲಿ ಸಡಿಲ ನಾಲಿಗೆಯ ಸ್ವಾಮಿಗೆ ವೇದಿಕೆ ಒದಗಿಸ ತೊಡಗಿದರು. ಇದರಿಂದ ಹುಚ್ಚು ಹೆಚ್ಚಾಗಿ ಕೆರಳಿದ ಈ ಕನ್ನೇರಿ ಸ್ವಾಮಿ ಸಿಕ್ಕ ವೇದಿಕೆಗಳಲ್ಲಿ ಲಿಂಗಾಯತ ಸ್ವಾಮಿಗಳು ಹಾಗೂ ಬಸವಾನುಯಾಯಿಗಳ ಬಗ್ಗೆ ಬಾಯಿಗೆ ಬಂದಂಗೆ ಬೊಗಳತೊಡಗಿತು.

2025 ಅಕ್ಟೋಬರ್ ತಿಂಗಳಲ್ಲಿ ಸಾಂಗ್ಲಿ ಜಿಲ್ಲೆಯ ಬೀಳೂರು ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟವನ್ನು “ಕಲಾವಿದರಿಂದ ಕೂಡಿದ ಮುಖ್ಯಮಂತ್ರಿಗಳ ಕೃಪಾಪೋಷಿತ ನಾಟಕ ಮಂಡಳಿ” ಎಂದು ಟೀಕಿಸಿ ಬಸವ ಸಂಸ್ಕೃತಿ ಅಭಿಯಾನವನ್ನು ಒಂದು ನಾಟಕ ಎಂದು ನಿಂದಿಸಿದರು. ಅವರು ದೇವಾಲಯಗಳಿಗೆ ಹೋಗಬೇಡಿ, ಮನೆಯ ದೇವರುಗಳನ್ನು ಹೊಳೆಗೆ ಹಾಕಿ, ಹೊಟೇಲುಗಳಲ್ಲಿ ಮಾಂಸ ತಿನ್ನಿ, ದಾರು ಕುಡೀರಿ ಎಂದು ಹೇಳುತ್ತಾರೆ” ಎಂದು ಆರೋಪಿಸಿದ ಕುಂಕುಮ ಸ್ವಾಮಿ ಜನರನ್ನು ಲಿಂಗಾಯತ ಮಠಾಧಿಪತಿಗಳ ವಿರುದ್ಧ ಎತ್ತಿಕಟ್ಟುವ ಹುನ್ನಾರ ಮಾಡಿದರು. ಆದರೆ ಇಲ್ಲಿಯವರೆಗೂ ಲಿಂಗಾಯತ ಮಠದ ಯಾವುದೇ ಸ್ವಾಮಿಗಳು ಮಾಂಸ ತಿನ್ನಿ, ಸೆರೆ ಕುಡಿಯಿರಿ ಎಂದು ಯಾರಿಗೂ ಹೇಳಿದ ನಿದರ್ಶನಗಳೇ ಇಲ್ಲ. ಆದರೂ ಈ ಸ್ವಾಮಿಯ ಬಾಯಿಚಪಲಕ್ಕೆ ಕೊನೆಮೊದಲಿಲ್ಲ.
2025 ಡಿಸೆಂಬರ್ ತಿಂಗಳಲ್ಲಿ ಚಿಕ್ಕೋಡಿ ರಾಯಭಾಗ್ ನಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ತುಗಳು ಆಯೋಜಿಸಿದ್ದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಮಾತಾಡಿದ ಕನ್ನೇರಿ ಸ್ವಾಮಿಯು ಲಿಂಗಾಯತ ಮಠದ ಸ್ವಾಮಿಗಳನ್ನು “ಬಸವ ತತ್ವ ತಾಲಿಬಾನಿಗಳು” ಎಂದು ಕರೆದು ಇನ್ನೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡರು. ತಾಲಿಬಾನಿಗಳು ತಮ್ಮ ಶರಿಯತ್ ಕಾನೂನಿಗೆ ವಿರುದ್ಧವಾಗಿರುವವರನ್ನು ಶಿಕ್ಷಿಸುತ್ತಾರೆ. ಆದರೆ ಬಸವತತ್ವಕ್ಕೆ ವಿರುದ್ಧವಾದವರ ಮೇಲೆ ಲಿಂಗಾಯತ ಸ್ವಾಮಿಗಳು ಫತ್ವಾ ಹೊರಡಿಸಿಲ್ಲ, ಶಿಕ್ಷೆ ಕೊಟ್ಟಿಲ್ಲ, ತಮ್ಮ ಧರ್ಮ ಪಾಲಿಸಲೇಬೇಕೆಂದು ಬಲವಂತ ಮಾಡಿಲ್ಲ. ಹಾಗೇನಾದರೂ ಲಿಂಗಾಯತರು ತಾಲಿಬಾನಿಗಳೇ ಆಗಿದ್ದರೆ ಅವರ ಧರ್ಮದ ವಿರುದ್ಧ ಮಾತಾಡಿದ ಈ ಕುಂಕುಮ ಸ್ವಾಮಿಯ ರುಂಡವೇ ಮುಂಡದ ಮೇಲಿರುತ್ತಿರಲಿಲ್ಲ.
ಹೀಗೆ ಈ ಸ್ವಾಮಿ ವೇದಿಕೆಗಳ ಮೇಲೆ ನಿಂತು ಅಶ್ಲೀಲ ಪದಗಳ ಪ್ರಯೋಗ ಮಾಡಿ ಸಮಾಜದ ಸೌಹಾರ್ದತೆ ಹಾಳುಮಾಡುತ್ತಿರುವುದನ್ನು ಪರಿಗಣಿಸಿದ ವಿಜಯಪುರದ ಜಿಲ್ಲಾಧಿಕಾರಿಗಳು 2025 ರ ಅಕ್ಟೋಬರ್ ನಲ್ಲಿ ಕನ್ನೇರಿ ಸ್ವಾಮಿ ಜಿಲ್ಲೆಗೆ ಬಾರದಂತೆ ನಿಷೇಧಿಸಿ ಆದೇಶ ಹೊರಡಿಸಿದರು. ನಂತರ ಧಾರವಾಡ, ಬಾಗಲಕೊಟೆ ಜಿಲ್ಲೆಗಳಿಗೂ ಪ್ರವೇಶ ನಿಷೇಧಿಸಲಾಯ್ತು. ಆ ನಿಷೇಧದ ಆದೇಶ ಪ್ರಶ್ನಿಸಿ ಸ್ವಾಮಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ಮಾಡಿದ ಕಲಬುರಗಿ ಪೀಠವು ಜಿಲ್ಲಾಡಳಿತದ ಆದೇಶ ಎತ್ತಿ ಹಿಡಿದು ಸ್ವಾಮಿಯ ಅರ್ಜಿ ವಜಾಗೊಳಿಸಿ “ಸ್ವಾಮಿಗಳ ಭಾಷೆ ಅವರ ಸ್ಥಾನಕ್ಕೆ ತಕ್ಕುದಲ್ಲ” ಎಂದು ಹೇಳಿತು. ಇಷ್ಟಕ್ಕೆ ಸುಮ್ಮನಿರದ ಕನ್ನೇರಿ ಸುಪ್ರೀಂ ಕೋರ್ಟ್ ಮೆಟ್ಟಲೇರಿ ಮುಖಭಂಗ ಮಾಡಿಸಿ ಕೊಂಡಿತು. ನ್ಯಾ. ಪಂಕಜ್ ಮಿತ್ತಲ್ ಮತ್ತು ನ್ಯಾ. ಪ್ರಸನ್ನ ವರಾಲೆಯವರ ಪೀಠ ಸ್ವಾಮಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ಕನ್ನೇರಿ ಸ್ವಾಮಿ ಉತ್ತಮ ಪ್ರಜೆಯೇ ಅಲ್ಲ, ಸಂತರಾಗಿ ಭಾಷೆಯ ಮೇಲೆ ನಿಯಂತ್ರಣವಿರಬೇಕು, ಈ ರೀತಿಯ ಕೀಳು ಹೇಳಿಕೆ ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದಿಲ್ಲ,” ಎಂದು ಹೇಳಿದ ನ್ಯಾಯಪೀಠವು ಅರ್ಜಿಯನ್ನು ವಜಾ ಗೊಳಿಸಿತು.
“ಲಿಂಗಾಯತ ಸ್ವಾಮಿಗಳನ್ನು ಚಪ್ಪಲಿಯಲ್ಲಿ ಹೊಡೀಬೇಕು” ಎನ್ನುವಂತಹ ತುಚ್ಛ ಹೇಳಿಕೆಗಳನ್ನು ಕೊಟ್ಟ ಕನ್ನೇರಿ ಸ್ವಾಮಿಯನ್ನು 100 ಕ್ಕೂ ಹೆಚ್ಚು ಲಿಂಗಾಯತ ಮಠಗಳ ಸ್ವಾಮಿಗಳು ಖಂಡಿಸಿದರು. ಲಿಂಗಾಯತ ಮತ್ತು ದಲಿತ ಸಂಘಟನೆಗಳು ದೂರು ದಾಖಲಿಸಿದವು. ಕನ್ನೇರಿ ಸ್ವಾಮಿಯನ್ನು ಬಂಧಿಸುವಂತೆ ಗದುಗಿನ ತೊಂಟದಾರ್ಯ ಸ್ವಾಮಿಗಳು ಆಗ್ರಹಿಸಿದರು. ಲಿಂಗಾಯತ ಮಠಗಳ ಒಕ್ಕೂಟವು ಕನ್ನೇರಿ ಸ್ವಾಮಿಯ ವಿರುದ್ಧ ಒಂದು ಕೋಟಿ ರುಪಾಯಿಗಳ ಮಾನಹಾನಿ ಮೊಕದ್ದಮೆ ಹೂಡಿತು. ಬೆಂಗಳೂರಿನ 31 ನೇ CCM ಕೋರ್ಟ್ ಈ ಸ್ವಾಮಿಯ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮಧ್ಯಂತರ ನಿರ್ಬಂಧ ಆದೇಶ ಹೊರಡಿಸಿತು. ಇಷ್ಟೆಲ್ಲಾ ಆದರೂ ಇನ್ನೂ ಈ ಧರ್ಮಾಂಧ ಸ್ವಾಮಿಯ ಬಾಯಿಗೆ ಕಡಿವಾಣ ಬಿದ್ದಿಲ್ಲ.

ಯಾಕೆ ಈ ಕನ್ನೇರಿ ಸ್ವಾಮಿ ಲಿಂಗಾಯತ ಮಠಾಧೀಶರುಗಳ ವಿರುದ್ಧ ತಿರುಗಿ ಬಿದ್ದರು? ಅದಕ್ಕೂ ಕಾರಣಗಳಿವೆ. ಯಾವಾಗ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರಕಾರವು ಬಸವಣ್ಣನವರನ್ನು “ಸಾಂಸ್ಕೃತಿಕ ನಾಯಕ” ಎಂದು ಅಧಿಕೃತವಾಗಿ ಘೋಷಣೆ ಮಾಡಿತೋ ಆಗ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ಬಸವಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಒಂದು ತಿಂಗಳುಗಳ ಕಾಲ ರಾಜ್ಯಾದ್ಯಂತ “ಬಸವ ಸಂಸ್ಕೃತಿ ಅಭಿಯಾನ”ವನ್ನು ಆರಂಭಿಸಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಅಭಿಯಾನದ ಸಮಾರೋಪ ಸಮಾರಂಭಕ್ಕೆ ಲಕ್ಷಾಂತರ ಜನ ಸೇರಿದ್ದರು. ಬಸವ ಅಭಿಯಾನದ ಅಪೂರ್ವ ಯಶಸ್ಸಿನಿಂದ ಘಾಸಿಗೊಂಡ ಹಿಂದುತ್ವವಾದಿಗಳು ಈ ಹರಕಲು ಬಾಯಿಯ ಕನ್ನೇರಿ ಸ್ವಾಮಿಯನ್ನು ಎತ್ತಿಕಟ್ಟಿ ಕೆಟ್ಟದಾಗಿ ಟೀಕೆ ಮಾಡಿಸಲು ಶುರುಮಾಡಿದರು. ಸಂಘ ಪರಿವಾರದ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದಂತಹ ಮತಾಂಧ ಸಂಘಟನೆಗಳು ಈ ಸ್ವಾಮಿಯನ್ನು ಕರೆಯಿಸಿ ಲಿಂಗಾಯತ ಧರ್ಮೀಯರ ವಿರುದ್ಧ ದ್ವೇಷ ಭಾಷಣ ಮಾಡಿಸಲು ಆರಂಭಿಸಿದರು. ಲಿಂಗಾಯತರನ್ನು ಹಿಂದೂ ಧರ್ಮದಿಂದ ಬೇರ್ಪಡಿಸಿ ಸ್ವತಂತ್ರ ಧರ್ಮವೆಂದು ಮಾನ್ಯತೆ ಕೊಡಬೇಕೆಂಬ ಬೇಡಿಕೆಯನ್ನು ಈ ಹಿಂದುತ್ವವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸನಾತನಿಗಳು ಬೃಹತ್ ಹಿಂದೂ ಸಮಾವೇಶ ಏರ್ಪಡಿಸಿ, ಈ ಕನ್ನೇರಿಯನ್ನು ಕರೆಸಿ ಲಿಂಗಾಯತರ ಮೇಲೆ ದ್ವೇಷ ಕಾರತೊಡಗಿದರು. ಬಿಜೆಪಿ ಹಾಗೂ ಸಂಘಪರಿವಾರದ ಬೆಂಬಲದಿಂದ ಮತಿಗೆಟ್ಟ ಕನ್ನೇರಿ ಸ್ವಾಮಿ ” ಆ ಸೂ*ಳಿ ಮಕ್ಕಳಿಗೆ ನಾನು ಹೇಳ್ತೇನಿ, ಅವರನ್ನ ಹಿಡಿದು ಮೆಟ್ಟಿಲೇ ಹೊಡೀಬೇಕು, ಯಲಾ ಹಲಕಟ್ ನನ್ನ ಮಕ್ಳಾ” ಎಂದೆಲ್ಲಾ ತಮ್ಮ ಕೊಳಕು ಚರಂಡಿ ನಾಲಿಗೆಯನ್ನು ಹರಿಬಿಡತೊಡಗಿದರು. ಈ ದರಿದ್ರ ಅನಾಗರಿಕ ದ್ವೇಷ ಭಾಷಣಕ್ಕೆ ಬಿಜೆಪಿಯಿಂದ ಉಚ್ಚಾಟಿತ ಈಶ್ವರಪ್ಪ, ಬಸವರಾಜ ಯತ್ನಾಳರಂತವರು ಧ್ವನಿಗೂಡಿಸಿದರು.
ಈ ಕನ್ನೇರಿಗೆ ಕೇವಲ ಲಿಂಗಾಯತ ಮಠಾಧೀಶರ ಮೇಲೆ ಮಾತ್ರ ದ್ವೇಷ ಎಂಬುದಲ್ಲ, ಧಾರ್ಮಿಕ ಅಲ್ಪಸಂಖ್ಯಾತರಾದ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮೀಯರ ಮೇಲೂ ದ್ವೇಷದ ಹೇಳಿಕೆ ಕೊಡುತ್ತಲೇ ಬಂದಿದ್ದಾರೆ. ಮುಸಲ್ಮಾನರು ಹೆಚ್ಚು ಮಕ್ಕಳನ್ನು ಹುಟ್ಟಿಸಿ 51% ಆದರೆ ಈ ದೇಶ ದೇಶವಾಗಿ ಉಳಿಯುವುದಿಲ್ಲ. ನಮ್ಮ ದೇಶದಲ್ಲೇ ಪಾಕಿಸ್ತಾನ, ಅರಬಸ್ತಾನಗಳು ಹುಟ್ಟಿಕೊಳ್ತವೆ” ಎನ್ನುವ ಧರ್ಮ ದ್ವೇಷಪೂರಿತ ಭಾಷಣ ಮಾಡಿ ಅಲ್ಪಸಂಖ್ಯಾತರ ವಿರುದ್ಧ ಹಿಂದೂಗಳಲ್ಲಿ ದ್ವೇಷಾತಂಕ ಹುಟ್ಟಿಸುವ ಕೆಟ್ಟ ಕೆಲಸವನ್ನು ಸನಾತನಿಗಳ ಕುಮ್ಮಕ್ಕಿನಿಂದ ಕನ್ನೇರಿ ಮಾಡುತ್ತಿರುವುದು ಅಕ್ಷಮ್ಯ.
ಈ ಕನ್ನೇರಿ ಸ್ವಾಮಿ ಇಲ್ಲಿ ದ್ವೇಷ ಭಾಷಣೋತ್ಪಾದಕ ಆಯುಧವಾಗಿ ಮಾತ್ರ ಬಳಸಲ್ಪಡುತ್ತಿದ್ದಾರೆ. ಸನಾತನ ವೈದಿಕಶಾಹಿಗಳು ಈ ಹುನ್ನಾರದ ಹಿಂದಿರುವ ಶಕ್ತಿ. “ಹೇಗಾದರೂ ಮಾಡಿ ಹೆಚ್ಚುತ್ತಿರುವ ಬಸವಣ್ಣನವರ ಪ್ರಭಾವವನ್ನು ಕಡಿಮೆ ಮಾಡಬೇಕು, ಲಿಂಗಾಯತವು ಸ್ವತಂತ್ರ ಧರ್ಮ ಆಗುವುದನ್ನು ತಡೆಯಬೇಕು, ಲಿಂಗಾಯತರಲ್ಲೂ ಬ್ರಾಹ್ಮಣ್ಯದ ಆಚಾರ ವಿಚಾರ ನಂಬಿಕೆಗಳ ಭ್ರಮೆಗಳನ್ನು ಬಿತ್ತಬೇಕು” ಎನ್ನುವುದೇ ಹಿಂದುತ್ವವಾದಿಗಳ ಉದ್ದೇಶ. ಆ ಉದ್ದೇಶದ ಸಾಧನೆಗಾಗಿ ಕನ್ನೇರಿ ಸ್ವಾಮಿಯಂತವರನ್ನು ಬಳಸಿಕೊಂಡು ನಂತರ ಬಿಸಾಕುತ್ತಾರೆ. ಇದನ್ನು ಅರಿಯದ ಕನ್ನೇರಿ ಕಣ್ಣಿ ಹರಿದುಕೊಂಡ ದೇವರ ಕೋಣದ ಹಾಗೆ ಹೂಂಕರಿಸುತ್ತಿದ್ದಾರೆ. ಪ್ರತಿಯೊಬ್ಬ ಲಿಂಗಾಯತ, ಪ್ರತಿಯೊಬ್ಬ ಬಸವಾನುಯಾಯಿ, ಪ್ರತಿಯೊಬ್ಬ ಶೂದ್ರ ದಲಿತ ಎಚ್ಚೆತ್ತುಕೊಳ್ಳದೇ ಹೋದರೆ ಸನಾತನಿಗಳ ಅಟ್ಟಹಾಸ ಮೇರೆ ಮೀರುತ್ತದೆ. ಹಿಂದುತ್ವವಾದಿ ತಾಲಿಬಾನಿಗಳು ಆಡಿದ್ದೇ ಆಟವಾಗುತ್ತದೆ. ಸನಾತನಿಗಳು ಹೂಡುವ ಪ್ರತಿಯೊಂದು ಆಯುಧ ಪರಿಕರಗಳಿಗೂ ಲಿಂಗಾಯತರು ಪ್ರತ್ಯಾಸ್ತ್ರ ಹೂಡಲೇಬೇಕಿದೆ. ಹಿಂದುತ್ವವಾದಿ ವೈದಿಕಶಾಹಿಗಳ ವಿರುದ್ಧ ಬಸವಾದಿ ಶರಣರುಗಳ ವಚನಾಯುಧಗಳನ್ನು ಇನ್ನಷ್ಟು ತೀವ್ರವಾಗಿ ಪ್ರಯೋಗಿಸಬೇಕಿದೆ. ಆಗ ಕನ್ನೇರಿ ಸ್ವಾಮಿಯಂತಹ ತಾಲಿಬಾನಿ ಸಂಘಿ ಸಂತಾನ ಬಾಲ ಮುದುರಿಕೊಂಡು ಮೂಲೆ ಸೇರುತ್ತದೆ. ಲಿಂಗಾಯಿತರಾಗಿ ಏಕದೇವೋಪಾಸಕರಾಗಿದ್ದೂ ಬಹುದೇವೋಪಾಸನೆ ಆಚರಿಸುವ, ಬ್ರಾಹ್ಮಣ್ಯ ಹಾಗೂ ವೀರಶೈವಾಚರಣೆಗಳ ಭ್ರಮೆಗೊಳಗಾಗಿ ಇಷ್ಟ ಲಿಂಗವ ಬಿಟ್ಟು ಸ್ಥಾವರ ಲಿಂಗಗಳ ಪೂಜಿಸುವ ಲಿಂಗಾಯತರುಗಳು ಅಂಬಿಗರ ಚೌಡಯ್ಯನವರ ಈ ವಚನವನ್ನು ಅರ್ಥಮಾಡಿಕೊಳ್ಳಲೇಬೇಕಿದೆ.
ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿಮೇಲಾಗಿ ಬೀಳುವ
ಲೊಟ್ಟೆ ಮೂಳರ ಕಂಡರೆ
ಗಟ್ಟಿ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೇ ಹೊಡೆಯಂದಾ
ಅಂಬಿಗರ ಚೌಡಯ್ಯ”
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಹೆಂಗಸರೇ ಎಚ್ಚರ! ಅತ್ಯಾಚಾರಿಗಳು ನಿಮ್ಮ ಪಕ್ಕದಲ್ಲೇ ಇದ್ದಾರೆ!!


