ಬೆಂಗಳೂರು: ನಗರ ಪೊಲೀಸರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಸನ್ರೈಸ್ ಹೈದ್ರಾಬಾದ್ (ಎಸ್ಆರ್ಹೆಚ್) ನಡುವಿನ ಮೊದಲ ಪಂದ್ಯಾವಳಿಗೆ ಬರೋಬ್ಬರಿ 2 ಸಾವಿರ ಪೊಲೀಸ್ ಅಧಿಕಾರಿ-ಸಿಬ್ಬಂದಿಗಳನ್ನು ನಿಯೋಜಿಸಿದ್ದಾರೆ.
ಟಿಕೆಟ್ ಇದ್ದವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶ. ವಿನಾಕಾರಣ ಸ್ಟೇಡಿಯಂ ಹೊರಗೆ ಬಂದು ಜಮಾವಣೆಗೊಳ್ಳುವುದು, ಕ್ರೀಡಾಪಟುಗಳು ಆಗಮನದ ವೇಳೆ ಜವಾವಣೆಗೊಳ್ಳುವುದನ್ನು ಈ ಬಾರಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಪಂದ್ಯ ಆರಂಭಕ್ಕೂ ಮೊದಲು 4 ಗಂಟೆ ಮುಂಚಿತವಾಗಿ ಟಿಕೆಟ್ ಹೊಂದಿದವರು ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಕ್ರೀಡಾಂಗಣದ 15 ರಿಂದ 20 ಗೇಟ್ಗಳಿಗೆ ಬದಲಾಗಿ, 45 ಗೇಟ್ಗಳನ್ನು ತೆರೆಯಲಾಗಿದೆ.
ಸ್ಟೇಡಿಯಂ ನ ಒಳಗೆ ಮತ್ತು ಹೊರಗೆ 500 ಸಿಸಿ ಕ್ಯಾಮೆರಗಾಳನ್ನು ಅಳವಡಿಸಲಾಗಿದೆ. ಈ ಸಿಸಿ ಕ್ಯಾಮೆರಾಗಳನ್ನು ಕಮಾಂಡ್ ಸೆಂಟರ್ ನಿಂದಲೇ ನಿರ್ವಹಣೆ ಮಾಡಲಾಗುತ್ತದೆ. 3 ಆ್ಯಂಬುಲೆನ್ಸ್ಗಳು ಮೈದಾನದ ಹೊರಗೆ ಹಾಗೂ 5 ಆ್ಯಂಬುಲೆನ್ಸ್ಗಳು ಒಳಗಡೆ ಸೇರಿ ಒಟ್ಟು 9 ಆ್ಯಂಬುಲೆನ್ಸ್ಗಳನ್ನು ನಿಯೋಜಿಸಲಾಗಿದೆ. ವೀಕ್ಷಕರ ಭದ್ರತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ನಿರ್ವಹಣೆಗಾಗಿ 6 ಮಂದಿ ಡಿಸಿಪಿಗಳು, 15ಕ್ಕೂ ಹೆಚ್ಚು ಎಸಿಪಿಗಳು, 50 ಪಿಐ, 80 ಪಿಎಸ್ಐ ಹಾಗೂ ಹೆಡ್ಕಾನ್ಸ್ಟೇಬಲ್ ಹಾಗೂ ಕಾನ್ಸ್ಟೇ ಬಲ್ ಮತ್ತು ಗೃಹ ರಕ್ಷಣದ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪಂದ್ಯ ವೀಕ್ಷಿಸಲು ಆಗಮಿಸುವ ಪ್ರಕ್ಷಕರಿಗೆ ಉಚಿತ ಮೆಟ್ರೋ ಟಿಕೆಟ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಂದ್ಯ ಮುಗಿದ ನಂತರವೂ ಮೆಟ್ರೋ ಸಂಚಾರ ಇರಲಿದೆ. ಮೆಟ್ರೊಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಿದೆ. ಚಿನ್ನಸ್ವಾಮಿ ಮೈದಾನಕ್ಕೆ ಎಂ-1 ಹಾಗೂ ಎಂ-2 ವಿಭಾಗಗಳನ್ನಾಗಿ ವಿಂಗಡಿಸಿ ಪೊಲೀಸರನ್ನು ನಿಯೋಜಿಸಲಾಗಿದೆ. ಟಿಕೆಟ್ ಇಲ್ಲದವರು ಮೈದಾನದ ಸುತ್ತಲು ಜಮಾವಣೆಯಾಗದಂತೆ ನೋಡಿಕೊಳ್ಳಲು 7 ವಿಶೇಷ ತಂಡ ರಚಿಸಲಾಗಿದೆ. ಒಂದು ತಂಡದಲ್ಲಿ 15 ರಿಂದ 20 ಸಿಬ್ಬಂದಿ ಇರಲಿದ್ದಾರೆ.

