ವಾಷಿಂಗ್ಟನ್ / ಇಸ್ಲಾಮಾಬಾದ್ / ಟೆಹ್ರಾನ್, ಮಾರ್ಚ್ 24: ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ನಾಲ್ಕನೇ ವಾರಕ್ಕೆ ಕಾಲಿಟ್ಟಿದ್ದು ಕುತೂಹಲಕಾರಿ ಬೆಳವಣಿಗೆಯಲ್ಲಿ ಪಾಕಿಸ್ತಾನ ಶಾಂತಿದೂತನಾಗಿ ಅಖಾಡಕ್ಕೆ ಇಳಿದಿದೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸೀಮ್ ಮುನೀರ್ ಅವರು ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ. ನಂತರ ಪ್ರಧಾನಿ ಶೆಹಬಾಜ್ ಶರೀಫ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ಫೋನ್ ಮೂಲಕ ಚರ್ಚೆ ನಡೆಸಿದ್ದಾರೆ. ಯುದ್ಧ ಕೊನೆಗೊಳಿಸಲು ಅಮೆರಿಕ ಈಗ ಪಾಕಿಸ್ತಾನದ ಮೊರೆ ಹೋಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ನಡುವೆ ಟರ್ಕಿ, ಈಜಿಪ್ಟ್ ಮತ್ತು ಪಾಕಿಸ್ತಾನ ಸೇರಿದ “STEP” ಗುಂಪು ಶಾಂತಿ ಪ್ರಯತ್ನಗಳಲ್ಲಿ ತೊಡಗಿದೆ. ಇಸ್ಲಾಮಾಬಾದ್ನಲ್ಲಿ ಅಮೆರಿಕಾ-ಇರಾನ್ ಮಾತುಕತೆ ನಡೆಯುವ ಸಾಧ್ಯತೆ ಇದೆ. ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ವಕ್ತಾರ ಅಮೆರಿಕ, ಇರಾನ್ ಬಯಸಿದರೆ ಇಸ್ಲಾಮಾಬಾದ್ ಮಾತುಕತೆಗೆ ಆತಿಥ್ಯ ನೀಡಲು ಸಿದ್ಧ ಎಂದು ಹೇಳಿದ್ದಾರೆ. ಏತನ್ಮಧ್ಯೆ ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ಅವರು ಒಮಾನ್, ಈಜಿಪ್ಟ್, ಟರ್ಕಿಯೆ, ಪಾಕಿಸ್ತಾನ ಸೇರಿದಂತೆ ಹಲವು ದೇಶಗಳೊಂದಿಗೆ ಚರ್ಚೆ ನಡೆಸುತ್ತಿದ್ದಾರೆ.
ತೀವ್ರ ಸ್ವರೂಪದ ಅಂತಾರಾಷ್ಟ್ರೀಯ ಒತ್ತಡಕ್ಕೆ ಸಿಲುಕಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ನೊಂದಿಗೆ “ಫಲಪ್ರದ ಮಾತುಕತೆ” ನಡೆಯುತ್ತಿದೆ ಎಂದು ಹೇಳಿ, ಇರಾನ್ನ ಇಂಧನ ಸೌಲಭ್ಯಗಳ ಮೇಲಿನ ದಾಳಿ ಬೆದರಿಕೆಯನ್ನು ೫ ದಿನಗಳ ಕಾಲ ಮುಂದೂಡಿದ್ದಾರೆ. ಇದು ಅಮೆರಿಕ ಯುದ್ಧರಂಗದಿಂದ ಹಿಂದೆ ಸರಿಯಲು ಬಯಸುತ್ತಿದೆ ಎಂಬ ಮಾತುಗಳನ್ನು ಪುಷ್ಠಿಗೊಳಿಸುತ್ತಿದೆ.
ಟ್ರಂಪ್ ಅವರು ಸೋಮವಾರ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ “ಇರಾನ್ನೊಂದಿಗೆ ಬಹಳ ಉತ್ತಮ ಮತ್ತು ಫಲಪ್ರದ ಸಂಭಾಷಣೆ” ನಡೆದಿದೆ ಎಂದು ಘೋಷಿಸಿದ್ದಾರೆ. ತಮ್ಮ ಸೊಸೆ ಜರೆಡ್ ಕುಷ್ನರ್ ಮತ್ತು ವ್ಯಾಪಾರಿ ಸ್ಟೀವ್ ವಿಟ್ಕಾಫ್ ಅವರು ಇರಾನ್ನ “ಗೌರವಾನ್ವಿತ” ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. “ಇರಾನ್ ಶಾಂತಿ ಬಯಸುತ್ತಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಆದರೆ ಇರಾನ್ ಸರ್ಕಾರವು ಇದನ್ನು ಸಂಪೂರ್ಣವಾಗಿ ನಿರಾಕರಿಸಿದೆ. ಇರಾನ್ ಪಾರ್ಲಿಮೆಂಟ್ ಸ್ಪೀಕರ್ ಮಹಮ್ಮದ್ ಬಾಗರ್ ಘಲೀಬಾಫ್ “ಇದೊಂದು ಸುಳ್ಳು ಸುದ್ದಿ, ಹಣಕಾಸು ಮತ್ತು ತೈಲ ಮಾರುಕಟ್ಟೆಯನ್ನು ದಾರಿತಪ್ಪಿಸುವ ಪ್ರಯತ್ನ” ಎಂದು ಖಂಡಿಸಿದ್ದಾರೆ.
ರಕ್ಷಣಾ ಸಚಿವ ಹೆಗ್ಸೆತ್ಗೆ ತಪ್ಪು?
ಟ್ರಂಪ್ ಅವರು ರಕ್ಷಣಾ ಸಚಿವ ಪೀಟ್ ಹೆಗ್ಸೆತ್ ಅವರನ್ನು ನೇರವಾಗಿ ಉಲ್ಲೇಖಿಸಿ, “ಪೀಟ್, ನೀನೇ ಮೊದಲು (ಯುದ್ಧ) ‘ಮಾಡೋಣ’ ಎಂದು ಹೇಳಿದ್ದ” ಎಂದು ಹೇಳಿದ್ದಾರೆ. ಯುದ್ಧ ತಮ್ಮ ನಿರೀಕ್ಷೆಯಂತೆ “ತ್ವರಿತ ಮತ್ತು ನಿರ್ಣಾಯಕ”ವಾಗಿ ಮುಗಿಯದ ಕಾರಣ, ಅಮೆರಿಕಾ ಆಡಳಿತದಲ್ಲಿ ಹೆಗ್ಸೆತ್ ಅವರನ್ನು ತಪ್ಪಿಗೆ ಹೊಣೆಯಾಗಿಸುವ ಚರ್ಚೆಗಳು ಆರಂಭವಾಗಿವೆ ಎಂದು ವರದಿಯಾಗಿದೆ.
ಪಶ್ಚಿಮ ಏಷಿಯಾ ಯುದ್ಧ ಆರಂಭಗೊಂಡ ನಂತರ ಇರಾನ್ನಲ್ಲಿ ೧,೫೦೦ಕ್ಕೂ ಹೆಚ್ಚು ಸಾವುಗಳು ಸಂಭವಿಸಿದ್ದರೆ, ಲೆಬನಾನ್ನಲ್ಲಿ ೧,೦೦೦ಕ್ಕೂ ಹೆಚ್ಚು ಸಾವುಗಳು ದಾಖಲಾಗಿವೆ. ಇಸ್ರೇಲ್ನಲ್ಲಿ ಕನಿಷ್ಠ ೧೫ ಸಾವುಗಳು ಸಂಭವಿಸಿವೆ, ಇನ್ನು ಅಮೆರಿಕ ಸೈನ್ಯದ 13 ಸೈನಿಕರು ಮೃತಪಟ್ಟಿದ್ದಾರೆ.

