ಒಂದೊಮ್ಮೆ ಮುಂದಿನ ದಿನಗಳಲ್ಲಿ ಯುದ್ಧ ಈ ಹಂತಕ್ಕೆ ತಲುಪಿತೆಂದರೆ ಅದರ ಪರಿಣಾಮವನ್ನು ನಾವು ಊಹಿಸಬಹುದೆ? ಅರಬ್ ದೇಶಗಳಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟ್ಯಂತರ ಜನರು ನೀರಿಲ್ಲದೆ ಸಾಯುವ ಪರಿಸ್ಥಿತಿ ಅದು. ಎಲ್ಲಾ ದೇಶಗಳ ಮೇಲೆ ಒಟ್ಟಿಗೇ ಅಣುಬಾಂಬ್ ಹಾಕಿದ ಪರಿಣಾಮವನ್ನು ಇದು ಬೀರುತ್ತದೆ… – ಹರ್ಷಕುಮಾರ್ ಕುಗ್ವೆ, ಪತ್ರಕರ್ತರು.

ಇರಾನ್ – ಇಸ್ರೇಲ್ ಯುದ್ಧ ಶುರುವಾಗಿ 13 ದಿನಗಳಾಗಿವೆ. ಇಡೀ ಜಗತ್ತಿನ ಪ್ರತಿಯೊಬ್ಬರನ್ನೂ ಈ ಯುದ್ಧ ಒಂದಿಲ್ಲೊಂದು ರೀತಿಯಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾಗಿ ಬಾಧಿಸಲಿದೆ. ಇಂದು ಯುದ್ಧದಲ್ಲಿ ತೊಡಗಿಕೊಂಡಿರುವ ಎಲ್ಲಾ ದೇಶಗಳಿಗೂ ತಮ್ಮದೇ ಹಿತಾಸಕ್ತಿಗಳಿವೆ. ಆದರೆ, ಈ ಯುದ್ಧ ನಡೆಯುತ್ತಿರುವ ರೀತಿ ನೋಡಿದರೆ, ಇದು ಮುಕ್ತಾಯಗೊಳ್ಳುವ ಹಂತದಲ್ಲಿ ಜಗತ್ತಿನ ಭೂರಾಜಕೀಯ (ಜಿಯೊಪೊಲಿಟಿಕಲ್) ಸ್ವರೂಪಗಳು ಫೆಬ್ರವರಿ 28ರ ರೀತಿಯಲ್ಲಿರದೇ ಸಂಪೂರ್ಣ ಬದಲಾಗಿರುತ್ತವೆ ಎಂಬುದಂತೂ ನಿಚ್ಚಳವಾಗಿದೆ. ‘ನಾನು ಜಗತ್ತಿನ ಸೂಪರ್ ಪವರ್’ ಎಂದು ಬೀಗುತ್ತಿದ್ದ ಅಮೆರಿಕ ಹಾಗೂ ನಾನು ಅರಬ್ ದೇಶಗಳ ಪಾಲಿನ ಡಾನ್ ಎಂದೇ ಸೊಕ್ಕಿನಿಂದ ವರ್ತಿಸುತ್ತಿದ್ದ ಇಸ್ರೇಲ್ ಎರಡೂ ಬೆತ್ತಲಾಗಿ ನಿಂತಿವೆ. ಇವೆರಡೂ ಇಷ್ಟು ದಿನ ತಮ್ಮ ಪರವಾದ ಮೀಡಿಯಾಗಳ ಮೂಲಕ ಪ್ರದರ್ಶನ ಮಾಡಿದ್ದ ಭಾರೀ ಬಿಲ್ಡಪ್ ಟುಸ್ ಪಟಾಕಿಯಾಗಿದೆ. ಇಸ್ರೇಲಿನ ಬಹುವರ್ಣಿತ ಐರನ್ ಡೋಮ್ ಮಣ್ಣು ಮುಕ್ಕಿರುವುದಕ್ಕೆ ರಾಜಧಾನಿ ಟೆಲ್ ಅವಿವ್ ಮೇಲೆ ಯಾವ ಅಡೆತಡೆಯಿಲ್ಲದೆ ಬಂದು ಎರಗಿದ ಇರಾನಿನ ಶಾಹೀದ್, ಫತಾ, ಖದರ್ ಮುಂತಾದ ಹೆಸರಿನ ಪ್ರಬಲ ಕ್ಷಿಪಣಿಗಳೇ ಸಾಕ್ಷಿ. ಅವುಗಳು ಉಂಟು ಮಾಡಿದ ಪರಿಣಾಮವೇ ಜಗತ್ತಿಗೆ ತಿಳಿಯದಂತೆ ಇಸ್ರೇಲ್ ಸೆನ್ಸಾರ್ ಮಾಡಿಕೊಂಡಿರುವುದು ಅದರ ದೌರ್ಬಲ್ಯವನ್ನು ಜಗತ್ತಿಗೆ ತಿಳಿಸಿದೆ. ಇನ್ನು ಅಮೆರಿಕ 1970 – 80ರ ದಶಕಗಳಲ್ಲಿ ತಾನು ನಡೆಸಿದ ದಾಳಿಗಳ ರೀತಿಯಲ್ಲಿಯೇ ಈ ಬಾರಿಯೂ ಇರಾನ್ ಮೇಲೆ ದಾಳಿ ನಡೆಸಿ ಅದಕ್ಕೆ ಗಲ್ಫ್ ದೇಶಗಳಲ್ಲಿ ಬಿದ್ದ ಹೊಡೆತಗಳಿಂದ ತೀವ್ರ ಮುಖಭಂಗಕ್ಕೊಳಗಾಗಿದೆ. ಗಲ್ಫ್ ದೇಶಗಳಲ್ಲಿ ತನ್ನ ಯಾವುದೇ ಸೇನಾ ನೆಲೆಗಳನ್ನು, ವಾಯು ನೆಲೆಗಳನ್ನು ಕೊನೆಗೆ ತನ್ನ ತೈಲ ಘಟಕಗಳನ್ನೂ ಸುರಕ್ಷಿತವಾಗಿ ಇಟ್ಟುಕೊಳ್ಳಲು ಅಮೆರಿಕಕ್ಕೆ ಅಸಾಧ್ಯವಾಗಿದೆ.
ನೀವೊಮ್ಮೆ ನೆನಪು ಮಾಡಿಕೊಳ್ಳಿ. ಈ ಯುದ್ಧ ಫೆ 28ರಂದು ಅಮೆರಿಕ ಮತ್ತು ಇಸ್ರೇಲ್ ಸೇರಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಆರಂಭವಾಯಿತು. ಆದರೆ ಯುದ್ಧಕ್ಕೆ ಅವು ನೀಡಿದ್ದ ಕಾರಣಗಳು ಒಂದೇ ರೀತಿ ಇರಲಿಲ್ಲ. ಅಮೆರಿಕದ ಅಧ್ಯಕ್ಷ ಟ್ರಂಪ್ ಮೊದಲು ಹೇಳಿದ್ದು ಇದು ಇರಾನಿನಲ್ಲಿ ಆಡಳಿತ ಬದಲಾವಣೆ ಮಾಡಲು ಎಂದು. ಆದರೆ ಅಮೆರಿಕದ ಕಾರ್ಯದರ್ಶಿ ಮಾರ್ಕ್ ರುಬಿಯೋ ಹೇಳಿದ್ದು, ‘ಇಸ್ರೇಲ್ ಇರಾನ್ ಮೇಲೆ ದಾಳಿ ಮಾಡುವುದರಲ್ಲಿತ್ತು. ಈ ಕಾರಣದಿಂದ ನಾವೂ ಇರಾನ್ ಮೇಲೆ ದಾಳಿ ಮಾಡಿದೆವು’ ಎಂದು. ನಂತರ ಟ್ರಂಪ್ ಮಹಾಶಯ ತನ್ನ ವರಸೆ ಬದಲಿಸಿಕೊಂಡು, ಇರಾನ್ ಇಸ್ರೇಲ್ ಮೇಲೆ ಹೇಗೂ ದಾಳಿ ಮಾಡುತ್ತಿತ್ತು, ಅದು ನಮ್ಮನ್ನೂ ಬಿಡುತ್ತಿರಲಿಲ್ಲ, ಹೀಗಾಗಿ ನಾವು ದಾಳಿ ಮಾಡಿದೆವು ಅಂತ. ಟ್ರಂಪ್ ಮೊದಮೊದಲು ಮಾತಾಡುತ್ತಿದ್ದ ರೀತಿ ಹೇಗಿತ್ತೆಂದರೆ ಎರಡು ದಿನದಲ್ಲಿ ಇರಾನನ್ನು ಸಂಪೂರ್ಣ ವಶಪಡಿಸಿಕೊಂಡು ಯುದ್ಧವೇ ಮುಗಿದುಹೋಗುತ್ತದೆ ಎಂಬಂತೆ. ಆಯತೊಲ್ಲಾ ಖಮೇನಿಯನ್ನು ದಾಳಿಯಲ್ಲಿ ಕೊಂದ ನಂತರ ಎಲ್ಲವೂ ಮುಗಿದೇ ಹೋಗುತ್ತದೆ ಎಂದು ಅಂದುಕೊಂಡಿದ್ದಿರಬೇಕು. ಒಟ್ಟಿನಲ್ಲಿ ಇಡೀ ಜಗತ್ತಿಗೆ ಅರ್ಥವಾಗಿದ್ದೇನೆಂದರೆ ಈ ಯುದ್ಧ ಅಮೆರಿಕದ ಯುದ್ಧವಾಗಿರಲೇ ಇಲ್ಲ ಎಂಬುದು. ಬದಲಿಗೆ ಇದು ಇಸ್ರೇಲಿನ ಯುದ್ಧವಾಗಿತ್ತು. ಕಳೆದ ನಲವತ್ತು ವರ್ಷಗಳಿಂದ ಇರಾನ್ ವಿರುದ್ಧ ಈ ಯುದ್ಧ ನಡೆಸಲು ಇಸ್ರೇಲ್ ಕಾಯುತ್ತಿತ್ತು. ಆದರೆ ತನಗೆ ಬೇಕಾದ ತಿಕ್ಕಲು ಅಧ್ಯಕ್ಷನೊಬ್ಬ ಇಷ್ಟು ವರ್ಷ ಇಸ್ರೇಲಿಗೆ ಸಿಕ್ಕಿರಲಿಲ್ಲ. ಕೊನೆಗೆ ಸಿಕ್ಕಿದವನು ಡೊನಾಲ್ಡ್ ಟ್ರಂಪ್.
ಆದರೆ, ಟ್ರಂಪ್ ಮತ್ತು ನೇತನ್ಯಾಹು ಲೆಕ್ಕಾಚಾರಗಳು ಸಂಪೂರ್ಣ ತಲೆಕೆಳಕಾಗಿವೆ ಎಂಬುದು ಈ 13 ದಿನಗಳಲ್ಲಿ ಸ್ಪಷ್ಟವಾಗಿದೆ. ಯಾವ ಇರಾನನ್ನು ಇವರು ಸಂಪೂರ್ಣ ಮಕಾಡೆ ಬೀಳಿಸಿ ಇಡೀ ಅರಬ್ ಜಗತ್ತನ್ನು ತನ್ಮೂಲಕ ಇಡೀ ಜಗತ್ತನ್ನು ತಮ್ಮೆರಡು ದೇಶಗಳ ಕಪಿಮುಷ್ಠಿಗೆ ಪಡೆಯುತ್ತೇವೆ ಎಂದು ಭ್ರಮಿಸಿದ್ದರೋ ಅದೇ ಇರಾನ್ ಈ ಯುದ್ಧದ ಮೂಲಕ ಮತ್ತಷ್ಟು ಬಲಿಷ್ಟವಾಗಿ ಹೊರಹೊಮ್ಮಿದೆ. ಯುದ್ಧ ಆರಂಭವಾದ ಮೊದಲ ದಿನದಿಂದಲೂ ಇರಾನ್ ಇಡೀ ಯುದ್ಧವನ್ನು ತನ್ನ ಹತೋಟಿಗೆ ತಂದುಕೊಂಡಿದೆ. ಸಾವು ನೋವುಗಳ ದೃಷ್ಟಿಯಿಂದ ನೋಡಿದಾಗ ಅಮೆರಿಕ ಮತ್ತು ಇಸ್ರೇಲ್ ದೇಶಗಳು ಇರಾನ್ ಹಾಗೂ ಲೆಬನಾನ್ ಗಳಲ್ಲಿ ಮಾಡಿರುವ ಹತ್ಯೆಗಳೇ ಹೆಚ್ಚಾಗಿರಬಹುದು. ಆದರೆ ಈ ಯುದ್ಧದಲ್ಲಿ ಯಾರು ಯಾರನ್ನು ಕೊಂದರು ಎನ್ನುವುದು ಯುದ್ಧದ ಮೇಲಿನ ಹತೋಟಿಯನ್ನು ಹೇಳುವುದಿಲ್ಲ. ಬದಲಿಗೆ ಇಡೀ ಯುದ್ಧದಲ್ಲಿ ಯಾರು ಭಾಗವಹಿಸಬೇಕು, ಎಷ್ಟು ಭಾಗವಹಿಸಬೇಕು, ಯಾರು ಭಾಗವಹಿಸಬಾರದು, ಯಾರಿಗೆ ಎಷ್ಟು ನಷ್ಟವಾಗಬೇಕು ಯಾರಿಗೆ ನಷ್ಟವಾಗಬಾರದು ಎಂಬೆಲ್ಲಾ ವಿಷಯಗಳನ್ನು ಸಂಪೂರ್ಣ ನಿಯಂತ್ರಣದಲ್ಲಿಟ್ಟಿರುವುದು ಇರಾನ್ ಸೈನ್ಯದ ಲೆಕ್ಕಾಚಾರದ ನಡೆಗಳು ಎಂಬುದನ್ನು ಗಮನಿಸಿದಾಗ ಯುದ್ಧದ ಡ್ರೈವರ್ ಸೀಟಿನಲ್ಲಿ ಕುಳಿತಿರುವುದು ಇರಾನ್ ಎಂಬುದು ಅರಿವಿಗೆ ಬರುತ್ತದೆ.
ಆರಂಭದಲ್ಲಿ ಇರಾನ್ ತನ್ನ ಅಸ್ತಿತ್ವಕ್ಕಾಗಿ ಈ ಯುದ್ಧವನ್ನು ನಡೆಸತೊಡಗಿತು; ತನ್ನ ದೇಶದ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿಯನ್ನು ಅಮೆರಿಕ –ಇಸ್ರೇಲ್ ಸೇರಿ ಹತ್ಯೆ ಮಾಡಿದ ನಂತರ ಇಡೀ ಇರಾನಿನಲ್ಲಿ ಮಾತ್ರವಲ್ಲದೆ ಇಡೀ ಜಗತ್ತಿನಲ್ಲಿ ಮುಸ್ಲಿಂ ಸಮುದಾಯಗಳಿಂದ (ಶಿಯಾ- ಸುನ್ನಿ ಬೇಧವಿಲ್ಲದೆ) ಧಾರ್ಮಿಕವಾಗಿ ಸಿಂಪತಿಯನ್ನು ಇರಾನ್ ಪರವಾಗಿ ಮಾಡಿಕೊಳ್ಳಲು ಇರಾನ್ ಗೆ ಅನುಕೂಲವೇ ಉಂಟಾಯಿತು. ಹೀಗಾಗುವುದನ್ನು ಅಮೆರಿಕ- ಇಸ್ರೇಲ್ ಎಣಿಸಿರಲಿಲ್ಲ. 13 ದಿನಗಳ ನಂತರದಲ್ಲಿ ಈಗ ಇರಾನ್ ತನ್ನ ಅಸ್ತಿತ್ವದ ಲೆಕ್ಕಾಚಾರವನ್ನು ದಾಟಿ ಅರಬ್ ದೇಶಗಳ ಮುಂದಿನ ಲೀಡರ್ ತಾನಾಗುವ ಮಟ್ಟಕ್ಕೆ ಈ ಯುದ್ಧವನ್ನು ಕೊಂಡೊಯ್ದಿದೆ ಎನ್ನಬಹುದು. ಮುಖ್ಯವಾಗಿ ಇಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿಯಾಗಿರುವ ಸೌದಿ ಅರೇಬಿಯಾ ಕೂಡಾ ಇರಾನ್ ತೋರುತ್ತಿರುವ ಅಬ್ಬರದ ಎದುರು ಹತಾಶವಾಗಿ ಕುಳಿತುಬಿಟ್ಟಿದೆ ಎಂಬುದನ್ನು ನೋಡಿದಾಗ ಈ ಯುದ್ಧದಲ್ಲಿ ಕಾಲು ಹಾಕಿ ಅಮೆರಿಕ ಕಳೆದುಕೊಂಡಿದ್ದೇನು ಎಂಬುದು ತಿಳಿಯುತ್ತದೆ. ಪ್ರಾಯಶಃ ಈ ಯುದ್ಧ ಮುಗಿಯುವ ವೇಳೆಗೆ ಇಷ್ಟು ದಿನ ಅಮೆರಿಕದೊಂದಿಗೆ ಕೈಜೋಡಿಸಿದ್ದ ಯಾವುದೇ ದೇಶ ಅದರೊಂದಿಗೆ ಉಳಿದುಕೊಳ್ಳುವುದು ಅನುಮಾನ. ಇದು ಮುಂದಿನ ದಿನಗಳಲ್ಲಿ ಅಮೆರಿಕದ ಪೆಟ್ರೋಡಾಲರ್ ಆರ್ಥಿಕತೆಗೆ ತೀವ್ರ ಪೆಟ್ಟು ಕೊಡುವುದು ನಿಶ್ಚಿತ.
ಇರಾನ್ ಪ್ರತಿ ಹಂತದಲ್ಲಿ ಸ್ಪಷ್ಟವಾಗಿ ಘೋಷಿಸುತ್ತಿದೆ. ‘ನಮ್ಮ ಮೇಲೆ ದಾಳಿ ನಡೆದಿದೆ. ಅದೂ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳಿಂದಲೇ ನಮ್ಮ ಮೇಲೆ ದಾಳಿ ಆಯೋಜನೆಗೊಂಡು ನಡೆದಿದೆ. ನಮ್ಮನ್ನು ಸಂಪೂರ್ಣವಾಗಿ ರಕ್ಷಿಸಿಕೊಳ್ಳುವ ಹಕ್ಕು ನಮಗಿದೆ. ಹೀಗಾಗಿ ಅಮೆರಿಕದ ಸೇನಾ ನೆಲೆಗಳನ್ನು ನಾಶ ಮಾಡಲು ನಾವು ಸ್ವತಂತ್ರರು’. ಅದೇ ರೀತಿಯಲ್ಲಿ ಅಮೆರಿಕ – ಇಸ್ರೇಲ್ ಇರಾನಿನ ತೈಲಘಟಕಗಳನ್ನು ಗುರಿಪಡಿಸಿ ದಾಳಿ ಮಾಡಿದ ಕೂಡಲೇ ಗಲ್ಫ್ ದೇಶಗಳಲ್ಲಿ ಅಮೆರಿಕದ ತೈಲ ಘಟಕಗಳನ್ನು ಹಾಗೂ ಇಸ್ರೇಲ್ ನ ತೈಲಘಟಕಗಳನ್ನು ಗುರಿಮಾಡಿಕೊಂಡು ಕ್ಷಿಪಣಿ ದಾಳಿ ನಡೆಸಿದ ಇರಾನ್ ನೂರಾರು ಕೋಟಿ ಡಾಲರ್‌ಗಳ ನಷ್ಟವನ್ನು ಉಂಟುಮಾಡಿತು. ಮತ್ತೆ ಇರಾನಿನ ಬ್ಯಾಂಕ್ ಮೇಲೆ ಅಮೆರಿಕ – ಇಸ್ರೇಲ್ ದಾಳಿ ನಡೆಸಿದ ಕೂಡಲೇ ನಾವು ಇಡೀ ಗಲ್ಫ್ ಪ್ರದೇಶದಲ್ಲಿ ಅಮೆರಿಕದ ಎಲ್ಲಾ ಬ್ಯಾಂಕುಗಳ ಮೇಲೆ ದಾಳಿ ನಡೆಸುತ್ತೇವೆ, ಎಲ್ಲಾ ಬ್ಯಾಂಕುಗಳ ಒಂದು ಕಿಲೋಮೀಟರ್ ಸಮೀಪದಲ್ಲಿ ಯಾರೂ ಇರಬೇಡಿ ಎಂದು ಎಚ್ಚರಿಕೆ ನೀಡಿತು. ಇರಾನಿನ ನೀರು ಸಂಸ್ಕರಣಾ ಘಟಕವನ್ನು ಅಮೆರಿಕ ಇಸ್ರೇಲ್ ದಾಳಿ ಮಾಡಿದ ಮೇಲೆ ಇರಾನ್ ಕಡೆಯಿಂದ ಅತ್ಯಂತ ಅಪಾಯಕಾರಿ ಸಂದೇಶ ಬಂತು. ಇರಾನಿನ ಜನರ ನೀರಿನ ಹಾಗೂ ಆರ್ಥಿಕ ಸಂಪನ್ಮೂಲಗಳ ಮೇಲೆ ಇಸ್ರೇಲ್ ಅಮೆರಿಕ ದಾಳಿ ನಡೆಸಿದ್ದೇ ಆದರೆ ನಾವು ಅನಿವಾರ್ಯವಾಗಿ ಗಲ್ಫ್ ದೇಶಗಳ ಹಾಗೂ ಇಸ್ರೇಲಿನ್ ಎಲ್ಲಾ ಉಪ್ಪುನೀರು ಸಂಸ್ಕರಣಾ ಘಟಕಗಳನ್ನು (ಡಿಸಲೈನೇಶನ್ ಪ್ಲಾಂಟ್ಸ್) ಧ್ವಂಸ ಮಾಡುತ್ತೇವೆ, ಹುಷಾರ್’ ಎಂದು ಎಚ್ಚರಿಕೆ ನೀಡಿತು. ಒಂದೊಮ್ಮೆ ಮುಂದಿನ ದಿನಗಳಲ್ಲಿ ಯುದ್ಧ ಈ ಹಂತಕ್ಕೆ ತಲುಪಿತೆಂದರೆ ಅದರ ಪರಿಣಾಮವನ್ನು ನಾವು ಊಹಿಸಬಹುದೆ? ಅರಬ್ ದೇಶಗಳಲ್ಲಿ ರಾತ್ರಿ ಬೆಳಗಾಗುವಷ್ಟರಲ್ಲಿ ಕೋಟ್ಯಂತರ ಜನರು ನೀರಿಲ್ಲದೆ ಸಾಯುವ ಪರಿಸ್ಥಿತಿ ಅದು. ಎಲ್ಲಾ ದೇಶಗಳ ಮೇಲೆ ಒಟ್ಟಿಗೇ ಅಣುಬಾಂಬ್ ಹಾಕಿದ ಪರಿಣಾಮವನ್ನು ಇದು ಬೀರುತ್ತದೆ. ಇಸ್ರೇಲನ್ನೇ ತೆಗೆದುಕೊಳ್ಳಿ. ಅಲ್ಲಿರುವುದು ನಾಲ್ಕೋ ಐದೋ ನೀರು ಸಂಸ್ಕರಣಾ ಘಟಕಗಳು. ಅವುಗಳನ್ನು ಒಂದೇ ದಿನದಲ್ಲಿ ಇರಾನ್ ಧ್ವಂಸ ಮಾಡಬಲ್ಲದು. ಇದರ ಪರಿಣಾಮವಾಗಿ ಇಸ್ರೇಲಿನ ಪ್ರತಿಯೊಬ್ಬ ವ್ಯಕ್ತಿ ನೀರಿಲ್ಲದೆ ಸಾಯುತ್ತಾರೆ. ಇಲ್ಲಿ ಇರಾನ್ ನೀಡುತ್ತಿರುವ ಸಂದೇಶ ಎಂದರೆ ನಮ್ಮನ್ನು ನೀವು ಮುಳುಗಿಸಲು ಬಂದರೆ, ನಾವು ಹೇಗೂ ಮುಳುಗುತ್ತೇವೆ, ಆದರೆ ನಮ್ಮೊಂದಿಗೆ ಇಡೀ ಜಗತ್ತನ್ನೇ ಮುಳುಗಿಸುತ್ತೇವೆ ಎಂಬುದು.
ಇಡೀ ಜಗತ್ತಿನ ತೈಲ ಪೂರೈಕೆಯ ಶೇಕಡಾ 20ರಷ್ಟು ತೈಲ ಸಾಗಿಸುವ ಹಡಗುಗಳು ಸಾಗುವ ಹೊರ್ಮುಜ್ ಜಲಸಂಧಿಯನ್ನು (ಭಾರತಕ್ಕೆ ಶೇಕಡಾ 80ರಷ್ಟು ತೈಲ ಇಲ್ಲಿಂದಲೇ ಬರಬೇಕು) ಇರಾನ್ ಸಂಪೂರ್ಣ ಹತೋಟಿಗೆ ತೆಗೆದುಕೊಂಡಿದೆ. ಇರಾನಿನ ಅನುಮತಿ ಇಲ್ಲದೇ ಒಂದೇ ಒಂದು ಹಡಗು ನುಸುಳದಂತೆ ಮಾಡಿಕೊಂಡಿದ್ದು ಇರಾನ್ ಅನುಸರಿಸುತ್ತಿರುವ ಮತ್ತೊಂದು ಒತ್ತಡ ತಂತ್ರ. ಇರಾನ್ ಎಚ್ಚರಿಕೆ ಮೀರಿ ಚಲಿಸಿದ ಹಲವು ಹಡಗಳುಗಳನ್ನು ಇರಾನ್ ಈಗಾಗಲೇ ಮುಳುಗಿಸಿದೆ. ಇದರಲ್ಲಿ ನಿನ್ನೆ ಭಾರತಕ್ಕೆ ಬರುತ್ತಿದ್ದ ಥೈಲ್ಯಾಂಡ್‌ನ ಮಯೂರಿ ನಾರಿ ಹೆಸರಿನ ಹಡಗು ಸಹ ಸೇರಿಕೊಂಡಿದೆ. ಅನಿವಾರ‍್ಯವಾದರೆ ಸಮುದ್ರದಲ್ಲಿಯೇ ನೆಲಬಾಂಬ್ (ಮೈನ್) ಸ್ಫೋಟಿಸಿ ಹಡಗುಗಳನ್ನು ನಾಶಮಾಡುವ ಕ್ರಮವೂ ನಮ್ಮ ಪಟ್ಟಿಯಲ್ಲಿದೆ ಎಂದು ಇರಾನ್ ಹೇಳಿಕೊಂಡಿದೆ. ಈ ರೀತಿಯ ಕಚ್ಚಾತೈಲ ನಿರ್ಬಂಧವಂತೂ ಇಡೀ ಪ್ರಪಂಚದ ಪ್ರತಿಯೊಂದು ದೇಶದ ಪ್ರತಿಯೊಬ್ಬ ನಾಗರಿಕನನ್ನು ವರ್ಷಗಟ್ಟಲೆ ಬಾಧಿಸಲಿದೆ. ಇದರ ಪರಿಣಾಮ ಈಗಾಗಲೇ ನಮ್ಮನ್ನು ತಟ್ಟತೊಡಗಿದೆ ತಾನೆ? ಕಚ್ಚಾತೈಲದ ನಿರ್ಬಂಧ ಜಗತ್ತಿಗೆ ಕೇವಲ ಪೆಟ್ರೋಲ್ ಗ್ಯಾಸ್ ಕೊರತೆ ಉಂಟು ಮಾಡುವುದಿಲ್ಲ. ಪ್ರತಿಯೊಂದು ದೇಶದ ಕೈಗಾರಿಕೆಗಳು, ವಿದ್ಯುತ್ ಬ್ಯಾಟರಿ ಕೈಗಾರಿಕೆಗಳು, ಸರಕು ಸಾಗಾಣಿಕೆಗಳು ಹೀಗೆ ಎಲ್ಲದರ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಗಲ್ಫ್ ದೇಶಗಳ ತೈಲ ಉದ್ಯಮವನ್ನು ಅವಲಂಬಿಸಿಯೇ ಅಮೆರಿಕದ ಸ್ಟಾಕ್ ಮಾರ್ಕೆಟ್ ನಿಂತಿರುವುದು. ಇದರಿಂದಾಗಿ ಅಮೆರಿಕ ಮಾತ್ರವಲ್ಲದೆ ಇಡೀ ಜಗತ್ತಿನ ಹಣಕಾಸು ಮಾರುಕಟ್ಟೆ ಕುಸಿದು ಬಿದ್ದರೆ ದೊಡ್ಡ ಮಟ್ಟದ ಜಾಗತಿಕ ಆರ್ಥಿಕ ಬಿಕ್ಕಟ್ಟು ಪ್ರಪಂಚನ್ನೇ ಬಾಧಿಸಲಿದೆ.
ಯುದ್ಧದಲ್ಲಿ ಇರಾನ್ ಹತೋಟಿ ಸಾಧಿಸಿದ್ದು ಹೇಗೆ?
ಬಹುಶಃ ಇಂತಹ ಇಂದು ಯುದ್ಧಕ್ಕೆ ಇರಾನ್ ಹಲವು ದಶಕಗಳ ಕಾಲ ತಯಾರಿ ನಡೆಸಿತ್ತು ಎನ್ನಬಹುದು. ಏಕೆಂದರೆ, 1990ರ ದಶಕದಲ್ಲಿರಬಹುದು, 2003ರಲ್ಲಿ ಅಮೆರಿಕ ಇರಾಕ್ ಮೇಲೆ ದಾಳಿ ನಡೆಸಿದ್ದ ಸಂದರ್ಭ ಇರಬಹುದು ಇರಾನ್‌ಗೆ ಹಲವು ಪಾಠಗಳನ್ನು ಕಲಿಸಿತ್ತೆನ್ನಬಹುದು. ಹಿಂದೆಲ್ಲಾ ಅಮೆರಿಕ ಏಕಪಕ್ಷೀಯವಾಗಿ ಯುದ್ಧವನ್ನು ಹೇರಿ ತಾನೇ ಆರಂಭಿಸಿ ತಾನೇ ಮುಗಿಸಿಬಿಡುತ್ತಿತ್ತು. ಮೊನ್ನೆ ಮೊನ್ನೆ ವೆನಿಜುಯೆಲಾದಲ್ಲಿ ಅಧ್ಯಕ್ಷ ಮದುರೊ ಮತ್ತು ಆತನ ಪತ್ನಿಯನ್ನು ಅಮೆರಿಕದ ಪಡೆಗಳು ಅನಾಮತ್ತಾಗಿ ಕಿಡ್ನಾಪ್ ಮಾಡಿಕೊಂಡು ಹೋದವು. ಲ್ಯಾಟಿನ್ ಅಮೆರಿಕದ ಹಲವಾರು ದೇಶಗಳಲ್ಲಿ, ಆಫ್ರಿಕಾದ ದೇಶಗಳಲ್ಲಿ ಹೀಗೆ ‘ರೆಜೀಮ್ ಚೇಂಜ್’ ಮಾಡಿ ತನ್ನ ಕೈಬೊಂಬೆಗಳನ್ನು ಕೂರಿಸಿದ ಎಷ್ಟೋ ಉದಾಹರಣೆಗಳ ಹಿನ್ನೆಲೆಯಲ್ಲಿ ಇರಾನಿನಲ್ಲೂ ಹೀಗೇ ಆಗುತ್ತದೆ ಎಂದು ಟ್ರಂಪ್ ಭಾವಿಸಿದ್ದಿರಬೇಕು. ಆದರೆ, ಆಗಲಿಲ್ಲ.
ಯಾಕೆ ಆಗಲಿಲ್ಲ ಎಂದರೆ, ಕೆಲವು ಪ್ರಮುಖ ಕಾರಣಗಳಿವೆ:
ಬಹಳ ಮುಖ್ಯವಾಗಿ ಇರಾನ್ ಸೈನಿಕವಾಗಿ ಸಾಧಿಸಿರುವ ನಿಪುಣತೆ ಮತ್ತು ಚಾಣಾಕ್ಷ ತಂತ್ರಗಾರಿಕೆ. ಅದರಲ್ಲೂ ತನ್ನ ಗುಡ್ಡಗಾಡು ದೇಶದ ಭೌಗೋಳಿಕತೆಗೆ ತಕ್ಕ ರೀತಿಯಲ್ಲಿ ಮಾಡಿಕೊಂಡಿರುವ ಸಿದ್ಧತೆ ಬಹುಮುಖ್ಯವಾದದ್ದು. ಅದು ನೆಲದ ಅಡಿಯಲ್ಲಿ ಸುಮಾರು 500-600 ಮೀಟರ್ ಆಳದಲ್ಲಿ ಸುರಂಗಗಳಲ್ಲಿ ಪೇರಿಸಿಟ್ಟಿರುವ ಸಾವಿರಾರು ಸಂಖ್ಯೆಯ ತರಹೇವಾರಿ ಖಂಡಾಂತರ (ಬ್ಯಾಲೆಸ್ಟಿಕ್) ಕ್ಷಿಪಣಿಗಳು ಮತ್ತು ಡ್ರೋಣ್ ಗಳು ಅದರ ಬತ್ತಳಿಕೆಯಲ್ಲಿನ ಅಸ್ತ್ರಗಳಾಗಿವೆ. ಸಹಸ್ರಾರು ಕ್ಷಿಪಣಿಗಳ ದಾಸ್ತಾನಿನ ಜೊತೆಗೆ ಪ್ರತಿದಿನ 400 ಹೊಸ ಕ್ಷಿಪಣಿಗಳನ್ನು ತಯಾರಿಸುವ ಏರ್ಪಾಡನ್ನು ಸಹ ಅದು ಮಾಡಿಕೊಂಡಿದೆ. ಇವುಗಳಲ್ಲಿ ತನ್ನ ಕೈಯಳತೆಯ ಗಲ್ಫ್ ದೇಶಗಳನ್ನು ಗುರಿಪಡಿಸಬಲ್ಲ ಹತ್ತಿರದ ರೇಂಜಿನ ಕ್ಷಿಪಣಿಗಳೂ, ಇಸ್ರೇಲನ್ನು ತಲುಪಬಲ್ಲ ದೂರದಳತೆಯ ಕ್ಷಿಪಣಿಗಳೂ ಇವೆ. ಹಲವಾರು ಬಗೆಯ ಕ್ಷಿಪಣಿಗಳು ಎಂತದೇ ಬಲಿಷ್ಟ ರಾಡಾರ್ ವ್ಯವಸ್ಥೆಯನ್ನೂ ಲೆಕ್ಕಿಸದೆ, ಯಾವುದೇ ಕ್ಷಿಪಣಿ ತಡೆಕಗಳನ್ನೂ (ಇನ್ಸೆಪ್ಟರ್ಸ್) ಯಾಮಾರಿಸಿ ಗುರಿ ತಲುಪಬಲ್ಲವು. ಇನ್ನು ಕ್ಷಿಪಣಿಗಳನ್ನು ಉಡಾಯಿಸಲು ಯಾವುದೇ ಒಂದು ನಿರ್ದಿಷ್ಟ ಸ್ಥಳವನ್ನು ಅಥವಾ ಕೆಲವೇ ಸ್ಥಳಗಳನ್ನು ಮಾಡಿಕೊಳ್ಳದೇ ಚಲಿಸುತ್ತಲೇ ಕ್ಷಿಪಣಿ ಉಡಾಯಿಸುವ ಮೊಬೈಲ್ ಲಾಂಚ್ ಪ್ಯಾಡ್ ಗಳು ಎದುರಾಳಿಗಳ ದಾಳಿಗೆ ಸಿಲುಕದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಎರಡನೆಯದಾಗಿ ವರ್ಷದ ಹಿಂದೆ ನಡೆದ ಹನ್ನೆರಡು ದಿನಗಳ ಇಸ್ರೇಲ್- ಇರಾನ್ ಯುದ್ಧದಲ್ಲಿ ಇರಾನ್ ಪ್ರಯೋಗಿಸಿದ್ದ ಕ್ಷಿಪಣಿಗಳು ಕರಾರುವಕ್ಕಾದ ಜಾಗದಲ್ಲಿ ಗುರಿಮುಟ್ಟುತ್ತಿರಲಿಲ್ಲ. ಈ ವಿಷಯದಲ್ಲಿ ಪಾಠ ಕಲಿತ ಇರಾನಿ ಸೇನೆ ಮಾಡಿಕೊಂಡ ದೊಡ್ಡ ಬದಲಾವಣೆಯೇನೆಂದರೆ ಅಮೆರಿಕ ನಿರ್ಮಿತ ಜಿಪಿಎಸ್ ವ್ಯವಸ್ಥೆಯಿಂದ ಸಂಪೂರ್ಣ ಹೊರಕ್ಕೆ ಬಂದು ಚೀನಾ ನಿರ್ಮಿತ ‘ಬೈದು ನ್ಯಾವಿಗೇಶನ್ ಸೆಟಲೈಟ್ ಸಿಸ್ಟಂ (ಬಿಡಿಎಸ್)’ ಅಳವಡಿಸಿಕೊಂಡಿದ್ದು. 2025ರ ಜೂನ್ ತಿಂಗಳಿನ ಹೊತ್ತಿಗೆ ಅದು ಈ ಮಾರ್ಪಾಡನ್ನು ಮಾಡಿಕೊಂಡಿತ್ತು. ಇದು ಜಿಪಿಎಸ್ ಗಿಂತ ಹೆಚ್ಚು ಅಕ್ಯುರೆಸಿ ನೀಡುತ್ತದೆ. ಈ ಕಾರಣದಿಂದಲೇ ಕಳೆದ 13 ದಿನಗಳಲ್ಲಿ ಇರಾನ್ ಸೈನ್ಯ ಇಸ್ರೇಲ್ ಮತ್ತು ಗಲ್ಫ್ ದೇಶಗಳಲ್ಲಿ ಎಲ್ಲೂ ಗುರಿತಪ್ಪದ ರೀತಿಯಲ್ಲಿ ಕರಾರುವಾಕ್ ಕ್ಷಿಪಣಿ ಮತ್ತು ಡ್ರೋಣ್ ದಾಳಿಗಳನ್ನು ನಡೆಸಲು ಇರಾನಿಗೆ ಸಾಧ್ಯವಾಗಿರುವುದು.
ಮೂರನೆಯದಾಗಿ, 21ನೆಯ ಶತಮಾನಕ್ಕೆ ಬೇಕಾದ ಸರ್ವತೋಮುಖ ಯುದ್ಧಕ್ಕೆ ಇರಾನ್ ಸಾಕಷ್ಟು ಅಣಿಯಾಗಿರುವುದು. ಅದು ಈ 13 ದೇಶಗಳಲ್ಲಿ ನಡೆಸಿರುವ ‘ಮಾಹಿತಿ ಮತ್ತು ಅಪಮಾಹಿತಿ ಯುದ್ಧ’ವಾಗಲೀ, ಮಾರ್ಚ್ 11ರಂದು ಅಮೆರಿಕ ಮೂಲಕ ಸ್ಟ್ರೈಕರ್ ಕಂಪನಿಯ ಎಲ್ಲಾ ಡಿಜಿಟಲ್ ದಾಖಲೆಗಳನ್ನು 79 ದೇಶಗಳಲ್ಲಿ ರಾತ್ರೋರಾತ್ರಿ ನಾಶ ಮಾಡಿ, 50 ಟಿಬಿಯಷ್ಟು ಡೇಟಾವನ್ನು ಡಾರ್ಕ್ ವೆಬ್ ಮೂಲಕ ಜಗಜ್ಜಾಹೀರು ಮಾಡಿದ್ದು ಹಾಗೂ ಇಸ್ರೇಲ್‌ನ ಸೀಕ್ರೆಟ್ ಏಜೆಂಟ್ ಗಳ ನೆಟ್ವರ್ಕ್ ಒಂದನ್ನು ಬಹಿರಂಗಪಡಿಸಿದ ಇರಾನಿನ ‘ಹಂಡಾಲಾ’ಹ್ಯಾಕರ್ ಗುಂಪಿನ ಚಟುವಟಿಕೆಗಳಾಗಲೀ ಇರಾನ್ ಬೇರೆಯದೇ ಲೆವೆಲ್‌ನಲ್ಲಿ ತಯಾರಿಯಾಗಿರುವುದನ್ನು ತೋರಿಸುತ್ತದೆ. ಯಾವುದೇ ಸಂದೇಹವಿಲ್ಲದೇ ಇದಕ್ಕೆ ಅದು ಎಲ್ಲಾ ಬಗೆಯೆ ನೆರವು ತರಬೇತಿ ಪಡೆಯುತ್ತಿರುವುದು ಚೀನಾದಿಂದ. ಇದರ ಸಾರಾಂಶವೇನೆಂದರೆ ಇಸ್ರೇಲ್ ಮತ್ತು ಅಮೆರಿಕ ಯಾವೆಲ್ಲಾ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದರೋ ಅವೆಲ್ಲವನ್ನೂ ಇರಾನ್ ತಾನೂ ಕರಗತಮಾಡಿಕೊಂಡು ಒಂದು ಹೆಜ್ಜೆ ಮುಂದೆ ನಿಂತು ಈ ಯುದ್ಧ ನಡೆಸುತ್ತಿದ್ದೇನೆ ಎಂದು ಜಗತ್ತಿಗೆ ತೋರಿಸುತ್ತಿದೆ.
ನಾಲ್ಕನೆಯದಾಗಿ, ಇರಾನ್ ತನ್ನ ದೇಶದಲ್ಲಿ ಎದುರಾಗಿದ್ದ ಆಂತರಿಕ ಭಿನ್ನಮತವನ್ನು ಹತ್ತಿಕ್ಕಿ ಈಗ ಪರಕೀಯ ಆಕ್ರಮಣದ ಲಾಭ ಪಡೆದುಕೊಂಡು ಧರ್ಮಾಧಾರಿತ ಇರಾನಿ ರಾಷ್ಟ್ರೀಯತೆಯನ್ನು ತೀವ್ರವಾಗಿ ಮುನ್ನೆಲೆಗೆ ತರುತ್ತಿರುವುದು. 2022ರಿಂದಲೂ ಇರಾನಿನಲ್ಲಿ ಕೋಮುವಾದಿ ಮತಾಂಧ ಪಡೆಗಳ ದಬ್ಬಾಳಿಕೆಯ ವಿರುದ್ಧ ಬೃಹತ್ ಮಟ್ಟದ ಚಳವಳಿ ನಡೆಯುತ್ತಿದ್ದು ಅದನ್ನು ಖಮೇನಿ ನೇತೃತ್ವದ ಇರಾನಿನ ಪುರೋಹಿತಶಾಹಿ ಸರ್ಕಾರ ಕ್ರೂರವಾಗಿ ಹತ್ತಿಕ್ಕಿತ್ತು. 2022ರಲ್ಲಿ ಮಾಶಾ ಅಮೀನಿ ಎಂಬ ಹುಡುಗಿಯ ಮೇಲೆ ಮಾರಲ್ ಪೊಲೀಸಿಂಗ್ ಪಡೆಗಳು ದಾಳಿ ನಡೆಸಿದ ಮೂರು ದಿನಗಳಲ್ಲಿ ಆಕೆ ತೀರಿಕೊಂಡಿದ್ದ ನಂತರ ದೇಶದಾದ್ಯಂತ ಪ್ರತಿರೋಧ ಬಂದಿತ್ತು. ತಿಂಗಳುಗಟ್ಟಲೆ ಸಾರ್ವತ್ರಿಕ ಮುಷ್ಕರ ನಡೆದಿದ್ದವು. ಸರ್ಕಾರ ನೂರಾರು ಜನರನ್ನು ಕೊಂದು ಸಾವಿರಾರು ಜನರನ್ನು ಸೆರೆಮನೆಗೆ ನೂಕಿತ್ತು. ಇತ್ತೀಚೆಗೆ 2025ರ ಕೊನೆಯಲ್ಲಿ ಸಹ ವಿಪರೀತ ಬೆಲೆ ಏರಿಕೆ ಮತ್ತು ಸರ್ಕಾರ ಹಾಗೂ ಸೇನಾ ದಬ್ಬಾಳಿಕೆ ವಿರುದ್ಧ ಪ್ರತಿರೋಧ ನಡೆದಾಗ ಸಾವಿರಾರು ಇರಾನಿ ಪ್ರಜೆಗಳನ್ನು ಹತ್ಯೆ ಮಾಡಲಾಗಿತ್ತು. ಆದರೆ, ಈ ಪ್ರತಿರೋಧದ ಲಾಭವನ್ನು ಇಸ್ರೇಲ್ – ಅಮೆರಿಕ ಪಡೆಯಲು ಯತ್ನಿಸಿದ್ದು ಇರಾನ್ ಸರ್ಕಾರಕ್ಕೆ ಪ್ರತಿರೋಧವನ್ನು ಹತ್ತಿಕ್ಕಲು ಅನುಕೂಲವೇ ಆಯಿತು. ಇರಾನಿನ ಗುಪ್ತಚರ ಸಂಸ್ಥೆ ಮೊಸಾದ್ ತನ್ನ ಏಜೆಂಟ್ ಗಳನ್ನು ಇರಾನಿ ಜನರ ಪ್ರತಿರೋಧದಲ್ಲಿ ಬಿಟ್ಟಿದ್ದು ಮತ್ತು ಅಮೆರಿಕ ನೇರವಾಗಿ ಬೆಂಬಲಿಸಿದ್ದು ಇಡೀ ಪ್ರತಿರೋಧವನ್ನು ‘ದೇಶದ್ರೋಹ’ ಎಂಬ ರೀತಿಯಲ್ಲಿ ಅತ್ಯಂತ ಕಠಿಣ ರೀತಿಯಲ್ಲಿ ಹತ್ತಿಕ್ಕಲು ಇರಾನ್ ಆಡಳಿತಕ್ಕೆ ಸುಲಭವಾಯಿತು.
ಯಾವುದೇ ದೇಶದಲ್ಲಿ ಅಡಳಿತ ಬದಲಾವಣೆಯಾದರೆ ಅದು ಆಂತರಿಕ ಪ್ರಜಾಪ್ರಭುತ್ವ ಇಲ್ಲವೇ ಆಂತರಿಕ ದಂಗೆಗಳ ಮೂಲಕ, ಜನಾಂದೋಲನಗಳ ಮೂಲಕ ನಡೆಯಬೇಕು. 2011ರಲ್ಲಿ ಅರಬ್ ದಂಗೆ ಇದೇ ರೀತಿಯಲ್ಲಿ ನಡೆದು ಅಲ್ಲಿನ ಆಡಳಿತಗಳು ಬದಲಾಗಿರಲಿಲ್ಲವೆ? ಈಜಿಪ್ಟ್, ಟ್ಯುನಿಷಿಯಾಗಳಲ್ಲಿ ನಡೆದ ಜನಾಂದೋಲನಗಳನ್ನು ನೆನಪಿಸಿಕೊಳ್ಳಿ. ಇತ್ತೀಚೆಗೆ ನೇಪಾಳದಲ್ಲಿ ಜೆನ್‌ಜಿ ನಡೆಸಿದ ಬಂಡಾಯ ಸರ್ಕಾರದ ಬದಲಾವಣೆಯಲ್ಲಿ ಪರಿಣಮಿಸಿರುವುದನ್ನು ನೋಡಿ. ಅಂತಹುದೇ ಸಂದರ್ಭ ಇರಾನ್ ನಲ್ಲೂ ಇತ್ತು. ಆದರೆ, ಇಲ್ಲಿ ನೇರವಾಗಿ ಸಾಮ್ರಾಜ್ಯಶಾಹಿಗಳು ತಮ್ಮ ಮೂಗು ತೂರಿಸಿದ್ದು ಮತ್ತು ಅಮೆರಿಕದ ಕೈಬೊಂಬೆಗಳಾಗಿ ಕೆಲಸ ಮಾಡಿದ್ದ ಪಹಲವಿ ಅರಸುಮನೆತನದವರನ್ನೇ ಮತ್ತೆ ನೇಮಿಸುವ ನಡೆಗಳೂ ಸಹ ಇರಾನಿ ಜನಾಂದೋಲನವನ್ನು ಹಿಂದಕ್ಕೆ ತಳ್ಳಿದವು. ಇದು ಇರಾನಿನ ಮಟ್ಟಿಗೆ ಪ್ರಜಾಪ್ರಭುತ್ವದ ಆಶಯಗಳಿಗೆ ಆದ ಹಿನ್ನಡೆಯೇ ಆಯಿತು. ಹಾಗೆಂದು ಅಮೆರಿಕ- ಇಸ್ರೇಲ್ ಇರಾನ್ ಮೇಲೆ ನಡೆಸಿದ ದಾಳಿಯನ್ನು ಬೆಂಬಲಿಸಲು ಆಗದು.
ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಕಳೆದ ನಾಲ್ಕು ದಶಕಗಳಿಂದ ಇರಾನ್ ದೇಶವನ್ನು ಸಂಪೂರ್ಣ ಹೊಸಕಿ ಹಾಕಬೇಕು ಎಂಬ ಅಮೆರಿಕ ಮತ್ತು ಇಸ್ರೇಲ್ ದೇಶಗಳ ಪ್ರಯತ್ನಗಳಿಗೆ ಕುಮ್ಮಕ್ಕು ಕೊಡದೇ ಪ್ರಬಲ ಪ್ರತಿರೋಧವನ್ನು ಇರಾನಿನ ಧಾರ್ಮಿಕ ಸರ್ಕಾರ ಒಡ್ಡಿಕೊಂಡು ಬಂದಿರುವುದು. ಇಂದು ಇರಾನಿನ ಪ್ರಜೆಗಳು ಈ ಎರಡರ ನಡುವೆ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಒಂದು ಕಡೆ ದೇಶದ ಒಳಗೆ ದಬ್ಬಾಳಿಕೆ ನಡೆಸುವ ಧಾರ್ಮಿಕ ಪ್ರಭುತ್ವ ಮತ್ತೊಂದು ಕಡೆ ಪರಕೀಯ ಆಕ್ರಮಣದ ವಿರುದ್ಧ ತೊಡೆ ತಟ್ಟಿರುವ ಅದೇ ಧಾರ್ಮಿಕ ಪ್ರಭುತ್ವ. ಹಿಂದೊಮ್ಮೆ ಪರಕೀಯರ ಕೈಬೊಂಬೆಯಾಗಿದ್ದ ‘ಶಾ’ ಆಡಳಿತವನ್ನು 1979ರಲ್ಲಿ ಜನಾಂದೋಲನದ ಮೂಲಕ ಕಿತ್ತೊಗೆದಿದ್ದು ಸಹ ಇದೇ ಇರಾನಿನ ಜನರ ರಾಷ್ಟ್ರಪ್ರೇಮವಾಗಿತ್ತು. 1953ರಲ್ಲಿ ಯಾವಾಗ ಅತ್ಯುಗ್ರ ರಾಷ್ಟ್ರಪ್ರೇಮಿ ಹಾಗೂ ಜನನಾಯಕನಾಗಿದ್ದ ಮಹಮದ್ ಮೊಸಾದೆಗ್ ಅವರನ್ನು ಇದೇ ಅಮೆರಿಕದ ಸಿಐಎ ಮತ್ತು ಬ್ರಿಟನ್ ನ ಎಂ16ಗಳು ಚಿತಾವಣೆ ನಡೆಸಿ, ಒಂದು ಸೇನಾ ಕ್ಷಿಪ್ರಕ್ರಾಂತಿ ನಡೆಸಿ ಅಧಿಕಾರದಿಂದ ಕೆಳಕ್ಕಿಳಿಸಿ ಬಂಧಿಸಿದ್ದರೋ ಅಂದೇ ಇರಾನಿನಲ್ಲಿ ಅಮೆರಿಕ ಸಾಮ್ರಾಜ್ಯಶಾಹಿ ವಿರೋಧಿ ಭಾವನೆಗಳು ಮಡುಗಟ್ಟಲು ತೊಡಗಿದ್ದವು. ಈ ಕಾರಣದಿಂದಲೇ ಅಮೆರಿಕದ ವಿರುದ್ಧ ದಿಟ್ಟತನ ತೋರಿಸುವ ಯಾವುದೇ ಸರ್ಕಾರವನ್ನು ಸಹಿಸಿಕೊಳ್ಳಲು ಇರಾನಿ ಜನರಿಗೆ ಸಾಧ್ಯವಾಗಿರುವುದು.
ಇದರೊಂದಿಗೆ ಮತ್ತೊಂದು ಕಡೆ ಅರಬ್ ದೇಶಗಳ ಮೇಲೆ ಗೂಂಡಾಗಿರಿ ಮಾಡುವ ಇಸ್ರೇಲ್‌ಗೆ ಸಮಬಲದಲ್ಲಿ ಸೆಡ್ಡು ಹೊಡೆದು ನಿಲ್ಲುವ ಯಾವುದೇ ದೇಶ ಇಲ್ಲಿಲ್ಲ. ಬಹುತೇಕ ಜಿಸಿಸಿ (ಗಲ್ಫ್ ಸಹಕಾರಿ ಮಂಡಳಿ) ದೇಶಗಳ ಸರ‍್ಕಾರಗಳು ಅಮೆರಿಕದ ಜೊತೆ ತಗ್ಗಿಬಗ್ಗಿ ಹೋಗುವುದರಿಂದ ಇಸ್ರೇಲ್ ನ್ನು ಎದುರಿಸುವ ತಾಕತ್ತು ಧಮ್ಮು ಅವಕ್ಕಿಲ್ಲ. ಇಂತಹ ಪರಿಸ್ಥಿತಿಯ ಲಾಭ ಆಗಿರುವುದು ಇರಾನ್‌ಗೆ. ಇಂದು ಪ್ಯಾಲೆಸ್ತೇನ್ ಎನ್ನುವುದು ಕೇವಲ ಅರಬ್ ಮಾತ್ರವಲ್ಲದೆ ಇಡೀ ಜಗತ್ತಿನ ಮುಸ್ಲಿಮರ ಐಡೆಂಟಿಟಿಯಾಗಿಬಿಟ್ಟಿದೆ. ಜೆರುಸಲೆಂನಲ್ಲಿರುವ ಅಲ್ ಅಕ್ಸಾ ಮಸೀದಿ ಮುಸಲ್ಮಾನರ ಪಾಲಿಗೆ ಮೆಕ್ಕಾ ಮದೀನಾ ನಂತರ ಮೂರನೆಯ ಪವಿತ್ರ ಸ್ಥಳ. ಇಸ್ರೇಲ್ ನ ಜಿಯೋನಿಷ್ಟರ ನಂಬಿಕೆಯ ಪ್ರಕಾರ ಈ ಅಲ್ ಅಕ್ಸಾ ಮಸೀದಿಯನ್ನು ಧ್ವಂಸ ಮಾಡಿ ಅದರ ಜಾಗದಲ್ಲಿ ತಮ್ಮ ನಂಬಿಕೆಯಲ್ಲಿ ಪವಿತ್ರವಾದ ಮೂರನೇ ಮಂದಿರವನ್ನು ಕಟ್ಟಬೇಕು ಎಂಬ ಕನಸು ಜಿಯೋನಿಷ್ಟರ ಆದ್ಯತೆ ಪಡೆದಿದೆ. ಈ ಕಾರಣದಿಂದ ಮಸೀದಿಯನ್ನು ಸ್ಪೋಟಿಸುವ ಪ್ರಯತ್ನಗಳೂ ನಡೆದಿವೆ. ಇದೇ ಕಾರಣಕ್ಕೆ ಗಾಜಾವನ್ನು ಸಂಪೂರ್ಣ ಕಬ್ಜಾ ಮಾಡಿಕೊಳ್ಳಲು ಇಸ್ರೇಲ್ ಅಲ್ಲಿ ಜನಾಂಗೀಯ ನರಮೇಧವನ್ನೇ ಕಳೆದ ಒಂದು ವರ್ಷಕ್ಕಿಂತ ಹೆಚ್ಚು ಕಾಲದಿಂದ ಕೈಗೊಂಡು ಸುಮಾರು 1,00,000 ಪ್ಯಾಲೆಸ್ತೀನಿಯರನ್ನು ಮಕ್ಕಳು ಮಹಿಳೆಯರು ಎನ್ನದೇ ನಿರ್ದಯವಾಗಿ ಹತ್ಯೆ ಮಾಡಿದೆ. ಈಗ ಅದು ಗಾಜಾ ಮೇಲೆ ಮಾತ್ರವಲ್ಲದೆ ಲೆಬನಾನ್ ಒಳಗೊಂಡು ಇಡೀ ಅರಬ್ ಸಾಮ್ರಾಜ್ಯದಲ್ಲಿ ತನ್ನ ಹತೋಟಿ ಹೊಂದುವ ನಿಟ್ಟಿನಲ್ಲಿ ‘ಗ್ರೇಟರ್ ಇಸ್ರೇಲ್’ ಅಜೆಂಡಾ ಇಟ್ಟುಕೊಂಡು ಹೊರಟಿದೆ. ಈ ಯುದ್ಧದಲ್ಲಿ ಹುಂಬ ಇಸ್ರೇಲ್ ಮಸೀದಿಯನ್ನು ನಾಶ ಮಾಡಿದರೆ ಅದು ದೊಡ್ಡ ಮಟ್ಟದ ಧಾರ್ಮಿಕ ಕಲಹವನ್ನೇ ಹುಟ್ಟುಹಾಕಲಿದೆ.
ಕಳೆದ 13 ದಿನಗಳ ಯುದ್ಧದಲ್ಲಿ ಇಸ್ರೇಲಿನ ಈ ಅಜೆಂಡಾವನ್ನು ತನ್ನ ಕ್ಷಿಪಣಿ ಮತ್ತು ಡ್ರೋಣ್ ದಾಳಿಗಳ ಮೂಲಕ ಇರಾನ್ ನುಚ್ಚುನೂರು ಮಾಡಿದೆ ಎನ್ನಬಹುದು. ಇಸ್ರೇಲ್ ಲೆಬನಾನಿನಲ್ಲಿ ನಿರಂತರವಾಗಿ ದಾಳಿ ನಡೆಸಿ ಅಲ್ಲಿ ಲಕ್ಷಾಂತರ ಜನರು ನಿರಾಶ್ರಿತರಾಗುವಂತೆ ಮಾಡಿದ್ದರೂ ತನ್ನ ಸ್ವಂತ ರಾಜಧಾನಿ ಟೆಲ್ ಅವೀವ್ ನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಾಗದಿರುವುದು ಅದರ ದೊಡ್ಡ ಹಿನ್ನಡೆ. ಇದೀಗ ಇರಾನ್ ಬೆಂಬಲಿತ ಹಿಜ್ಬುಲ್ಲಾ ಪಡೆಗಳು ಸಹ ದೊಡ್ಡ ಮಟ್ಟದಲ್ಲಿ ಉತ್ತರ ಇಸ್ರೇಲ್ ನಲ್ಲಿ ದಾಳಿ ನಡೆಸುತ್ತಿವೆ. ಈ ಎಲ್ಲಾ ಕಾರಣಗಳಿಂದ ಈ ಯುದ್ಧ ಇರಾನ್ ನಡೆಸುವ ದಾಳಿಗಳಿಗೆ ಲೆಜಿಟಿಮಸಿಯನ್ನು ನೀಡಿದೆ. ನ್ಯಾಟೋ ಸದಸ್ಯ ದೇಶ ಸ್ಪೇನ್‌ನ ಪ್ರಧಾನಿ ಇಸ್ರೇಲ್ ಮತ್ತು ಇರಾನ್ ದಾಳಿಯನ್ನು ತೀಕ್ಷ್ಣವಾಗಿ ಖಂಡಿಸಿ ತನ್ನ ದೇಶದಿಂದ ಇಸ್ರೇಲ್ ರಾಯಭಾರಿಗಳನ್ನು ಹೊರಕ್ಕೆ ಕಳಿಸಿದ್ದು, ಫ್ರಾನ್ಸ್ ಕೂಡಾ ಅಮೆರಿಕದ ದಾಳಿಯನ್ನು ಖಂಡಿಸಿದ್ದು, ಟರ್ಕಿ ಇರಾನನ್ನು ಬೆಂಬಲಿಸಿದ್ದು, ಇವೆಲ್ಲಾ ಏನು ತೋರಿಸುತ್ತಿವೆ ಎಂದರೆ ಈ ಯುದ್ಧದಲ್ಲಿ ತಮಗೆ ಪೂರಕವಾದ ನರೇಟಿವ್‌ನ್ನು ಕಟ್ಟಿಕೊಳ್ಳಲು ಅಮೆರಿಕ ಮತ್ತು ಇಸ್ರೇಲ್ ಸಂಪೂರ್ಣ ವಿಫಲವಾಗಿರುವುದನ್ನು ತೋರಿಸುತ್ತವೆ.
ಪ್ರಧಾನಿ ಮೋದಿಯ ಮೂರ್ಖತನದಿಂದ ಭಾರತಕ್ಕೆ ಇಕ್ಕಟ್ಟು
ಭಾರತದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಈ ಇಡೀ ಎಪಿಸೋಡ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಇಟ್ಟ ಹೆಜ್ಜೆ ಅತ್ಯಂತ ಮುಠ್ಠಾಳತನದ್ದು. ಈ ಯುದ್ಧದ ಹಿಂದುಮುಂದಿನ ದಿನಗಳಲ್ಲಿ ಮೋದಿ ತೆಪ್ಪಗಿದ್ದರೂ ಮರ‍್ಯಾದೆ ಉಳಿಯುತ್ತಿತ್ತು. ಆದರೆ ಈ 13 ದಿನಗಳಲ್ಲಿ ಭಾರತ ತಾನು ಕಳೆದ 75 ವರ್ಷಗಳಲ್ಲಿ ಗಳಿಸಿಕೊಂಡಿದ್ದ ಘನತೆ ಗೌರವ ಹರಾಜಾಗಿದೆ. ಇದಕ್ಕೆ ಕಾರಣ ಮೋದಿ ಸರ್ಕಾರ ನಾಚಿಕೆಯಿಲ್ಲದೆ ಹೋಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹುಗೆ ಬೆಂಬಲ ನೀಡಿದ್ದು. ಯುದ್ಧ ಶುರುವಾಗುವ 48 ಗಂಟೆಗೆ ಮುಂಚೆ ಮೋದಿ ತರಾತುರಿಯಲ್ಲಿ ಇಸ್ರೇಲ್ ಗೆ ಹೋಗಿ ಒಂದು ಬರ‍್ನಾಸ್ ಪದಕವನ್ನು ಇಸ್ರೇಲಿನ ಪ್ರಧಾನಿಯಿಂದ ಹಾಕಿಸಿಕೊಂಡು ಬಂದಿದ್ದು ಮೊದಲ ಅವಮಾನ. ಹೇಗೆ ಇಸ್ರೇಲ್ ಮತ್ತು ಅಮೆರಿಕದ ಶ್ರೀಮಂತರು ಮತ್ತು ದೊರೆಗಳು ಚಿಕ್ಕ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಹಲವರನ್ನು ಲೈಂಗಿಕ ವಿಡಿಯೋಗಳಲ್ಲಿ ಸಿಲುಕಿಸಿ ಬ್ಲಾಕ್ ಮೇಲೆ ಮಾಡಿ ತಮ್ಮ ಪರವಾದ ನೀತಿಗಳನ್ನು ಜಾರಿಗೊಳ್ಳುವಂತೆ ಮಾಡುತ್ತಿದ್ದರು ಎಂಬುದನ್ನು ತಿಳಿಸುವ ಆಘಾತಕಾರಿ ಎಪ್‌ಸ್ಟೀನ್ ಫೈಲ್ಸ್ ಹೊರಬಂದು ಇಡೀ ಪ್ರಪಂಚ ಇಸ್ರೇಲಿನ ಎಲೀಟ್ ಜಿಯೋನಿಷ್ಟ್‌ಗಳನ್ನು ಮತ್ತು ಡೊನಾಲ್ಡ್ ಟ್ರಂಪ್, ಕ್ಲಿಂಟನ್, ಇತ್ಯಾದಿಗಳನ್ನು ಚೀ ಥೂ ಎಂದು ಉಗಿಯುತ್ತಿದ್ದಾಗ ಇಸ್ರೇಲಿಗೆ ಹೋಗಿ ನರೇಂದ್ರ ಮೋದಿ ಭಾರತದ ಗೌರವವನ್ನು ಬಿಕರಿಗಿಡುವುದು ಬೇಕಿರಲಿಲ್ಲ. ಯುದ್ಧ ಆರಂಭವಾದ ನಂತರವೂ ಅಮೆರಿಕ ಇಸ್ರೇಲ್ ದಾಳಿಯನ್ನು ಖಂಡಿಸದ ಪ್ರಧಾನಿ ಇರಾನ್ ಅಮೆರಿಕದ ಸೇನಾ ನೆಲೆಗಳ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿದರು. ಸ್ವತಃ ಒಂದು ಸಾರ್ವಭೌಮ ದೇಶವಾದ ಭಾರತವು ಮತ್ತೊಂದು ಸಾರ್ವಭೌಮ ದೇಶವಾದ ಇರಾನಿನ ಮೇಲಿನದಾಳಿಯನ್ನು ಖಂಡಿಸಬೇಕಿತ್ತು. ಇರಾನಿನ ಸುಪ್ರೀಂ ನಾಯಕ ಖಮೇನಿಯ ಹತ್ಯೆಯಾದಾಗಲೂ ಕನಿಷ್ಟ ಸಂತಾಪ ವ್ಯಕ್ತಪಡಿಸಲಿಲ್ಲ. ಹಾಗೆ ನೋಡಿದರೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ದಿಟ್ಟತನ ತೋರಿದರು ಎನ್ನಬೇಕು. ಅತ್ತ ಅಫಘಾನಿಸ್ತಾನದಲ್ಲಿ ಖಮೇನಿಗಿಂತಲೂ ಅತ್ಯಂತ ಮತಾಂಧರಾದ ತಾಲಿಬಾನಿಗಳಿಗೆ ಸಂಪೂರ್ಣ ಸಹಾಯ ಹಸ್ತ ನೀಡಿ, ಸರ್ಕಾರದ ಬಜೆಟ್ ನಲ್ಲೂ ಹಣ ಸಹಾಯ ಮಾಡಿ, ತಾಲಿಬಾನಿಗಳು ತಮ್ಮ ದೇಶದಲ್ಲಿ ಮಹಿಳೆಯರ ಮೇಲೆ ಅತ್ಯಂತ ಕ್ರೂರವಾಗಿ ನಡೆಸುವ ದಬ್ಬಾಳಿಕೆಗೆ ಪರೋಕ್ಷ ಸಹಕಾರ ನೀಡಿರುವ ಇದೇ ಮೋದಿ ಸರ್ಕಾರ ಖಮೇನಿ ಹತ್ಯೆಯಾದಾಗ ಅದರ ವಿರುದ್ಧ ಸೊಲ್ಲೆತ್ತದೇ ಹತ್ಯೆಗೆ ಪರೋಕ್ಷ ಬೆಂಬಲ ನೀಡಿದ್ದು ಯಾರ ಕಟ್ಟಪ್ಪಣೆ ಮೇರೆಗೆ ಎಂಬುದನ್ನು ವಿವರಿಸಿ ಹೇಳಬೇಕಿಲ್ಲ. ಯುದ್ಧ ಶುರುವಾಗುವಷ್ಟರಲ್ಲಿ ನರೇಂದ್ರ ಮೋದಿ ಇಸ್ರೇಲ್ ಅಮೆರಿಕದ ತಾಳಕ್ಕೆ ಕುಣಿಯುವ ವಿದೂಷಕನಾಗಿಬಿಟ್ಟಿದ್ದು ದೇಶದ ಜನಕ್ಕೆ ತಿಳಿಯಲೇ ಇಲ್ಲ.
ಈಗ ನಡೆಯುತ್ತಿರುವ ಯುದ್ಧ ಕೇವಲ ಇರಾನ್-ಇಸ್ರೇಲ್- ಅಮೆರಿಕಗಳ ನಡುವಿನ ಯುದ್ಧವಲ್ಲ. ಇದರ ತೆರೆಯಲ್ಲಿ ರಷ್ಯಾ, ಚೀನಾಗಳೂ ಇವೆ ಎಂಬುದನ್ನು ಮರೆಯುವಂತಿಲ್ಲ. ಅವು ನೇರವಾಗಿ ಪಾಲ್ಗೊಳ್ಳುತ್ತಿಲ್ಲ ಅಷ್ಟೇ. ಈ ಸಂದರ್ಭದಲ್ಲಿ ಭಾರತ ತಾನು ಒಂದು ಪ್ರಬಲ ದೇಶವಾಗಿ ನಿರ್ವಹಿಸಲು ಅತ್ಯಂತ ಪ್ರಮುಖವಾದ ಪಾತ್ರವಿತ್ತು. ಇದಕ್ಕೆ ನಮ್ಮ ದೇಶದ ಮೊದಲ ಪ್ರಧಾನಿ ನೆಹರೂ ಮೊದಲ್ಗೊಂಡು ಮನಮೋಹನ್ ಸಿಂಗ್ ವರೆಗೂ ಒಂದು ಬುನಾದಿ ಹಾಕಿಕೊಟ್ಟಿದ್ದರು. ಪ್ರಬಲ ಅಗ್ರರಾಷ್ಟ್ರಗಳು ತಮ್ಮ ತಮ್ಮ ಹಿತಕ್ಕಾಗಿ ಕಚ್ಚಾಡುವಾಗ ಇಡೀ ಪ್ರಪಂಚದ ತಟಸ್ಥ ದೇಶಗಳನ್ನು ಒಗ್ಗೂಡಿಕೊಂಡು ‘ಅಲಿಪ್ತ’ ಬಣದ ಮೂಲಕ ಭಾರತದ ಗತ್ತು ಗೈರತ್ತನ್ನು ಉಳಿಸಿಕೊಳ್ಳುವುದೇ ಆ ಬುನಾದಿ. ಆದರೆ ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಇಸ್ರೇಲ್ ಜೊತೆ ಮಾಡಿಕೊಂಡು ಬಂದ ನೆಂಟಸ್ತನ ಮತ್ತು ಇತ್ತೀಚೆಗೆ ಅಮೆರಿಕದೊಂದಿಗೆ ಮಾಡಿಕೊಂಡ ಅಪಮಾನಕಾರಿ ಒಪ್ಪಂದಗಳು ಭಾರತದ ಕಿಮ್ಮತ್ತನ್ನು ದೊಡ್ಡ ಮಟ್ಟದಲ್ಲಿ ಕುಗ್ಗಿಸಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದುರ್ಬಲವಾಗಿ ಕಾಣುವಂತೆ ಮಾಡಿವೆ. ಇಲ್ಲವಾಗಿದ್ದರೆ ಮೊನ್ನೆ “ಭಾರತಕ್ಕೆ ರಷ್ಯಾದಿಂದ 30 ದಿನ ತೈಲ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇನೆ’ ಎಂದು ಅಮೆರಿಕದಿಂದ ಹೇಳಿಸಿಕೊಳ್ಳುವ ದೈನೇಸಿ ಸ್ಥಿತಿ ಬರುತ್ತಿತ್ತೆ? ಇದೀಗ ತೈಲ ಪೂರೈಕೆ ಸಮಸ್ಯೆ ತಲೆದೋರಿದ ಸಂದರ್ಭದಲ್ಲಿ ಅತ್ತ ಚೀನಾಕ್ಕೆ ಇರಾನ್ ಯಾವುದೇ ಅಡೆತಡೆಯಿಲ್ಲದೆ ತೈಲ ಹಡಗುಗಳಿಗೆ ಅವಕಾಶ ನೀಡಿ ಭಾರತಕ್ಕೆ ತಡೆ ನೀಡಿದ ಸಂದರ್ಭದಲ್ಲಿ ಮೋದಿ ಭಕ್ತರು ಕೇವಲ ಫೇಕ್ ನ್ಯೂಸ್ ಗಳಿಂದಲೇ ಸಮಾಧಾನ ಪಟ್ಟುಕೊಳ್ಳುವಂತ ಹೀನಾಯ ಸ್ಥಿತಿ ಬರುತ್ತಿತ್ತೆ? ಉಭಯ ಪಕ್ಷಗಳಿಗೆ ಬುದ್ಧಿ ಹೇಳಬಹುದಾಗಿದ್ದ ಸ್ಥಾನ ಹಾಗೂ ಮಾನವನ್ನು ಕಳೆದುಕೊಂಡ ಭಾರತ ಇಸ್ರೇಲ್ ಅಮೆರಿಕದ ದೃಷ್ಟಿಯಲ್ಲಿ ಚಾಕರನಂತೆಯೂ ಇರಾನ್ ದೃಷ್ಟಿಯಲ್ಲಿ ಕೇಡಿಯಂತೆಯೂ ಜಗತ್ತಿನ ಜನರ ದೃಷ್ಟಿಯಲ್ಲಿ ಹೇಡಿಯಂತೆಯೂ ಕಾಣುವಂತೆ ಮಾಡಿದ ಶ್ರೇಯಸ್ಸು ಮೋದಿ ಸರ್ಕಾರಕ್ಕೆ, ಅದರ ವಿದೇಶಾಂಗ ನೀತಿಗೆ ಸಲ್ಲುತ್ತದೆ
2003ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಭಾರತವು ಇರಾನ್ ಜೊತೆ ನಿಕಟ ಸಂಬಂಧ ಏರ್ಪಡಿಸಿಕೊಂಡಿತ್ತು. ಅಲ್ಲಿಂದಲೇ ಶುರುವಾಗಿದ್ದು ಚಾಬಾಹಾರ್ ಬಂದರು ಯೋಜನೆಯಲ್ಲಿ ಭಾರತ ಸೇರಿಕೊಳ್ಳುವ ಮುಂತೊಡಗು ಆರಂಭಗೊಂಡಿತ್ತು. ಇರಾನ್, ಅಫಘಾನಿಸ್ತಾನ ಮತ್ತು ಭಾರತ ಸೇರಿ ಇರಾನಿನ ಆಗ್ನೇಯ ಭಾಗದಲ್ಲಿರುವ ಚಾಬಾಹಾರ್ ಬಂದರಿನಲ್ಲಿ ಹೂಡಿಕೆ ಮಾಡುವುದು, ಹಾಗೂ ಇದರ ಮೂಲಕವೇ ಮಧ್ಯ ಏಷಿಯಾ ಹಾಗೂ ರಷ್ಯಾಗಳೊಂದಿಗೆ ವ್ಯಾಪಾರ ವಹಿವಾಟು ಮಾಡಿಕೊಳ್ಳುವ ಗ್ರಾಂಡ್ ಪ್ಲಾನ್ ಇದಾಗಿತ್ತು. ಆದರೆ ಇದೀಗ ಅಮೆರಿಕದ ಮರ್ಜಿಗೆ ಸಿಕ್ಕಿಕೊಂಡಿರುವ ಮೋದಿ ಸರ್ಕಾರ ಇಡೀ ಯೋಜನೆಯಿಂದ ಹೊರನಡೆಯುವ ಲಕ್ಷಣ ಕಾಣುತ್ತಿದೆ. ಈ ಯುದ್ಧದ ತರುವಾಯ ಚಾಬಹಾರ್ ನಲ್ಲಿ ಭಾರತ ಮುಂದುವರಿಯಬೇಕೋ ಅಥವಾ ಚೀನಾ ಬಂದು ಕೂರಬೇಕೋ ಎಂಬುದನ್ನು ಇನ್ನು ಮುಂದೆ ಇರಾನ್ ನಿರ್ಧರಿಸಲಿದೆ. ಖಂಡಿತವಾಗಿಯೂ ಇದರಿಂದ ಭಾರತಕ್ಕೆ ದೊಡ್ಡ ನಷ್ಟವುಂಟಾಗಲಿದೆ. ಒಬ್ಬ ಅಟಲ್ ಬಿಹಾರಿ ವಾಜಪೇಯಿಗೆ ಸಾಧ್ಯವಾಗಿದ್ದ ವ್ಯೂಹತಾಂತ್ರಿಕ ದೂರದೃಷ್ಟಿ ನರೇಂದ್ರ ಮೋದಿಗೆ ಸಾಧ್ಯವಾಗದೇ ಡೊನಾಲ್ಡ್ ಟ್ರಂಪ್ ಹೇಳಿದ್ದಕ್ಕೆ ತಲೆಯಾಡಿಸಿಕೊಂಡು ಕುಳಿತಿದ್ದಾರೆ. 56 ಇಂಚಿನ ಎದೆ ಎಂದರೆ ಇದೇ ಇರಬೇಕು.
ಈ ಯುದ್ಧ ಮುಂದೆ ಎಲ್ಲಿಗೆ ಹೋಗಿ ತಲುಪಲಿದೆ?
ಈ ಪ್ರಶ್ನೆಗೆ ಖಚಿತ ಉತ್ತರ ಕಷ್ಟ. ಇರಾನ್ ಅಂತೂ ಸೋಲೊಪ್ಪಿಕೊಂಡು ಯುದ್ಧದಿಂದ ಹಿಂದಡಿ ಇಡುವ ಯಾವುದೇ ಸೂಚನೆಯಿಲ್ಲ. ಬದಲಿಗೆ ಅದು ಎಂತಹ ಪರಿಸ್ಥಿತಿಯಲ್ಲೂ ದಿನೇದಿನೇ ಬಲವಾಗಿ ದಾಳಿ ನಡೆಸುತ್ತಿದೆ. ಇರಾನಿನ ಜನರೂ ಸರ್ಕಾರದ ಜೊತೆ ಗಟ್ಟಿಯಾಗಿ ನಿಂತಿದ್ದಾರೆ. ಇಸ್ರೇಲ್ ಅಮೆರಿಕ ನಡೆಸುತ್ತಿರುವ ಇಂತಹ ಭೀಕರ ದಾಳಿಗಳ ನಡುವೆಯೂ ಇರಾನಿನ ಜನರು ಬೀದಿಗಳಿಗೆ ಬಂದು ಸರ್ಕಾರದ ಪರವಾಗಿ ಸಂಭ್ರಮಿಸುತ್ತಾ ರ‍್ಯಾಲಿ ನಡೆಸುವ ದೃಶ್ಯಗಳನ್ನು ನೋಡಬಹುದು. ಮತ್ತು ಇರಾನ್ ಈ ಯುದ್ಧದಲ್ಲಿ ಸುದೀರ್ಘ ಕಾಲಕ್ಕೂ ತೊಡಗಿಸಿಕೊಳ್ಳುವ ಇರಾದೆ ವ್ಯಕ್ತಪಡಿಸಿದೆ. ಒಂದು ವೇಳೆ ಯುದ್ಧ ನಿಲ್ಲಿಸುವುದೇ ಆದರೆ ದೊಡ್ಡ ಮಟ್ಟದ ಬೇಡಿಕೆಗಳನ್ನೇ ಅದು ಇಡುವ ಸೂಚನೆ ನೀಡಿದೆ. ಇಸ್ರೇಲ್ ಕೂಡಾ ಅಷ್ಟು ಸುಲಭವಾಗಿ ಹಿಂದಡಿ ಇಡಲಾರದು. ಅದಕ್ಕೆ ಎಷ್ಟು ಸಾಧ್ಯವೋ ಅಷ್ಟರ ಮಟ್ಟಿಗೆ ಅಮೆರಿಕವನ್ನು ಇದರಲ್ಲಿ ಮುಳುಗಿಸಬೇಕು. ಹೀಗಾಗಿ ಅದು ಇರಾನ್ ಮೇಲೆ ಇನ್ನೂ ಕ್ರೂರವಾದ ದಾಳಿಗಳನ್ನು ಅಮೆರಿಕ ನಡೆಸಲಿ ಎಂದೇ ಆಶಿಸುತ್ತಿದೆ. ಅದನ್ನು ನಂಬಿಕೊಂಡು ಅಮೆರಿಕವು ಯುದ್ಧವನ್ನು ತೀವ್ರಗೊಳಿಸಿದರೆ ಮತ್ತೆ ಹಿಂದೆಂದೂ ಅನುಭವಿಸದ ಮುಖಭಂಗವನ್ನು ಅನುಭವಿಸುವುದು ಕಷ್ಟ. ಕೇವಲ ಬಾಂಬ್ ದಾಳಿ ನಡೆಸಿ ಯಾವುದೇ ದೇಶ ಆಡಳಿತವನ್ನು ಬದಲಿಸಿರುವ ಉದಾಹರಣೆ ಪ್ರಪಂಚದ ಇತಿಹಾಸದಲ್ಲಿ ಕಾಣಲು ಸಾಧ್ಯವಿಲ್ಲ. ಹೀಗಾಗಿ ಲಕ್ಷಾಂತರ ಜನರನ್ನು ಕೊಂದರೂ ಅಮೆರಿಕ ತನ್ನ ಘೋಷಿತ ಉದ್ದೇಶವನ್ನು ಈಡೇರಿಸಿಕೊಳ್ಳುವುದಿಲ್ಲ. ಬದಲಿಗೆ ಅರಬ್ ದೇಶಗಳ ಮೇಲೆ ಮತ್ತು ಜಗತ್ತಿನ ಮೆಲೆ ಇರಾನ್ ತನ್ನ ಉರುಳನ್ನು ಮತ್ತಷ್ಟು ಬಿಗಿಗೊಳಿಸುತ್ತಲೇ ಹೋಗಬಹುದು. ಹೀಗಾಗಿ ಬುದ್ಧಿ ಇದ್ದರೆ ಅಮೆರಿಕ ಆದಷ್ಟು ಬೇಗ ಯದ್ಧದಿಂದ ಹೊರಕ್ಕೆ ಬರಬೇಕು. ಹಾಗೆ ಮಾಡಿದಾಗಲೂ ಅದರ ಲಾಭ ಆಗುವುದು ಇರಾನಿಗೇ. ಇರಾನ್ ಎದುರು ಅಮೆರಿಕ ಹಿಮ್ಮೆಟ್ಟುವ ಮೂಲಕ ಜಗತ್ತಿನಲ್ಲಿ ಅಮೆರಿಕದ ಯಜಮಾನಿಕೆ ಕೊನೆಗೊಂಡು ಹೊಸ ಬಲಾಬಲ ಸಮತೋಲನ (ಬ್ಯಾಲೆನ್ಸ್ ಆಫ್ ಪರ್ಸ್) ರೂಪುಗೊಳ್ಳುತ್ತದೆ. ಪ್ರಪಂಚದಲ್ಲಿ ಯಾರದೇ ಒಬ್ಬರ ಯಜಮಾನಿಕೆ ನಡೆಯುವ ಕಾಲಕ್ಕೆ ಮುಕ್ತಿ ಹಾಡಿ ಒಂದು ಮಲ್ಟಿಪೋಲಾರ್ ಜಗತ್ತಿಗೆ ಈ ಯುದ್ಧ ಮುನ್ನುಡಿ ಬರೆಯುವುದು ಖಚಿತ. ಇರಾನ್‌ಗೆ ಪರೋಕ್ಷ ಬೆಂಬಲ ನೀಡುತ್ತಿರುವ ರಷ್ಯಾ ಮತ್ತು ಚೀನಾ ಕೂಡಾ ಇದನ್ನು ಎದುರು ನೋಡುತ್ತಿವೆ. ಇದರೊಂದಿಗೆ ಅರಬ್ ಜಗತ್ತಿನ ಹೊಸ ನಾಯಕನಾಗಿ ಇರಾನ್ ಉದ್ಭವಿಸಲಿದೆ. ಈ ಲೆಕ್ಕಾಚಾರದಲ್ಲಿ ಇಂತಹ ಒಂದು ಯುದ್ಧ ಆರಂಭಿಸಿ ಇಸ್ರೇಲ್ ಮತ್ತು ಅಮೆರಿಕ ಸಾಧಿಸಿದ್ದು ಏನು ಎಂಬ ಪ್ರಶ್ನೆ ಬರುತ್ತದೆ. ಒಂದೊಮ್ಮೆ ಯುದ್ಧ ತೀವ್ರಗೊಂಡು ಈ ಯುದ್ಧದ ಮುಂದಿನ ದಿನಗಳಲ್ಲಿ ರಷ್ಯಾ, ಚೀನಾ, ಉತ್ತರ ಕೊರಿಯಾ ಮತ್ತು ಯೂರೋಪಿನ ನ್ಯಾಟೋ ದೇಶಗಳು ನೇರವಾಗಿ ಯುದ್ಧಕ್ಕೆ ಧುಮುಕಿದರೆ ವಿನಾಶ ಕಟ್ಟಿಟ್ಟ ಬುತ್ತಿ. ಯಾವುದೇ ದೇಶ ವಿನಾಶಕಾರಿ ಅಣ್ವಸ್ತ್ರಗಳನ್ನು ಬಳಸುವುದು ಸಧ್ಯದ ಮಟ್ಟಿಗೆ ಸಾಧ್ಯವಿಲ್ಲ ಎಂದು ನಂಬಬಹುದಾದರೂ ಅಕಸ್ಮಾತ್ ಒಬ್ಬರು ಪ್ರಯೋಗಿಸಿದರೂ ಇಡೀ ಮನುಕುಲ ಸಾವಿರಾರು ವರ್ಷಗಳ ಹಿಂದೆ ಹೋಗಿ ಶಿಲಾಯುಗ ತಲುಪುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಹಾಗಾದರೆ, ಈ ಯುದ್ಧದಲ್ಲಿ ನಾವು ಯಾರ ಪರ ನಿಲ್ಲಬೇಕು? ಯಾವುದೇ ಒಂದು ಸ್ವತಂತ್ರ ರಾಷ್ಟ್ರದ ಸಾರ್ವಭೌಮತೆ ದೃಷ್ಟಿಯ ನ್ಯಾಯ ಪ್ರಜ್ಞೆಯ ಮಾನದಂಡದಲ್ಲಿ ನಾವು ನಿಸ್ಸಂಶಯವಾಗಿ ಇಸ್ರೇಲ್ ಮತ್ತು ಅಮೆರಿಕಗಳ ದಬ್ಬಾಳಿಕೆ ವಿರುದ್ಧ ನಿಲ್ಲಬೇಕು. ಅವುಗಳ ವಿರುದ್ಧ ತನ್ನ ಪ್ರತಿರೋಧದ ಹಕ್ಕನ್ನು ಚಲಾಯಿಸುತ್ತಿರುವ ಇರಾನ್ ದೇಶದ ಜನರ ಸಾರ್ವಭೌಮತೆಯನ್ನು ಎತ್ತಿಹಿಡಿಯಲೇ ಬೇಕು. ಇದೇ ವೇಳೆಯಲ್ಲಿ ಅದು ಇರಾನಿನ ಜನರಿರಲಿ, ಲೆಬನಾನ್, ಇಸ್ರೇಲಿನ ಜನರಿರಲಿ, ಅಮೆರಿಕದ ಸೈನಿಕರಿರಲಿ, ಗಲ್ಫ್ ದೇಶಗಳ ಜನರಿರಲಿ ವಿನಾಶಕಾರಿ ಯುದ್ಧ ಯಾರಿಗೆ ಬೇಕು? ಮನುಷ್ಯತ್ವವೇ ಇಲ್ಲ ಟ್ರಂಪ್ ನೇತನ್ಯಾಹುಗಳಿಗೆ ಯುದ್ಧ ಬೇಕು, ಧರ್ಮಾಂಧರಿಗೆ ಬೇಕು ಈ ಯುದ್ಧ ಯಾವುದೇ ದೇಶದ ಯಾವುದೇ ಜನಸಾಮಾನ್ಯರಿಗೆ ಅಲ್ಲ. ಹೀಗಾಗಿ ಇಂತಹ ಯುದ್ಧಗಳು ನಡೆಯಲೇಬಾರದು ಮತ್ತು ಕೂಡಲೇ ಕೊನೆಗೊಳ್ಳಬೇಕು ಎಂಬ ಮಾನವೀಯ ಪ್ರಜ್ಞೆಯಿಂದಲೂ ನಾವು ಮಾತನಾಡಬೇಕಿದೆ. ಯುದ್ಧದಾಹಿಗಳಿಗೆ ಧಿಕ್ಕಾರ ಹೇಳಬೇಕಿದೆ.
ಹರ್ಷಕುಮಾರ್ ಕುಗ್ವೆ, ಪತ್ರಕರ್ತರು
ಇದನ್ನೂ ಓದಿ- ಇರಾನ್ ಅನ್ನು ಸೋಲಿಸುವುದು ಸಾಧ್ಯವೇ?


