50 ವರ್ಷ ಪೂರೈಸಿದ ರಂಗತಂಡಗಳ ನೇತಾರರು ಹೊಸ ತಲೆಮಾರಿನ ಪ್ರತಿಭೆಗಳಿಗೆ ತಮ್ಮ ರಂಗ ತಂಡಗಳ ಜವಾಬ್ದಾರಿಯನ್ನು ವಹಿಸಿಕೊಟ್ಟು ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕಾಗಿದೆ. ರಂಗ ತಂಡವೊಂದು ವ್ಯಕ್ತಿ ಕೇಂದ್ರಿತವಾದರೆ ಅದಕ್ಕೆ ಆಯಸ್ಸು ಕಡಿಮೆ. ವ್ಯಕ್ತಿಯಿಂದ ವ್ಯಕ್ತಿಗಳಿಗೆ ತಂಡದ ಜವಾಬ್ದಾರಿ ಬದಲಾಗುತ್ತಾ ಹೋಗಬೇಕು. ಆಗಲೇ ರಂಗತಂಡಗಳು ಮುಂದುವರೆಯಲು ಸಾಧ್ಯ – ಶಶಿಕಾಂತ ಯಡಹಳ್ಳಿ, ರಂಗಕರ್ಮಿ.
ಅಂತೂ ಇಂತೂ ಹಾಗೂ ಹೀಗೂ “ಹೊನ್ನಾರು ರಂಗೋತ್ಸವ” ಸಂಪನ್ನವಾಯಿತು. ಕನ್ನಡ ರಂಗಭೂಮಿಯಲ್ಲಿ 50 ವರ್ಷ ಪೂರೈಸಿದ ಬೆಂಗಳೂರು ಕೇಂದ್ರಿತ ಆಯ್ದ ಆರು ರಂಗತಂಡಗಳನ್ನು ಸೇರಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ಫೆ.21 ರಿಂದ 26 ರವರೆಗೆ ಸುವರ್ಣ ವರ್ಷದ ಹರುಷವನ್ನು ಸಂಭ್ರಮಿಸಲಾಯ್ತು. ಹೊನ್ನು ಅಂದರೆ ಸುವರ್ಣ ಅಂದರೆ ಚಿನ್ನ. ಗೋಲ್ಡನ್ ಜುಬಿಲಿ ದಾಖಲೆಯ ತಂಡಗಳು ಆರು. ಹೊನ್ನು + ಆರು = ಹೊನ್ನಾರು ಎಂಬ ಅರ್ಥಪೂರ್ಣ ಹೆಸರನ್ನು ಈ ನಾಟಕೋತ್ಸವಕ್ಕೆ ಇಡಲಾಗಿತ್ತು. ಅರ್ಧ ಶತಕ ಬಾರಿಸಿ ಮುನ್ನಡೆದ ಈ ರಂಗತಂಡಗಳು ರಂಗೋತ್ಸವದಲ್ಲಿ ತಲಾ ಒಂದೊಂದು ನಾಟಕ ಪ್ರದರ್ಶಿಸುವ ಮೂಲಕ ತಮ್ಮ ಅಸ್ತಿತ್ವವನ್ನು ಸಾಬೀತು ಪಡಿಸಿದವು.

ಈ “ಹೊನ್ನಾರು ನಾಟಕೋತ್ಸವ”ಕ್ಕೆ ಮೂಲ ಕಾರಣೀಕರ್ತರು ಹಾಗೂ ಪ್ರಾಯೋಜಕರು ಕಲಾವಿದೆ ಉಮಾಶ್ರೀಯವರು. ತಮ್ಮ ಅಭಿನಯದ ‘ಶರ್ಮಿಷ್ಠೆ’ ಯನ್ನು ಹೊರತು ಪಡಿಸಿ ಬಾಕಿ ಐದೂ ರಂಗತಂಡಗಳಿಗೆ ತಲಾ ಎರಡು ಲಕ್ಷದಷ್ಟು ಹಣವನ್ನು ಉಮಾಶ್ರೀಯವರು ಕೊಟ್ಟಿದ್ದಾರೆ. ತಮಗೆ ಇತ್ತೀಚೆಗೆ ಸಿಕ್ಕ ಪ್ರಶಸ್ತಿಗಳ ಮೊತ್ತವನ್ನೆಲ್ಲಾ ಒಟ್ಟುಗೂಡಿಸಿ ಈ ನಾಟಕೋತ್ಸವಕ್ಕೆ ಕೊಡಮಾಡಿದ್ದಾರೆ. ತಮಗೆ ಎಲ್ಲವನ್ನೂ ಕೊಟ್ಟ ರಂಗಭೂಮಿಗೆ ಈ ರೀತಿಯ ಕೊಡುಗೆಯ ಮೂಲಕ ಋಣಸಂದಾಯ ಮಾಡಿ ಕೃತಾರ್ಥರಾಗಿದ್ದಾರೆ. ಈ ರೀತಿಯ ಏಕವ್ಯಕ್ತಿ ಆರ್ಥಿಕ ಪ್ರಾಯೋಜನೆ ರಂಗಭೂಮಿಯಲ್ಲಿ ಅಪರೂಪದಲ್ಲಿ ಅಪರೂಪ ಹಾಗೂ ಅನುಕರಣೀಯ. (ಇದೇ ರೀತಿ ಮಾನ್ಯ ಪ್ರಕಾಶ್ ರೈ ಹಾಗೂ ಬಿ.ಸುರೇಶ್ ರವರ ಕೊಡುಗೆ ಕೂಡಾ ಸ್ಮರಣಾರ್ಹ) ರಂಗಭೂಮಿಯನ್ನೇ ಮೆಟ್ಟಿಲು ಮಾಡಿಕೊಂಡು ಹಂತ ಹಂತವಾಗಿ ಮೇಲಕ್ಕೇರಿ ಹತ್ತಿದ ಏಣಿಯನ್ನು ಮರೆತು ವ್ಯಕ್ತಿಗತವಾಗಿ ಮೆರೆದು ರಂಗಭೂಮಿ ಮರೆತವರಿಗೆಲ್ಲಾ ಉಮಾಶ್ರೀಯವರ ರಂಗಬದ್ಧತೆ ಪಾಠವಾಗಬೇಕಿದೆ. ಕಲೆಯ ಫಲವನ್ನು ಒಂದಿಷ್ಟಾದರೂ ಮರಳಿ ಕಲಾರಂಗಕ್ಕೆ ಹಂಚಿ ಜನರ ಪ್ರೀತಿ ಮೆಚ್ಚುಗೆ ಪಡೆಯಬೇಕಿದೆ. ರಂಗ ಬದ್ಧತೆಯನ್ನು ತೋರಬೇಕಿದೆ. ಇಂತಹ ಮಾದರಿಯನ್ನು ಹಾಕಿಕೊಟ್ಟ ಉಮಾಶ್ರೀಯವರಿಗೆ ಕನ್ನಡ ರಂಗಭೂಮಿಯವರು ಅಭಿನಂದನೆ ಹೇಳಲೇಬೇಕಿದೆ. ಯಾರೇ ಆಗಲಿ ರಂಗಭೂಮಿಗೆ ಕೊಟ್ಟ ಕೊಡುಗೆಯನ್ನು ನೆನಪಿಸಿಕೊಳ್ಳದೇ ಹೋದರೆ ಕೃತಘ್ನರಾಗಬೇಕಾಗುತ್ತದೆ.
“ಪ್ರಚಾರಕ್ಕಾಗಿ ಕೊಟ್ಟಿದ್ದಾರೆ ಕೊಡಲಿ ಬಿಡಿ, ಬೇಕಾದಷ್ಟು ಸಂಪಾದಿಸಿದ್ದಾರೆ ಸ್ವಲ್ಪವಾದರೂ ಖರ್ಚು ಮಾಡಲಿ ಬಿಡಿ, ರಾಜಕೀಯದಲ್ಲಿ ಮೈಲೇಜು ಗಿಟ್ಟಿಸಲು ಹೀಗೆ ದಾನಗಳನ್ನು ಕೊಡುತ್ತಾರೆ ಮಾಡಲಿ ಬಿಡಿ” ಎನ್ನುವ ಅಪಸ್ವರಗಳೂ ಕೇಳಿಬಂದವು. ಇದೆಲ್ಲವೂ ನಿಜ ಆಗಿದ್ದರೆ ರಂಗೋತ್ಸವಕ್ಕೆ ಕೊಟ್ಟ ಹಣದ ಬಗ್ಗೆ ಅವರು ಮಾಧ್ಯಮಗಳ ಮುಂದೆ ಬಂದು ಹೇಳಿಕೊಳ್ಳಬಹುದಾಗಿತ್ತು.. ಇಲ್ಲವಾದರೆ ಬೇರೆಯವರ ಮೂಲಕ ಹೇಳಿಸಿ ಪ್ರಚಾರ ಗಿಟ್ಟಿಸಿಕೊಳ್ಳಬಹುದಾಗಿತ್ತು. ಆದರೆ ಇದೆಲ್ಲವನ್ನೂ ಪಬ್ಲಿಕ್ ಮಾಡಕೂಡದು ಎನ್ನುವ ಕರಾರಿನ ಮೇಲೆಯೇ ಹಣ ಕೊಟ್ಟಿದ್ದಾರಂತೆ. ಹೀಗಾಗಿ ಈ ರಂಗೋತ್ಸವದ ಆಯೋಜಕರು ಸಹ “ಉಮಾಶ್ರೀಯವರು ಬೆಂಬಲ ಕೊಟ್ಟಿದ್ದಾರೆ” ಎಂದು ಹೇಳಿದರೇ ಹೊರತು ಹಣ ಕೊಟ್ಟಿದ್ದಾರೆ ಎಂದು ಎಲ್ಲೂ ಹೇಳಲಿಲ್ಲ. ಹೀಗಾಗಿ ಇದು ಪ್ರಚಾರಕ್ಕಾಗಿಯೋ ಪ್ರಭಾವಕ್ಕಾಗಿಯೋ ಇಲ್ಲಾ ರಾಜಕೀಯ ಪ್ರಯೋಜನಕ್ಕಾಗಿಯೋ ಮಾಡಿದ ಪ್ರಾಯೋಜನೆಯಲ್ಲ, ತಮ್ಮನ್ನು ಬೆಳೆಸಿದ ರಂಗಭೂಮಿಗೆ ಋಣಸಂದಾಯ ಮಾಡುವ ಸಾರ್ಥಕ ಕೆಲಸವಾಗಿದೆ.

“ಹೊನ್ನಾರು” ರಂಗೋತ್ಸವ ಉಮಾಶ್ರೀಯವರ ಆಲೋಚನೆಯಾಗಿದ್ದು ಹಿರಿಯ ರಂಗಕರ್ಮಿಗಳಾದ ನಟರಂಗದ ಕಪ್ಪಣ್ಣನವರು ಹಾಗೂ ರಂಗಸಂಪದದ ವಿ.ಎಂ.ನಾಗೇಶರವರು ಉತ್ಸವದ ಸಂಚಾಲಕರಾಗಿದ್ದಾರೆ. ಆರೂ ತಂಡದ ರೂವಾರಿಗಳು ಉತ್ಸವ ಸಮಿತಿಯ ಆಯೋಜಕರಾಗಿದ್ದಾರೆ.
ಉಮಾಶ್ರೀಯವರ ಕೊಡುಗೆಗೆ, ಸಂಚಾಲಕರ ಶ್ರಮಕ್ಕೆ ಈ ರಂಗೋತ್ಸವ ನ್ಯಾಯ ಸಲ್ಲಿಸಿತಾ? 70 ರ ದಶಕದಂತೆ ಟ್ರೆಂಡ್ ಸೆಟ್ಟಿಂಗ್ ನಾಟಕಗಳು ಪ್ರದರ್ಶನವಾದವಾ? ನಿರ್ಮಿಸಿದ ಬಹುತೇಕ ಹೊಸ ನಾಟಕಗಳು ಬಹುಕಾಲ ಕನ್ನಡ ರಂಗಭೂಮಿಯಲ್ಲಿ ನೆಲೆ ನಿಲ್ಲುವ ತಾಕತ್ತನ್ನು ಹೊಂದಿವೆಯಾ? ಎಂದು ಕೇಳಿದರೆ ಉತ್ತರ ನಿರುತ್ತರ.
ಯಾಕೆಂದರೆ ಈಗ ಹೊಸ ನಾಟಕಗಳ ಮೊದಲ ಪ್ರದರ್ಶನಗಳೇ ಹಾಗೆ. ಪ್ರಯೋಗದ ಪ್ರಾಥಮಿಕ ಸ್ಟೇಜ್‌ನಲ್ಲಿರುತ್ತವೆ. ಹೆಚ್ಚೂ ಕಡಿಮೆ ಸ್ಟೇಜ್ ರಿಹರ್ಸಲ್ ಹಂತದಲ್ಲಿರುತ್ತವೆ. ಸತತ ತಾಲಿಂ ಸಮಸ್ಯೆಯಿಂದಲೋ, ಹೊಸ ತಲೆಮಾರಿನ ನಟ ನಟಿಯರ ಬದ್ಧತೆಯ ಕೊರತೆಯಿಂದಲೋ, ನಾಟಕದ ಆಯ್ಕೆಯಲ್ಲಿ ಆದ ವ್ಯತ್ಯಯದಿಂದಲೋ ಪ್ರದರ್ಶನಗಳು ನಿರೀಕ್ಷೆಯ ಎತ್ತರಕ್ಕೆ ಬೆಳೆಯದೇ ನಿರಾಸೆಯನ್ನು ಮೂಡಿಸಿವೆ. ಅವಸರದಲ್ಲಿ ಅನುಸರಿಸಿಕೊಂಡು ಕಟ್ಟಿದ ನಾಟಕಗಳಿಂದಾಗಿ ಕೆಲವು ನಾಟಕಗಳ ನಿರ್ದೇಶಕರ ಶ್ರಮ ನಿರೀಕ್ಷಿತ ಫಲ ಕೊಡುವಲ್ಲಿ ಸಫಲವಾಗಿಲ್ಲ.
ಮುಂದಿನ ಪ್ರದರ್ಶನಗಳಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಪ್ರದರ್ಶನ ಉತ್ತಮಗೊಳ್ಳಬಹುದಾಗಿದೆ. ಆದರೆ ಮಹತ್ವಾಕಾಂಕ್ಷೆಯಿಂದ ಆಯೋಜಿಸಿದ ರಂಗೋತ್ಸವ ಪೇಲವವಾಗಿದೆ. ಹೊಸ ನಾಟಕ ನಿರ್ಮಿಸಿ ಪ್ರದರ್ಶಿಸುವಾಗ ವೃತ್ತಿಪರತೆ ಲಯವಾಗಿದೆ. 50 ವರ್ಷ ಪೂರೈಸಿ ಕನ್ನಡ ರಂಗಭೂಮಿಯಲ್ಲಿ ಬ್ರ್ಯಾಂಡ್ ಸೃಷ್ಟಿಸಿಕೊಂಡಿರುವ ರಂಗತಂಡಗಳ ನಾಟಕಕ್ಕೆ ಪ್ರೇಕ್ಷಕರ ನಿರೀಕ್ಷೆಯೂ ಹೆಚ್ಚಾಗಿರುತ್ತದೆ. ಅದನ್ನು ಕಾಪಾಡಿಕೊಂಡು ಹೋಗುವುದು ಈ ಹಿರಿಯ ರಂಗತಂಡಗಳ ಜವಾಬ್ದಾರಿಯಾಗಿದೆ.
ಶರ್ಮಿಷ್ಠೆ ಎನ್ನುವ ಹೆಸರಿನ ಏಕವ್ಯಕ್ತಿ ನಾಟಕವನ್ನು ರಂಗಸಂಪದ ರಂಗತಂಡವು ನಿರ್ಮಿಸಿದ್ದು, ಉಮಾಶ್ರೀಯವರೇ ಅಭಿನಯಿಸಿದ್ದಾರೆ. ಇಡೀ ನಾಟಕ ಪ್ರೇಕ್ಷಕರಿಗೆ ಅರ್ಥವಾಗದೇ ಹೋದರೂ, ದೃಶ್ಯಗಳ ಜೋಡಣೆ ಗೊಂದಲಕಾರಿಯಾದರೂ ಉಮಾಶ್ರೀಯವರ ಅದ್ಭುತ ಎನ್ನಬಹುದಾದ ನಟನೆ ನಾಟಕದ ಕಥಾನಕದ ನ್ಯೂನತೆಗಳನ್ನು ಮುಚ್ಚಿಹಾಕಿತು. ಇಲ್ಲಿ ನಿರ್ದೇಶಕರು ನಾಟಕ ಕಟ್ಟುವಲ್ಲಿ ಸೋತಿದ್ದರೆ ನಟನೆಯ ಅಭಿವ್ಯಕ್ತಿಯಲ್ಲಿ ಉಮಾಶ್ರೀಯವರು ಗೆದ್ದಿದ್ದಾರೆ. ಸಮುದಾಯ ತಂಡವು “ಭಗವಂತನ ಮರಣ” ನಾಟಕವನ್ನು ನಿರ್ಮಿಸಿದ್ದು ಕೇರಳದ ಡಾ.ಸ್ಯಾಮ್ ಕುಟ್ಟಿ ಯವರು ನಿರ್ದೇಶಿಸಿದ್ದಾರೆ. ಮತಾಂಧರಿಂದ ವಿಚಾರವಾದಿಗಳ ಹತ್ಯೆ ಕುರಿತ ಈ ನಾಟಕವು ತನ್ನ ಆಶಯದಲ್ಲಿ ಸಫಲವಾಗಿದ್ದು, ಶೈಲೀಕೃತ ವಿಧಾನದ ಬಳಕೆಯಿಂದಾಗಿ ಪ್ರೇಕ್ಷಕರನ್ನು ಸುಲಭವಾಗಿ ತಲುಪಲು ಸಾಧ್ಯವಾಗಲಿಲ್ಲ. ನಟರಂಗ ತಂಡ ನಿರ್ಮಿಸಿದ ಕೆವೈಎನ್ ರವರು ರಚಿಸಿದ “ನೀರಗನ್ನಡಿ” ನಾಟಕವು ಇನ್ನೂ ವೃತ್ತಿಪರವಾಗಿ ಕಟ್ಟುವ ಹಂತದಲ್ಲಿದ್ದು ಸ್ಟೇಜ್ ರಿಹರ್ಸಲ್ ನೋಡಿದಂತಾಯಿತು. ಕಲಾಗಂಗೋತ್ರಿ ತಂಡದ “Moneyಯೇ ದೇವರು” ನಾಟಕವನ್ನು ಡಾ.ಬಿ.ವಿ.ರಾಜಾರಾಂರವರು ನಿರ್ದೇಶಿಸಿದ್ದು ಸಮಾಜದಲ್ಲಿ ಅಸಮಾನತೆಯನ್ನು ಸಮರ್ಥಿಸಿಕೊಳ್ಳುವ ಮನುವಾದಿ ಸಿದ್ಧಾಂತವನ್ನು ಪ್ರತಿಪಾದಿಸಲಾಗಿದೆ. ತರ್ಕವಿಲ್ಲದೇ ಕುತರ್ಕದಿಂದ ಕಟ್ಟಲ್ಪಟ್ಟ ಈ ದೀರ್ಘಾವಧಿಯ ನಾಟಕ ನೋಡುಗರ ಸಹನೆಯನ್ನು ಪರೀಕ್ಷಿಸುವಂತಿದೆ. ಡಾ.ಹೆಚ್.ಎಸ್.ವೆಂಕಟೇಶಮೂರ್ತಿಯವರ “ಬೆಳಗಿನ ಕನಸು” ನಾಟಕವನ್ನು ತಮ್ಮ ‘ಸ್ಪಂದನ’ ತಂಡಕ್ಕೆ ಬಿ.ಜಯಶ್ರೀರವರು ನಿರ್ದೇಶಿಸಿದ್ದು, ದೊಡ್ಡವರು ಮಕ್ಕಳಿಗಾಗಿ ಪ್ರಯೋಗಿಸುವ ಹಾಸ್ಯಮಯ ಕಾಲ್ಪನಿಕ ಫ್ಯಾಂಟಸಿ ನಾಟಕ ಇದಾಗಿದೆ. ನೋಡಲು ಚಿತ್ತಾಕರ್ಷಕವಾಗಿರುವ ಈ ನಾಟಕವು ಪ್ರೀತಿ ವಿರೋಧಿ ಹಾಗೂ ಜಾತಿವಾದಿ ಪರಿಕಲ್ಪನೆಯಲ್ಲಿ ಮೂಡಿಬಂದಿದೆ. ಕಂಬಾರರು ರಚಿಸಿದ, ಬಿ.ವಿ.ಕಾರಂತರವರು ನಿರ್ದೇಶಿಸಿದ ” ಜೋಕುಮಾರಸ್ವಾಮಿ” ನಾಟಕವನ್ನು “ಬೆನಕ” ತಂಡದವರು ಮರುನಿರ್ಮಾಣ ಮಾಡಿದ್ದು ಎಪ್ಪತ್ತು ಎಂಬತ್ತರ ದಶಕದಲ್ಲಾದ ಪ್ರದರ್ಶನಗಳಿಗೆ ಹೋಲಿಸಲಾಗದಂತಹ ಮಾಮೂಲು ಪ್ರಯೋಗವಾಗಿದೆ.

ಕೆಲವು ನಾಟಕಗಳ ಮೊದಲ ಪ್ರದರ್ಶನಗಳಲ್ಲಿ ಆದ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಂಡು ಸಮಾಧಾನ ಪಟ್ಟುಕೊಳ್ಳಬಹುದಾದರೂ ಪ್ರೇಕ್ಷಕರ ಜೇಬು ತಕರಾರು ಎತ್ತುತ್ತಿದೆ. ಯಾಕೆಂದರೆ ಈ ರಂಗೋತ್ಸವದಲ್ಲಿ ಪ್ರತಿ ಟಿಕೇಟಿನ ಬೆಲೆ ಕೇಳಿದರೆ ಗಾಬರಿಯಾಗುತ್ತದೆ. ಕನಿಷ್ಟ ಇನ್ನೂರು, ಗರಿಷ್ಟ ಐನೂರು ರೂಪಾಯಿ ಮೌಲ್ಯದ ಟಿಕೇಟ್ ಇಡಲಾಗಿದೆ. ರಂಗಪ್ರೇಕ್ಷಕರು ಇನ್ನೂ ಅಷ್ಟೊಂದು ಶ್ರೀಮಂತರೂ ಆಗಿಲ್ಲ, ರಂಗಭೂಮಿ ಉದ್ಯಮವೂ ಅಲ್ಲ. ಹೋಗಲಿ ಕೊಟ್ಟ ಹಣಕ್ಕೆ ನಿರಾಸೆಯಾಗದಂತೆ ಅದ್ಭುತ ಎನ್ನಬಹುದಾದ ಕ್ವಾಲಿಟಿ ನಾಟಕಗಳ ಪ್ರದರ್ಶನವಾದಲ್ಲಿ ನೋಡುಗರಿಗೆ ಸಮಾಧಾನ ಆಗಬಹುದಾಗಿತ್ತು. ಆದರೆ ಅದೂ ಆಗಲಿಲ್ಲ. ಉಮಾಶ್ರಿಯವರು ಪ್ರತಿ ತಂಡದ ನಾಟಕಕ್ಕೂ ಎರಡು ಲಕ್ಷದಷ್ಟು ಹಣ ಕೊಟ್ಟ ಮೇಲೂ ಇಷ್ಟೊಂದು ದೊಡ್ಡ ಮಟ್ಟದ ಬೆಲೆಯ ಟಿಕೇಟ್ ಇಡುವ ಅಗತ್ಯವೇನಿತ್ತು ಎಂಬುದು ಹಲವಾರು ಪ್ರೇಕ್ಷಕರ ಪ್ರಶ್ನೆಯಾಗಿದೆ. ಒಂದು ನಾಟಕಕ್ಕೆ ಮುನ್ನೂರು ರೂಪಾಯಿ ಟಿಕೇಟ್ ಎಂದುಕೊಂಡರೂ ಆರೂ ನಾಟಕವನ್ನು ಟಿಕೇಟ್ ಕೊಂಡು ನಾಟಕ ನೋಡಿದರೆ 1,800 ರೂಪಾಯಿ ಖರ್ಚಾಗುತ್ತದೆ. ಕಲಾಕ್ಷೇತ್ರಕ್ಕೆ ಬಂದು ಹೋಗುವ ಹಾಗೂ ತಿಂಡಿ ತೀರ್ಥ ಕಾಫಿ ಖರ್ಚು ಬೇರೆ. ಇಷ್ಟೊಂದು ಹಣ ಖರ್ಚು ಮಾಡಿ ನಾಟಕ ನೋಡುವುದು ಮಧ್ಯಮ ವರ್ಗದ ರಂಗಾಸಕ್ತರಿಗೆ ಹೊರೆಯಾಗುತ್ತದೆ. ಹೀಗಾಗಿ ಮೊದಲ ಹಾಗೂ ಕೊನೆಯ ನಾಟಕಗಳನ್ನು ಹೊರತುಪಡಿಸಿ ನಡುವಿನಲ್ಲಾದ ನಾಟಕ ಪ್ರದರ್ಶನಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿತ್ತು. ನಾಟಕವೊಂದನ್ನು ನಿರ್ಮಿಸಿ ಪ್ರದರ್ಶಿಸುವುದು ಹಣ ಮಾಡುವ ಉದ್ದೇಶಕ್ಕಿಂತಲೂ ಹೆಚ್ಚು ಪ್ರೇಕ್ಷಕರಿಗೆ ತಲುಪಿಸುವುದು ಮುಖ್ಯವಾಗಬೇಕಿದೆ. ಹಲವಾರು ಕಾರಣಗಳಿಂದ ರಂಗಭೂಮಿಯಿಂದ ವಿಮುಖರಾದ ರಂಗಾಸಕ್ತ ಪ್ರೇಕ್ಷಕರನ್ನು ಕಡಿಮೆ ಬೆಲೆಗೆ ಉತ್ತಮ ನಾಟಕ ತೋರಿಸುವ ಮೂಲಕ ಆಕರ್ಷಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಪ್ರೇಕ್ಷಕರು ಹೆಚ್ಚಾದಷ್ಟೂ ರಂಗಭೂಮಿ ಉಳಿದು ಬೆಳೆಯುತ್ತದೆ.

ಈ ರಂಗೋತ್ಸವದಲ್ಲಿ ಒಂದು ಸಮಾಧಾನಕರ ಸಂಗತಿ ಏನೆಂದರೆ ಬಹುತೇಕ ನಾಟಕಗಳಲ್ಲಿ ಹೊಸ ತಲೆಮಾರಿನ ಜೆನ್ ಜಿ ಎನ್ನಬಹುದಾದ ನಟ ನಟಿಯರು ಭಾಗವಹಿಸಿ ಬಣ್ಣಹಚ್ಚಿದ್ದು. ಕಾಲೇಜಿನ ತರುಣ ತರುಣಿಯರು ಈ ನಾಟಕಗಳಲ್ಲಿ ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಂತವರಲ್ಲಿ ಅರ್ಧದಷ್ಟಾದರೂ ರಂಗಭೂಮಿಗೆ ದಕ್ಕಿದರೆ, ಉಳಿದವರು ರಂಗಾಸಕ್ತಿ ಬೆಳೆಸಿಕೊಂಡರೆ ಅದೂ ಸಹ ಕನ್ನಡ ರಂಗಭೂಮಿಯ ಮುಂದುವರಿಕೆಗೆ ಸಹಾಯವಾಗುತ್ತದೆ. ರಂಗಸಾಗರಕೆ ಹೊಸ ನೀರು ಬರಬೇಕಿದೆ, ಉತ್ಸಾಹದ ಚಿಲುಮೆ ಉಕ್ಕಬೇಕಿದೆ, ಅದಕ್ಕೆ ಈ ‘ಹೊನ್ನಾರು ರಂಗೋತ್ಸವ’ ವೇದಿಕೆಯನ್ನು ಒದಗಿಸಿಕೊಟ್ಟಿದೆ.
50 ವರ್ಷ ಪೂರೈಸಿದ ರಂಗತಂಡಗಳ ನೇತಾರರು ಹೊಸ ತಲೆಮಾರಿನ ಪ್ರತಿಭೆಗಳಿಗೆ ತಮ್ಮ ರಂಗ ತಂಡಗಳ ಜವಾಬ್ದಾರಿಯನ್ನು ವಹಿಸಿಕೊಟ್ಟು ಮಾರ್ಗದರ್ಶಕರಾಗಿ ತಮ್ಮ ಅನುಭವವನ್ನು ಹಂಚಿಕೊಳ್ಳಬೇಕಾಗಿದೆ. ರಂಗ ತಂಡವೊಂದು ವ್ಯಕ್ತಿ ಕೇಂದ್ರಿತವಾದರೆ ಅದಕ್ಕೆ ಆಯಸ್ಸು ಕಡಿಮೆ. ವ್ಯಕ್ತಿಯಿಂದ ವ್ಯಕ್ತಿಗಳಿಗೆ ತಂಡದ ಜವಾಬ್ದಾರಿ ಬದಲಾಗುತ್ತಾ ಹೋಗಬೇಕು. ಆಗಲೇ ರಂಗತಂಡಗಳು ಮುಂದುವರೆಯಲು ಸಾಧ್ಯ. ಹೊಸ ಸಾಧ್ಯತೆಗಳನ್ನು, ಪ್ರಯೋಗಶೀಲತೆಯನ್ನು ರಂಗಭೂಮಿಯಲ್ಲಿ ಆವಿಷ್ಕರಿಸಲು ಸಾಧ್ಯ. ಟಿವಿ ಸಿನೆಮಾ ಸಾಮಾಜಿಕ ಜಾಲತಾಣಗಳ ರೀಲ್ಸ್ ವಿಡಿಯೋಗಳ ಪೈಪೋಟಿಯಲ್ಲಿ ರಂಗಭೂಮಿಯನ್ನು ಉಳಿಸಲು ಬೆಳೆಸಲು ಸಾಧ್ಯ.
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂ ಓದಿ- http://ಮನರಂಜನಾತ್ಮಕ ಮಕ್ಕಳ ನಾಟಕ “ಬೆಳಗಿನ ಕನಸು” https://kannadaplanet.com/entertaining-childrens-play-morning-dream/


