ಚೆನ್ನೈ : ಚುನಾವಣೆಯ ಹೊಸ್ತಿಲಲ್ಲಿರುವ ತಮಿಳುನಾಡಿನ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾ ಅವರ ಆಪ್ತ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ಒ.ಪನ್ನಿರ್ ಸೆಲ್ವಂ ಡಿಎಂಕೆ ಪಕ್ಷ ಸೇರಿದ್ದಾರೆ.
ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಪನ್ನಿರ್ ಸೆಲ್ವಂ ಅವರು, ಜಯಲಲಿತಾ ಅವರ ಎಐಎಡಿಎಂಕೆಯ ಶ್ರೇಣಿಯಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದರೂ ನಂತರದಲ್ಲಿ ಎಐಎಡಿಎಂಕೆ ಪಕ್ಷ ದಿಂದ ಉಚ್ಚಾಟನೆಗೊಂಡಿದ್ದರು,
ಡಿಎಂಕೆ ಸೇರ್ಪಡೆಯ ನಂತರ ಮಾತನಾಡಿದ ಪನ್ನೀರ್ ಸೆಲ್ವಂ, “ಸ್ಟಾಲಿನ್ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಮತ್ತು ಜನರು ಅದನ್ನು ಗಮನಿಸುತ್ತಿದ್ದಾರೆ. ದಕ್ಷಿಣದ ಯಾವುದೇ ನಾಯಕರು ಬಲಿಷ್ಠರಾಗದಂತೆ ನೋಡಿಕೊಳ್ಳುವುದು ಎಐಎಡಿಎಂಕೆ ನಾಯಕ ಇಪಿಎಸ್ ಅವರ ಉದ್ದೇಶವಾಗಿದೆ. ದ್ರಾವಿಡ ಚಳವಳಿಯನ್ನು ಉಳಿಸಲು, ದ್ರಾವಿಡರ ನೀತಿಯಾದ ಡಿಎಂಕೆ ಕೆಲಸ ಮಾಡುತ್ತಿದೆ. ನಾನು ಇದೀಗ ಒಬ್ಬ ಕಾರ್ಯಕರ್ತರಾಗಿ ಸೇರಿದ್ದೇನೆ. ನಾನು ಪಕ್ಷದ ಕಾರ್ಯಕರ್ತರಲ್ಲಿ ಒಬ್ಬನಾಗಿ ಪಕ್ಷದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇನೆ” ಎಂದು ಹೇಳಿದರು.
ಚೆನ್ನೈನಲ್ಲಿರುವ ಡಿಎಂಕೆ ಪ್ರಧಾನ ಕಚೇರಿಯಾದ ಅಣ್ಣಾ ಅರಿವಲಯಂನಲ್ಲಿ ಅವರನ್ನು ಪಕ್ಷಕ್ಕೆ ಸೇರಿಸಲಾಯಿತು. ತಮಿಳುನಾಡು ಮುಖ್ಯಮಂತ್ರಿ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.


