ಜಿಲ್ಲೆಯ ದಲಿತ ಸಂಘರ್ಷ ಸಮಿತಿಯಲ್ಲಿ ಮಹಿಳೆಯರು

ಕೆಲವೇ ಕೆಲವು ದಲಿತ ಮಹಿಳೆಯರ ಹೋರಾಟದ ಫಲವಾಗಿ, ಹೆಚ್ಚಿನ ದಲಿತ ಹೆಣ್ಣುಮಕ್ಕಳು ಇಂದು ಶಿಕ್ಷಣ ಪಡೆದು, ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿಯು ಗುರುತಿಸಿಕೊಳ್ಳುತ್ತಿದ್ದಾರೆ. ದಲಿತ ಮಹಿಳೆಯರು ಹಾಸನವನ್ನೂ ಒಳಗೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮದೆ ಆದ ಕೊಡುಗೆಗಳನ್ನು ಸಮಾಜಕ್ಕೆ, ಸಮುದಾಯಕ್ಕೆ ನೀಡುತ್ತಿದ್ದಾರೆ. ಇದು ಸಾಧ್ಯವಾಗಿದ್ದು ದಲಿತ ಸಂಘರ್ಷ ಸಮಿತಿಯಿಂದ! – ಡಾ.ಸೋಮಲತಾ.

    ಸಾವಿರಾರು ವರ್ಷಗಳಿಂದ ತುಳಿತಕ್ಕೊಳಪಟ್ಟು ಶೋಷಣೆಯನ್ನೇ ಉಸಿರಾಗಿಸಿಕೊಂಡು, ಹಸಿದ ಹೊಟ್ಟೆಯಲ್ಲಿ ಸೋತ ರೆಟ್ಟೆಯಲ್ಲಿ ನಿಷ್ಠಾವಂತರಾಗಿ ತಮ್ಮ ಕಾಯಕದಲ್ಲಿ ತೊಡಗಿಸಿಕೊಂಡಿದ್ದಂತಹ ಒಂದು ಸಮೂಹ ಅಥವಾ ಜಾತಿ ಎಂದರೆ- ದಲಿತರು. ಅವರನ್ನು ಇಂದಿಗೂ ಕೂಡ ಅಸ್ಪೃಶ್ಯ ಎಂದು ನಮ್ಮ ಭಾರತೀಯ ಸಮಾಜದ ಸ್ತರ ವ್ಯವಸ್ಥೆಯಲ್ಲಿ ಗುರುತಿಸಲಾಗುತ್ತದೆ. ಸಾಮಾಜಿಕ ಸಂದರ್ಭಗಳಲ್ಲಿ ದಲಿತರು ಅನುಭವಿಸುತ್ತಿದ್ದಂತಹ ಅನೇಕ ರೀತಿಯ ಹಿಂಸೆ, ಅವಮಾನ, ಅಸ್ಪೃಶ್ಯತೆ, ತಾರತಮ್ಯಗಳ ವಿರುದ್ಧವಾಗಿ ಪ್ರತಿರೋಧಗಳು, ಹೋರಾಟಗಳು, ಚಳವಳಿಗಳು 1800ರಲ್ಲೇ ಪ್ರಾರಂಭವಾಗುತ್ತವೆ. ಆ ಸಂದರ್ಭದಲ್ಲಿ ಸಮಾಜ ಸುಧಾರಣೆಗಾಗಿ ಹೋರಾಡಿದಂತಹ ಹಲವು ಪ್ರಮುಖ ಹೋರಾಟಗಾರರೊಂದಿಗೆ ಜ್ಯೋತಿ ಬಾ ಫುಲೆ ಮತ್ತು ಸಾವಿತ್ರಿ ಬಾ ಫುಲೆ ದಂಪತಿಗಳು ದಲಿತ ಮತ್ತು ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಬಿತ್ತಿದ ಕ್ರಾಂತಿಕಾರಿ ಬೀಜಗಳಿಂದಾಗಿ ಅಕ್ಷರದ ಅರಿವು ಭಾರತದಾದ್ಯಂತ ವ್ಯಾಪಿಸಲಾರಂಭಿಸಿತು. ಇವರ ನಂತರದಲ್ಲಿ 19ನೆಯ ಶತಮಾನದಲ್ಲಿ ಬಂದಂತಹ ದೂರದೃಷ್ಟಿಯ ಸಮಾಜ ಸುಧಾರಕ ಡಾ.ಬಿ.ಆರ್.ಅಂಬೇಡ್ಕರ್‌ರವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಸೂತ್ರವನ್ನಿಟ್ಟುಕೊಂಡು ದಲಿತರನ್ನೊಳಗೊಂಡು ಅಂಚಿಗೊತ್ತರಿಸಲ್ಪಟ್ಟ ಎಲ್ಲಾ ಸಮುದಾಯಗಳ ಬಿಡುಗಡೆಗಾಗಿ ಸಂವಿಧಾನಾತ್ಮಕ ಹೋರಾಟವನ್ನೇ ಪ್ರಾರಂಭಿಸುತ್ತಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ‘ಮೂಕನಾಯಕ’ ಪತ್ರಿಕೆ ಹಾಗೂ ‘ಬಹಿಷ್ಕೃತ ಹಿತಕಾರಿಣಿ ಸಭಾ’ ಮೂಲಕ ಜಾಗೃತಿ ಉಂಟು ಮಾಡುತ್ತಾ ಹೋಗಿದ್ದು- ದಲಿತ ಸಮುದಾಯದಲ್ಲಿ ಅರಿವನ್ನು ವ್ಯಾಪಕವಾಗಿ ಬೆಳೆಸಿತು.

   ಇವೆಲ್ಲವೂ ಕರ್ನಾಟಕದಲ್ಲಿಯೂ ನಿಧಾನವಾಗಿ ಕ್ರಾಂತಿಯ ಜ್ವಾಲೆಯನ್ನು ಹರಡುತ್ತದೆ. ತನ್ಮೂಲಕ 1974ರ ಸುಮಾರಿಗೆ ಪ್ರೊ..ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಕರ್ನಾಟಕ ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟಿಕೊಳ್ಳುತ್ತದೆ. ಅದು ನಾಡಿನಾದ್ಯಂತ ಸಮಾನತೆ, ಸ್ವಾತಂತ್ರ್ಯದ ಕಹಳೆಯನ್ನು ಮೊಳಗಿಸುತ್ತದೆ. ಇದೇ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲೂ ಕೂಡ ಚಂದ್ರಪ್ರಸಾದ್ ತ್ಯಾಗಿಯವರ ನೇತೃತ್ವದಲ್ಲಿ ಶೋಷಿತರೆಲ್ಲ ಒಂದಾಗಿ ಚಳವಳಿಯನ್ನು ಪ್ರಾರಂಭಿಸುತ್ತಾರೆ. ತ್ಯಾಗಿ ಹೋರಾಟಗಳ ಮೂಲಕ ದಲಿತ ಚಳವಳಿಯ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದರು. ಆ ಕಾಲಕ್ಕೆ ಶಿಕ್ಷಣ ಕಲಿತ ದಲಿತ ಸಮುದಾಯದಲ್ಲಿ ಒಂದು ಎಚ್ಚರ- ‘ಗುಲಾಮಗಿರಿಯನ್ನು ತೊರೆದು ನಾವೂ ಘನತೆಯಿಂದ ಬದುಕಬೇಕು’ ಎಂಬ ತೀವ್ರ ತುಡಿತ ಮೂಡಿರುತ್ತದೆ.

   ಆ ತುಡಿತಕ್ಕೆ ಕೆಲವಾರು ದಲಿತ ಮಹಿಳೆಯರು ಕೂಡ ಜೊತೆಯಾಗುತ್ತಾರೆ. ತಾವು ಇದ್ದಲ್ಲಿಯೇ ಮೇಲ್ಜಾತಿಯವರ ಶೋಷಣೆಯನ್ನು ವಿರೋಧಿಸುತ್ತಾ, ದಬ್ಬಾಳಿಕೆಗಳನ್ನು ಪ್ರತಿರೋಧಿಸುತ್ತಾ, ಚಳವಳಿಯಲ್ಲಿ ಭಾಗವಹಿಸುವುದು ಸಣ್ಣಮಟ್ಟದಲ್ಲಿ ಪ್ರಾರಂಭವಾಗುತ್ತದೆ. ಇದಕ್ಕೆ ಪೂರಕವಾಗಿ ಶೋಷಿತರ ಬಿಡುಗಡೆಯ ರೊಚ್ಚಿನ, ಕೆಚ್ಚಿನ ಹಾಡುಗಳು ಎಲ್ಲೆಡೆ ಮೊಳಗುತ್ತವೆ. ಅದಾಗಲೇ ಅನೇಕ ಬಗೆಯ ಮಂಟೇಸ್ವಾಮಿ ಪದ, ಜಾನಪದ ಹಾಡು, ತತ್ವಪದಗಳು, ಸೋಬಾನೆ ಪದಗಳನ್ನು ಹಾಡುವುದರಲ್ಲಿ ಸೈ ಎನಿಸಿಕೊಂಡಿದ್ದ ದಲಿತ ಹಿರಿಯ ಮಹಿಳೆಯರು- ಕ್ರಾಂತಿ ಗೀತೆಗಳನ್ನು, ಎಚ್ಚರದ ಹಾಡುಗಳನ್ನೂ ಉತ್ಸಾಹ ಮತ್ತು ಆವೇಶದಿಂದ ವೇದಿಕೆಗಳಲ್ಲಿ ಹಾಡಲು ಪ್ರಾರಂಭಿಸುತ್ತಾರೆ. ಅದು ಎಲ್ಲರನ್ನೂ ಬಡಿದೆಬ್ಬಿಸುತ್ತದೆ. ಸ್ವತಃ ಹೆಣ್ಣುಮಕ್ಕಳಲ್ಲೂ ಸಾರ್ಥಕ ಭಾವ ಮೂಡುತ್ತದೆ. ಅಂತಹದ್ದೊಂದು ಕ್ರಾಂತಿ ಶಕ್ತಿಯಾಗಿ ಚಳವಳಿಯುದ್ದಕ್ಕೂ ಹಾಡುಗಳು ಕೆಲಸ ಮಾಡಿವೆ. ಅದಕ್ಕೆ ಸಶಕ್ತ ದನಿಯಾಗಿದ್ದು ಮಹಿಳೆಯರು. ಜೊತೆಜೊತೆಗೆ ಪುರುಷರೂ. ಹೆಣ್ಣಮಕ್ಕಳನ್ನು ಹೊರತುಪಡಿಸಿ ದಲಿತ ಚಳುವಳಿಯ ಬೆಳವಣಿಗೆಯನ್ನು ದಾಖಲಿಸಲು ಸಾಧ್ಯವೇ ಇಲ್ಲವೆನ್ನುವುದು ನಿರ್ವಿವಾದ.

   ಜಿಲ್ಲೆಯ ಬಾಳ್ಳುಪೇಟೆ ಭೂ ಹೋರಾಟ, ಚನ್ನಂಗಿಹಳ್ಳಿ ಹೋರಾಟ, ನಾಯಕರಹಳ್ಳಿ ತಾಯಮ್ಮನ ಸಾವಿನ ವಿರುದ್ಧ ನಡೆದ ಹೋರಾಟ ಜಿಲ್ಲೆಯಲ್ಲಿ ದಲಿತ ಚಳವಳಿಯ ಹುಟ್ಟಿಗೆ, ಹೋರಾಟ ತೀವ್ರತೆ ಪಡೆಯಲು ಕಾರಣವಾದವು. ಸಮಾನತೆಯ ಆಶಯ ಇಟ್ಟುಕೊಂಡು ಕೇವಲ ದಲಿತರು ಮಾತ್ರವೇ ಅಂದು ಹೋರಾಟ ಮಾಡಲಿಲ್ಲ. ಆ ಕಾಲಕ್ಕೆ ದಲಿತರ ಹೋರಾಟಗಳಿಗೆ ಬೆನ್ನಿಗೆ ನಿಂತ ದಲಿತೇತರ ಪ್ರಗತಿಪರರನ್ನು ಮರೆಯುವಂತಿಲ್ಲ. ಬಾಳ್ಳುಪೇಟೆ ಭೂ ಹೋರಾಟದಲ್ಲಿ ಚಿತ್ರಕಲಾವಿದರಾದ ಕೆ.ಟಿ.ಶಿವಪ್ರಸಾದ್, ರೈತ ಮುಖಂಡ ಮಂಜುನಾಥ ದತ್ತ, ಜನತಾಮಾಧ್ಯಮ ಸಂಪಾದಕರಾಗಿದ್ದ ಆರ್.ಪಿ.ವೆಂಕಟೇಶ್‍ಮೂರ್ತಿ, ಚಿಂತಕ ಜ.ಹೊ.ನಾರಾಯಣಸ್ವಾಮಿ… ಮುಂತಾದವರು ಬೆನ್ನಿಗೆ ನಿಂತಿದ್ದರು. ಅದು ದಲಿತ ಹೋರಾಟಗಳನ್ನು ಇನ್ನಷ್ಟು ಗಟ್ಟಿಯಾಗಿಸಿತ್ತು. ಇಂತಹ ದಲಿತ ಚಳವಳಿಯ ಹೋರಾಟಗಳ ಪರಿಣಾಮವೇ ದಲಿತರಿಗೆ ಶಿಕ್ಷಣ, ಸ್ವಾಭಿಮಾನದ ಬದುಕು, ದಬ್ಬಾಳಿಕೆ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಲು ಕಾರಣವಾಯ್ತು. ಯಡಕೇರಿ ಭೂ ಹೋರಾಟದಲ್ಲಿ ದಲಿತರಿಗೂ ಸವರ್ಣಿಯರಿಗೂ ದೊಡ್ಡ ಗಲಾಟೆಯೇ ಆದಾಗಲೂ ಹಾಸನದ ಪ್ರಗತಿಪರರು ದಲಿತರ ಬೆನ್ನಿಗೆ ನಿಂತಿದ್ದರು.

    ಹಾಸನ ತಾಲ್ಲೂಕಿನ ಚನ್ನಂಗಿಹಳ್ಳಿಯ ಭೂಹೋರಾಟ ಚರಿತ್ರೆಯಲ್ಲಿ ದಾಖಲಾರ್ಹವಾದದ್ದು. ಸರ್ಕಾರ ಗ್ರಾಮದ ದಲಿತರಿಗೆ ತಲಾ 4 ಎಕರೆ ಭೂಮಿಯನ್ನು ಮಂಜೂರು ಮಾಡಿ ಹಂಚಿದಾಗ, ದಲಿತರು ಮೇಲ್ಜಾತಿಯವರಿಗೆ ಸಮನಾಗಿ ಭೂಮಿ ಹೊಂದುತ್ತಾರೆ ಎಂದು ಆ ಊರಿನ ಮೇಲ್ಜಾತಿಯವರೆಲ್ಲ ಇದ್ದ 23 ದಲಿತ ಮನೆಗಳನ್ನು ನಾಶ ಮಾಡಿ, ಕೊನೆಗೆ ಊರು ಬಿಡಿಸಿದರು. ಈ ವಿಚಾರ ಜಿಲ್ಲೆಯ ದಲಿತ ಮುಖಂಡರಿಗೆ ತಿಳಿದು ದೊಡ್ಡ ಹೋರಾಟ ನಡೆಯಿತು. ಕೊನೆಗೂ ಭೂಮಿ ಉಳಿಸಿಕೊಳ್ಳುವಲ್ಲಿ ದಲಿತರು ಸಫಲರಾದರು. ಇದು ಸಾಧ್ಯವಾಗಿದ್ದು ದಲಿತ ಚಳವಳಿ ಸಶಕ್ತವಾಗಿದ್ದರಿಂದ. ದುದ್ದ ಹೋಬಳಿ ಕಮ್ಮರಿಗೆ ಗ್ರಾಮದಲ್ಲಿ ದಲಿತರು ಕುಲವಾಡಿಕೆ ಮಾಡಲಿಲ್ಲ ಎಂಬ ಕಾರಣಕ್ಕೆ 22 ಮನೆಗಳನ್ನು ಜಖಂ ಮಾಡಿದರು. ಶಂಬಯ್ಯ ಎಂಬ ಉಪಾಧ್ಯಾಯರ ಕಾಲು ಮುರಿದು ಹಾಕಿದರು. ದಲಿತರ ರಾಗಿ ಮೆದೆ ಸುಟ್ಟರು. ಇಡೀ ಊರಿಗೆ ಊರೇ ಪ್ರತಿಭಟನೆಗೆ ನಿಂತಿತು. ಇಲ್ಲಿನ ದಲಿತರು ಗಾಡಿ ಸಮೇತ ಮನೆಯಲಿದ್ದ ಕುರಿ, ಕೋಳಿ, ಹಾಸಿಗೆ ಹೊದಿಕೆಗಳನ್ನು ತೆಗೆದುಕೊಂಡು ಬಂದು ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಹಂತಹಂತವಾಗಿ ಗೆದ್ದರು. ಇವೆಲ್ಲವೂ ದಾಖಲಾಗಬೇಕಾದ ಹಾಸನದ ದಲಿತ ಚಳವಳಿಯ ಇತಿಹಾಸ.

   ಹಾಸನ ಜಿಲ್ಲೆಯ ದಲಿತ ಸಂಘರ್ಷ ಸಮಿತಿಯ ಈ ಎಲ್ಲ ಚಳವಳಿ, ಸಂಘಟನೆಯಲ್ಲಿ, ಕೆಲಸಗಳಲ್ಲಿ ಭಾಗಿಯಾದ ಅಂದಿನ ತಲೆಮಾರಿನ ಕೆಲವು ಮಹಿಳೆಯರನ್ನು ಮಾತ್ರ ಇಲ್ಲಿ ಪರಿಚಯಿಸಲಾಗುತ್ತಿದೆ. ಅವರಲ್ಲಿ ಮುಖ್ಯವಾದ ಒಬ್ಬರು- ಅರಸೀಕೆರೆಯ ಗಂಗಮ್ಮ ಎಂಬುವವರು. ಇವರ ಪತಿ ಕೆಂಪಯ್ಯ ರೈತ ಹೋರಾಟಗಾರರಾಗಿದ್ದರಿಂದ ಅವರ ಹೋರಾಟಗಳನ್ನು ನೋಡಿ ಇವರು ಕೂಡ ಪ್ರೇರೇಪಿತರಾಗುತ್ತಾರೆ. ಅವರು ತಮ್ಮ ಸಮುದಾಯಕ್ಕೆ 1980–85ರ ಅವಧಿಯಲ್ಲಿ ಏನಾದರೂ ಬದಲಾವಣೆಯನ್ನು ತರಬೇಕು, ಶೋಷಣೆ ಮುಕ್ತ ಬದುಕಿನ ಹೊಸತನ ಕೊಡಬೇಕೆಂಬ ಹುಮ್ಮಸ್ಸಿನಿಂದ ದಲಿತ ಸಂಘರ್ಷ ಸಮಿತಿಗೆ ಸೇರಿಕೊಳ್ಳುತ್ತಾರೆ.

   ಅಷ್ಟೇ ಅಲ್ಲ, ಕಾರ್ಯಕ್ರಮಗಳ ಸಂದರ್ಭಗಳಲ್ಲಿ ತಾವು ಮಾತ್ರ ಭಾಗವಹಿಸದೆ, ಸಮಿತಿಯವರು ಕರೆಕೊಟ್ಟಾಗ, ಯಾವುದೇ ಪ್ರತಿಭಟನೆ, ಹೋರಾಟ, ಕಾರ್ಯಕ್ರಮ, ಜಾಗೃತಿ ಶಿಬಿರಗಳಿಗೆ ತಮ್ಮೊಟ್ಟಿಗೆ ನಾಲ್ಕಾರು ಜನ ಆಸಕ್ತ, ಹೋರಾಟದ ಮನೋಭಾವವುಳ್ಳ ಮಹಿಳೆಯರನ್ನು ಕರೆದುಕೊಂಡು ಹೋಗುವುದರ ಮೂಲಕ, ಸಮುದಾಯ ಎದುರಿಸುತ್ತಿದ್ದ ಅನ್ಯಾಯದ ವಿರುದ್ಧ ಮಹಿಳೆಯರಾಗಿ ತಾವೂ ಕೂಡ ಧ್ವನಿ ಎತ್ತುತ್ತಾರೆ. ಆಕೆ ಅನಕ್ಷರಸ್ಥೆಯಾಗಿದ್ದರೂ- ಬಡತನ ಮತ್ತು ನೋವುಗಳನ್ನು ಮೆಟ್ಟಿ ನಿಂತು, ಮುಂದಿನ ಪೀಳಿಗೆಗಳು ಈ ರೀತಿಯ ಶೋಷಣೆಯನ್ನು ಅನುಭವಿಸಬಾರದು ಎಂದು ತೀರ್ಮಾನಿಸಿದ್ದರು. “ನಾವು ಒಗ್ಗೂಡಿ ಈಗಲೇ ಈ ದೌರ್ಜನ್ಯಕ್ಕೊಂದು ಅಂತ್ಯ ಹಾಡಬೇಕು” ಎಂಬ ಮನಸ್ಥಿತಿಯೊಂದಿಗೆ ದಲಿತ ಸಂಘರ್ಷ ಸಮಿತಿಯ ಚಳುವಳಿಗಳ ಮೂಲಕ ಹೊಸ ಧೈರ್ಯವನ್ನು ಆ ಕಾಲದಲ್ಲಿ ಕೆಲ ಮಹಿಳೆಯರು ಪಡೆದುಕೊಳ್ಳುತ್ತಾರೆ. ಅದರಲ್ಲಿ ಗಂಗಮ್ಮ ಒಬ್ಬರು.

“ಕರ್ನಾಟಕ ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ”ವು ಜನಪರ, ಮಹಿಳಾಪರ ಸಂಘಟನೆಗಳ ಜಾಲವಾಗಿದ್ದು ಕಳೆದ ಹದಿಮೂರು ವರ್ಷಗಳಿಂದ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜಾಥಾ, ಸಮಾವೇಶ, ಜಾಗೃತಿ ಕಾರ್ಯಕ್ರಮ ನಡೆಸುವುದರೊಂದಿಗೆ ಜನಪರ ಹೋರಾಟಗಳಲ್ಲಿ ಸಹಭಾಗಿತ್ವ ನೀಡುತ್ತಾ ಬಂದಿದೆ. ‌ತನ್ನ 14 ನೆಯ ಸಮಾವೇಶವನ್ನು ಹಾಸನದಲ್ಲಿ ನಡೆಸಲಿದ್ದು ಈ ಹಿನ್ನೆಲೆಯಲ್ಲಿ “ಹಾಸನ ಮಣ್ಣಿನ ಹೆಣ್ಣು ಬೇರುಗಳು” ಎಂಬ ಪುಸ್ತಕವನ್ನು ಹೊರತರುತ್ತಿದೆ. ಹಾಸನ ಜಿಲ್ಲೆಯ ಹೆಣ್ಣುಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೇ ಕೆಲಸ ಮಾಡುತ್ತಾ, ತಮ್ಮ ಛಾಪು ಮೂಡಿಸುತ್ತ, ಕೊಡುಗೆ ನೀಡುತ್ತಾ, ಸಾಧಿಸುತ್ತಾ ಹೋಗಿದ್ದಾರೆ. ಅವರ ಕುರಿತು ಒಂದು ಪುಟ್ಟ ದಾಖಲೀಕರಣ ಮಾಡುವ ಪ್ರಯತ್ನ ಇದಾಗಿದೆ.

    ಆ ಸಂದರ್ಭದಲ್ಲಿ ಧೈರ್ಯವಾಗಿ ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಮಹಿಳೆಯರೇ ಬೆರಳೆಣಿಕೆಯಷ್ಟಿದ್ದರು. ಗಂಗಮ್ಮ ತಮ್ಮ ಮುಂದಾಳತ್ವದಲ್ಲಿ ಸಮುದಾಯ ಎದುರಿಸುತ್ತಿರುವ ಶೋಷಣೆಯನ್ನು ಮೆಟ್ಟಿ ನಿಲ್ಲಲು ಇತರ ಮಹಿಳೆಯರನ್ನೂ ಒಳಗೊಳ್ಳಲು ಪ್ರಾರಂಭಿಸಿದ್ದು ಒಳ್ಳೆಯ ಬೆಳವಣಿಗೆಯಾಗಿತ್ತು. ಇವರೆಲ್ಲರೂ ಒಗ್ಗೂಡಿ, ತಮ್ಮ ಸೀಮಿತ ಪರಿಧಿಯಲ್ಲಿ ಕೈಲಾದ ಹೋರಾಟವನ್ನು ಮಾಡುವ ಮೂಲಕ, ತಮ್ಮ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲೇಬೇಕು ಎಂಬ ಗಟ್ಟಿ ನಿರ್ಧಾರವನ್ನು ತೆಗೆದುಕೊಂಡು ಎಚ್ಚರದ ಹೋರಾಟಕ್ಕೆ ಧುಮುಕುತ್ತಾರೆ. ತಾವು ಪಡೆದ ಹೊಸ ಅರಿವಿನ ಪಾಠಗಳನ್ನು ಇತರ ಮಹಿಳೆಯರಿಗೆ ಹೇಳಿಕೊಡುತ್ತಾರೆ. ಇದೇ ಅಲ್ಲವೇ ಆಗಬೇಕಾದ್ದು? ಹೆಣ್ಣೊಬ್ಬಳು ಕಲಿತರೆ, ಅದನ್ನು ಮತ್ತೊಬ್ಬರಿಗೆ ಕಲಿಸಿದರೆ- ಅದು ತಲೆಮಾರುಗಳನ್ನು ಪ್ರಭಾವಿಸುತ್ತದೆ, ಬದಲಿಸುತ್ತದೆ! 4-5 ದಶಕಗಳ ನಂತರ ಈಗಿನ ದಲಿತ ಸಮುದಾಯದ ಹೆಣ್ಣುಮಕ್ಕಳು ಸಾಮಾಜಿಕವಾಗಿ ಎಲ್ಲ ಕ್ಷೇತ್ರಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುತ್ತಿರುವುದನ್ನು ನೋಡಿದರೆ, ಬದಲಾವಣೆ ಸ್ಪಷ್ಟವಾಗಿ ಗೋಚರಿಸುತ್ತದೆ.

    ಹಾಗೆಯೇ ದಲಿತ ಸಂಘರ್ಷ ಸಮಿತಿಯ ಹೋರಾಟಗಳಲ್ಲಿ ಭಾಗವಹಿಸಿದ್ದ ಜಿಲ್ಲೆಯ ಮತ್ತೊಬ್ಬ ಮಹಿಳೆ ಹಾಸನ ತಾಲೂಕಿನ ಭೂವನಹಳ್ಳಿ ಗ್ರಾಮದ ರಂಗಮ್ಮ. ಅವರು ಅತ್ಯಂತ ಧೈರ್ಯಶಾಲಿ ಹೋರಾಟಗಾರ್ತಿಯು ಕೂಡ ಆಗಿದ್ದರು. ಚಳುವಳಿ ಅವರನ್ನು ಹಾಗೆ ರೂಪಿಸಿತು! ಗ್ರಾಮ ದೇವತೆಯಾದ ದೇವಿರಮ್ಮನ ಜಾತ್ರೆ ಪ್ರತಿ ವರ್ಷವೂ ನಡೆಯುತ್ತಿತ್ತು. ಹಿಂದಿನ ಕಾಲದಲ್ಲಿ ಗ್ರಾಮ ದೇವತೆಗಳ ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜೀತಪದ್ಧತಿಯ ಸ್ವರೂಪ ಪಡೆದಿದ್ದ ಒಂದು ಪದ್ಧತಿ ಆಚರಣೆಯಲ್ಲಿ ಇತ್ತು. ಅದೇ ‘ಕುಲವಾಡಿಕೆ’ ಕಾಯಕ. ಈ ಕೆಲಸವನ್ನು ಹಿಂದಿನಿಂದಲೂ ಕೆಲವು ದಲಿತ ಮನೆತನಗಳು ಮಾತ್ರ ಮಾಡುತ್ತಾ ಬಂದಿದ್ದು, ಅದರಲ್ಲಿ ರಂಗಮ್ಮನ ಕುಟುಂಬವೂ ಒಂದಾಗಿತ್ತು. ಆದರೆ 1980ರ ದಶಕದಲ್ಲಿ ರಂಗಮ್ಮ- ‘ಈ ಕಾಯಕವನ್ನು ನಾವು ಮಾಡುವುದಿಲ್ಲ’ ಎಂದು ಊರಿನ ಮೇಲ್ಜಾತಿ ಮುಖಂಡರ ಬಳಿ ಹೇಳುತ್ತಾರೆ. ಇದನ್ನು ಒಪ್ಪಿಕೊಳ್ಳದ ಗೌಡಾಳ್ವಿಕೆಯಲ್ಲಿದ್ದ ಊರಿನ ಪ್ರಮುಖರು, ‘ನೀವು ಈ ಕಾಯಕ ಮಾಡಲೇಬೇಕು’ ಎಂಬ ಕಟ್ಟಪ್ಪಣೆಯನ್ನು ವಿಧಿಸುತ್ತಾರೆ. ಆ ಸಂದರ್ಭದಲ್ಲಿ ಅನೇಕ ಸಂಘರ್ಷಗಳು ಉಂಟಾಗುತ್ತವೆ. ರಂಗಮ್ಮನ ಕುಟುಂಬದವರ ಮೇಲೆ ಹಲ್ಲೆಗಳು ಕೂಡ ನಡೆಯುತ್ತವೆ. ಆ ಊರಿನ ಗೌಡರ ಕ್ರೂರ ಪರಿಣಾಮಗಳನ್ನು ಇವರು ಮತ್ತು ಕುಟುಂಬ ಎದುರಿಸುತ್ತಾರೆ. ರಂಗಮ್ಮ ಒಬ್ಬ ನಾಯಕಿಯ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿ ಆ ಕ್ರೂರತೆಯ ವಿರುದ್ಧ ಆಕ್ರೋಶಭರಿತರಾಗಿ ಪ್ರತಿರೋಧವನ್ನು ಒಡ್ಡಿ, ಸಾಹಸವನ್ನೇ ಮಾಡುತ್ತಾರೆ. ನಂತರ 1983ರಲ್ಲಿ ಅವರು ದಲಿತ ಸಂಘರ್ಷ ಸಮಿತಿಯ ಚಳವಳಿಗೆ ನೇರವಾಗಿ ಧುಮುಕಿ, ಆತ್ಮವಿಶ್ವಾಸದಿಂದ ಕಾರ್ಯ ನಿರ್ವಹಿಸಲಾರಂಭಿಸುತ್ತಾರೆ.

ಇದನ್ನೂ ಓದಿ- ವಸು ಮಳಲಿ; ಪೂರ್ಣ ಅರಳುವ ಮುನ್ನವೇ ಉದುರಿಬಿದ್ದ ಮೊಗ್ಗು

     ಜಿಲ್ಲೆಯ ದಲಿತ ಸಂಘರ್ಷ ಸಮಿತಿಯಲ್ಲಿ ಆ ಕಾಲಕ್ಕೆ ಸಮರ್ಥವಾಗಿ ಕಾರ್ಯ ನಿರ್ವಹಿಸಿ, ತಮ್ಮ ಛಾಪು ಮೂಡಿಸಿದವರಲ್ಲಿ ಮತ್ತೋರ್ವ ಪ್ರಮುಖರು- ಪ್ರಮೀಳಾ ಕೊಟ್ಟೂರು. ಇವರು ಪದವಿಪೂರ್ವ ಕಾಲೇಜಿನ ಸಮಾಜ ವಿಜ್ಞಾನದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. ಇವರ ಪತಿ ಕೊಟ್ಟೂರು ಶ್ರೀನಿವಾಸ್- ರೈತ ಚಳವಳಿ ಹಾಗೂ ದಲಿತ ಸಂಘರ್ಷ ಸಮಿತಿಯ ಚಳವಳಿಗಳಲ್ಲಿ ಮುಖಂಡರಾಗಿ ಗುರ್ತಿಸಿಕೊಂಡಿದ್ದವರು. 1993-94ರ ಅವಧಿಯಲ್ಲಿ ಚಂದ್ರಪ್ರಸಾದ್ ತ್ಯಾಗಿ ಅವರ ಜೊತೆಗೂಡಿ ಗಂಗೂರು ಜೀತ ಪದ್ಧತಿಯ ಹೋರಾಟದಲ್ಲಿ ದಂಪತಿಗಳಿಬ್ಬರೂ ಭಾಗಿಯಾಗಿದ್ದರು. ಬಹುಶಃ ದಲಿತ ಸಂಘರ್ಷ ಸಮಿತಿಯ ಇತಿಹಾಸದಲ್ಲೇ ಹೀಗೆ ಪತಿ-ಪತ್ನಿ ಒಟ್ಟಾಗಿ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದು ಅಪರೂಪದಲ್ಲಿ ಅಪರೂಪ. ಗಂಗೂರು ಹೋರಾಟ ಅತ್ಯಂತ ರೋಚಕ ಇತಿಹಾಸವನ್ನು ಸೃಷ್ಟಿಸಿತ್ತು. ಆ ಚರಿತ್ರಾರ್ಹ ಹೋರಾಟದಲ್ಲಿ ಈ ದಿಟ್ಟ ಮಹಿಳೆ ಪ್ರಮೀಳಾ ಅವರ ಪಾತ್ರ ತುಂಬಾ ಮುಖ್ಯವಾಗಿತ್ತು. ದಲಿತ ಸಂಘರ್ಷ ಸಮಿತಿಯ ಸಮಾವೇಶಗಳಲ್ಲಿ ಐಕ್ಯತೆಯನ್ನು ತರುವ ಮೂಲಕ ಜಿಲ್ಲೆಯಲ್ಲಿ ಒಂದು ಹೊಸ ಇತಿಹಾಸವನ್ನು ಸೃಷ್ಟಿಸುವ ಸಂದರ್ಭದಲ್ಲಿ ಪ್ರಮೀಳಾ ಕೊಟ್ಟೂರು ಅತ್ಯಂತ ಉತ್ಸಾಹದಿಂದ, ದಿಟ್ಟತನದಿಂದ ಮಹಿಳೆಯರನ್ನು ಈ ಹೋರಾಟಕ್ಕೆ ಸೇರ್ಪಡೆ ಮಾಡಿದರು. ಒಬ್ಬ ಸಮರ್ಥ ಮುಖಂಡೆಯಾಗಿ ಪ್ರಮೀಳಾ- ಸಮಿತಿಯ ಒಳಹಂತದ ಯೋಜನೆ, ಚರ್ಚೆ, ಕೆಲಸ ಹಂಚಿಕೆಗಳಲ್ಲಿ ದಿಟ್ಟವಾಗಿ, ಪುರುಷರಿಗೆ ಸಮಾನವಾಗಿ ತೊಡಗಿಕೊಂಡರು. ಇದು ಅಂದಿಗೂ, ಇಂದಿಗೂ ಮಹತ್ವದ ವಿಷಯವಾಗಿದೆ.

   ಅದರ ಜೊತೆಗೆ ಕರ್ನಾಟಕದಲ್ಲಿ, ಹಾಸನದಲ್ಲಿ ಪ್ರಮೀಳಾ ಅವರ ದಲಿತ ಸಂಘರ್ಷ ಸಮಿತಿಯ ಪ್ರವೇಶ ಒಂದು ಇತಿಹಾಸವಾಗಿಯೂ ದಾಖಲಾಗಬೇಕಾಗುತ್ತದೆ. ಇದಕ್ಕೊಂದು ಚರಿತ್ರೆ ಇದೆ. ಪ್ರಮೀಳಾ ಅವರು ಆಂಧ್ರಪ್ರದೇಶ ಮೂಲದಿಂದ ಕರ್ನಾಟಕಕ್ಕೆ ವಲಸೆ ಬಂದಂತಹವರು. ಇವರು ಇಬ್ಬರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳೊಂದಿಗೆ ಒಬ್ಬರಾಗಿ ದಲಿತ ಕುಟುಂಬದಲ್ಲಿ ಜನಿಸಿದವರು. ಅವರೆಲ್ಲರೂ ಈಗ ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಪ್ರಮೀಳಾ ಅವರು 8ನೆಯ ತರಗತಿಯಲ್ಲಿ ಇದ್ದಾಗಲೇ ಮೂಢನಂಬಿಕೆಗಳನ್ನು ಪ್ರಶ್ನಿಸುವ ದಿಟ್ಟತನವನ್ನು ರೂಢಿಸಿಕೊಂಡಿರುತ್ತಾರೆ. 1986ರಲ್ಲಿ ಇವರು ಅಡಗೂರಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯವನ್ನು ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಅವರಿಗಾದ ಕೆಲವು ಅವಮಾನ, ಶೋಷಣೆಗಳು ಮತ್ತು ಮಾನಸಿಕ ಹಿಂಸೆಗಳು ಅವರನ್ನು ಮತ್ತಷ್ಟು ಪಕ್ವವಾಗಿಸಿತ್ತು, ದೃಢಗೊಳಿಸಿತ್ತು. ಅದೇ ಹೊತ್ತಿಗೆ ಹಾಸನದಲ್ಲಿ ದಲಿತ ಸಂಘರ್ಷ ಸಮಿತಿ ಕ್ರಿಯಾಶೀಲವಾದಾಗ ಪ್ರಮೀಳಾ ಅವರು ಸಮುದಾಯದ ಒಳಿತಿಗಾಗಿ, ಘನತೆಯ ಬದುಕಿಗಾಗಿ ಹೋರಾಟದ ಜೊತೆಗೆ ಸೇರಬೇಕೆಂದು ನಿರ್ಧರಿಸಿದರು. ಕುಟುಂಬ, ವೃತ್ತಿ ನಿರ್ವಹಿಸುತ್ತಲೇ ಚಳವಳಿಯೊಂದಿಗೆ ತೀವ್ರವಾಗಿ ಬೆಸೆದುಕೊಂಡದ್ದು ಅವರ ಗಟ್ಟಿ ನಿಲುವಿಗೆ ಸಾಕ್ಷಿಯಾಗಿದೆ.

   ಪ್ರಮೀಳಾ ಕೊಟ್ಟೂರವರು ಉಪನ್ಯಾಸಕಿಯಾಗಿ ಮಾತ್ರ ಕಾರ್ಯ ನಿರ್ವಹಿಸಲಿಲ್ಲ. ಅವಕಾಶ ಸಿಕ್ಕಾಗಲೆಲ್ಲಾ ಸಾಮಾಜಿಕ ಚಟುವಟಿಕೆಯಲ್ಲಿ, ಕೆಲಸಗಳಲ್ಲಿ ಅವಿರತ ತೊಡಗಿಕೊಂಡರು. ಚಳವಳಿ ತೀವ್ರವಾಗಿದ್ದ ಸಂದರ್ಭದಲ್ಲಿ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಗ್ರಾಮೀಣ ಜನರಿಗೆ ಹೋರಾಟದ, ಪ್ರತಿರೋಧದ ಬಗ್ಗೆ ಅರಿವು ಮೂಡಿಸುತ್ತಿದ್ದರು. ಮತ್ತೆ ಸಮುದಾಯದ ಜನರಲ್ಲಿ ಐಕ್ಯತೆಯನ್ನು ತರುವಲ್ಲಿ ಇವರ ಮಾತು, ಕೆಲಸಗಳು ಶ್ಲಾಘನೀಯವಾದುದು. ಇವೆಲ್ಲವುಗಳ ಜೊತೆಗೆ ತಮ್ಮ ಒಬ್ಬಳೇ ಮಗಳಿಗೆ ಮಂತ್ರ ಮಾಂಗಲ್ಯದ ಮೂಲಕ ಮದುವೆಯನ್ನು ಮಾಡುವುದರೊಂದಿಗೆ ಜನರಿಗೆ ಒಂದು ಹೊಸ ಸಂದೇಶವನ್ನು ಶ್ರೀನಿವಾಸ್ ಮತ್ತು ಪ್ರಮೀಳಾ ಕೊಟ್ಟೂರು ದಂಪತಿಗಳು ಕೊಟ್ಟಿದ್ದೂ ಶ್ಲಾಘನೀಯ. ಈ ದಂಪತಿಗಳು ಚಳವಳಿಯಲ್ಲಿ ಜೊತೆಜೊತೆಯಾಗಿ ಪಾತ್ರ ನಿರ್ವಹಿಸಿದ್ದು ಅವಿಸ್ಮರಣೀಯ.

ಇದನ್ನೂ ಓದಿ- ಹಾಸನ ಜಿಲ್ಲೆಯ ರೈತ ಚಳವಳಿಯಲ್ಲಿ ಸ್ತ್ರೀಶಕ್ತಿಯ ಹೆಜ್ಜೆಗುರುತುಗಳು

    ಕೆ.ಹೊಸಕೋಟೆಯ ಕಮಲಮ್ಮ ಅವರು ಈಗಲೂ ತಮ್ಮನ್ನು ದಲಿತ ಸಂಘಟನೆಗಳ ಮೂಲಕ ಗುರುತಿಸಿಕೊಳ್ಳುತ್ತಾರೆ. ಇವರು ಸುಮಾರು 20 ವರ್ಷಗಳಿಂದ ದಲಿತರ ಸಮಸ್ಯೆಗಳಿಗೆ ಕಿವಿಯಾಗಿದ್ದಾರೆ. ಇವರಿಗೆ ಏಳು ಮಕ್ಕಳು ಇದ್ದರು ಸಹ, ಸಮಾಜಮುಖಿಯಾಗಿ ಸಮುದಾಯದ ಜನರಿಗೆ ಏನಾದರೂ ಒಳ್ಳೆಯದನ್ನು ಮಾಡಲು ಆ ಕಾಲದಲ್ಲೇ ಮುಂದೆ ಬಂದಿದ್ದರು ಎಂದರೆ, ನಿಜವಾಗಿಯೂ ಇವರೊಬ್ಬ ದಿಟ್ಟ ಹೆಜ್ಜೆ ಇಟ್ಟ ಮಹಿಳೆಯೆ. ಇವರು ದಲಿತ ಸಂಘಟನಾ ಸಮಿತಿಯ ಜಿಲ್ಲಾಧ್ಯಕ್ಷರಾಗಿ ಅನ್ಯಾಯದ ವಿರುದ್ಧ ಹೋರಾಡಿದ್ದಾರೆ. ಆದರೆ ವೇದಿಕೆ ಮೇಲೆ ಮಾತನಾಡಿಲ್ಲ. ಏಕೆಂದರೆ ‘ನಾನು ಓದಿರುವುದು ಒಂಬತ್ತನೇ ತರಗತಿಯವರೆಗೆ, ಹಾಗಾಗಿ ನನಗೆ ತಿಳಿವಳಿಕೆ ಕಡಿಮೆ’ ಎಂದು ಭಾವಿಸಿದ್ದ ಕಮಲಮ್ಮ, ಈಗಲೂ ಚಳುವಳಿಯ ಜೊತೆಯಲ್ಲಿ ಅದೇ ಉತ್ಸಾಹದಲ್ಲಿದ್ದಾರೆ. ಸದ್ಯ ಹಾಸನದಲ್ಲಿ ನೆಲೆಸಿರುವ ಕಮಲಮ್ಮ ಅವರ ಈ ಮುಗ್ಧ ಮನಸ್ಸಿನ ಹಿಂದೆ ಅವರ ಪತಿ, ದಲಿತ ಚಳವಳಿಯ ಸಂಗಾತಿ ಕಂಡಕ್ಟರ್ ತಿಮ್ಮಯ್ಯ ಅವರ ಬೆಂಬಲವಿದೆ.

    ದಲಿತ ಚಳವಳಿಯಲ್ಲಿ ಆ ಕಾಲಕ್ಕೇ ಇಂತಹ ಇನ್ನೂ ಹಲವು ಮಹಿಳೆಯರು ತೊಡಗಿಕೊಂಡಿದ್ದಾರೆ. ಎಲ್ಲರನ್ನೂ ಇಲ್ಲಿ ದಾಖಲಿಸಲಾಗಿಲ್ಲ. ಈ ಕುರಿತು ಮುಂದೆ ಹೆಚ್ಚಿನ ಸಂಶೋಧನೆ, ಅಧ್ಯಯನಗಳೇ ನಡೆಯಬೇಕು. ಆದರೆ ಆ ಕೆಲವೇ ಕೆಲವು ದಲಿತ ಮಹಿಳೆಯರ ಹೋರಾಟದ ಫಲವಾಗಿ, ಹೆಚ್ಚಿನ ದಲಿತ ಹೆಣ್ಣುಮಕ್ಕಳು ಇಂದು ಶಿಕ್ಷಣ ಪಡೆದು, ಉದ್ಯೋಗ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವುದಲ್ಲದೆ ಸಹಸ್ರಾರು ಸಂಖ್ಯೆಯಲ್ಲಿ ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿಯು ಗುರುತಿಸಿಕೊಳ್ಳುತ್ತಿದ್ದಾರೆ. ದಲಿತ ಮಹಿಳೆಯರು ಹಾಸನವನ್ನೂ ಒಳಗೊಂಡು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ತಮ್ಮದೆ ಆದ ಕೊಡುಗೆಗಳನ್ನು ಸಮಾಜಕ್ಕೆ, ಸಮುದಾಯಕ್ಕೆ ನೀಡುತ್ತಿದ್ದಾರೆ. ಇದು ಸಾಧ್ಯವಾಗಿದ್ದು ದಲಿತ ಸಂಘರ್ಷ ಸಮಿತಿಯಿಂದ! ಕಳೆದ ದಶಕಗಳಲ್ಲಿ ಹೆಣ್ಣುಮಕ್ಕಳು ದಿಟ್ಟವಾಗಿ ಚಳವಳಿ, ಹೋರಾಟಗಳಲ್ಲಿ ತೊಡಗಿಕೊಂಡಿದ್ದರಿಂದ, ಇಂದಿನ ಪೀಳಿಗೆಯ ಹೆಣ್ಣುಮಕ್ಕಳಿಗೆ ಹೊಸ ಅವಕಾಶಗಳು ಲಭ್ಯವಾಗುತ್ತಿವೆ. ಅವರನ್ನು ಸಾಮಾಜಿಕವಾಗಿ ಒಳಗೊಳಿಸಿಕೊಳ್ಳುವುದು ಹೆಚ್ಚಿದೆ. ಹೀಗೆಂದೇ ಅಂದಿನ ಇಂದಿನ ದಲಿತ ಚಳವಳಿಯ ಎಲ್ಲ ಧೀರ ಹೆಣ್ಣುಮಕ್ಕಳಿಗೆ ನಮನಗಳು.

ಡಾ.ಸೋಮಲತಾ.
ಇದನ್ನೂ ಓದಿ – ಸ್ತ್ರೀ ಆರೋಗ್ಯ ಸೇವೆಯ ಅನನ್ಯ ಮಾದರಿ- ಡಾ.ಪುಟ್ಟಮ್ಮ

More articles

Latest article

Most read