ಅದು ದರ್ಗಾ. ಹಿಂದೂ ಮುಸ್ಲಿಂ ಧರ್ಮೀಯರ ಆರಾಧನಾ ಸ್ಥಳ. ಅಕಸ್ಮಾತ್ ಮಸೀದಿಯಾಗಿದ್ದು, ಈ ಮತಾಂಧ ಕ್ರಿಯೆಗೆ ಮುಸ್ಲಿಂ ಯುವಕರು ಪ್ರತಿಕ್ರಿಯಿಸಿ ಕಲ್ಲೆಸದಿದ್ದರೆ ಏನಾಗುತ್ತಿತ್ತು? ಕರ್ನಾಟಕದಾದ್ಯಂತ ಸಂಘಿಗಳು “ಹಿಂದೂಗಳ ಮೇಲೆ ಹಲ್ಲೆ” ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಬಿಜೆಪಿಯ ಅಳಿದುಳಿದ ನಾಯಕರೆಲ್ಲಾ ಆ ಗ್ರಾಮಕ್ಕೆ ಓಡಿ ಬರುತ್ತಿದ್ದರು. ಮುಸಲ್ಮಾನರನ್ನು ಭಯೋತ್ಪಾದಕರು, ಆತಂಕವಾದಿಗಳು, ಪಾಕಿಸ್ಥಾನಿಗಳು, ದೇಶದ್ರೋಹಿಗಳು ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿತ್ತು – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈ ಸನಾತನಿ ಮತಾಂಧರ ಅಟ್ಟಹಾಸಕ್ಕೆ ಕೊನೆ ಮೊದಲಿಲ್ಲ. ದ್ವೇಷ ಪ್ರಚೋದನೆಯ ಕೃತ್ಯವನ್ನಂತೂ ಬಿಡುವುದಿಲ್ಲ. ಧಾರ್ಮಿಕ ಸಹಬಾಳ್ವೆ ಸಾಮರಸ್ಯಗಳನ್ನು ಕದಡಿ ಸಮಾಜದಲ್ಲಿ ಅಶಾಂತಿಯನ್ನು ಹುಟ್ಟಿಸುವ ಕಾಯಕವನ್ನು ತ್ಯಜಿಸುವ ಮಾತೇ ಇಲ್ಲ.
ಈಗ ಜನವರಿ 19 ರಂದು ಬೆಳಗಾವಿಯ ಮಚ್ಚೆ ಗ್ರಾಮದಲ್ಲಿ ಅಖಂಡ ಹಿಂದೂ ಸಮ್ಮೇಳನವನ್ನು ಸಂಘಿ ಪರಿವಾರ ಆಯೋಜಿಸಿತ್ತು. ಯಾವುದೋ ಸಭಾಂಗಣದಲ್ಲಿ ಸಮ್ಮೇಳನ ಮಾಡಿದ್ದರೆ ತಕರಾರಿರಲಿಲ್ಲ. ಆದರೆ ಯಾವಾಗ ಶೋಭಾಯಾತ್ರೆ ಹೆಸರಲ್ಲಿ ಮೆರವಣಿಗೆ ಮಾಡಿ ತಮ್ಮ ಮತಾಂಧತೆಯನ್ನು ಬಹಿರಂಗಗೊಳಿಸಿದರೋ ಆಗ ಸೌಹಾರ್ದತೆಗೆ ಧಕ್ಕೆ ಉಂಟಾಯಿತು. ಮಹಾರಾಷ್ಟ್ರದ ಉಗ್ರ ಹಿಂದುತ್ವವಾದಿ ನಾಯಕಿ ಹರ್ಷಿತಾ ಠಾಕೂರ ಎನ್ನುವ ಸನಾತನಿ ಯಾವಾಗ ಅನ್ಸಾರಿ ದರ್ಗಾವನ್ನು ಗುರಿಯಾಗಿಸಿ ಬಾಣ ಬಿಟ್ಟಂತೆ ತೋರಿಸಿದರೋ ಆಗ ಅಲ್ಲಿರುವ ಸಂಘಿ ಕಾರ್ಯಕರ್ತರ ಆವೇಶ ನೂರ್ಮಡಿ ಆಯ್ತು. ಇದೇ ಸನಾತನಿಯಮ್ಮ ಸಮ್ಮೇಳನದಲ್ಲೂ ಅನ್ಯ ಧರ್ಮೀಯರ ಬಗ್ಗೆ ಪ್ರಚೋದನಕಾರಿ ಭಾಷಣ ಮಾಡಿ ತಮ್ಮ ಮತಾಂಧತೆಯನ್ನು ಮೆರೆದಿದ್ದರು.
“ಹಿಂದೂಗಳು ಮುಸ್ಲಿಂ ಮಸೀದಿಗಳ ಮುಂದೆ ಮೆರವಣಿಗೆ ಮಾಡಬಾರದಾ, ಇದು ಹಿಂದೂಗಳ ದೇಶ ಅಲ್ವಾ, ಹಿಂದೂಗಳಿಗೆ ಮೆರವಣಿಗೆ ಮಾಡುವ ಸ್ವಾತಂತ್ರ್ಯವೂ ಇಲ್ವಾ” ಎಂದು ಸಂಘ ಪರಿವಾರದವರು ಪ್ರಶ್ನಿಸುತ್ತಲೇ ಇರುತ್ತಾರೆ. ಆದರೆ ಇವರು ಮಾಡುವ ಭಾಷಣ, ಮೆರವಣಿಗೆ ಇತ್ಯಾದಿಗಳು ಮತ್ತೊಂದು ಧರ್ಮದವರ ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಿರಬಾರದು. ಅನ್ಯ ಧರ್ಮೀಯರ ಪ್ರಾರ್ಥನಾ ಸ್ಥಳಗಳನ್ನು ಅವಮಾನಿಸುವಂತಿರ ಬಾರದು ಎನ್ನುವ ಕನಿಷ್ಟ ಪ್ರಜ್ಞೆಯೂ ಇಲ್ಲದ ಈ ಮತಾಂಧರನ್ನು ಪ್ರಚೋದಿಸುವುದೇ ಈ ಸನಾತನಿ ಹಿಂದುತ್ವವಾದಿಗಳ ಅಜೆಂಡಾ ಆಗಿದೆ ಎಂಬುದು ಹಲವಾರು ಸಂದರ್ಭದಲ್ಲಿ ಸಾಬೀತಾಗಿದೆ.

ಚೈತ್ರಾ ಕುಂದಾಪುರ ಎನ್ನುವ ಮಹಿಳೆ ಇದೇ ರೀತಿ ಮತಾಂಧತೆಯ ದ್ವೇಷ ಭಾಷಣ ಮಾಡಿ ಕರಾವಳಿ ಕರ್ನಾಟಕದಲ್ಲಿ ಕುಖ್ಯಾತಿ ಪಡೆದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅನೇಕ ಕೇಸು ಬಂಧನದ ನಂತರ ಆ ಸ್ವಘೋಷಿತ ಹಿಂದೂ ಮುಖಂಡೆ ಎಲ್ಲಾ ಬಿಟ್ಟು ರಿಯಾಲಿಟಿ ಶೋಗಳತ್ತ ಹೊರಟಿದ್ದು ಇತಿಹಾಸ. ಈಗ ಈ ಸಂಘಿಗಳು ಮಹಾರಾಷ್ಟ್ರದಿಂದ ಈ ದ್ವೇಷ ಭಾಷಣಕಾರ್ತಿಯಾದ ಹರ್ಷಿತಾ ಠಾಕೂರರನ್ನು ಆಮದು ಮಾಡಿಕೊಂಡಿದ್ದಾರೆ. ಆ ಕೇಸರಿ ವೀರವನಿತೆ ಮುಸ್ಲಿಂ ಧಾರ್ಮಿಕ ಭಾವನೆಗಳನ್ನು ಅವಮಾನಿಸಿ ದ್ವೇಷ ಭಾಷಣ ಮಾಡಿ ಸಂಘಿ ಕಾರ್ಯಕರ್ತರನ್ನು ಮುಸಲ್ಮಾನರ ವಿರುದ್ಧ ಪ್ರಚೋದಿಸಿದ್ದಾರೆ. ಶೋಭಾಯಾತ್ರೆಯ ಮೆರವಣಿಗೆಯಲ್ಲಿ ದರ್ಗಾಕ್ಕೆ ಬಾಣ ಬಿಡುವಂತೆ ಅಣಕವಾಡಿ ತಮ್ಮ ಮತಾಂಧತೆಯನ್ನು ಬಹಿರಂಗವಾಗಿಯೇ ಪ್ರದರ್ಶಿಸಿದ್ದಾರೆ.
ಅದು ದರ್ಗಾ. ಹಿಂದೂ ಮುಸ್ಲಿಂ ಧರ್ಮೀಯರ ಆರಾಧನಾ ಸ್ಥಳ. ಅಕಸ್ಮಾತ್ ಮಸೀದಿಯಾಗಿದ್ದು, ಈ ಮತಾಂಧ ಕ್ರಿಯೆಗೆ ಮುಸ್ಲಿಂ ಯುವಕರು ಪ್ರತಿಕ್ರಿಯಿಸಿ ಕಲ್ಲೆಸದಿದ್ದರೆ ಏನಾಗುತ್ತಿತ್ತು? ಕರ್ನಾಟಕದಾದ್ಯಂತ ಸಂಘಿಗಳು “ಹಿಂದೂಗಳ ಮೇಲೆ ಹಲ್ಲೆ” ಎಂದು ಬಾಯಿ ಬಡಿದುಕೊಳ್ಳುತ್ತಿದ್ದರು. ಬಿಜೆಪಿಯ ಅಳಿದುಳಿದ ನಾಯಕರೆಲ್ಲಾ ಆ ಗ್ರಾಮಕ್ಕೆ ಓಡಿ ಬರುತ್ತಿದ್ದರು. ಮುಸಲ್ಮಾನರನ್ನು ಭಯೋತ್ಪಾದಕರು, ಆತಂಕವಾದಿಗಳು, ಪಾಕಿಸ್ಥಾನಿಗಳು, ದೇಶದ್ರೋಹಿಗಳು ಎಂದೆಲ್ಲಾ ಅಪಪ್ರಚಾರ ಮಾಡಲಾಗುತ್ತಿತ್ತು. ಗೋದಿ ಮೀಡಿಯಾಗಳು ತಮ್ಮ ಅವ್ಯಕ್ತ ಮುಸ್ಲಿಂ ದ್ವೇಷವನ್ನು ಕಾರಿಕೊಳ್ಳುತ್ತಿದ್ದವು.
ಆದರೆ ಈ ಮತಾಂಧರ ಕ್ರಿಯೆಗೆ ಆ ಕಡೆಯಿಂದ ಪ್ರತಿಕ್ರಿಯೆ ಬರದೇ ಇರುವುದರಿಂದ ಸಂಘಿ ನಾಯಕರುಗಳಿಗೆ ನಿರಾಶೆಯಾದಂತಿದೆ. ಹಿಂದೂ ವಿರೋಧಿ ಸರಕಾರ ಎಂದು ಆರೋಪಿಸುವ ಅವಕಾಶವೊಂದು ತಪ್ಪಿಹೋಗಿದ್ದಕ್ಕೆ ಬೇಸರವಾದಂತಿದೆ.
ಆದರೆ ಕೂಡಲೇ ಎಚ್ಚೆತ್ತ ಪೊಲೀಸರು ದೂರು ದಾಖಲಿಸಿಕೊಂಡು ಕ್ರಮ ತೆಗೆದುಕೊಂಡಿದ್ದಾರೆ. ಸಮ್ಮೇಳನದ ಆಯೋಜಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ದ್ವೇಷೋತ್ಪಾದನೆ ಮಾಡಿ ಕೋಮುಪ್ರಚೋದನೆ ಮಾಡಿದ ಹರ್ಷಿತಾ ಠಾಕೂರರನ್ನು ಬಂಧಿಸದೇ ಬಿಟ್ಟಿದ್ದು ಈ ಸರಕಾರದ ಹೇಡಿತನವಾಗಿದೆ. ಬಂಧಿಸಿದರೆ ಎಲ್ಲಿ ಈ ಸಂಘ ಪರಿವಾರದವರು “ಹಿಂದೂ ವಿರೋಧಿ ಸರಕಾರ” ಎಂದು ಹುಯಿಲೆಬ್ಬಿಸುತ್ತಾರೋ, ಎಲ್ಲಿ ಗಲಭೆ ಹುಟ್ಟಿಸಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುತ್ತಾರೋ, ಎನ್ನುವ ಆತಂಕ ಈ ರಾಜ್ಯ ಸರಕಾರಕ್ಕಿದೆ. ಹೀಗಾಗಿ ಧರ್ಮದ್ವೇಷ ಭಾಷಣ ಮಾಡಿದ್ದರೂ ಉಗ್ರ ಕ್ರಮ ತೆಗೆದುಕೊಳ್ಳದೇ ಇರುವುದೇ ಈ ಕಾಂಗ್ರೆಸ್ ನೇತೃತ್ವದ ಸರಕಾರದ ಹಿಂಜರಿಕೆಯ ಧೋರಣೆಯಾಗಿದೆ. ಇದರಿಂದಾಗಿ ಏನು ಮಾಡಿದರೂ ನಡೆಯುತ್ತದೆ ಎಂಬ ಧೈರ್ಯವನ್ನು ಪಡೆದ ಹಿಂದುತ್ವವಾದಿ ಮತಾಂಧ ಶಕ್ತಿಗಳು ಇಂತಹ ಕೋಮು ಪ್ರಚೋದನೆಯ ಸಮ್ಮೇಳನ, ಶೋಭಾಯಾತ್ರೆ ಮೆರವಣಿಗೆಗಳನ್ನು ಮಾಡುತ್ತಲೇ ಇರುತ್ತಾರೆ. ಸಮಾಜದ ಧಾರ್ಮಿಕ ಸೌಹಾರ್ದತೆಯನ್ನು ನಾಶ ಮಾಡುವ ಪ್ರಯತ್ನ ಜಾರಿಯಲ್ಲಿಡುತ್ತಾರೆ. ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬೆಂಕಿ ಹಚ್ಚುತ್ತಲೇ ಇರುತ್ತಾರೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಕವನ | ಜಗವು ಕೂಡಲ ಸಂಗಮ


