ತಲೆ ತೋಳು ಹೊಟ್ಟೆ ಪಾದ
ಗಳನ್ನೆಲ್ಲ ಮುಟ್ಟಿ ಮುಟ್ಟಿ
ಹುಟ್ಟಿನ ಮೂಲಗಳನ್ನೆಲ್ಲ ಜಾಲಾಡಿ
ಜಗದ ನಿಯಮವೊಂದೆ ಎಂದೆ ಅಯ್ಯಾ!
“ಕುಲವನರಸುವರೆ ಶರಣರೊಳು
ಜಾತಿ ಸಂಕರವಾದ ಬಳಿಕ..”
‘ಶರಣ’ನೇ ಮನುಷ್ಯನೆಂದೆ ಅಯ್ಯಾ!
ನಂಬಿದರೋ… ನಂಬಲಿಲ್ಲವೋ?
“ಆನು ಮಾದಾರ ಚನ್ನಯ್ಯನ ಮನೆಯ ಮಗನೆಂದೆ”
ಬ್ರಹ್ಮಸೂತಕವ ಅಳಿದು
ಶರಣ ಸಂಕುಲವು
ತಲೆ ಎತ್ತಿ; ಕೊರಳೆತ್ತಿ ಹಾಡಿದರು ಅಣ್ಣಾ..
ಕುಲಮತವ ಭಂಜಿಸಿದ ಪರಿಗೆ
‘ಜಗವು ಕೂಡಲ ಸಂಗಮ!’
ಕುಲಜಾತಿಗಳಿಲ್ಲದ ‘ಸತಿಪತಿಗಳೊಂದಾದ
ಭಕ್ತಿ ಹಿತವಪ್ಪುವುದು ಶಿವಂಗೆ’ ಎಂದೆ
ಜಗವೇ ಮಾಯ!!..ಅಣ್ಣಾ..
ಕೂಡಲ ಸಂಗಮವೀಗ ಐಕ್ಯಸ್ಥಳದ ಕುರುಹು?
ಮೊನ್ನೆ ಹುಬ್ಬಳ್ಳಿಯಲ್ಲಿ..
ನಿನ್ನ ಮಹಾಮನೆಯ ಮಗಳು
ಅಕ್ಷರವ ತರಲು ಹೋಗಿ
ಪ್ರೀತಿ ಬೆಳಕ ಹೊತ್ತಳು
ಕನಸ ತುಂಬ ಹೆತ್ತಳು; ನಿನ್ನನ್ನೇ ಹೊತ್ತಳು
ಲಿಂಗವೇ ‘ಕೊಡಲಿ’ಯಾಗಿ
ಪರಶುರಾಮನ ‘ಪರುಶ’ವಾಗಿ..
ಮತ್ತದೇ ಕಲ್ಯಾಣ ಕ್ರಾಂತಿ ಅಣ್ಣಾ!!!
ಧರ್ಮದ ಹೊಟ್ಟೆಯಿಂದ
ಜಾತಿ ಅಷ್ಟೇ ಹುಟ್ಟುತ್ತದೆ..
ಬಲಿಯನಷ್ಟೇ ಬೇಡುತ್ತದೆ
ಕಲ್ಯಾಣವೀಗ ಹಸಿನೆತ್ತರಿನ ತಾಣ!
ನೆತ್ತರ ನೆಕ್ಕುವ ನಾಲಿಗೆಗೆ ಬರವೇ ಇಲ್ಲಾ!!
ಬಿರುಕು ಬಿಟ್ಟ ಮಹಾಮನೆ
ಯಲ್ಲಿ ಮಾದಾರ ಚನ್ನಯ್ಯನ ಮಕ್ಕಳು
ಬದುಕಿಗಾಗಿ ಹೋರಾಟ ನಡೆಸುತ್ತಲೇ ಇದ್ದಾರೆ..
ಬಯಲ ತುಂಬ
‘ದಯ’ ಬೆಳೆಯಲು
ಜಗವು ಕೂಡಲ ಸಂಗಮವಾಗಲು
ಜಂಗಮರು ಕಾಯುತ್ತಲೇ ಇದ್ದಾರೆ ಅಣ್ಣಾ!
ಜಗಜ್ಯೋತಿ ಬಸವಣ್ಣ..ನಮ್ಮಣ್ಣಾ…
ಅನಸೂಯ ಕಾಂಬಳೆ . ಇವರು ದಲಿತ ಮಹಿಳಾ ಸಂವೇದನೆಯ ಕನ್ನಡದ ಮುಖ್ಯ ಬರಹಗಾರ್ತಿಯರಲ್ಲಿ ಒಬ್ಬರು.
ಇದನ್ನೂ ಓದಿ- ಅದೊಂದು ದೊಡ್ಡ ಕಥೆ, ಆತ್ಮಕಥನ ಸರಣಿ- 14 |ಹೈಸ್ಕೂಲಿನ ಹಸಿರು ನೆನಪುಗಳು


