ಪುಸ್ತಕ ವಿಮರ್ಶೆ | ಕಾಲ ಕಟ್ಟಿದ ಕನಸು-ಒಂದು ನೋಟ

Most read

ತುಳು ವಿದ್ವಾಂಸರಾಗಿ  ನಿಜ ಅರ್ಥದಲ್ಲಿ ಕಾಯಕ ಜೀವಿಯಾಗಿ ತುಳುನಾಡಿನ ಭಾಷೆ, ಸಂಸ್ಕೃತಿಯ ಕಂಪು ಪಸರಿಸುವಲ್ಲಿ ಡಾ. ವಾಮನ ನಂದಾವರ ಸಲ್ಲಿಸಿದ ಸೇವೆ ಅವಿಸ್ಮರಣೀಯವಾದದ್ದು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಮದಿಪು  ಸಂಪಾದಕರಾಗಿ  ತುಳುವಿನಲ್ಲಿ ಆಗಷ್ಟೇ ಬರೆಯ ತೊಡಗಿದ್ದ ಒಂದಷ್ಟು ಎಳೆಯರನ್ನು  ತುಳು ಸಾಹಿತ್ಯ ಜಗತ್ತಿಗೆ ಕೈ ಹಿಡಿದು ಕರೆತಂದು ಮಣೆ ಹಾಕಿ ಮೆರೆಸಿದವರಲ್ಲಿ ಇವರು ಪ್ರಮುಖರು. ಈಗ ಅವರು ಇಲ್ಲದ ನಿರ್ವಾತವನ್ನು ತುಂಬುವ ಕಿರು ಪ್ರಯತ್ನವಾಗಿ ‘’ಕಾಲ ಕಟ್ಟಿದ ಕನಸು “ ಕೃತಿಯನ್ನು ಒಂದು ರೀತಿ ವ್ರತದಂತೆ ಬರೆದು ಸಾಂಸ್ಕೃತಿಕ ಲೋಕಕ್ಕೆ ಅರ್ಪಿಸಿದವರು ಸಾಹಿತಿ, ಸಂಘಟಕಿಯಾಗಿ ಸಾಹಿತ್ಯ ಸಾಂಸ್ಕೃತಿಕ  ಜಗತ್ತಿನಲ್ಲಿ ತನ್ನದೇ ಛಾಪು ಮೂಡಿಸಿರುವ ಡಾ. ವಾಮನ ನಂದಾವರ ಅವರ ಜೀವನ ಸಂಗಾತಿ ಚಂದ್ರಕಲಾ ನಂದಾವರ. ಕನ್ನಡ ಸಾಹಿತ್ಯ ಲೋಕಕ್ಕೆ ಅಪರೂಪವಾದ ಈ ಕೃತಿ ಒಂದು ರೀತಿಯಲ್ಲಿ ಬಹು ಜನ ಉಪಯೋಗಿ.

“ ಒಲ್ಲದ ಕನಸನ್ನು ಕಾಲವು ಅಪ್ಪನ ಬದುಕಿನೊಳಗೆ ನಮ್ಮ ಬದುಕಿನೊಳಗೆ ಕಟ್ಟಿ ಬಿಟ್ಟಿತು ಈ ಸಮಯದ ಜೊತೆ ಜಿದ್ದಿಗೆ ಬೀಳಲಾಗುವುದೇ “

ಈ ದಂಪತಿಗಳ ಮಗಳು ಹೇಮಾಳ ಮಾತಿದು. ಕನಸೋ ವಾಸ್ತವವೋ ಎನ್ನುವ ಸ್ಥಿತಿಯಲ್ಲಿ ಒಂದು ರೀತಿಯಲ್ಲಿ ಮಗುವಾಗಿ ಬದುಕಿದ ವಾಮನ ನಂದಾವರ ಅವರನ್ನು ಅವರಿದ್ದ ಸ್ಥಿತಿಯಲ್ಲಿ ಘನತೆಯಿಂದ ನಡೆಸಿಕೊಂಡ ಅವರ ಕುಟುಂಬಕ್ಕೆ ದೊಡ್ಡ ಶರಣು ಹೇಳಲೇಬೇಕು. ‘’ ಶರಣರ ಸಾವು ಮರಣದಲ್ಲಿ ಕಾಣು ‘’ಎನ್ನುವ ಮಾತಿದೆ. ಮನ ಶಾಸ್ತ್ರಜ್ಞೆ  ಡಾ. ಪವಿತ್ರ  ಈ  ಕೃತಿಯಲ್ಲಿ  ತನ್ನ  ಮಾತುಗಳಲ್ಲಿ  ಹೇಳಿರುವಂತೆ  ಕವಿ, ಭಾವ ಜೀವಿ, ಸಾಹಿತಿಯೂ ಆದ ಚಂದ್ರಕಲಾ ನಂದಾವರ ತನ್ನ  ಸಂಗಾತಿಯ ಜೊತೆ ಅವರ  ಅಸಹಾಯಕ ಸ್ಥಿತಿಯಲ್ಲಿ ಕೋಥೆರಪಿಸ್ಟ್ ಆಗಿ ಒಂದು ರೀತಿ ತಪಸ್ಸಿನಂತೆ ಕಳೆದ 5ವರುಷಗಳು ಬೆಲೆ ಕಟ್ಟಲಾಗದ್ದು. ಇದೀಗ ಅನುಭವದಿಂದ  ಅನುಭಾವದ ನೆಲೆಗೆ  ಮುಟ್ಟಿರುವ  ಅವರ  ಮನಸ್ಥಿತಿಯ  ಬಹಿರಂಗ ಸ್ವರೂಪ ‘ಕಾಲ ಕಟ್ಟಿದ ಕನಸು’  ಒಂದು ರೀತಿ ಸದಾ ಚಟುವಟಿಕೆಯಲ್ಲಿರುವ ವ್ಯಕ್ತಿತ್ವ ಗಡಿಯಾರದ  ಮುಳ್ಳಿನಂತೆ  ಬದುಕಿದ  ದಂಪತಿಗಳು  ಇವರು. ಅಮ್ಮ  ವಾಸ್ತವದೊಂದಿಗೆ ಮುಖಾಮುಖಿಯಾದ  ಬಗ್ಗೆ  ಮಗಳು  ಹೇಮಾ  ಹೇಳುವುದು  ಹೀಗೆ, “ಅಮ್ಮನ ಒಳಗಿನ ಗಟ್ಟಿತನ, ಆತ್ಮಸ್ಥೈರ್ಯ  ನಮ್ಮೆಲ್ಲರ ಬೆನ್ನು ತುಂಬಿದ  ಬೆಳಕು”

ಬದುಕು  ಬೇರೆ ಬರಹ  ಬೇರೆ ಅಲ್ಲ  ನಿಜ.  ಆದರೆ  ಬದುಕಿನ  ಕಠೋರ ವಾಸ್ತವಕ್ಕೆ  ಮುಖಾಮುಖಿ ಆಗುವ ಕ್ಷಣ, ನಂತರದ ಕ್ಷಣಗಣನೆ ಹುಟ್ಟಿಸುವ ಖಿನ್ನತೆ, ಆತಂಕ, ಅನಿಶ್ಚಿತತೆಯನ್ನು ಪತ್ನಿಯಾಗಿ ಚಂದ್ರಕಲಾ ನಂದಾವರ ನಿಭಾಯಿಸಿಕೊಂಡು ಬಂದ ರೀತಿ ಇತರರಿಗೆ ಮಾದರಿ ಆಗುವಂತಹದ್ದು.

“ನಾನು ನನ್ನಿಂದಲೇ ಎಂಬ ಅಹಂ ಹೆಚ್ಚಿದಾಗ ಸ್ಮಶಾನದಲ್ಲಿ ಸುತ್ತಾಡಿ ಬರಬೇಕಂತೆ. ಯಾಕೆಂದರೆ ನಾನು  ನನ್ನಿಂದಲೇ ಎಂದು  ಮೆರೆದವರೆಲ್ಲ  ಮಣ್ಣಾಗಿರುವುದು  ಅಲ್ಲೇ. “ಈ  ಕೃತಿಯ  ಓದು ನೀಡುವ ಅನುಭವ, ನಮ್ಮೊಳಗೆ  ಹುಟ್ಟಿಸುವ  ಶೂನ್ಯ ಭಾವ ಇದಕ್ಕೂ  ಮಿಗಿಲಾದದ್ದು. ನಮ್ಮ ಇಡೀ  ಬದುಕಿನ  ಲೆಕ್ಕಾಚಾರವನ್ನು  ಬುಡಮೇಲು ಮಾಡಬಲ್ಲ ಅನುಭವವನ್ನು ಜನೋಪಯೋಗಿ  ಅನ್ನುವ  ಮಾದರಿಯಲ್ಲಿ ಕೃತಿಯಾಗಿ ಕಟ್ಟುವ ಕೆಲಸ ಕಸೂತಿಯಂತೆ ಒಂದಷ್ಟು ತಾಳ್ಮೆ, ಶ್ರದ್ಧೆ, ಧ್ಯಾನಸ್ಥ  ಮನಸ್ಥಿತಿಯನ್ನು ಬಯಸುತ್ತದೆ. ಕುಟುಂಬ ವೈದ್ಯರಾದ  ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರ  ಮುನ್ನುಡಿ ಇಡೀ ಕೃತಿಗೆ  ಕಂಕಣದಂತೆ  ಅಧ್ಯಯನ  ಯೋಗ್ಯವಾಗಿದೆ.

ಕೃತಿಯ  ಲೇಖಕಿ  ತನ್ನ  ಅನುಭವವನ್ನು  ಸಾರ್ವತ್ರಿಕ ಗೊಳಿಸುವ  ರೀತಿ  ಒಂದು  ರೀತಿ  ವಿಶೇಷದ್ದು. ಭಾಗ ಒಂದರಲ್ಲಿ ಡಿಮೆನ್ಸಿಯಾ ಆಲ್‌ಝೈಮರ್‌ ಇತಿಹಾಸ, ವರ್ತಮಾನಗಳ ಕುರಿತಂತೆ ವ್ಯಾಪಕವಾದ ವಿವರಗಳಿವೆ.

ಭಾಗ ಎರಡರಲ್ಲಿ ಮತಿ ಮಾಂದ್ಯತೆ ಯ ಜೊತೆಗಿನ ಯಾನ ಅಂದರೆ ತಮ್ಮ ಪತಿ ಡಾ. ವಾಮನ  ನಂದಾವರ ಅವರನ್ನು ಆ ಮೂಲಕ ತಮ್ಮ ಇಡೀ ಕುಟುಂಬವನ್ನು ಕಾಡಿದ, ಕಣ್ಣು ಮುಚ್ಚಾಲೆ ಆಡಿಸಿದ ಈ ಕಾಯಿಲೆಯ ಬಗ್ಗೆ ವಿವರಗಳಿವೆ. ಈ ಕಾಲ ಘಟ್ಟದಲ್ಲಿ ಪತ್ನಿ ಚಂದ್ರಕಲಾ ಒಂದು ರೀತಿ ಸಂಶೋಧನೆಯಂತೆ ಬುದ್ಧಿ ಭಾವಗಳ ಜೊತೆ ಗುದ್ದಾಡಿದರು. ಗಂಡನ ಕಡತಗಳನ್ನು ಕೆದಕಿದರು. ಬದುಕು ಇದ್ದ ಸ್ಥಿತಿಯಲ್ಲಿ ನೇರ್ಪುಗೊಳಿಸಲು ಪ್ರಯತ್ನ ಪಟ್ಟರು. ಬಹುತೇಕ ಇದೇ ಸುಮಾರಿಗೆ ಎರಡು ಸಲ ಅಮೇರಿಕಾಗೆ ಮಗಳ ಮನೆಗೆ ಹೋದ ಅಲ್ಲಿನ ತಿರುಗಾಟದ ಅನುಭವಗಳ ಸಂಕ್ಷಿಪ್ತ ಚಿತ್ರಣವೂ ಇಲ್ಲಿದೆ.

ಉಸಿರಾಟ ಹೃದಯ ಬಡಿತದಂತೆ ಮೆದುಳಿನ ಕ್ರಿಯಾಶೀಲತೆ ಹುಟ್ಟಿದ ತಕ್ಷಣದಿಂದ ಪ್ರಾರಂಭವಾಗುತ್ತದೆ. ಚರ್ಮ ಸುಕ್ಕಾಗುವುದು ನಾವು ಸಾಧಾರಣವಾಗಿ ಕಾಣುತ್ತೇವೆ. ಮೆದುಳು ಸುಕ್ಕಾಗೋದು, ನರ ಕೋಶಗಳ ಸಿಕ್ಕುಗಟ್ಟುವಿಕೆ  ಈ ಪದಗಳು ಡಿಮೆನ್ಸಿಯಾ  ಆಲ್‌ಝೈಮರ್‌‌ ಕಾಯಿಲೆ ಅಂದರೆ ಏನು ಅನ್ನುವುದು ಎಲ್ಲರಿಗೂ ಸರಳವಾಗಿ ಅರ್ಥವಾಗಿಸುತ್ತದೆ. ಸಣ್ಣಪುಟ್ಟ ಮರೆವು 45  ರ ನಂತರ ಸಾಮಾನ್ಯ ಎಂದು ನಾವು ಯಾರು ಕೂಡ  ನಿರ್ಲಕ್ಷ್ಯ  ಮಾಡುವ ಹಾಗೆ ಇಲ್ಲ ಎನ್ನುವ ಎಚ್ಚರವನ್ನು ಮೂಡಿಸುತ್ತದೆ. ಕಾಯಿಲೆಯ ಪ್ರಾರಂಭದ ಹಂತ ಮತ್ತು ಲಕ್ಷಣಗಳನ್ನು ಹೇಳುತ್ತಾ ಮಾತು ಕಡಿಮೆ ಮಾಡುವುದು,  ಮನೆಯಿಂದ ವಾಕಿಂಗ್ ಗೆ ಹೋದವರಿಗೆ ಹಿಂತಿರುಗಿ ಬರಲು ದಾರಿ ತಿಳಿಯದೆ ಇರುವುದು, ನಿತ್ಯದ ಚಟುವಟಿಕೆಗಳಲ್ಲಿ ಏರುಪೇರು ಆಗುವುದು..  ಹೀಗೆ  ತನ್ನ  ಗಂಡನ  ಜೊತೆಗಿನ ಒಡನಾಟದ  ಹಳೇ ನೆನಪುಗಳನ್ನು  ಕೆದಕಿ ಲೇಖಕಿ ಪಟ್ಟಿ ಮಾಡುತ್ತಾರೆ.

 ಡಾ. ಶ್ರೀನಿವಾಸ ಕಕ್ಕಿಲ್ಲಾಯ ಕೃತಿಗೆ ಬರೆದ ಸವಿಸ್ತಾರ ಮುನ್ನುಡಿಯಲ್ಲಿ  ಮತಿಮಾಂದ್ಯತೆಯನ್ನು ಮೆದುಳಿನ ಮಧು ಮೇಹ- ಮೂರನೇ ವಿಧದ ಮಧು ಮೇಹ ಎಂದು ಕರೆದಿದ್ದಾರೆ.. ಮತಿ ಮಾಂದ್ಯತೆಯನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿದರೆ ರೋಗವನ್ನು ನಿಧಾನಗೊಳಿಸಬಹುದು ಹೊರತು ಇದಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಲಭ್ಯವಿಲ್ಲ ಎನ್ನುವುದನ್ನು  ಹೇಳಿದ್ದಾರೆ. ಮಹಿಳೆಯರಲ್ಲಿ ಹೆಚ್ಚಾಗಿ ಕಾಣಿಸುವ ಈ ಕಾಯಿಲೆಯ ಆರಂಭದ ಲಕ್ಷಣಗಳಲ್ಲಿ  ಆತಂಕ, ಖಿನ್ನತೆ ಅನಾಸಕ್ತಿಯು ಮುಖ್ಯವಾದದ್ದು ಎನ್ನುತ್ತಾರೆ.

ಭಾಗ ಮೂರು  ಅನುಭವ ದಿಂದ ಅನುಭಾವದೆಡೆಗೆ. ಇಲ್ಲಿ  ಬದುಕಿನ  ಕಾರಣ  ಸಂಬಂಧಗಳ ಜೊತೆ ಬೆಳೆದ ನಂಟು ಎಷ್ಟೇ ಗಾಢವಾಗಿದ್ದರೂ  ಎಲ್ಲ  ಬಿಟ್ಟು ಎದ್ದು  ಹೋಗಬೇಕಾದ ಅನಿವಾರ್ಯತೆ  ನೀಡಿದ  ಜೀವನ ದರ್ಶನದ ಸಂಕ್ಷಿಪ್ತ  ಚಿತ್ರಣವಿದೆ. ನಂದಾವರ  ದಂಪತಿಗಳನ್ನು  ಹತ್ತಿರದಿಂದ  ನೋಡಿದವರು ನಾವು .  ಅವತಾರ್ ವಿಶ್ರಾಂತಿ ಧಾಮದಲ್ಲಿ  ಅವರು  ಅನುಭವಿಸಿದ  ನಿರಾಳತೆಯನ್ನು ಕಂಡವರು. ಅಂತ್ಯ  ಒಬ್ಬೊಬ್ಬರದು ಭಿನ್ನ ವಾಗಿರುತ್ತದೆ, ಆದರೆ ಚಂದ್ರಕಲಾ ಮತ್ತು ಮಕ್ಕಳು ಡಾ. ವಾಮನ ನಂದಾವರ ಅವರ ಅಂತ್ಯವನ್ನು  ಸುಗಮ ವಾಗಿಸಿದ ರೀತಿ ಇತರರಿಗೆ  ಮಾದರಿಯಾಗುವಂತಿದೆ.

ಅಮೆರಿಕಾದಲ್ಲಿ ದಂಪತಿಗಳು

 “ವಯಸ್ಸಾಗುವಿಕೆ ಎನ್ನುವುದು ಕಳೆಯುವ ಲೆಕ್ಕವಾಗದೆ ಆತ್ಮೀಯರ ಸ್ನೇಹಿತರ ಒಡನಾಟದ ಕೂಡುವಿಕೆಯಾಗುತ್ತದೆ ಹಾಗೆ ಕಳೆದುಕೊಂಡಿದ್ದರ ಬಗ್ಗೆ ಮರುಗುತ್ತಾ ಇರದೇ ಈ ವಯಸ್ಸಿಗೆ ಈ ದೇಹಕ್ಕೆ ಬೇಕಾದದ್ದನ್ನು ಪಡೆದುಕೊಳ್ಳುವ ಧೈರ್ಯದೊಂದಿಗೆ ಉಳಿದಿರುವ ದಿನಗಳಲ್ಲಿ ಸಂತೋಷದಿಂದ ಇರುವುದನ್ನು ಕನ್ನಡಿಯು ಕೂಡ ನಿಮ್ಮ ಸುಕ್ಕುಗಟ್ಟಿದ ದೇಹಕ್ಕೂ ಸೌಂದರ್ಯ ನೀಡುತ್ತದೆ “ ಚಂದ್ರಕಲಾ ನಂದಾವರ ಹೇಳುವ ಈ ಮಾತುಗಳನ್ನು ತಾವೂ ಪಾಲಿಸುತ್ತ ಬದುಕುವುದಕ್ಕೆ ಪ್ರಯತ್ನಿಸುತ್ತಿದ್ದ ದಂಪತಿಗಳಿವರು.. ಇದಕ್ಕಿದ್ದ ಹಾಗೆ ಅಲೆಗಳು ಅಪ್ಪಳಿಸುತ್ತಿವೆ ಎನ್ನುವುದು ಗೊತ್ತಾದಾಗ ದಿಟ್ಟತನದಿಂದ ಅದನ್ನು ಎದುರಿಸಿ ದಡ ಮುಟ್ಟಿಸಲು ಅಂತಹದೊಂದು ಸಂಕಲ್ಪ ಶಕ್ತಿಯೇ ಬೇಕಾಗುತ್ತದೆ. ಮಗುವಿನಂತಾದ ಪತಿಯ ಬದಲಾದ ಮನ ಸ್ಥಿತಿ, ಅವರ ದಿನನಿತ್ಯದ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬರುತ್ತಿದ್ದ ಸಂಗಾತಿ ಚಂದ್ರಕಲಾ ಅದನ್ನು  ಕಲಿಕೆಯಾಗಿ ಸ್ವೀಕರಿಸಿ ಪತಿಯನ್ನು ಲವಲವಿಕೆಯಿಂದ ಇರಿಸಲು ಮಾರ್ಗೋಪಾಯಗಳನ್ನು ಸದಾ ಹುಡುಕುತ್ತಿದ್ದವರು.

ಹೀಗೆ  ಈ  ರೀತಿ ರೋಗಿಯ ಚಿಕಿತ್ಸೆಯಲ್ಲಿ ಆರೈಕೆಯಲ್ಲಿ ತೊಂದರೆ ಏರುಪೇರುಗಳ ಬಗ್ಗೆ ಸವಿಸ್ತಾರವಾಗಿ ಈ ಕೃತಿಯಲ್ಲಿ ಮಾಹಿತಿಯನ್ನು ಕೊಟ್ಟಿದ್ದಾರೆ. ಮತಿ ಮಾಂದ್ಯತೆಯ ರೋಗಿಗಳ ಸಂಖ್ಯೆ ಈಗ ಬಹುತೇಕ ಹೆಚ್ಚುತ್ತಿರುವುದರಿಂದ ವೈದ್ಯಕೀಯ, ನರ್ಸಿಂಗ್ ಕಾಲೇಜ್ ಗಳಲ್ಲಿ ವಿದ್ಯಾರ್ಥಿಗಳು ಈ ವಿಷಯವನ್ನು ಪ್ರಾಯೋಗಿಕ ಪಠ್ಯವಾಗಿ ತಿಳಿಯುವುದರಿಂದ ರೋಗಿ  ಮತ್ತವರ ಕುಟುಂಬಿಕರಿಗೆ ಆಗುವ ಅನುಕೂಲಗಳ ಬಗ್ಗೆ ಹೇಳುತ್ತಾರೆ. ಹೋಂ ನರ್ಸ್ ಗಳು ಅವರನ್ನು ಒದಗಿಸುವ ಏಜೆನ್ಸಿಗಳು ಕೂಡ. ಈ ಹಿನ್ನೆಲೆಯಲ್ಲಿ ಕಾರ್ಯಪ್ರವರ್ತರಾಗುವ ಅಗತ್ಯವನ್ನು ಕೃತಿಯಲ್ಲಿ ಮನಗಣಿಸಿದ್ದಾರೆ.

‘ನನ್ನ ಅಂತರಂಗದ ಮಾತು ‘ ಈ ಕೃತಿಯಲ್ಲಿರುವ ಒಂದು ಭಾಗ ಇದು. ಲೇಖಕಿ ತನ್ನೊಳಗೆ ನಡೆದ ಕಸಿವಿಸಿ ಕಳವಳಗಳ ಆತ್ಮ ವಿಮರ್ಶೆಯ ಬಿತ್ತಿ ಚಿತ್ರದಂತಿದೆ

ಕೃತಿಯ ನಾಲ್ಕನೇ ಭಾಗ’ ಗೊಂದಲ ದ ಗೂಡು ನನ್ನ ಮನಸು’  ದಲ್ಲಿ ಡಾ. ವಾಮನ ನಂದಾವರರಿಗೆ ಕಾಯಿಲೆ ಉಲ್ಬಣವಾದ ಸಂದರ್ಭ ಲೇಖಕಿಯ ಮನಸ್ಥಿತಿಯ ಬಗ್ಗೆ ವಿವರಗಳಿವೆ.

ಒಂದೆರಡು ವರುಷಗಳ  ಹಿಂದೆ  ಕೊಥೆರಪಿಷ್ಟ್  ಆಗಿದ್ದ  ಅನುಭವ ಇದ್ದ ನನಗೆ ನಂತರದ  ಒಂಟಿತನ ನೀಗುವ ಸಾಹಸದಲ್ಲಿರುವ  ಹೊತ್ತಲ್ಲಿ ಪ್ರಕಟವಾದ  ಹೊತ್ತಿಗೆ ಇದು. ಕಾಲದ  ಕಾಣದ  ಕನಸಿಗೂ  ಮೋಂಬತ್ತಿ ಯಾಗುವ  ತಾಕತ್ತು  ಇದೆ  ಅಲ್ಲವೇ ಅಂತ ಅನ್ನಿಸಿದೆ.

 ಒಟ್ಟಾರೆಯಾಗಿ  ಇಡೀ ಕೃತಿಯ ಓದು ನಂದಾವರ ದಂಪತಿಗಳ  ಪರಿಚಿತರನ್ನು ವಿಷಣ್ಣತೆಯ  ಜೊತೆಗಿನ ಒಂದು ಒಳ ಎಚ್ಚರದೆಡೆಗೆ ಒಯ್ಯುತ್ತದೆ. ಪರಿಚಯವೇ  ಇಲ್ಲದವರಿಗೆ  ಕೊಥೆರಪಿಸ್ಟ್  ಆಗಿ  ಬರೆದ ಉತ್ತಮ ಕೈಪಿಡಿಯಾಗಿ  ಮತಿಮಾಂದ್ಯತೆಯಿಂದ ಬಳಲುವವರ ಬದುಕು  ಸಹ್ಯವಾಗಿಸ ಬಹುದು ಹೇಗೆ  ಎನ್ನುವ  ಅರಿವು, ಮಾರ್ಗದರ್ಶನವನ್ನು ನೀಡುತ್ತದೆ.

ದೇವಿಕಾ ನಾಗೇಶ್‌, ಮಂಗಳೂರು

ಬರಹಗಾರರು ಹಾಗೂ ಸಾಮಾಜಿಕ ಕಾರ್ಯಕರ್ತರು.

ಇದನ್ನೂ ಓದಿ- ರಸ್ತೆ ಪಕ್ಕ ಅಡುಗೆ, ಬೀದಿಯಲ್ಲೇ ಊಟ ಮಾಡಿಸುವ ಹೊಸ ಕಾನೂನು!

More articles

Latest article