ಆಗ ಊರಲ್ಲಿ ಸ್ಥಿತಿವಂತರ ಸಂಖ್ಯೆ ಕಡಿಮೆ ಎಂದೆನಲ್ಲ, ನಮ್ಮದೂ ಅದೇ ಪರಿಸ್ಥಿತಿ. ಒಬ್ಬರ ದುಡಿಮೆಯಲ್ಲಿ ಏಳೆಂಟು ಮಂದಿಯ ಹೊಟ್ಟೆ ತುಂಬಬೇಕು. ಹಾಗಾಗಿ, ಮನೆಯಲ್ಲಿ ಹೆಚ್ಚಿನ ಹೊತ್ತು ಗಂಜಿ, ಗಂಜಿ, ಗಂಜಿ. ಅಪರೂಪಕ್ಕೆ ರೊಟ್ಟಿ, ಓಡಡ್ಯೆ, ಪುಂಡಿ ಇತ್ಯಾದಿ ತಿಂಡಿಗಳು. ಹಬ್ಬದ ದಿನಗಳಲ್ಲಿ ಮಾತ್ರ ಕಡುಬು ಇತ್ಯಾದಿ. ಎಂದೇ, ರುಚಿಕರವಾದ ಹೊಸ ತಿಂಡಿ ತಿನ್ನುವ ಬಯಕೆ ಸದಾ ಜಾಗರೂಕವಾಗಿರುತ್ತಿತ್ತು. ಅಂದ ಮೇಲೆ ಶಂಕ್ರಾಣ ಪೇಟೆಯ ಕೃಷ್ಣ ಭವನವನ್ನು ಹಾದು ಹೋಗುವಾಗ, ಅಲ್ಲಿನ ಬಗೆ ಬಗೆಯ ತಿಂಡಿಗಳ ವಾಸನೆ ಮೂಗಿಗೆ ಬಡಿಯುವಾಗ ಹೇಗಾಗಬೇಡ?
ಅಲ್ಲಿನ ಮಸಾಲೆ ದೋಸೆ, ತುಪ್ಪ ದೋಸೆಯ ಘಮ ಈಗಲೂ ನೆನಪಿದೆ. ಆದರೆ ಅದನ್ನು ತಿನ್ನುವ ಭಾಗ್ಯ ನಮಗಿರಲಿಲ್ಲ. 11 ವರ್ಷ ಶಂಕ್ರಾಣದಲ್ಲಿ ಕಳೆದಿದ್ದರೂ ಕೃಷ್ಣಭವನದಲ್ಲಿ ಒಂದೆರಡು ಬಾರಿಯಾದರೂ ಮಸಾಲೆ ದೋಸೆ ತಿಂದ ನೆನಪಿಲ್ಲ. ಅಪರೂಪಕ್ಕೊಮ್ಮೆ ಶ್ರೀಧರ ಉಡುಪರ ಅಂಗಡಿಯಿಂದ ದಿನಸಿ ಸಾಮಾನು ತರಲು ಸಂಜೆ ಹೊತ್ತು ಪೇಟೆಗೆ ಹೋದಾಗ, ನಾನು ಮೆಲ್ಲನೆ ಕೃಷ್ಣಭವನಕ್ಕೆ ನುಗ್ಗಿ ಖಾರಶೇವ ಅವಲಕ್ಕಿ ಖರೀದಿಸಿ ಅದನ್ನು ತಿನ್ನುತ್ತಾ ಮನೆಗೆ ನಡೆಯುತ್ತಿದ್ದೆ. ಒಂದು ಪ್ಲೇಟ್ ಖಾರಶೇವ ಅವಲಕ್ಕಿಗೆ 25 ಪೈಸೆ. 15 ಪೈಸೆ ಖಾರಶೇವಕ್ಕೆ, 10 ಪೈಸೆ ಅವಲಕ್ಕಿಗೆ.
ಶಾಲೆಯಲ್ಲಿ ಬಹುಷಃ ಆರನೆಯ ಕ್ಲಾಸೋ ಏಳನೆಯ ಕ್ಲಾಸೋ ಓದುತ್ತಿದ್ದಾಗ ಮೇಷ್ಟರು ಕೃಷ್ಣ ಭವನದಿಂದ ಆರು ತಿಂಡಿ ಆರು ಚಹಾ ತರಲು ಹೇಳುತ್ತಿದ್ದರು. ನಾನು ಹೋಗಿ ಚಹಾ ತಿಂಡಿ ತರುತ್ತಿದ್ದೆ. ಹ್ಯಾಂಡಲ್ ಇರುವ ಮರದ ಪುಟ್ಟ ಪೆಟ್ಟಿಗೆಯಲ್ಲಿ ಗ್ಲಾಸುಗಳನ್ನು ಇರಿಸಲು ಆರು ಕಣ್ಣು ಇರುತ್ತಿತ್ತು. ಅದರಲ್ಲಿ ಆರು ಗ್ಲಾಸು ಚಹಾ. ಜತೆಗೆ ತಿಂಡಿ.

ಅವನ್ನು ತಂದು ಶಿಕ್ಷಕರು ಕೂರುವ ಕೊಠಡಿಯಲ್ಲಿ ಅವರಿಗೆ ಕೊಡುತ್ತಿದ್ದೆ. ಗೋಳಿ ಬಜೆ, ಪೋಡಿ, ಅಂಬಡೆ ಇತ್ಯಾದಿ ತಿಂಡಿಗಳು ಇರುತ್ತಿದ್ದವು. ಹೊಟೇಲಿಗೆ ಹೋದಾಗ, ತಿಂಡಿ ತರುವಾಗ ತಿಂಡಿಯ ಘಮ ಮತ್ತು ನೋಟಕ್ಕೆ ಬಾಯಲ್ಲಿ ನೀರೂರುತ್ತಿತ್ತು. ಮೇಷ್ಟರು ಇದರಲ್ಲಿ ಒಂದಾದರೂ ತಿಂಡಿ ಕೊಡದಿರಲಿಕ್ಕಿಲ್ಲ ಎಂದು ಯೋಚಿಸುತ್ತಿದ್ದೆ. ಆದರೆ ಅಲ್ಲಿದ್ದ ಅಷ್ಟೂ ಮೇಷ್ಟರುಗಳು ನನ್ನ ಮುಂದೆಯೇ ತಿಂಡಿ ತಿನ್ನುವಾಗಲೂ ʼತಗೋ ಒಂದು ತಿಂಡಿʼ ಎಂದು ಒಂದನ್ನೂ ಕೊಡುತ್ತಿರಲಿಲ್ಲ. ಅವರ ನಡೆವಳಿಕೆ ಎಂತಹ ಕಟುಕತನದ್ದು ಎಂದು ಆಗಲೂ ನನಗೆ ಅನಿಸುತ್ತಿತ್ತು, ಈಗಲೂ ಅದನ್ನು ಮರೆಯಲಾರೆ. ತಿಂಡಿ ತಂದ ಬಾಲಕನಿಗೆ ಒಂದು ತಿಂಡಿ ಕೊಡೋಣ ಎಂದು ಅಲ್ಲಿದ್ದ ಒಬ್ಬರಿಗೂ ಅನಿಸಲಿಲ್ಲವೇ?!
ಕಾದಂಬರಿ ಓದುವ ಹುಚ್ಚು ಅಂಟಿತು
ಶಾಲೆಯಲ್ಲಿ ಒಂದಷ್ಟು ಕತೆ ಕವಿತೆಗಳ ಪುಸ್ತಕಗಳನ್ನು ಕಪಾಟಿನಲ್ಲಿರಿಸಿದ್ದರು. ಅದು ಮಕ್ಕಳಿಗೆ ಕೊಡಲೆಂದು ಇರುವುದು. ಅದರೆ ಎಂದೂ ಅವನ್ನು ಮಕ್ಕಳಿಗೆ ಕೊಟ್ಟದ್ದಿಲ್ಲ. ಒಮ್ಮೆ ರಘುರಾಮ ಭಂಡಾರಿ ಮೇಷ್ಟರು ನನ್ನನ್ನು ಕರೆದು ಕಪಾಟಿನ ಪುಸ್ತಕಗಳನ್ನು ಸರಿಯಾಗಿ ಇರಿಸೋಣ ಎಂದು ಹೇಳಿದರು. ನಾನು ಸೇರಿಕೊಂಡೆ. ಅಲ್ಲಿ ಹಳೆಯ ಕಾಲದ ಕವಿಗಳ ಮಕ್ಕಳ ಕವಿತೆಗಳು, ಕತೆಗಳು ಕಣ್ಣಿಗೆ ಬಿದ್ದವು. ನನ್ನ ಕಣ್ಣುಗಳು ಅರಳಿದವು. ಮನೆಯಲ್ಲಿ ಅದಾಗಲೇ ಉದಯವಾಣಿ ಮತ್ತು ಸುಧಾ ಬರುತ್ತಿತ್ತು. ಸುಧಾದ ಡಾಬೂ ಚಿತ್ರಕಥಾ ಸರಣಿಗಳು ವಿಶೇಷ ಆಕರ್ಷಣೆಯಾಗಿದ್ದವು. ವಾರವೂ ಅದಕ್ಕಾಗಿ ಕಾಯುತ್ತಿದ್ದೆ. ಹಾಗಾಗಿ ಕತೆಗಳ ಬಗ್ಗೆ ಆಗಲೇ ಆಸಕ್ತಿ ಹುಟ್ಟಿತ್ತು.
ಕಪಾಟಿನಲ್ಲಿದ್ದ ಕೆಲ ಪುಸ್ತಕಗಳನ್ನು ನೋಡಿ, ʼಇದನ್ನು ಓದಲು ಮನೆಗೆ ಒಯ್ಯಬಹುದೇ?ʼ ಎಂದು ಭಂಡಾರಿ ಮೇಷ್ಟ್ರಲ್ಲಿ ಕೇಳಿದೆ. ʼತಗೊಂಡು ಹೋಗುʼ ಅಂದರು. ಕೊಂಡು ಹೋದ ಪುಸ್ತಕ ಅಂದೇ ಓದಿ ಮಾರನೆಯ ದಿನ ಮರಳಿಸುತ್ತಿದ್ದೆ. ಲಿಂಗ ಮತ್ತು ವಯಸ್ಸಿಗೆ ಸಹಜವಾಗಿ ಯುದ್ಧ ಮತ್ತು ಚಾರಿತ್ರಿಕ ಕಾದಂಬರಿಗಳ ಓದು ಹೆಚ್ಚು ಇಷ್ಟವಾಗತೊಡಗಿತು. ಮುಸ್ಲಿಂ ಅರಸರ ಕ್ರೌರ್ಯದ ಕತೆಗಳು, ಹಿಂದೂ ಅರಸರ ಶೌರ್ಯದ ಕತೆಗಳೇ ಹೆಚ್ಚಾಗಿದ್ದ ಪುಸ್ತಕಗಳು. ಪುಸ್ತಕ ಕೈಗೆ ಸಿಕ್ಕಿತೆಂದರೆ ಮನೆಯ ಹತ್ತಿರದ ಹಲಸಿನ ಮರ ಏರಿ ಅದರ ಬೊಡ್ಡೆಯಲ್ಲಿ ಕುಳಿತು ಒಂದೇ ದಿನದಲ್ಲಿ ಓದಿ ಮುಗಿಸುತ್ತಿದ್ದೆ. ಹೀಗೆ ನನಗೆ ಓದುವ ಹುಚ್ಚು ಹತ್ತಿತು.
ಪದವೀಧರ ಮುಖ್ಯೋಪಾಧ್ಯಾಯರಾಗಿ ಶ್ರೀನಿವಾಸ ಮುಚ್ಚಿಂತಾಯರು ಬಂದಾಗ ನನ್ನ ಓದಿನ ಹುಚ್ಚು ಇನ್ನೊಂದು ಹಂತಕ್ಕೆ ಹೋಯಿತು. ಪ್ರಾಥಮಿಕ ಶಾಲೆಯ ಮೂರನೆಯ ತರಗತಿಯ ತನಕದ ತರಗತಿಗಳು ನಡೆಯುತ್ತಿದ್ದುದು ಒಂದು ಫರ್ಲಾಂಗು ದೂರದ ಕಟ್ಟಡದಲ್ಲಿ ಎಂದು ಹಿಂದೆ ತಿಳಿಸಿದ್ದೆನಲ್ಲ. ನನ್ನ ಓದಿನ ಹುಚ್ಚು ಗೊತ್ತಿದ್ದ ಮುಚ್ಚಿಂತಾಯರು ಸಂಜೆ ಹೊತ್ತು, ʼಆ ಶಾಲೆಗೆ ಹೋಗಿ ಅದರ ಕಿಟಕಿ ಬಾಗಿಲು ಎಲ್ಲ ಮುಚ್ಚಿ ಬೀಗ ಹಾಕಿ ಬಂದರೆ ಒಂದು ಕಾದಂಬರಿ ಪುಸ್ತಕ ಕೊಡುತ್ತೇನೆʼ ಎನ್ನುತ್ತಿದ್ದರು. ಸಿಕ್ಕ ಅವಕಾಶ ನಾನು ಬಿಡುತ್ತೇನೆಯೇ? ʼಹೂಂʼ ಎನ್ನುತ್ತಿದ್ದೆ. ದಿನವೂ ಆ ಶಾಲಾ ಕಟ್ಟಡಗಳಿಗೆ ಬೀಗ ಹಾಕಿ ಬರುವುದು, ಒಂದು ಕಾದಂಬರಿ ಪುಸ್ತಕ ಮನೆಗೆ ಒಯ್ಯುವುದು ಇದು ನನ್ನ ದಿನಚರಿಯಾಯಿತು. ಊರ ಪಂಚಾಯತ್ ಕಚೇರಿಯಲ್ಲಿದ್ದ ಗ್ರಂಥಾಲಯದ ಸದಸ್ಯರಾದರೆ ಅಲ್ಲೂ ಒಳ್ಳೊಳ್ಳೆಯ ಪುಸ್ತಕಗಳು ಸಿಗುತ್ತಿದ್ದವು. ಹೈಸ್ಕೂಲಿನಲ್ಲಿ ಭಾರತಿ ಭಾರತ ಪುಸ್ತಕ ಸಂಪದದ ಪುಟ್ಟ ಪುಟ್ಟ ಪುಸ್ತಕಗಳ ಓದು, ಶಾಲಾ ಗ್ರಂಥಾಲಯದಿಂದ ಚಾರಿತ್ರಿಕ ಕಾದಂಬರಿಗಳು, ಪಂಚಾಯತ್ ಕಚೇರಿಯ ಗ್ರಂಥಾಲಯದಿಂದಲೂ ಕಾದಂಬರಿ ಪುಸ್ತಕಗಳು ಹೀಗೆ ನನ್ನ ಓದಿನ ಹುಚ್ಚು ಬಾಲ್ಯದಲ್ಲಿಯೇ ಏರುತ್ತಾ ಹೋಯಿತು. ಭಂಡಾರಿ ಮೇಷ್ಟ್ರು, ಮುಚ್ಚಿಂತಾಯರು ತಮ್ಮ ಕೆಲಸಗಳಿಗಾಗಿ ನನ್ನನ್ನು ಬಳಸಿಕೊಂಡರೂ ನನಗೆ ಅದರಿಂದ ಉಪಕಾರವೇ ಆಯಿತು. ಹಾಗಾಗಿ ಈಗಲೂ ಅವರನ್ನು ನಾನು ನೆನಪಿಸುತ್ತಿರುತ್ತೇನೆ.
ಯಕ್ಷಗಾನ ಬಯಲಾಟ
ಶಂಕ್ರಾಣ ಊರು ಕುಂದಾಪುರದಿಂದ ಕೇವಲ 18 ಕಿಲೋಮೀಟರ್ ದೂರದಲ್ಲಿದ್ದರೂ 70 ರ ದಶಕದ ಆ ದಿನಗಳಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹೊರತುಪಡಿಸಿದರೆ, ಮನರಂಜನೆಯ ಯಾವ ಸವಲತ್ತುಗಳೂ ಶಂಕ್ರಾಣದಲ್ಲಿರಲಿಲ್ಲ. ಇದ್ದುದು ಬಹುವಾಗಿ ಯಕ್ಷಗಾನ ಬಯಲಾಟ ಮತ್ತು ಅಪರೂಪಕ್ಕೊಮ್ಮೆ ಸೈಕಲ್ ಬ್ಯಾಲೆನ್ಸ್.
ಯಕ್ಷಗಾನ ಬಯಲಾಟದ ಟೆಂಟಿನ ಮೇಳಗಳು ಆಗೊಮ್ಮೆ ಈಗೊಮ್ಮೆ ಅಲ್ಲಿಗೆ ಬರುತ್ತಿದ್ದವು. ಶ್ರೀಧರ ಉಡುಪರ ದಿನಸಿ ಅಂಗಡಿಗೆ ತಾಗಿಕೊಂಡಂತಿದ್ದ ಜವಳಿ ಮಳಿಗೆಯ ಸರ್ವೋತ್ತಮ ಶೇಠ್ ಅವರು ಆಗ ಊರಿನ ಮಹಾ ಯಕ್ಷಪ್ರೇಮಿ ಮತ್ತು ಯಕ್ಷ ಪೋಷಕ. ಮೇಳಗಳು ಊರಿಗೆ ಬಂದವೆಂದರೆ ಅವುಗಳ ಪ್ರಸಿದ್ಧ ಕಲಾವಿದರು ಶೇಠ್ ಅವರನ್ನು ಭೇಟಿಯಾಗಿ ಅವರ ಆತಿಥ್ಯ ಸ್ವೀಕರಿಸದೆ ಹೋಗುತ್ತಿದ್ದುದು ವಿರಳ. ಸಂಜೆ ಬಯಲಾಟ ಪ್ರದರ್ಶನವಾದರೆ ಮಧ್ಯಾಹ್ನವೇ ಶೇಠರ ಅಂಗಡಿಯಲ್ಲಿ ಯಕ್ಷಗಾನದ ಸ್ವಾರಸ್ಯಕರ ಚರ್ಚೆಗಳು ನಡೆಯುತ್ತಿದ್ದವು.
ಬಯಲಾಟ ಮೇಳ ಊರಿಗೆ ಬರುವ ಒಂದೆರಡು ದಿನಗಳ ಮುಂಚೆ ಕಿಂದರಿ ಜೋಗಿಯನ್ನು ನೆನಪಿಸುವ ಒಬ್ಬ ವ್ಯಕ್ತಿ ತನ್ನ ಪುಟ್ಟ ಮೈಕಿನೊಂದಿಗೆ ಊರಲ್ಲಿ ಹಾಜರಾಗುತ್ತಿದ್ದ. ಆತನಿಗೆ ಮೇಳಗಳವರು ಏನಾದರೂ ಕೊಡುತ್ತಿದ್ದರೋ ಅಥವಾ ಆತನದು ಅಪ್ಪಟ ಯಕ್ಷಾಭಿಮಾನದ ಪುಕ್ಕಟೆ ಸೇವೆಯೋ ತಿಳಿಯದು. ಒಂದು ಕಾಮಿಕ್ ಫಿಗರ್ ನಂತೆ ಕಾಣಿಸುತ್ತಿದ್ದ ಆತ ಬಾಲಕರಾದ ನಮ್ಮೆಲ್ಲರ ಆಕರ್ಷಣೆ. ಆತ ತನ್ನ ಪುಟ್ಟ ಮೈಕಿನಲ್ಲಿ ʼವಿದ್ಯುತ್ ದೀಪಾಲಂಕೃತ ಝಗಮಗಿಸುವ ಭವ್ಯ ರಂಗ ಮಂಟಪದಲ್ಲಿ ಒಂದೇ ಒಂದು ಆಟ, ರಸದೂಟ, ಬನ್ನಿರಿ ನೋಡಿರಿ ಆನಂದಿಸಿರಿ, ಮರೆಯದಿರಿ ಮರೆತು ನಿರಾಶರಾಗದಿರಿʼ ಎಂದು ಘೋಷಿಸುತ್ತಾ ನಡೆಯುತ್ತಿದ್ದ. ನಾವು ಕಿಂದರಿ ಜೋಗಿಯನ್ನು ಹಿಂಬಾಲಿಸುವ ಇಲಿ ಸಮೂಹದಂತೆ ಆತನನ್ನು ಪೇಟೆಯ ಉದ್ದಕ್ಕೂ ಹಿಂಬಾಲಿಸುತ್ತಿದ್ದೆವು.

ಆನಂತರ ಒಂದು ದಿನ ಬಯಲಾಟದ ಪ್ರಚಾರದ ಕಾರು ಬರುತ್ತಿತ್ತು. ಬಯಲಾಟದ ವಿವರ ಘೋಷಿಸುತ್ತಾ ಕರಪತ್ರಗಳನ್ನು ಬೀದಿಗೆ ಚೆಲ್ಲುತ್ತಾ ಹೋಗುವ ಆ ಕಾರಿನ ಹಿಂದೆ, ಒಂದೇ ಒಂದಾದರೂ ಕರಪತ್ರ ಸಿಕ್ಕೀತು ಎಂಬ ಮಹದಾಸೆಯಿಂದ ನಾವು ಹುಡುಗರು ʼಜೀವದ ಹಂಗು ತೊರೆದುʼ ಅದರ ಹಿಂದೆ ಓಡುತ್ತಿದ್ದೆವು. ಕಾರು ಶಂಕ್ರಾಣ ಪೇಟೆಯಲ್ಲಿ ನಿಂತು ಅದರೊಳಗಿನವರು ತಿಂಡಿ ತಿನ್ನಲು ಕೃಷ್ಣಭವನಕ್ಕೆ ನುಗ್ಗಿದಾಗ ನಾವು ಅಲ್ಲಿಗೆ ನುಗ್ಗಿ ಒಂದೇ ಒಂದು ಕರಪತ್ರಕ್ಕಾಗಿ ದುಂಬಾಲು ಬೀಳುತ್ತಿದ್ದೆವು.
ಬಯಲಾಟ ನಡೆಯುತ್ತಿದ್ದುದು ಕಲ್ಲುಕುಟಿಗನ ಮಕ್ಕಿಯ ಗದ್ದೆಯಲ್ಲಿ. ಶಾಲೆಯವರು ಸೀಲು ಹಾಕಿ ಕೊಟ್ಟ ಚೀಟಿ ತಂದರೆ ಐವತ್ತು ಪೈಸೆಗೆ ನೆಲ ಸೀಟಿನಲ್ಲಿ ಕುಳಿತು ಯಕ್ಷಗಾನ ಸವಿಯಬಹುದಿತ್ತು.
ಸಂಜೆಯಾಗುತ್ತಿದ್ದಂತೆ ನಮ್ಮ ಕಾಲು ನೆಲದ ಮೇಲೆ ನಿಲ್ಲುತ್ತಿರಲಿಲ್ಲ. ರಾತ್ರಿ ಒಂಭತ್ತು ಗಂಟೆಯಾಗುತ್ತಿದ್ದಂತೆ ಒಂದು ಮಂದಿರಿ ಹಿಡಿದುಕೊಂಡು ಕಲ್ಲುಕುಟಿಗನ ಮಕ್ಕಿಯತ್ತ ಅಪ್ಪನೊಂದಿಗೆ ಹೆಜ್ಜೆ ಹಾಕುತ್ತಿದ್ದೆವು. ಜನರೇಟರ್ ನ ಧಡ್ ಧಡ್ ಸೌಂಡು, ಟೆಂಟಿನ ಮೇಲೆ ಹಾರದಂತೆ ಉರಿವ ಬಲ್ಬ್ ಗಳು, ಮೈಕಿನಲ್ಲಿ ಭಾಗವತರ ಹಾಡುಗಾರಿಕೆ, ಕಲ್ಲುಕುಟಿಗನ ಮಕ್ಕಿಯ ಧೂಳಿನ ಗದ್ದೆಗೆ ಸ್ವರ್ಗಲೋಕದಿಂದ ಯಕ್ಷಲೋಕವನ್ನೇ ಇಳಿಸಿಬಿಡುತ್ತಿತ್ತು. ಅಪ್ಪ ಈಸೀ ಚೇರಿನಲ್ಲಿ ಕುಳಿತರೆ, ನಾವು ನೆಲದಲ್ಲಿ. ನಿದ್ದೆಯ ಹೊತ್ತು ಹತ್ತಿರವಾಗುತ್ತಿದ್ದಂತೆ ನಾವೂ ಭ್ರಮಾತ್ಮಕ ಲೋಕಕ್ಕೆ ಸರಿಯುತ್ತಿದ್ದೆವು. ಹಗಲೋ ಇರುಳೋ ಹಿಂದಿನ ದಿನವೋ ಮುಂದಿನ ದಿನವೋ ಎಲ್ಲಾ ಗೋಜಲು ಗೋಜಲಾಗುವ ಹೊತ್ತು.
ಅಲ್ಲಿನ ಸ್ತ್ರೀ ವೇಷ ಅದು ಗಂಡಸರೇ ಹಾಕುವುದು ಎಂದು ಗೊತ್ತಿರಲಿಲ್ಲ. ಪುರುಷರು ಪರಸ್ತ್ರೀಯರನ್ನು ಮುಟ್ಟುವಂತಿಲ್ಲವಲ್ಲ? ಅಲ್ಲಿನ ಪುರುಷ ವೇಷ ಮತ್ತು ಸ್ತ್ರೀವೇಷ ಹಾಗೆಲ್ಲ ಮುಟ್ಟಿಸಿಕೊಳ್ಳುವುದನ್ನು ನೋಡುವಾಗ ಇವರು ನಿಜ ಬದುಕಿನಲ್ಲಿಯೂ ಗಂಡ ಹೆಂಡತಿಯರೇ ಇರಬೇಕು ಎಂದು ನಮ್ಮ ಎಳೆಯ ಮನಸುಗಳು ಅಂದುಕೊಳ್ಳುತ್ತಿದ್ದವು.
ಹೊತ್ತು ಕಳೆಯುತ್ತಿದ್ದಂತೆ ಕೆಲವರು ಟೆಂಟಿನ ಹೊರಗೆ ಹೋಗಿ ಚಹಾ ಕುಡಿದು ಅಥವಾ ಕಡಲೆ ಹಿಡಿದುಕೊಂಡು ಒಳ ಬರುತ್ತಿದ್ದರು. ನಮಗೆಲ್ಲ ಅಷ್ಟು ಖರ್ಚು ಮಾಡುವ ಯೋಗ ಇರಲಿಲ್ಲ. ನಡುರಾತ್ರಿಯಾಗುತ್ತಿದ್ದಂತೆ ಟೆಂಟಿನ ಒಳಗೆ ಗಾಳಿಯ ಸಂಚಾರ ಕಡಿಮೆ ಇದ್ದು, ಬಾಯಾಕಳಿಕೆಯ ಮತ್ತು ಕಡಲೆ ತಿಂದವರ ಹೂಸಿನವಾಸನೆ ಎಲ್ಲ ಮಿಶ್ರವಾಗಿ ಒಂದು ವಿಚಿತ್ರ ವಾಸನಾ ಪರಿಸರ ನಿರ್ಮಾಣವಾಗುತ್ತಿತ್ತು. ಆಟ ನೋಡುವುದಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳಲೇಬೇಕು.
ಆಮೇಲೆ ನಾವು ಎಷ್ಟು ಹೊತ್ತಿಗೆ ನಿದ್ದೆ ಹೋಗುತ್ತಿದ್ದೆವೋ ಗೊತ್ತಾಗುತ್ತಿರಲಿಲ್ಲ. ದಿನ ಇಡೀ ಶಾಲಾ ಚಟುವಟಿಕೆಗಳಿಂದ ದಣಿದ ದೇಹ ಮಹಾಭಾರತ ಯುದ್ಧರಂಗದಲ್ಲಿ ಬಿದ್ದ ಶವಗಳ ಹಾಗೆ ನಾವೂ ಬಿದ್ದಿರುತ್ತಿದ್ದೆವು. ಮತ್ತೆ ಎಚ್ಚರವಾಗುತ್ತಿದ್ದುದು ರಂಗಸ್ಥಳಕ್ಕೆ ಅಬ್ಬರದ ರಕ್ಕಸ ವೇಷ ಬಂದಾಗಲೇ. ರಕ್ಕಸ ವೇಷ ಬಂದಾಗಲೂ ಏಳದವರನ್ನು ರಕ್ಕಸ ವೇಷಧಾರಿಗಳು ʼಅಗೋ ಅಲ್ಲಿ ಒಂದು ಕಪಿ ಮಲಗಿದೆʼ ಎಂದೆಲ್ಲ ಹಾಸ್ಯ ಮಾಡುತ್ತಿದ್ದರು.
ಅಂತೂ ಇಂತೂ ಏನು ಆಟ ನೋಡಿದೆವೋ. ಕತೆಯೊಂದೂ ನೆನಪಿಲ್ಲ. ಆಟಕ್ಕೆಂದು ಬಂದು ಗದ್ದೆಯಲ್ಲಿ ಮಲಗಿದ್ದೇ ಹೆಚ್ಚು. ಆಗಿನ ಕಾಲದ ಒಂದು ಪ್ರಸಿದ್ಧ ಯಕ್ಷಗಾನ ಪ್ರಸಂಗದ ನೆನಪು ಈಗಲೂ ಇದೆ. ಅದೇ ʼವಸಂತ ಸೇನೆʼ. ಸಾಲಿಗ್ರಾಮ ಮೇಳದವರು ಆಡುತ್ತಿದ್ದಿರಬೇಕು. ಅದು ಆಕರ್ಷಿಸಿ ಈಗಲೂ ನೆನಪಿನಲ್ಲಿ ಇರುವಂತಾಗಲು ಕಾರಣ ಅದರ ಒಂದು ಆಕರ್ಷಕ ಪಾತ್ರ ʼಶಕಾರʼ.
ಬೆಳಗಾಗುತ್ತಾ ಬಂತು. ಆಟ ಮುಗಿಯುವ ಮುನ್ನವೇ ಟೆಂಟಿನ ಕಾರ್ಮಿಕರು ಟೆಂಟ್ ಬಿಚ್ಚಲು ಶುರು ಮಾಡುತ್ತಿದ್ದರು. ಈಗ ಮನೆಯ ದಾರಿ ಹಿಡಿಯಬೇಕು. ಅಪ್ಪನೊಂದಿಗೆ ಮಂಡಕ್ಕಿಯೋ ಏನೋ ಖರೀದಿಸಿಕೊಂಡು ಹೊರಡುತ್ತಿದ್ದೆವು. ನಿದ್ದೆಯಿಲ್ಲದ ದೇಹ, ನಡೆಯಲು ಕಾಲು ಕೇಳದು. ರಾತ್ರಿ ಒಂಭತ್ತು ಗಂಟೆಗೆ ಮನೆಯಿಂದ ಹೊರಡುವಾಗ ಇದ್ದ ಉತ್ಸಾಹದ ನೂರರ ಒಂದು ಪಾಲೂ ಇಲ್ಲ. ʼಹೊರಡುವಾಗ ನಾಲ್ಕು ಕಾಲು ಮರಳುವಾಗ ಒಂದೇ ಕಾಲುʼ ಅಂತೇನೋ ಅಪ್ಪ ಮಲೆಯಾಳಿ ಗಾದೆ ಹೇಳುತ್ತಿದ್ದರು.
ಶಾಲೆಯವರು ಎಂತಹ ನಿಷ್ಕರುಣಿಗಳು ನೋಡಿ! ಆಟದ ಮಾರನೆಯ ದಿನವೂ ರಜೆ ಕೊಡುತ್ತಿರಲಿಲ್ಲ. ಎಂದಿನಂತೆ ಗಂಭೀರ ಕ್ಲಾಸುಗಳು. ನಾವು ಆಟಕ್ಕೆ ಹೋದವರು ನಿದ್ದೆ ತಡೆಯಲಾಗದೆ ಡೆಸ್ಕ್ ಗೆ ತಲೆ ಕೊಟ್ಟು ನಿದ್ದೆ ಮಾಡಿಬಿಡುತ್ತಿದ್ದೆವು. ಕಟುಕ ಶಿಕ್ಷಕರು ನೀರು ತರಿಸಿ ನಮ್ಮ ಕಿವಿಯೊಳಕ್ಕೆ ಸುರಿದು ಇನ್ನಷ್ಟು ಹಿಂಸೆ ಕೊಟ್ಟು ಮಜಾ ನೋಡುತ್ತಿದ್ದರು.
ಸೈಕಲ್ ಬ್ಯಾಲೆನ್ಸ್
ಅಪರೂಪಕ್ಕೊಮ್ಮೆ ಊರಿಗೆ ಸೈಕಲ್ ಬ್ಯಾಲೆನ್ಸ್ ಬರುತ್ತಿತ್ತು. ಇದು ನಡೆಯುತ್ತಿದ್ದುದೂ ಕಲ್ಲುಕುಟಿಗ ಗದ್ದೆಯಲ್ಲಿ. ವೃತ್ತಾಕಾರದ ಅಂಗಣದ ಸುತ್ತ ಒಬ್ಬ ಸೈಕಲ್ ಹೊಡೆಯುತ್ತಾ ತಿರುಗುತ್ತಿದ್ದ. ಏಳು ದಿನವೂ ಆತ ಸೈಕಲ್ ನಿಂದ ಇಳಿಯುವಂತಿಲ್ಲ. ಅದರಲ್ಲೇ ಸ್ನಾನ ನಿದ್ದೆ ಎಲ್ಲವೂ. ಮೈಕಿನಲ್ಲಿ ತಮಿಳು ಮಲೆಯಾಳಿ ಹಾಡುಗಳನ್ನು ಹಾಕಿ ಡಾನ್ಸ್ ಮಾಡುವ ಒಂದಿಬ್ಬರೂ (ಒಂದು ಹೆಣ್ಣು ವೇಷ) ಜತೆಗಿರುತ್ತಿದ್ದರು.
ನಿತ್ಯವೂ ರಾತ್ರಿ ಏನಾದರೂ ಒಂದು ವಿಶೇಷ ಪ್ರದರ್ಶನ ಇರುತ್ತಿತ್ತು. ಹಾಳಾದ ಟ್ಯೂಬ್ ಲೈಟುಗಳನ್ನು ದಾರಿಗೆ ಅಡ್ಡಲಾಗಿ ಕಟ್ಟಿ, ವೇಗವಾಗಿ ಸೈಕಲ್ ನಲ್ಲಿ ಬಂದು ಎದೆಯ ಮೂಲಕ ಆ ಟ್ಯೂಬ್ ಲೈಟ್ ಗಳನ್ನು ಸೈಕಲ್ ಸವಾರ ಒಡೆಯುತ್ತಿದ್ದ. ನಮಗೋ ಎದೆ ಢವ ಢವ.

ಒಂದು ದಿನ ವಿಶೇಷ ಆಕರ್ಷಣೆಯಾಗಿ, ಒಡೆದ ಟ್ಯೂಬ್ ಲೈಟ್ ಗಾಜುಗಳ ಮೇಲೆ ಮಲಗಿ ಎದೆಯ ಮೇಲೆ ಕಡೆಯುವ ಕಲ್ಲು ಇರಿಸಿ, ಅದರಲ್ಲಿ ಬೆಣಚುಗಲ್ಲನ್ನು ಕುಟ್ಟುವ ಪ್ರದರ್ಶನ. ಆತ ಅದನ್ನು ಮಾಡುತ್ತಿದ್ದಂತೆ ನಾನು ಇತ್ತ ತಲೆ ತಿರುಗಿ ಬಿದ್ದೆ. ನನ್ನ ಮನಸು ಬಹಳ ಮೃದು. ಇಂತಹ ದೃಶ್ಯ ನೋಡುವುದಾಗಲೀ, ರಕ್ತ ನೋಡುವುದಾಗಲೀ ನನ್ನಿಂದಾಗದು. ಬೇರೆಯವರಿಗೆ ಇಂಜೆಕ್ಷನ್ ಕೊಡುವುದನ್ನು ನೋಡಿದರೆ, ಸೀರಿಂಜ್ ನಲ್ಲಿ ನನ್ನ ರಕ್ತ ತೆಗೆದರೆ ಈಗಲೂ ನನ್ನ ತಲೆ ತಿರುಗಿ ಅಲ್ಲೇ ಒರಗುತ್ತೇನೆ. ಇದು ನನಗೆ ಸಾಮಾನ್ಯ ಎಂದು ನರ್ಸ್ ಬಳಿ ಮೊದಲೇ ಹೇಳಿರುತ್ತೇನೆ. ಈ ಸಮಸ್ಯೆ ಮೊದಲು ಕಾಣಿಸಿಕೊಂಡದ್ದು ಅದೇ ಸೈಕಲ್ ಬ್ಯಾಲೆನ್ಸ್ ನಲ್ಲಿ.
ಹಾಂ ಒಂದು ವಿಷಯ ಹೇಳುವುದನ್ನು ಮರೆತೆ. ಶಂಕ್ರಾಣದಲ್ಲಿ ಅಂದು ನಡೆದ ಸೈಕಲ್ ಬ್ಯಾಲೆನ್ಸ್ ಕಾರ್ಯಕ್ರಮ ನಡುವಿನಲ್ಲಿಯೇ ನಿಂತು ಹೋಯಿತಂತೆ. ಅದಕ್ಕೆ ಕಾರಣ ಸೈಕಲ್ ಬ್ಯಾಲೆನ್ಸ್ ನೋಡಲು ದಿನವೂ ಬರುತ್ತಿದ್ದ ಊರ ಹುಡುಗಿಯೊಂದಿಗೆ ಸೈಕಲ್ ಹೀರೋಗೆ ಲವ್ ಉಂಟಾಗಿ ಅವರು ಜತೆಯಾಗಿ ನಡುವಿನಲ್ಲಿಯೇ ಪರಾರಿಯಾದುದು.
ಶ್ರೀನಿವಾಸ ಕಾರ್ಕಳ
ಚಿಂತಕರು
ಇದನ್ನು ಓದಿದ್ದೀರಾ? ಅದೊಂದು ದೊಡ್ಡ ಕಥೆ ಆತ್ಮಕಥನ ಸರಣಿ ಭಾಗ- 11 ನಾನು ಶಾಲೆ ಸೇರಿದೆ


