ನವದೆಹಲಿ: ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಇಂದು ಮೊದಲ ಹಂತದಲ್ಲಿ 121 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು, 1,314 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೊದಲ ಹಂತದಲ್ಲಿ 3.75 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಭ್ರಷ್ಟಾಚಾರ, ದುರಾಡಳಿತವನ್ನೇ ಅಭಿವೃದ್ಧಿ ಎಂದು ನಂಬಿಸುತ್ತಿರುವ ಎನ್ ಡಿಎ ಒಕ್ಕೂಟಕ್ಕೆ ತಕ್ಕ ಪಾಠ ಕಲಿಸುವಂತೆ ಕರೆ ನೀಡಿದ್ದಾರೆ.
ಎಕ್ಸ್ ನಲ್ಲಿ ಅವರು ಬಿಹಾರ ಮತದಾರರಿಗೆ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ.
ದುಷ್ಟ ಆಡಳಿತಗಾರರಿಗೆ ಪಾಠ ಕಲಿಸಲು ಸುವರ್ಣಾವಕಾಶ ನಿಮ್ಮ ಮುಂದಿದೆ. ಪ್ರಜಾಪ್ರಭುತ್ವದ ಜನ್ಮಸ್ಥಳವಾದ ಬಿಹಾರದಲ್ಲಿ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರತಿಯೊಬ್ಬ ಮತದಾರನೂ ತಮ್ಮ ಸಾಂವಿಧಾನಿಕ ಹಕ್ಕನ್ನು ಚಲಾಯಿಸುವ ಮೂಲಕ 20 ವರ್ಷಗಳ ನಂತರ ರಾಜ್ಯಕ್ಕೆ ಬದಲಾವಣೆಯ ಹೊಸ ದಿಕ್ಕನ್ನು ನೀಡುವಂತೆ ಅವರು ಕೋರಿದ್ದಾರೆ. ನಿಮ್ಮ ಭವಿಷ್ಯವನ್ನು ನಿರ್ಧರಿಸುವ ಹಕ್ಕು ನಿಮಗೆ ಒದಗಿ ಬಂದಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ, ರಾಜ್ಯದ ಉತ್ತಮ ಅಭಿವೃದ್ಧಿಗಾಗಿ ಮತ್ತು ಹಕ್ಕುಗಳನ್ನು ರಕ್ಷಿಸಲು ಇಂಡಿಯಾ ಬಣಕ್ಕೆ ಮತ ಚಲಾಯಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಪ್ರಿಯಾಂಕಾ ಗಾಂಧಿ ಅವರೂ ಸಹ ಮನವಿ ಮಾಡಿಕೊಂಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಎಲ್ಲ ಸಾಂಸ್ಥಿಕ ಸಂಸ್ಥೆಗಳನ್ನು ನಾಶಗೊಳಿಸುತ್ತಿದೆ. ಆದ್ದರಿಂದ ಮತದಾರರು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಹೇಳಿದ್ದಾರೆ.

