ಪಟ್ನಾ: ಮತ ಕಳ್ಳತನ ನಡೆಸುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ ಬಿಹಾರದಲ್ಲಿ ಅಧಿಕಾರ ಹಿಡಿಯುವ ಹುನ್ನಾರ ನಡೆಸಿದೆ ಎಂದು ಕಾಂಗ್ರೆಸ್ ವರಿಷ್ಠೆ ಪ್ರಿಯಾಂಕಾಗಾಂಧಿ ಆರೋಪಿಸಿದ್ದಾರೆ.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯಲ್ಲಿ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಮತದಾರರ ಪಟ್ಟಿಯಿಂದ 65 ಲಕ್ಷ ಮಂದಿಯ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಬಿಜೆಪಿ ಆಡಳತದಲ್ಲಿ ದೇಶದ ಈಗಿನ ಪರಿಸ್ಥಿತಿ ಬ್ರಿಟಿಷ್ ಆಳ್ವಿಕೆಗೆ ಸರಿಸಮಾನವಾಗಿದೆ. ಭವಿಷ್ಯದ ವರ್ಷಗಳಲ್ಲಿ ಚುನಾವಣೆ ನಡೆಯಲಿವೆಯೇ ಎಂಬ ಅನುಮಾನವೂ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಇಂದು ಹರಿಯಾಣದಲ್ಲಿ ನಡೆದಿದೆ ಎನ್ನಲಾದ ವೋಟ್ ಚೋರಿ ಕುರಿತು ದಾಖಲೆಗಳ ಸಹಿತ ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಮತ್ತು ಚುನಾವಣಾ ಆಯೋಗ ಹೇಗೆ ಜಂಟಿಯಾಗಿ ಮತ ಕಳ್ಳತನದಲ್ಲಿ ನಿರತವಾಗಿವೆ ಎಂದು ವಿವರಿಸಿದ್ದಾರೆ ಎಂದು ಹೇಳೀದರು.
ಎನ್ಡಿಎ ಸರ್ಕಾರ ಎಲ್ಲ ಸಾಂಸ್ಥಿಕ ಸಂಸ್ಥೆಗಳನ್ನು ನಾಶಗೊಳಿಸುತ್ತಿದೆ. ಭವಿಷ್ಯದಲ್ಲಿ ಚುನಾವಣೆ ನಡೆಯಬಹುದೇ ಎಂದು ಅನುಮಾನ ಕಾಡುತ್ತಿದೆ ಎಂದ ಪ್ರಿಯಾಂಕಾ ಅವರು, ಮತದಾರರು ಮೌನ ಮುರಿದು ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಎಂದು ಕರೆ ನೀಡಿದರು.
ಬಿಹಾರದಲ್ಲಿ ‘ಇಂಡಿಯಾ’ ಬಣ ಅಧಿಕಾರಕ್ಕೆ ಬಂದರೆರಾಜ್ಯದ ಜನತೆ ರೂ. 25 ಲಕ್ಷದವರೆಗೆ ಉಚಿತ ಚಿಕಿತ್ಸೆ ಪಡೆಯಲಿದ್ದಾರೆ. ಪ್ರತಿ ಕುಟುಂಬಕ್ಕೆ ಕನಿಷ್ಠ ಒಂದು ಉದ್ಯೋಗ ನೀಡಲಿದ್ದೇವೆ. ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಲಕ್ಷಾಂತರ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ ಎಂದು ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.

