“ನಾನು ಸಾಯ್ತೀನಿ ಕಣ್ರೋ. ಅದ್ಕೆ ಕಡೆಗೊಮ್ಮೆ ನಿಮ್ಮ ಜೊತೆ ಕುಡಿಯಕ್ಕೆ ಬಂದೆ” ಅಂದ್ಲು. ಅವಳಿಗೆ ಕುಡಿಯಲು ಕೊಡುವುದೋ ಬೇಡವೋ ಗೊತ್ತಾಗದೆ ಒಬ್ಬರನ್ನೊಬ್ಬರು ನೋಡುತ್ತಿದ್ದಾಗ ಅವಳು ಯಾರಿಗೋ ಫೋನ್ ಮಾಡಿ ತರಿಸಿಯೇ ಬಿಟ್ಲು. ಅದೇ ಕೊನೆ.. ಹೊಟ್ಟೆ ತುಂಬಾ ನಕ್ಕು, ಬಾಯಿ ತುಂಬಾ ಮಾತಾಡಿ ಹೋದ್ಲು. ಅವಳು ತೀರಿದ ಸುದ್ದಿ ಕೇಳಿ ನಾವಿಬ್ಬರೂ ತುಂಬಾ ಅತ್ತೆವು – ʼರೂಮಿಕಾಲಂʼ ನಲ್ಲಿ ರೂಮಿ ಹರೀಶ್.
ನನ್ನ 27ನೇ ವಯಸ್ಸಿನಿಂದ ಹಿಜ್ರಾ, ಕೋಥಿ, ಮಂಗಳಮುಖಿ, ಅಂತರಲಿಂಗಿ, ಟ್ರಾನ್ಸ್ ಪುರುಷರು, ಸಲಿಂಗ ಪ್ರೇಮಿ ದ್ವಿಲಿಂಗ ಪ್ರೇಮಿ ಹೆಂಗಸರು, ಸಲಿಂಗ ಪ್ರೇಮಿ ದ್ವಿಲಿಂಗ ಪ್ರೇಮಿ ಗಂಡಸರು, ಗೇ ಮತ್ತು ಕ್ವಿಯರ್ ಜನರು, ಅದರ ಜೊತೆಗೆ ಸೆಕ್ಸ್ ವರ್ಕ್ ಮಾಡುವವರು ಇವರೆಲ್ಲರ ಜೊತೆ ಕೆಲಸ ಮಾಡುತ್ತಿದ್ದೇನೆ. ಕೆಲಸ ಅಂದ್ರೆ ಒಂದು ಅವರನ್ನು ಪೊಲೀಸ್ ಕೇಸುಗಳಿಂದ ಬಿಡಿಸಿಕೊಂಡು ಬರುವುದು, ಎರಡನೆಯದ್ದು ಈ ಎಲ್ಲ ಜನ ಅವರ ಕಥೆಗಳನ್ನ ಹೊರಗಿನವರಿಗೆ ಹೇಳುವಾಗ ಅದನ್ನು ಇಂಗ್ಲೀಷಿಗೆ ತರ್ಜಿಮೆ ಮಾಡುವುದು. (ಅಂದ್ರೆ ಕೆಲ ಎನ್ ಜಿ ಒಗಳು ಇಂತಹ ಜನರ ಕಥೆಗಳನ್ನ ಆವಾಗವಾಗ ದೇಣಿಗೆ ಕೊಡುವವರಿಗೆ ಇಷ್ಟವಿಲ್ಲದಿದ್ದರೂ ವಿಕ್ಟಿಮ್ ಕಥೆಗಳನ್ನು ಹೇಳಿಸಿ ಮುಂದೆ ಅದನ್ನ ಕನ್ಸಿಡರ್ ಮಾಡೋವ್ರಿಗೆ, ಮಾಧ್ಯಮದವರಿಗೆ ಒಂದು ರೀತಿಯ ಬಳಕೆಯಾಗಿ ಹೋಯಿತು. ಇದರಿಂದ ಎನ್ ಜಿ ಒಗಳಿಗೆ ಹೆಚ್ಚು ಹೆಚ್ಚು ದೇಣಿಗೆ ಸಿಗಲು ಸಾಧ್ಯ. ಅದರಲ್ಲೂ ನಮ್ಮಲ್ಲಿ ಇಷ್ಟು ಜನರು ಎಂದು ಹೆಚ್ಚು ನಂಬರ್ ತೋರಿಸಿದರೆ ಸಾಕು).
ನಮ್ ಜೊತೆ ಒಬ್ಳು ಸೆಕ್ಸ್ ವರ್ಕ್ ಮಾಡುವವಳಿದ್ದಳು. ಅವಳು ಲೆಸ್ಬಿಯನ್ (ಮಹಿಳಾ ಸಲಿಂಗ ಪ್ರೇಮಿ). ಆದ್ರೆ ತನ್ನ ಬದುಕಿಗಾಗಿ ಅವಳು ಸೆಕ್ಸ್ ವರ್ಕ್ ಗೆ ಬಂದವಳು. ಸಾರಿ, ಬಂದದ್ದಲ್ಲ. ಅವಳು ಲೆಸ್ಬಿಯನ್ ಎಂದು ತಿಳಿದು ಮನೆಯವರು 15ನೇ ವರ್ಷಕ್ಕೆ ಅವಳಿಗೆ ಮದುವೆ ಮಾಡಿಸಿ ಗಂಡನ ಮನೆಗೆ ಕಳಿಸಿದರು. ಅಲ್ಲಿ ಅವಳು ಪಡಬಾರದ ಕಷ್ಟಗಳನ್ನೆಲ್ಲಾ ಪಟ್ಟಳು. ಗಂಡ ತನ್ನ ಸ್ನೇಹಿತರಿಗೆಲ್ಲಾ ಅವಳನ್ನು ಲೈಂಗಿಕವಾಗಿ ಉಪಯೋಗಿಸಲು ಬಿಡುವುದು, ಮಾತಿಗೆ ಮುಂಚೆ ಹೊಡೆಯುವುದು, ಬೆಲ್ಟಿನಲ್ಲಿ ಹೊಡೆಯುವುದು ಹೀಗೆ.. ಈ ಎಲ್ಲದರ ನಡುವೆ ಅವಳು ಎರಡು ಗಂಡು ಮಕ್ಕಳನ್ನು ಹೆತ್ತಮೇಲೆ, ಮಕ್ಕಳನ್ನು ತಾನಿಟ್ಟುಕೊಂಡು ಅವಳನ್ನು ಒಂದು ಮಧ್ಯರಾತ್ರಿ ಉಟ್ಟ ಬಟ್ಟೆಯಲ್ಲಿ ಬೀದಿಗೆ ಬಿಸಾಕಿದ. ಬಟ್ಟೆ ಕೊಡದೆ, ಒಂದು ನಯಾಪೈಸಾ ಕೊಡದೆ ಅವಳ ಹತ್ತಿರದಿಂದ ಎಲ್ಲವನ್ನೂ ಕಿತ್ತುಕೊಂಡು ಹೊರಹಾಕಿದ. ಅವಳು ಸಹಜವಾಗಿ ತನ್ನ ಅಮ್ಮ ಅಪ್ಪನ ಮನೆಗೆ ಹೋದರೆ ಅಲ್ಲಿಂದಲೂ ಅವಳನ್ನು ಹೊರ ಅಟ್ಟಿದರು.
ಇಂತಹ ಸಮಯದಲ್ಲಿ ಅವಳು ಮೂರನೇ ಮಗುವಿನ ಪ್ರೆಗ್ನೆನ್ಸಿಯಲ್ಲಿದ್ದಳು. ಅವಳು ಮತ್ತೆ ತನ್ನ ಗಂಡನ ಮನೆಗೆ ಹೋದಳು. ಹೇಗೋ ಅವನನ್ನು ಒಲಿಸಿ ಮನೆಗೆ ಸೇರಿಕೊಳ್ಳುವುದಕ್ಕೆ. ಇದನ್ನು ಹೇಳುವಾಗ ನನ್ನ ತರ್ಜುಮೆ ಅಟೋಮ್ಯಾಟಿಕ್ ಆಗಿ ನಿಂತು ಅಷ್ಟು ಹೊತ್ತಿಗೆ ಅವಳ ಕಣ್ಣಲ್ಲಿ ನನ್ನ ಕಣ್ಣಲ್ಲಿ ನೀರು. ಆದ್ರೆ ಅವನು, ಅವಳನ್ನು ಒದ್ದು ಒದ್ದು ಹೊರಹಾಕಿದ. ಆತ ಒದ್ದ ಪರಿಣಾಮದಿಂದಾಗಿ, ಅವಳು ದಾರಿಯಲ್ಲಿ ಎಲ್ಲೋ ಬಿದ್ದಿದ್ದಾಗ ಅಬಾರ್ಷನ್ ಆಯ್ತು. ಅಲ್ಲಿ ಮತ್ತೆ ಯಾರೋ ಲೈಂಗಿಕ ಕೆಲಸ ಮಾಡುವವಳು ಬಂದು ಇವಳನ್ನು ಆಸ್ಪತ್ರೆಗೆ ಸೇರಿಸಿ, ಆರೈಕೆ ಮಾಡಿದಳು. ಹುಷಾರಾದ ಮೇಲೆ ಬೇರೇ ಏನೇ ಕೆಲಸಕ್ಕೆ ಹೋದರೂ ಲೈಂಗಿಕ ಕಿರುಕುಳ ತಡೆಯಲಾರದೆ ಕೊನೆಗೆ ಲೈಂಗಿಕ ಕೆಲಸಕ್ಕೆ ಇಳಿದಳು. ಮೊದಮೊದಲು ತುಂಬಾ ಡಿಮಾಂಡಿತ್ತಂತೆ. ಇದನ್ನು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದಳು. “ನಾನೆಷ್ಟು ಸುಂದರಿ” ಅಂತ ಪ್ರತೀದಿನ ಜಡೆಯ ಸೈಡಲ್ಲಿ ಒಂದು ಗುಲಾಬಿ ಮುಡ್ಕೊಂಡು ನಗುವನ್ನು ಚೆಲ್ಲುತ್ತಾ ಎಲ್ಲರ ಜೊತೆ ಚಟಪಟ ಚಟಪಟ ಮಾತಾಡ್ತಾ ಒಡಾಡ್ತಾ ಇದ್ಲು.
ಹಾಗೆ ಕೆಲಸ ಮಾಡ್ತಾ ಮಾಡ್ತ ಅವಳು ಪಾಸಿಟಿವ್ ಆಗಿದ್ದು ಗೊತ್ತಾಗಿದ್ರೂ ಕೆಲಸ ಬಿಡದೆ ಮುಂದುವರಿಸಿದ್ಲು. ಎನ್ ಜಿ ಒ ಒಂದರ ಜೊತೆ ಸೇರಿ ಲೈಂಗಿಕ ಕೆಲಸ ಮಾಡುವವರ ಯೂನಿಯನ್ ಕಟ್ಟಿದಳು. ಯಾವಾಗ್ಲು ಚಕಚಕ ಅಂತ ಓಡಾಡ್ತಿದ್ದ ಅವಳಿಗೆ ಹಲವು ಇನ್ಫೆಕ್ಷನ್ ಗಳೂ ದೇಹದಲ್ಲಿ ಶುರುವಾಗಿ ದೂರದ ಆಸ್ಪತ್ರೆಯಲ್ಲಿ ತೀರಿಕೊಂಡಳು. ತೀರಿಕೊಳ್ಳುವ ಕೆಲ ತಿಂಗಳುಗಳ ಮೊದಲು ನಮ್ಮ (ನಾನು ನನ್ನ ದೋಸ್ತ್ ಸುನಿಲ) ಮನೆಗೆ ಬಂದು ತುಂಬಾ ದಿವಸದಿಂದ ಸರಿಯಾಗಿ ತಿಂದಿಲ್ಲ ಸ್ವಲ್ಪ ಊಟ ಕೊಡು ಸುನಿಲ ಅಂತ ಕೇಳಿದ್ಲು. ಆವತ್ತು ನಾನು ಸುನಿಲ ಸೇರಿ ಅವಳಿಗೆ ಇಷ್ಟವಾದ ಮಟನ್ ಅಡಿಗೆ ಮಾಡಿದೆವು. ನಾನು ಅವಳಿಗೆ ಬೆಳ್ಳುಳ್ಳಿ ಸಾರು ಕುಡಿಯಕ್ಕೆ ಮಾಡಿಕೊಟ್ಟೆ. ಅದೆಲ್ಲಾ ಆದ ಮೇಲೆ ಅವಳು “ನಾನು ಸಾಯ್ತೀನಿ ಕಣ್ರೋ. ಅದ್ಕೆ ಕಡೆಗೊಮ್ಮೆ ನಿಮ್ಮ ಜೊತೆ ಕುಡಿಯಕ್ಕೆ ಬಂದೆ” ಅಂದ್ಲು. ಅವಳಿಗೆ ಕುಡಿಯಲು ಕೊಡುವುದೋ ಬೇಡವೋ ಗೊತ್ತಾಗದೆ ಒಬ್ಬರನ್ನೊಬ್ಬರು ನೋಡುತ್ತಿದ್ದಾಗ ಅವಳು ಯಾರಿಗೋ ಫೋನ್ ಮಾಡಿ ತರಿಸಿಯೇ ಬಿಟ್ಲು. ಅದೇ ಕೊನೆ.. ಹೊಟ್ಟೆ ತುಂಬಾ ನಕ್ಕು, ಬಾಯಿ ತುಂಬಾ ಮಾತಾಡಿ ಹೋದ್ಲು. ಅವಳು ತೀರಿದ ಸುದ್ದಿ ಕೇಳಿ ನಾವಿಬ್ಬರೂ ತುಂಬಾ ಅತ್ತೆವು. ಆದ್ರೆ ನಮಗೆ ಹೊಡೆದಂತ ವಿಷಯ ಏನೆಂದರೆ ನಾವು ಅವಳ ಶವದ ಬಳಿ ಹೋಗಬೇಕಿತ್ತು ಅಂತ. ಅವಳ ಶವವನ್ನು ಮನೆಯ ಮುಂದೆ ಇಟ್ಟುಕೊಂಡೇ ಅವಳು ಜೀವನವಿಡೀ ಸಂಪಾದಿಸಿದ ವಸ್ತುಗಳನ್ನು ಎನ್ ಜಿ ಒ ದವರು, ಅವರಿವರು ಎತ್ತಿಕೊಂಡರು. ಸ್ವಂತ ಮಕ್ಕಳೂ ಮನಸಿಲ್ಲದೆ ನೋಡಲು ಬಂದು ಕೊಟ್ಟ ದುಡ್ಡನ್ನೆಲ್ಲಾ ತೆಗೆದುಕೊಂಡು ಹೋದರು. ಕಡೆಗೆ ಅವಳ ಕಳೇಬರಕ್ಕೆ ನಾವೇ ಎಲ್ಲಾ ದುಡ್ಡು ಹಾಕಿ ಅಂತ್ಯಸಂಸ್ಕಾರ ಮಾಡಿದೆವು.
ಅವಳು ಪೊಲೀಸಿನ ಕೈಲಿ ಬಹಳ ಹುಷಾರಾಗಿ ತಪ್ಪಿಸ್ಕೊತಿದ್ಲು. ಹಿಡಿಯಕ್ಕೆ ಹೋದ ಪೊಲೀಸಿಗೆ ಮೆಲ್ಲಗೆ ಪೂಸಿ ಹೊಡೆದು, ಕುಡಿಸಿ ಸುಖ ಕೊಟ್ಟು ಎಸ್ಕೇಪ್ ಆಗ್ತಿದ್ಲು. ಅದೇ ಫೀಲ್ಡಿನಲ್ಲಿ ಅವಳಿಗೆ ಒಬ್ಬಳು ಪ್ರೇಮಿ ಇದ್ದಳು. ಅವಳಿಗೆ ಅತೀವ ದು:ಖವಾಗುತ್ತಿದ್ದುದು ಅವಳ ಗಂಡಸು ಪಾರ್ಟನರ್ ನಿಂದ ಅಲ್ಲ. ಅದು ಈ ಮಹಿಳಾ ಪ್ರೇಮಿಯಿಂದ ಮಾತ್ರ. ಒಮ್ಮೆ ಕ್ಲೈಂಟೋ ಸಾಲಿಸಿಟಿಂಗೋ ಯಾವುದಕ್ಕೂ ಅಲ್ಲದೇ ಇವರಿಬ್ಬರ ಪ್ರೇಮ ಕಲಹ ಮೆಜೆಸ್ಟಿಕ್ ಬೀದಿಯಲ್ಲಿ ಮಿತಿಮೀರಿ ಪೊಲೀಸರು ಇಬ್ಬರನ್ನೂ ಹಿಡಿದುಕೊಂಡು ಹೋದರು. ನಾನು ಸುನಿಲ ಸ್ಟೆಷನ್ನಿನಲ್ಲಿ ಇವರಿಬ್ಬರನ್ನೂ ಅಕ್ಕ ತಂಗಿಯರು ಎಂದು ಸುಳ್ಳು ಹೇಳಿ ಬಿಡಿಸಿಕೊಂಡು ಬಂದೆವು. ಅದಕ್ಕೆ ಅವಳಿಗೆ ನನ್ನ ಮತ್ತು ಸುನಿಲನ ಮೇಲೆ ಕೋಪ. ಅವಳು ಮೊದಲ ಬಾರಿಗೆ ತಾನು ಒಬ್ಬ ಲೈಂಗಿಕ ಕೆಲಸ ಮಾಡುವವಳು ಮತ್ತು ಎಚ್ ಐ ವಿ ಪಾಸಿಟಿವ್ ಎಂದು ಮುಕ್ತವಾಗಿ ಸಾರ್ವಜನಿಕವಾಗಿ ಹೇಳಿಕೊಂಡಿದ್ದವಳು. ಇದರಿಂದಾಗಿ ಸಾರ್ವಜನಿಕವಾಗಿ ಆಕೆಗೆ ತುಂಬಾ ಕೆಟ್ಟ ಅನುಭವಗಳಾಗಿದ್ದವು.. ಯಾವ ಪೊಲೀಸ್ ಅವಳನ್ನು ಎಲ್ಲಿ ನೋಡಿದರೂ “ಸೂಳೆ, ಡಗಾರ್” ಎಂದು ಕೂಗುತ್ತಿದ್ದರು. ಅದಕ್ಕೆ ಅವಳು “ಸೂಳೆ ಎನ್ನುವುದು ಕೆಲಸ” ಎಂದು ತಿರುಗಿ ಕೂಗುತ್ತಿದ್ದಳು.
ಇದನ್ನೂ ಓದಿ-ನಾನು ಮದ್ವೆ ಆಗಿಲ್ಲ ಆದ್ರೂ ಕೂಡಾ ತುಂಬಾ ಮಕ್ಕಳು”
ಅವಳು ತೀರಿಕೊಂಡಿದ್ದು ನೋಡಲಾರದೆ ನಾನು ಮನೆಯಲ್ಲೇ ಉಳಿದೆ. ನನಗೆ ಅಷ್ಟು ಆಪ್ತ ಸ್ನೇಹಿತೆ ಅವಳು.. ಆದರೆ ಅವಳು ನನ್ನ ಬ್ರೆಮಿನ್ಸ್ ಬುದ್ಧಿಗೆ ಒಂದು ಪಾಠ ಕಲಿಸಿ ಹೋದಳು. ಅದಾದ ಮೇಲೆ ಹುಷಾರಿಲ್ಲ ಅಂತ ಬಿಟ್ರೆ ಯಾರು ಏನು ಊಟ ಹಾಕಿದ್ರೂ ಮುಚ್ಕೊಂಡ್ ತಿಂತೀನಿ. ಅವಳು ಯಾವಾಗಲೂ ಸಂಕ್ರಾತಿಗೆ ಸರಿಯಾಗಿ ನಮ್ಮೆಲ್ಲರನ್ನೂ ಕರೆದು ಊಟ ಡ್ರಿಂಕು ಕೊಟ್ಟು ಸತ್ಕಾರ ಮಾಡೋಳು. ಮೊದಲ ಸಾರಿ ಕರೆದಾಗ ನಾನು ಹೋದೆ. ಆಗಿ ನಾನಿನ್ನೂ ಮನೆ ಬಿಟ್ಟು ಸ್ವಂತಕ್ಕೆ ಜೀವನ ಮಾಡಲು ಶುರು ಮಾಡಿದ್ದೆಯಷ್ಟೆ. ನಾನ್ ವೆಜ್ ತಿನ್ನೋದನ್ನು ನನ್ ದೋಸ್ತರು ಹೇಳಿಕೊಡ್ತಿದ್ರು. ಹಬ್ಬದ ಸಂಭ್ರಮಕ್ಕೆ ಮಟನ್ ಸಾರು, ರಾಗಿ ಮುದ್ದೆ ಮತ್ತೆ ಕುಡಿಯಕ್ಕೆ ಬೀಯರ್ರು ಪ್ಲಸ್ ರಂ. ಎಲ್ಲರೂ ಕೂತ್ವಿ. ಬಾಳೆ ಎಲೆ ಹಾಕಿದ್ಲು. ನೋಡ್ನೋಡ್ತಿದ್ದಂಗೆ ಮುದ್ದೆ ಹಾಕಿದ್ಲು ಆಮೇಲೆ ಮಟನ್ ಸಾರು. ನಾನು ಹಿಂದೆ ಮುಂದೆ ಮಾಡಿ ನಾನು ವೆಜಿಟೇರಿಯನ್ ಅಂದದ್ದೇ “ಐಯ್ ಇದ್ಯೇನೇಳೋ ಮಾತು, ಮಟನ್ ತಿಂದು ಪಗಡ್ದಸ್ತಾಗಿ ಕೆಲಸ ಮಾಡ್ಬೇಕು…. ಸುಮ್ನೆ ತಿನ್ನು ರೂಮಿ, ಕತೆ ಯೋಳ್ಬೇಡ” ಅಂದ್ಲು. ಒಂಚೂರು ತುಟಕ್ ಪಿಟಕ್ ಅಂದೆ ತಿಂದೆ. ಅವಳ ಆ ಪ್ರೀತಿಯ ಮುಂದೆ ನನಗೆ ಮತ್ತೇನಿರಲಿಲ್ಲ. ಅವಳನ್ನ ಮನೆಗೆ ಕರೆದು ಒಂದಿನ ಬೀಫ್ ಮಾಡಿಕೊಟ್ಟಿದ್ದೆ. ಅಗ ಅವಳು “ನಿನ್ ಬರಮಿನ್ಸ್ ಎಲ್ಲಾ ಬಿಟ್ಟೋಯ್ತು ಕಣೋ ತೂ ….. ನನ್ ಮಗ್ನೆ” ಅಂದು ಜೋರಾಗಿ ನಕ್ಕಿದ್ಲು.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ. ಇವರು ಬರೆಯುವ ‘ರೂಮಿ ಕಾಲಂ’ ಪ್ರತಿ ಮಂಗಳವಾರ ಪ್ರಕಟವಾಗಲಿದೆ.