ಕರ್ನಾಟಕ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025- ಸಕಾರಣವಿಲ್ಲದ ವಿರೋಧ

Most read

ಸಮೀಕ್ಷೆ ಕುರಿತಂತೆ ಮಾಹಿತಿಗಳನ್ನು ನೀಡುವುದು ಕಡ್ಡಾಯವಿಲ್ಲ. ಆದರೂ ಸಾಮಾಜಿಕ, ಆರ್ಥಿಕ ಹಾಗೂ ಇತರ ಬಂಡವಾಳವಿರುವ ಇಂತಹ ಪ್ರತಿಷ್ಠಿತ ವ್ಯಕ್ತಿಗಳು ಎಂದೆನಿಸಿಕೊಂಡವರ ಸಮೀಕ್ಷಾ-ನಿರಾಕರಣೆಯ ನಡೆ ಎಷ್ಟು ಸರಿ? ಸಮೀಕ್ಷೆಯ ಇಂತಹ ನಿರಾಕರಣೆಗಳು ಯಾವ ಸಂದೇಶವನ್ನು ರವಾನಿಸುತ್ತವೆ? ಇವುಗಳ ಹಿಂದಿನ ಉದ್ದೇಶವೇನು? ಎಂತಹ ಮನಸ್ಥಿತಿ ಕೆಲಸ ಮಾಡಿದೆ? ಇವು ಸಾಮಾಜಿಕ ಜವಾಬ್ದಾರಿಯ ನಡವಳಿಕೆಯೇ? – ಮ ಶ್ರೀ ಮುರಳಿ ಕೃಷ್ಣ, ಬರಹಗಾರರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ (ಕರಾಹಿವಆ) ರಾಜ್ಯದ ಜನತೆಯ ಸಾಮಾಜಿಕ ಮತ್ತು ಶೈಕ್ಷಣಿಕ ಪರಿಸ್ಥಿತಿಯನ್ನು ಅರಿಯಲು ಮತ್ತು ದಾಖಲಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(2025)ಯನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಆಗಸ್ಟ್‌ 13, 2025 ರಂದು ಆದೇಶವನ್ನು ಹೊರಡಿಸಿತು.  

ಈ ತರಹದ ಸಮೀಕ್ಷೆ(ಸೆನ್ಸಸ್-‌ ಜನಗಣತಿ ಅಲ್ಲ) ಕಳೆದ ಬಾರಿ ಕರ್ನಾಟಕದಲ್ಲಿ 2015ರಲ್ಲಿ ಜರುಗಿತ್ತು.  ಆಗ ಕರಾಹಿವಆ ಚೇರ್ಮನ್‌ರಾಗಿದ್ದವರು ಎಚ್‌ ಕಾಂತರಾಜ್.‌  ಈ ಸಮೀಕ್ಷೆ 2015ರಲ್ಲೇ ಸಮಾಪ್ತಿಗೊಂಡರೂ ಅದರ ವರದಿಯನ್ನು ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಲಿಲ್ಲ. ಆದರೆ ಅದರ ಅಂಶಗಳು ಸೋರಿಕೆಯಾದವು.  2024ರಲ್ಲಿ ವರದಿ ಬಿಡುಗಡೆಯಾಯಿತು. ಇದಕ್ಕೆ ರಾಜಕೀಯವಾಗಿ ಬಲಾಢ್ಯವಾಗಿರುವ ಒಕ್ಕಲಿಗ, ಲಿಂಗಾಯತ ಮತ್ತು ಇತರ ಕೆಲವು ಸಮುದಾಯದ ನಾಯಕರು ವಿರೋಧವನ್ನು ವ್ಯಕ್ತಪಡಿಸಿದರು. ಈ ವರ್ಷದ ಜೂನ್‌ನಲ್ಲಿ  2015ರ ಸಮೀಕ್ಷೆಯ ವರದಿಯ ವಿವರಗಳು ಹಳತಾಗಿವೆ ಎಂದು ರಾಜ್ಯ ಸರ್ಕಾರ ನಿರ್ಣಯಿಸಿ, ಹೊಸ ಸಮೀಕ್ಷೆಗೆ ನಾಂದಿಯನ್ನು ಹಾಡಿತು. ಇಂತಹ ಸಮೀಕ್ಷೆ ಇತ್ತೀಚಿನ ವರ್ಷಗಳಲ್ಲಿ ಬಿಹಾರ, ತೆಲಂಗಾಣ ರಾಜ್ಯಗಳಲ್ಲಿ ಜರುಗಿದೆ.

ನಮ್ಮ ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಶ್ರೇಣೀಕರಣಕ್ಕೆ ಹಲವಾರು ಶತಮಾನಗಳ ಚರಿತ್ರೆಯಿದೆ. ಸಾಮಾಜಿಕ ಅಸಮಾನತೆ/ ಹಿಂದುಳಿದಿರುವಿಕೆಯ ಮಾಪನಿಸುವುದಕ್ಕೆ ನಿರ್ದಿಷ್ಟ ಮಾನದಂಡಗಳಿವೆ. ಅಂತಹ ಸಮುದಾಯಗಳು/ವ್ಯಕ್ತಿಗಳ ವಿಕಸನಕ್ಕೆ ಎಲ್ಲ ತೆರನಾದ ಬೆಂಬಲವನ್ನು ನೀಡುವುದು ಸರ್ಕಾರದ ಕರ್ತವ್ಯ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ನಿಟ್ಟಿನಲ್ಲಿ ಮೇಲೆ ಪ್ರಸ್ತಾಪಿಸಿರುವ ಸಮೀಕ್ಷೆಯಂತಹ ಪ್ರಕ್ರಿಯೆಗಳು ಸಾಮಾಜಿಕ‌ ಒಳಗೊಳ್ಳುವಿಕೆಗೆ ಪುಷ್ಟಿಯನ್ನು ನೀಡುತ್ತವೆ. ಯಾವ ಸಮುದಾಯಗಳು/ವ್ಯಕ್ತಿಗಳಿಗೆ ಎಂತಹ ಕಲ್ಯಾಣ ಯೋಜನೆಗಳನ್ನು ರೂಪಿಸಬೇಕೆಂಬ ವಿಷಯದಲ್ಲಿ ಇಂತಹ ಸಮೀಕ್ಷೆಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.

2025ರ ಸಮೀಕ್ಷೆಯ ಪ್ರಾರಂಭದ ಹಂತದಲ್ಲೇ ಅದನ್ನು ವಿರೋಧಿಸಿ ರಾಜ್ಯ ಒಕ್ಕಲಿಗರ ಸಂಘ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಮಾಜಿ ಶಾಸಕರೂ ಆದ ಹಿರಿಯ ವಕೀಲ ಕೆ ಎನ್‌ ಸುಬ್ಬಾ ರೆಡ್ಡಿ ಮತ್ತಿತರರು ಪ್ರತ್ಯೇಕ ಪಿಐಎಲ್‌ಗಳನ್ನು ಸಲ್ಲಿಸಿದರು.  ರಾಜ್ಯದ ಉಚ್ಚ ನ್ಯಾಯಾಲಯ ಸೆಪ್ಟಂಬರ್‌ 25,2025ರಂದು ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಸ್ವಯಂಪ್ರೇರಿತ ಎಂಬ ಮಧ್ಯಂತರ ಆದೇಶವನ್ನು ನೀಡಿತು.  

ಪ್ರಸ್ತುತ ಸಮೀಕ್ಷೆಗೆ ಬಿಜೆಪಿಯ ಕೆಲವು ನಾಯಕರು ವಿರೋಧವನ್ನು ವ್ಯಕ್ತಪಡಿಸಿದರು.  ಅದರಲ್ಲಿ ರಾಜಕೀಯ ಕಾರಣವೇ ಮುಖ್ಯವಾಗಿತ್ತು. ಕೇಂದ್ರದಲ್ಲಿ ಮಂತ್ರಿಯಾಗಿರುವ ವಿ ಸೋಮಣ್ಣ, “ ಮೇಲ್ಜಾತಿಗಳನ್ನು ತುಳಿಯುವ ಸಲುವಾಗಿ ಜಾತಿವಾರು ಸಮೀಕ್ಷೆ ಮಾಡಲಾಗುತ್ತಿದೆ “ ಎಂಬ ಹೇಳಿಕೆಯನ್ನು ನೀಡಿದರು! ಇನ್ನು ಕೆಲವರು ಸಿದ್ದರಾಮಯ್ಯ ತಮ್ಮ ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವುದಕ್ಕೆ ಮತ್ತು ಕಾಂಗ್ರೆಸ್‌ನ ಹೈಕಮಾಂಡನ್ನು ಮೆಚ್ಚಿಸಲು ಈ ಸಮೀಕ್ಷೆಯ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆಪಾದಿಸಿದರು! ಹೀಗೆ ತರಾವರಿ ಹೇಳಿಕೆಗಳು ಹರಿದಾಡಲು ಶುರುವಾದವು.

ಸಮೀಕ್ಷೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಾರಂಭವಾದ ನಂತರ ಸಮೀಕ್ಷಕರು ಹಲವು ತೆರನಾದ ಅಡ್ಡಿ-ಆತಂಕಗಳನ್ನು ಎದುರಿಸಬೇಕಾಯಿತು.  ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಕರಪತ್ರಗಳನ್ನು ಹಂಚಿ, ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಾರದೆಂದು ತಿಳಿಸಲಾಗಿದೆ ಎಂಬ ಮಾಹಿತಿ ಓಡಾಡುತ್ತಿದೆ.  ಅಲ್ಲದೆ ಕೆಲವು ಸಮೀಕ್ಷಕರು, “ ಸಮೀಕ್ಷೆಗೆ ಮಾಹಿತಿಗಳನ್ನು ನೀಡಿದರೆ ಬಿಪಿಎಲ್‌ ಕಾರ್ಡ್‌ ರದ್ದಾಗುತ್ತದೆ….” ಎಂದು ತಮಗೆ ಕೆಲವು ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಕೆಲವು ಮಂದಿ ಹೇಳಿದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.  ಇಂತಹ ಬೆಳವಣಿಗೆಗಳ ಹಿಂದೆ ಯಾವ ಶಕ್ತಿಗಳ ಷಡ್ಯಂತರಗಳಿವೆ, ಯಾರ ಕೈವಾಡಗಳಿವೆ ಎಂದು ಊಹಿಸುವುದಕ್ಕೆ ಕಷ್ಟವಾಗುವುದಿಲ್ಲ! ಈ ಸಮೀಕ್ಷೆ ಹಳ್ಳ ಹಿಡಿಯಬೇಕು ಎಂಬುದು ಪಟ್ಟಭದ್ರ ಹಿತಾಸಕ್ತಿಗಳ, ಯಥಾಸ್ಥಿತಿವಾದಿಗಳ ಉದ್ದೇಶವಾಗಿದೆ ಎಂಬುದು ಢಾಳಾಗಿಯೇ ಗೋಚರಿಸುತ್ತಿದೆ.

ಇದೇ ತಿಂಗಳ ಹತ್ತನೇ ತಾರೀಖಿನಂದು ಸಮೀಕ್ಷಕರು ಇನ್ಪೋಸಿಸ್‌ ಸಂಸ್ಥೆಯ ಸ್ಥಾಪಕ/ ಖ್ಯಾತ ಸಾಫ್ಟ್ವೇರ್ ಉದ್ಯಮಿ ನಾರಾಯಣ ಮೂರ್ತಿ ಮತ್ತು ಲೇಖಕಿ, ರಾಜ್ಯಸಭೆಯ ಸದಸ್ಯೆ ಸುಧಾ ಮೂರ್ತಿಯವರ ನಿವಾಸಕ್ಕೆ ಭೇಟಿ ನೀಡಿದರು.  ಆ ಸಂದರ್ಭದಲ್ಲಿ ಅವರು ತಾವು ಹಿಂದುಳಿದ ಯಾವ ಜಾತಿಗೂ ಸೇರಿದವರಲ್ಲ. ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ.  ಹೀಗಾಗಿ ಇದರಲ್ಲಿ ಭಾಗವಹಿಸುವುದಿಲ್ಲ ಎಂಬರ್ಥದ ವಾಕ್ಯಗಳನ್ನು ಅವರು ಸ್ವಯಂ ದೃಢೀಕರಣ ಪತ್ರದಲ್ಲಿ ಬರೆದಿದ್ದಾರೆ ಎಂಬ ವಿಷಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಈ ವಿವಿಐಪಿ ದಂಪತಿಯ ಇಂತಹ ನಿಲುವಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಠೀಕೆಗಳು ಬಂದವು.  ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಸಮಾಧಾನವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸಿದರು.  ಕಾಂಗ್ರೆಸ್‌ ನಾಯಕ ಬಿ ಕೆ ಹರಿಪ್ರಸಾದ್‌ ಅವರು ತರಾಟೆ ತೆಗೆದುಕೊಂಡರು.

ಈ ಸಮೀಕ್ಷೆ ಕುರಿತಂತೆ ಮಾಹಿತಿಗಳನ್ನು ನೀಡುವುದು ಕಡ್ಡಾಯವಿಲ್ಲ. ಆದರೂ ಸಾಮಾಜಿಕ, ಆರ್ಥಿಕ ಹಾಗೂ ಇತರ ಬಂಡವಾಳವಿರುವ ಇಂತಹ ಪ್ರತಿಷ್ಠಿತ ವ್ಯಕ್ತಿಗಳು ಎಂದೆನಿಸಿಕೊಂಡವರ ಸಮೀಕ್ಷಾ-ನಿರಾಕರಣೆಯ ನಡೆ ಎಷ್ಟು ಸರಿ? ಸಮೀಕ್ಷೆಯ ಇಂತಹ ನಿರಾಕರಣೆಗಳು ಯಾವ ಸಂದೇಶವನ್ನು ರವಾನಿಸುತ್ತವೆ? ಇವುಗಳ ಹಿಂದಿನ ಉದ್ದೇಶವೇನು? ಎಂತಹ ಮನಸ್ಥಿತಿ ಕೆಲಸ ಮಾಡಿದೆ? ಇವು ಸಾಮಾಜಿಕ ಜವಾಬ್ದಾರಿಯ ನಡವಳಿಕೆಯೇ? ಕೇಂದ್ರ ಸರ್ಕಾರ ಮುಂದಿನ ಜನಗಣತಿಯಲ್ಲಿ ಜಾತಿಯ ಅಂಶ ಕೂಡ ಒಳಗೊಂಡಿರುತ್ತದೆ ಎಂದು ಈಗಾಗಲೇ ತಿಳಿಸಿದೆ.  ದೊಡ್ಡವರು ಎಂದೆನಿಸಿಕೊಂಡವರು ಆಗ ಜನಗಣತಿಯನ್ನು ನಿರಾಕರಿಸುತ್ತಾರೆಯೇ? ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರಜ್ಞಾವಂತ ನಾಗರಿಕರು ಕೇಳಬೇಕಾಗುತ್ತದೆ.

ಇಂತಹ ಸಮೀಕ್ಷೆಗಳನ್ನು ಜರುಗಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳ ಬೇಕಾಗುತ್ತದೆ.  ರಾಜ್ಯ ಸರ್ಕಾರ ಈ ಅಂಶಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕಿತ್ತು.

ಮ ಶ್ರೀ ಮುರಳಿ ಕೃಷ್ಣ

More articles

Latest article