ಮಾಹಿತಿ ಹಕ್ಕಿಗೆ ( RTI) ಇಪ್ಪತ್ತು ವರ್ಷ!

Most read

ಮಾಹಿತಿ ಹಕ್ಕಿಗೆ ಈಗ ಇಪ್ಪತ್ತು ವರ್ಷವಾಗಿದೆ. ಸವಾಲುಗಳ ನಡುವೆಯೂ ಅದು ತಕ್ಕಮಟ್ಟಿಗಾದರೂ ಪರಿಣಾಮಕಾರಿಯಾಗಿ ಉಳಿದುಕೊಂಡಿದೆ. ಆಡಳಿತದಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುವ ಮತ್ತು ಸರಕಾರವನ್ನು ಉತ್ತರದಾಯಿಯಾಗಿಸುವ ಮೂಲಕ ಆಡಳಿತದಲ್ಲಿ ಭ್ರಷ್ಟಾಚಾರ ನುಸುಳದಂತೆ ನೋಡಿಕೊಳ್ಳುವಲ್ಲಿ ಜನರ ಕೈಯಲ್ಲಿರುವ ಈ ಒಂದು ಪ್ರಬಲ ಅಸ್ತ್ರವನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳುವ ಅಗತ್ಯವಿದೆ -ಶ್ರೀನಿವಾಸ ಕಾರ್ಕಳ.

ಸರಕಾರವೊಂದು ಎಷ್ಟು ವರ್ಷ ಅಧಿಕಾರದಲ್ಲಿದೆ ಎನ್ನುವುದು ಮುಖ್ಯವಲ್ಲ. ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಜನೋಪಯೋಗಿಯಾದ ಏನನ್ನು ಅದು ಮಾಡಿದೆ ಎನ್ನುವುದು ಮುಖ್ಯ.

ನರೇಂದ್ರ ಮೋದಿಯವರ ನೇತೃತ್ವದ ಎನ್‌ ಡಿ ಎ ಸರಕಾರ ಹನ್ನೊಂದು ವರ್ಷಗಳಿಗೂ ಅಧಿಕ ಕಾಲದಿಂದ ಅಧಿಕಾರದಲ್ಲಿ ಮುಂದುವರಿದಿದೆ. ಆದರೆ, ಅದರ ಸಾಧನೆಗಳು ಏನು ಎನ್ನುವುದನ್ನು ಲೆಕ್ಕ ಹಾಕುವಾಗ ನೆನಪಾಗುವುದೆಲ್ಲ ನೋಟು ನಿಷೇಧ, ವಿವೇಚನಾರಹಿತ ಲಾಕ್‌ ಡೌನ್‌, ಅಧ್ವಾನದಿಂದ ಕೂಡಿದ ಜಿ ಎಸ್‌ ಟಿ, ಸಿಎಎ, ತಲಾಖ್‌, ವಕ್ಫ್‌, ವಿಧಿ 37 0 ರದ್ಧತಿ, ಜಾತಿ ಆಧಾರಿತ ಮೀಸಲಾತಿ ದುರ್ಬಲಗೊಳಿಸಿದ್ದು, ಪರಿಷ್ಕೃತ ಯುಎಪಿಎ ಯಂತಹ ಅನಾಹುತಗಳೇ ಹೊರತು, ದೇಶದ ಕಟ್ಟಕಡೆಯ ಪ್ರಜೆಯ ನಿತ್ಯ ಬದುಕಿಗೆ ಅನುಕೂಲವಾಗುವಂತಹ ಯಾವುದೇ ಕಾರ್ಯಕ್ರಮ ನೆನಪಾಗುವುದಿಲ್ಲ.

ಇದಕ್ಕೆ ಭಿನ್ನವಾಗಿ ಡಾ ಮನಮೋಹನ್‌ ಸಿಂಗ್‌ ರ ಸರಕಾರ ಅಧಿಕಾರದಲ್ಲಿ ಇದ್ದುದು ಕೇವಲ ಹತ್ತು ವರ್ಷ. ಆದರೆ ಈ ಹತ್ತು ವರ್ಷಗಳ ಅವಧಿಯಲ್ಲಿಯೇ ಅದು ಮಾಹಿತಿ ಹಕ್ಕು, ಉದ್ಯೋಗ ಭದ್ರತೆ (ನರೇಗಾ), ಶಿಕ್ಷಣ ಹಕ್ಕು, ಆಹಾರ ಭದ್ರತೆ, ಭೂ ಅಧಿಗ್ರಹಣ ನಿಯಮ, ಹೀಗೆ ದೇಶದ ಪ್ರತಿಯೊಬ್ಬ ವ್ಯಕ್ತಿಗೂ, ವಿಶೇಷವಾಗಿ ಕಡುಬಡವರಿಗೆ, ದುರ್ಬಲ ವರ್ಗಗಳಿಗೆ ಉಪಕಾರವಾಗುವ ಅನೇಕ ಕಾರ್ಯಕ್ರಮಗಳನ್ನು ಕೊಟ್ಟಿತು. ಕೊರೋನಾ ಕಾಲದಲ್ಲಿ ದೇಶದ ಜನರ ನೆರವಿಗೆ ಬಂದುದು ಯುಪಿಎ ಸರಕಾರದ ಕಾಲದ ನರೇಗಾ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ ಇತ್ಯಾದಿ ಎನ್ನುವ ವಾಸ್ತವವನ್ನು ಮರೆಯುವುದಾದರೂ ಹೇಗೆ?

ಈ ಎಲ್ಲ ಕಾರ್ಯಕ್ರಮಗಳಲ್ಲಿ ಎದ್ದು ಕಾಣುವಂಥದ್ದು ಎಂದರೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಮೂಲಕ ದೇಶದ ಆಡಳಿತದಲ್ಲಿ ಮಹತ್ತರ ಪರಿವರ್ತನೆಗೆ ಕಾರಣವಾದ ʼಮಾಹಿತಿ ಹಕ್ಕು- 2005ʼ (The Right to Information Act, 2005).

ಇತಿಹಾಸ

2005 ರಲ್ಲಿ ಕಾಯಿದೆಯ ರೂಪ ಪಡೆದ ಮಾಹಿತಿ ಹಕ್ಕು ಒಂದು ಅಭೂತಪೂರ್ವ ಕಾಯಿದೆಯಾಗಿದ್ದು ಅದು ಸರಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಅಧಿಕಾರವನ್ನು ಪ್ರಜೆಗಳಿಗೆ ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿತ್ವಕ್ಕೆ ಕಾರಣವಾಯಿತು. ಇದರ ಹಿಂದೆ ಪ್ರಜಾತಾಂತ್ರಿಕ ಹಕ್ಕುಗಳು, ತಳಮಟ್ಟದ ಹೋರಾಟಗಳು, ಕಾಯಿದೆಯ ವಿಕಾಸ ಹೀಗೆ ದೀರ್ಘ ಹೋರಾಟದ ಒಂದು ಇತಿಹಾಸವಿದೆ.

  • 1975: ಉತ್ತರಪ್ರದೇಶ ವರ್ಸಸ್‌ ರಾಜನಾರಾಯಣ್‌ ಪ್ರಕರಣದಲ್ಲಿ ʼಮಾಹಿತಿ ಹಕ್ಕುʼ ಸಂವಿಧಾನದ ವಿಧಿ 19(1)(ಎ) ಅಡಿಯ ಅಭಿವ್ಯಕ್ತಿ ಹಕ್ಕಿನ ಮೂಲಭೂತ ಅಂಶ ಎಂದು ಸರ್ವೋಚ್ಚ ನ್ಯಾಯಾಲಯವು ಮಾನ್ಯ ಮಾಡಿತು. ಮಾಹಿತಿ ಹಕ್ಕಿಗೆ ಮೂಲತಃ ನ್ಯಾಯಿಕ ಬುನಾದಿ ಬಿದ್ದುದು ಇಲ್ಲಿಂದ.

19801990: ಆಡಳಿತದಲ್ಲಿ ಪಾರದರ್ಶಕತೆಯನ್ನು ಆಗ್ರಹಿಸುವ ತಳಮಟ್ಟದ ಚಳುವಳಿಗಳು ವಿಶೇಷವಾಗಿ ಗ್ರಾಮೀಣ ಭಾರತದಲ್ಲಿ ಆರಂಭವಾದುವು. 1990 ರಲ್ಲಿ ರಾಜಸ್ತಾನದಲ್ಲಿ ಸ್ಥಾಪನೆಯಾದ ʼಮಜದೂರ್‌ ಕಿಸಾನ್‌ ಶಕ್ತಿ ಸಂಘಟನ್ʼ (MKSS) ಸರಕಾರಿ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಸರಕಾರಿ ದಾಖಲೆಗಳನ್ನು ನೋಡುವ ಅವಕಾಶ ಸಿಗಬೇಕು ಎಂದು ಆಗ್ರಹಿಸುವ ಮೂಲಕ ಇದರಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿತು.

  • 1996: ಎಮ್‌ ಕೆ ಎಸ್‌ ಎಸ್‌ ಸಾರ್ವಜನಿಕ ವಿಚಾರಣೆ (ಜನ್‌ ಸುನ್‌ ವಾಯಿ) ಶುರು ಮಾಡಿತು.  ಇದರಲ್ಲಿ ಗ್ರಾಮಸ್ಥರು ಸರಕಾರಿ ದಾಖಲೆಗಳನ್ನು ಆಗ್ರಹಿಸಿದರು ಮತ್ತು ಅವುಗಳನ್ನು ತಪಾಸಣೆಗೆ ಒಳಪಡಿಸಿದರು. ಔಪಚಾರಿಕವಾದ ಮಾಹಿತಿ ಹಕ್ಕಿನ ಅಗತ್ಯವನ್ನು ಎತ್ತಿ ತೋರಿಸಿದರು. ಇದು ಇಡೀ ದೇಶದ ಗಮನ ಸೆಳೆಯಿತು ಮತ್ತು ಈ ಸಂಬಂಧದ ಔಪಚಾರಿಕ ಕಾನೂನೊಂದರ ಬೇಡಿಕೆಗೆ ಚಾಲನೆ ನೀಡಿತು.

ಶಾಸನ ಸಂಬಂಧಿತ ಬೆಳವಣಿಗೆಗಳು

  • 19961997: ʼಮಾಹಿತಿಯ ಜನತಾ ಹಕ್ಕಿಗಾಗಿ ರಾಷ್ಟ್ರೀಯ ಅಭಿಯಾನ (NCPRI)ʼ ಇದನ್ನು ರಾಷ್ಟ್ರೀಯ ಮಾಹಿತಿ ಹಕ್ಕು ಕಾನೂನಿಗಾಗಿ ಒತ್ತಡ ಹಾಕುವ ಉದ್ದೇಶದಿಂದ ಸ್ಥಾಪಿಸಲಾಯಿತು. ಇದೇ ಹೊತ್ತಿನಲ್ಲಿ ʼಪ್ರೆಸ್‌ ಕೌನ್ಸಿಲ್‌ ಆಫ್‌ ಇಂಡಿಯಾʼ ಮತ್ತು ʼಬಳಕೆದಾರ ಶಿಕ್ಷಣ ಮತ್ತು ಸಂಶೋಧನೆʼ ಇವರು ಮಾಹಿತಿ ಹಕ್ಕು ಶಾಸನದ ಮಾದರಿಯನ್ನು ತಯಾರಿಸಿದವು.
  • 1997: ತಮಿಳುನಾಡು ಮಾಹಿತಿ ಹಕ್ಕು ಜ್ಯಾರಿಗೊಳಿಸಿದ ಮೊದಲ ರಾಜ್ಯವಾಯಿತು. ಇದರ ಬೆನ್ನಿಗೇ ಗೋವಾ (1997), ರಾಜಸ್ತಾನ (2000), ಕರ್ನಾಟಕ (2000), ದಿಲ್ಲಿ (2001), ಮಹಾರಾಷ್ಟ್ರ (2002), ಅಸ್ಸಾಂ (2002), ಮಧ್ಯಪ್ರದೇಶ (2003) ಮತ್ತು ಜಮ್ಮು ಕಾಶ್ಮೀರ (2004) ಇವು ಕೂಡಾ ಆರ್‌ ಟಿ ಐ ಜಾರಿಗೊಳಿಸಿದವು. ವ್ಯಾಪ್ತಿ ಮತ್ತು ಪರಿಣಾಮಕಾರಿತನದಲ್ಲಿ ಈ ಕಾನೂನುಗಳಲ್ಲಿ ವ್ಯತ್ಯಾಸ ಇದ್ದವಾದರೂ, ಒಂದು ಒಳ್ಳೆಯ ಹೆಜ್ಜೆಯನ್ನಂತೂ ಇರಿಸಿದವು.
  • 2000: ಶೌರಿ ಸಮಿತಿ (1997) ಯ ಶಿಫಾರಸುಗಳನ್ನು ಆಧರಿಸಿ ಕೇಂದ್ರ ಸರಕಾರವು ಸಂಸತ್ತಿನಲ್ಲಿ ʼಮಾಹಿತಿ ಸ್ವಾತಂತ್ರ್ಯ ಕಾಯಿದೆ 2000ʼ (Freedom of Information Bill, 2000) ನ್ನು ಮಂಡಿಸಿತು. ಆದರೆ ಈ ಕಾನೂನು ದುರ್ಬಲವಾಗಿತ್ತು ಮತ್ತು ಜನರ ಅಭಿಪ್ರಾಯ ಸಂಗ್ರಹಿಸಿ ಅದನ್ನು ತಯಾರಿಸಿರಲಿಲ್ಲ.

ಮಾಹಿತಿ ಹಕ್ಕು 2005 (RTI Act, 2005) ಜ್ಯಾರಿ

  • 2002: ʼಮಾಹಿತಿ ಸ್ವಾತಂತ್ರ್ಯ ಕಾಯಿದೆʼಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಆದರೆ ಅದನ್ನು ಯಾವತ್ತೂ ಅಧಿಸೂಚಿಸಲಿಲ್ಲ, ಜ್ಯಾರಿಗೊಳಿಸಲೂ ಇಲ್ಲ. ಅದರ ಮಿತಿಗಳ ಬಗೆಗಿನ ಟೀಕೆಗಳೇ ಇದಕ್ಕೆ ಕಾರಣ.

2004: ನಾಗರಿಕ ಸಂಘಟನೆಗಳು ಮತ್ತು ಸಾಮಾಜಿಕ ಹೋರಾಟಗಾರರ ಒತ್ತಡದ ಹಿನ್ನೆಲೆಯಲ್ಲಿ ಯುಪಿಎ [United Progressive Alliance (UPA)] ಸರಕಾರವು ಬಲಿಷ್ಠ ಆರ್‌ ಟಿ ಐ ಕಾನೂನಿಗೆ ಆದ್ಯತೆ ನೀಡಿತು. ಸೋನಿಯಾ ಗಾಂಧಿ ನೇತೃತ್ವದ ನ್ಯಾಕ್‌ [National Advisory Council (NAC)]‌ ಕರಡು ಮಸೂದೆಯನ್ನು ಪರಿಷ್ಕರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿತು.

2005: ಜೂನ್‌ 15, 2005 ರಂದು ಮಾಹಿತಿ ಹಕ್ಕು 2005 (The Right to Information Act, 2005) ನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಮಾಹಿತಿ ಸ್ವಾತಂತ್ರ್ಯ ಕಾಯಿದೆಯ ಜಾಗದಲ್ಲಿ ಇದು ಬಂತು ಮತ್ತು ಜಮ್ಮು ಕಾಶ್ಮೀರ ಹೊರತುಪಡಿಸಿ (ಅದು 2019 ರವರೆಗೆ ತನ್ನದೇ ಆದ ಆರ್‌ ಟಿ ಐ ಕಾಯಿದೆ ಹೊಂದಿತು) ಇಡೀ ದೇಶದ ಸಾರ್ವಜನಿಕ ಸಂಸ್ಥೆಗಳಿಗೆ ಅನ್ವಯಿಸಿತು.

ಮಾಹಿತಿ ಹಕ್ಕು 2005 ರ ಪ್ರಧಾನ ಅಂಶಗಳು

ಯಾವುದೇ ಸಾರ್ವಜನಿಕ ಸಂಸ್ಥೆಯಿಂದ ಮಾಹಿತಿ ಕೇಳುವ ಹಕ್ಕನ್ನು ಇದು ಪ್ರಜೆಗಳಿಗೆ ನೀಡುತ್ತದೆ. 30 ದಿನಗಳಲ್ಲಿ ಇದಕ್ಕೆ ಸಂಬಂಧ ಪಟ್ಟವರು ಉತ್ತರಿಸಬೇಕಾಗುತ್ತದೆ (ಜೀವ ಮತ್ತು ಸ್ವಾತಂತ್ರ್ಯ ವಿಷಯಗಳಲ್ಲಿ 48 ಗಂಟೆ).

ಬೇಡಿಕೆ ಮತ್ತು ಮನವಿಗಳನ್ನು ನಿರ್ವಹಿಸಲು ಸಾರ್ವಜನಿಕ ಮಾಹಿತಿ ಅಧಿಕಾರಿಗಳು  [Public Information Officers (PIOs)] ಮತ್ತುಅಪೆಲೆಟ್‌ ಅಧಿಕಾರಿ (Appellate Authorities) ಗಳನ್ನು ಇದು ಸ್ಥಾಪಿಸುತ್ತದೆ.

ಎಲ್ಲಾ ಹಂತದ ಸರಕಾರಿ (ಕೇಂದ್ರ, ರಾಜ್ಯ ಮತ್ತು ಸ್ಥಳೀಯ) ಮತ್ತು ಸರಕಾರಿ ಅನುದಾನಿತ ಸಂಸ್ಥೆಗಳು ಇದರ ವ್ಯಾಪ್ತಿಗೆ ಬರುತ್ತವೆ.

ಮಾಹಿತಿಯ ಕಾನೂನು ಪಾಲಿಸದಿದ್ದರೆ ದಂಡಕ್ಕೂ ಇದು ಅವಕಾಶ ಮಾಡಿಕೊಡುತ್ತದೆ.

ರಾಷ್ಟ್ರೀಯ ಭದ್ರತೆ, ವಾಣಿಜ್ಯ ರಹಸ್ಯ ಅಥವಾ ಖಾಸಗಿ ವಿಚಾರ ಇತ್ಯಾದಿಗಳಿಗೆ ಇಲ್ಲಿ ವಿನಾಯಿತಿ ಇದೆ.

2005 ರ ನಂತರದ ಬೆಳವಣಿಗೆಗಳು

  • 20052010: ಸರಕಾರಿ ಯೋಜನೆಗಳು, ಬಜೆಟ್‌ ಗಳು ಮತ್ತು ಕಾರ್ಯ ನೀತಿ (ಪಾಲಿಸಿ) ಕುರಿತ ಮಾಹಿತಿ ಪಡೆಯಲು ಈ ಕಾಯಿದೆಯು ಮಿಲಿಯಾಂತರ ಮಂದಿಗೆ ಅವಕಾಶ ಮಾಡಿಕೊಟ್ಟಿತು. ಸರಕಾರಿ ವ್ಯವಸ್ಥೆಗಳಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ಇದು ಸಹಾಯ ಮಾಡಿತು. ಭ್ರಷ್ಟಾಚಾರ ಬಯಲಿಗೆಳೆದ ಕಾರಣಕ್ಕೇ ಅಸಂಖ್ಯ ಆರ್‌ ಟಿ ಐ ಕಾರ್ಯಕರ್ತರು ಹಲ್ಲೆಗೊಳಗಾದರು, ಅನೇಕರು ಸಾವಿಗೀಡಾದರು. ಇದು ಇಲ್ಲಿನ ಅಪಾಯವನ್ನು ಎತ್ತಿ ತೋರಿಸಿತು.
  • 2019:  ನರೇಂದ್ರ ಮೋದಿ ನೇತೃತ್ವದ ಸರಕಾರ ಮಂಡಿಸಿದ ʼಮಾಹಿತಿ ಹಕ್ಕು (ತಿದ್ದುಪಡಿ) ಕಾಯಿದೆ 2019ʼ ಇದು ವಿವಾದಕ್ಕೆ ಕಾರಣವಾಯಿತು. ತಿದ್ದುಪಡಿ ಕಾಯಿದೆಯು ಮಾಹಿತಿ ಕಮಿಷನರ್‌ ರ ಅಧಿಕಾರಾವಧಿ ಮತ್ತು ವೇತನದ ಮೇಲೆ ಕೇಂದ್ರ ಸರಕಾರಕ್ಕೆ ನಿಯಂತ್ರಣ ನೀಡಿತು. ಇದು ಕೇಂದ್ರಿಯ ಮಾಹಿತಿ ಕಮಿಷನರ್ ಮತ್ತು‌ ರಾಜ್ಯ ಮಾಹಿತಿ ಕಮಿಷನರ್‌ ಗಳ  ಸ್ವಾತಂತ್ರ್ಯವನ್ನು ದುರ್ಬಲಗೊಳಿಸಲು ನಾಂದಿ ಹಾಡಿತು.
  • 2020 ರ ಬಳಿಕ: ಮಾಹಿತಿ ಹಕ್ಕು ಈಗಲೂ ಸವಾಲು ಎದುರಿಸುತ್ತಲೇ ಇದೆ. ಮಾಹಿತಿ ಕಮಿಷನರುಗಳ ನೇಮಕಾತಿ ವಿಳಂಬ, ಅಪೀಲುಗಳು ಬಾಕಿ ಇರುವುದು ಹೆಚ್ಚುತ್ತಲೇ ಇರುವುದು, ಕಾನೂನು ವಿಧಿಗಳನ್ನು ದುರ್ಬಲಗೊಳಿಸುವ ಯತ್ನಗಳು ಇವೆಲ್ಲ ಇದರಲ್ಲಿ ಸೇರಿದೆ. ಇವೆಲ್ಲದರ ಹೊರತಾಗಿಯೂ ಸಾರ್ವಜನಿಕರ ಕೈಯಲ್ಲಿ ಇದೊಂದು ಶಕ್ತಿಶಾಲಿ ಅಸ್ತ್ರವಾಗಿಯೇ ಉಳಿದುಕೊಂಡಿದೆ. ವಾರ್ಷಿಕವಾಗಿ ಮಿಲಿಯಗಟ್ಟಲೆ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ.

ಪರಿಣಾಮ ಮತ್ತು ಮಹತ್ವ:

ಸರಕಾರಿ ಅಧಿಕಾರಿಗಳ್ನು ಉತ್ತರದಾಯಿ ಮಾಡುವ, ಭ್ರಷ್ಟಾಚಾರ ಕಡಿಮೆಮಾಡುವ ಮತ್ತು ಪ್ರಜೆಗಳನ್ನು ವಿಶೇಷವಾಗಿ ಅವಕಾಶ ವಂಚಿತ ವರ್ಗಗಳವರನ್ನು ಸಬಲೀಕರಿಸುವ ಮೂಲಕ ಇದು ಆಡಳಿತದಲ್ಲಿ ಪರಿವರ್ತನೆಯನ್ನು ತಂದಿದೆ.

ಜಾಗತಿಕವಾಗಿ ಇದೇ ತೆರನ ಕಾನೂನುಗಳಿಗೆ ನಮ್ಮ ಆರ್‌ ಟಿ ಐ ಪ್ರೇರಣೆ ನೀಡಿದೆ. ಆ ಮೂಲಕ ಇಂಡಿಯಾದ ಪ್ರಜಾತಾಂತ್ರಿಕ ಚೌಕಟ್ಟನ್ನು ಬಲಗೊಳಿಸಿದೆ.

ಈ ನಡುವೆ, ನಿರೀಕ್ಷೆಯಂತೆಯೇ ಅಧಿಕಾರಿಗಳ ಪ್ರತಿರೋಧ, ವಿನಾಯಿತಿಯ ದುರುಪಯೋಗ, ಮಾಹಿತಿ ಹಕ್ಕು ಹೋರಾಟಗಾರರಿಗೆ ಬೆದರಿಕೆ ಇತ್ಯಾದಿ ಸವಾಲುಗಳು ಇದ್ದೇ ಇದೆ.

ತಾವು ಇಕ್ಕಟ್ಟಿಗೆ ಸಿಲುಕುವುದನ್ನು ಪಕ್ಷಾತೀತವಾಗಿ ಯಾವುದೇ ಸರಕಾರ ಇಷ್ಟ ಪಡುವುದಿಲ್ಲ. ಆದ್ದರಿಂದ ತನ್ನನ್ನು ಕಟ ಕಟೆಯಲ್ಲಿ ನಿಲ್ಲಿಸುವ ಎಲ್ಲ ವ್ಯವಸ್ಥೆಗಳನ್ನು ಅವು ನಾಶಗೊಳಿಸಲು ಅಥವಾ ದುರ್ಬಲಗೊಳಿಸಲು ಯತ್ನಿಸುತ್ತಲೇ ಇರುತ್ತವೆ.

ಮಾಹಿತಿ ಹಕ್ಕು ಕಾನೂನು ಜಾರಿಗೆ ತಂದ ಮನಮೋಹನ್‌ ಸಿಂಗ್‌ ಮತ್ತು ಸೋನಿಯಾ ಗಾಂಧಿ

ಮಾಹಿತಿ ಹಕ್ಕಿನ ಕತೆಯೂ ಹೀಗೆಯೇ ಆಗಿದೆ. ಈಗಿನ ಸರಕಾರಕ್ಕೆ ಈ ಕಾಯಿದೆ ಇರುವುದೇ ಇಷ್ಟವಿಲ್ಲ. ಆದ್ದರಿಂದ ಅದನ್ನು ದುರ್ಬಲಗೊಳಿಸಲು ಯತ್ನಿಸುತ್ತಲೇ ಇದೆ. ಸರಕಾರದ ಈ ಕ್ರಮಗಳ ವಿರುದ್ಧ ನಾಗರಿಕ ಸಂಘಟನೆಗಳೂ ದನಿ ಎತ್ತುತ್ತಲೇ ಇವೆ. ಹೋರಾಡುತ್ತಲೇ ಇವೆ.

ಮಾಹಿತಿ ಹಕ್ಕಿಗಾಗಿನ ಹೋರಾಟ ಎಂದರೆ ಅದು ಪರೋಕ್ಷವಾಗಿ ಪ್ರಜಾತಂತ್ರದ ಪರ ಹೋರಾಟ. ಮಾಹಿತಿ ಹಕ್ಕಿಗೆ ಈಗ ಇಪ್ಪತ್ತು ವರ್ಷವಾಗಿದೆ. ಸವಾಲುಗಳ ನಡುವೆಯೂ ಅದು ತಕ್ಕಮಟ್ಟಿಗಾದರೂ ಪರಿಣಾಮಕಾರಿಯಾಗಿ ಉಳಿದುಕೊಂಡಿದೆ. ಆಡಳಿತದಲ್ಲಿ ಪಾರದರ್ಶಕತೆ ಇರುವಂತೆ ನೋಡಿಕೊಳ್ಳುವ ಮತ್ತು ಸರಕಾರವನ್ನು ಉತ್ತರದಾಯಿಯಾಗಿಸುವ ಮೂಲಕ ಆಡಳಿತದಲ್ಲಿ ಭ್ರಷ್ಟಾಚಾರ ನುಸುಳದಂತೆ ನೋಡಿಕೊಳ್ಳುವಲ್ಲಿ ಜನರ ಕೈಯಲ್ಲಿರುವ ಈ ಒಂದು ಪ್ರಬಲ ಅಸ್ತ್ರವನ್ನು ಯಾವುದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳುವ ಅಗತ್ಯವಿದೆ.

ಶ್ರೀನಿವಾಸ ಕಾರ್ಕಳ

ಇದನ್ನೂ ಓದಿ- ಮಹಿಳೆ- ಅಪಹರಣ, ನಾಪತ್ತೆ- ಮುಗಿಯದ ವ್ಯಥೆ

More articles

Latest article