ರಾಜ್‌ಭಾಷಾ ಸಂಸತ್ ಸಮಿತಿಯ ಎರಡನೇ ಉಪ ಸಮಿತಿಯ ಸಭೆಗೆ ಕರ್ನಾಟಕ ರಕ್ಷಣಾ ವೇದಿಕೆಯ ದಾಳಿ

Most read

ಕರ್ನಾಟಕ ರಕ್ಷಣಾ ವೇದಿಕೆಯ ಹೋರಾಟಗಾರರು, ಇತ್ತೀಚಿಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ನಡೆಯುತ್ತಿದ್ದ ರಾಜ್‌ಭಾಷಾ ಸಂಸತ್ ಸಮಿತಿಯ ಎರಡನೇ ಉಪಸಮಿತಿಯ ಸಭೆಗೆ ದಾಳಿಯಿಟ್ಟು ಪ್ರತಿಭಟಿಸಿದ್ದಾರೆ. ಇಂತಹ ಪ್ರತಿಕ್ರಿಯೆಗೆ ಪ್ರಚೋದನೆ ನೀಡುವಂತಿದ್ದ ಆ ಸಭೆಯಲ್ಲಿ ಕನ್ನಡದ ನಾಮಫಲಕಗಳು ಇರಲಿಲ್ಲ ಎನ್ನುವುದು ಮೇಲುಮೇಲಿನ ಸತ್ಯ. ಆದರೆ ಆ ಸಭೆಯು “ಕನ್ನಡಿಗರ ಕನ್ನಡದ ವಿನಾಶಕ್ಕೆ ನಡೆಸುತ್ತಿದ್ದ ಹುನ್ನಾರದ ಭಾಗವಾಗಿತ್ತು” ಎಂಬ ಅನಿಸಿಕೆ ಹೋರಾಟಗಾರರಿಗೆ ಮೂಡಿದ್ದಾದರೂ ಏಕೆ ಎಂಬುದನ್ನು ನೋಡಬೇಕಿದೆ. ಈ ಕಾರ್ಯಕ್ರಮದ ನಾಮಫಲಕಗಳಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿರುವುದು ಏನೆಂದರೆ ಇದು “ಸಂಸದೀಯ ರಾಜಭಾಷಾ ಸಮಿತಿ ಕೀ ದೂಸರೀ ಉಪಸಮಿತಿ ಕಾ ನಿರೀಕ್ಷಣಾ ಬೈಠಕ್”. ಹಾಗಂದರೆ ಸಂಸತ್ತಿನ ರಾಜ್‌ಭಾಷಾ ಸಮಿತಿಯ ಎರಡನೆಯ ಉಪ ಸಮಿತಿಯು ನಡೆಸುತ್ತಿರುವ ತಪಾಸಣಾ ಸಭೆ ಎಂದು.

ಭಾರತದ ಭಾಷಾನೀತಿಯನ್ನು ಸಂವಿಧಾನದ 17ನೇ ಭಾಗದ 343~351ನೇ ವಿಧಿಗಳಲ್ಲಿ ಬರೆಯಲಾಗಿದೆ. 343ರಲ್ಲಿ ಹಿಂದೀ ಭಾಷೆಯನ್ನು ಭಾರತದ ಆಡಳಿತ ಭಾಷೆಯನ್ನಾಗಿ ಮಾಡಲಾಗಿದ್ದರೆ, 344ರಲ್ಲಿ ಹೀಗೆ ಬರೆದಿದೆ: ಲೋಕಸಭೆಯ 20 ಹಾಗೂ ರಾಜ್ಯಸಭೆಯ 10 ಸಂಸದರ ಸಮಿತಿಯನ್ನು ರಚಿಸಿ, ಹೆಚ್ಚು ಹಿಂದೀ ಬಳಸಲು, ಇಂಗ್ಲೀಷ್ ಕಡಿಮೆ ಮಾಡಲು ಸಲಹೆ ಪಡೆದು ಜಾರಿ ಮಾಡಬೇಕು. ಇಂತಹ ಸಮಿತಿಯು ತನ್ನ ಅಡಿಯಲ್ಲಿ ಇನ್ನಷ್ಟು ಉಪಸಮಿತಿಗಳನ್ನು ರಚಿಸಿಕೊಂಡು ಇಡೀ ದೇಶದಾದ್ಯಂತ ತಿರುಗಿ ಎಲ್ಲೆಲ್ಲಿ ಯಾವ ಮಟ್ಟಿಗೆ ಹಿಂದಿ ಹರಡಲಾಗಿದೆ, ಎಷ್ಟು ಪರಿಣಾಮಕಾರಿಯಾಗಿದೆ, ಇನ್ನೂ ಎಲ್ಲೆಲ್ಲಿ ಹಿಂದಿ ಪ್ರತಿಷ್ಠಾಪಿಸಬೇಕು ಎನ್ನುವ ಅಧ್ಯಯನ ಮಾಡಿ, ಸಲಹೆಗಳನ್ನು ಸಂಸತ್ತಿಗೆ ಸಲ್ಲಿಸಿ, ರಾಷ್ಟ್ರಪತಿಗಳಿಂದ ಅಂತಹ ಸಲಹೆಗಳಿಗೆ ಕಾನೂನು ಮಾನ್ಯತೆ ತಂದುಕೊಟ್ಟು ಜಾರಿ ಮಾಡಿಸುತ್ತವೆ. ಇದು ಬಾಯಲ್ಲಿ ಹಿಂದಿ ಹೇರಿಕೆ ಮಾಡಲ್ಲ ಎನ್ನುವ ಸರ್ಕಾರಗಳ ಬಗಲಲ್ಲಿರುವ ದೊಣ್ಣೆಯಾಗಿದೆ. ಇದುವರೆಗೆ ಅಂತಹ ಒಂಬತ್ತು ವರದಿಗಳ ಮಾಹಿತಿ ರಾಜ್‌ಭಾಷಾ ಜಾಲತಾಣದಲ್ಲಿ ಲಭ್ಯವಿದ್ದು, ಅದರಲ್ಲಿನ ಒಂಬತ್ತನೇ ವರದಿ(2011)ಯ ಕೊನೆಯದಾದ 15ನೇ ಅಧ್ಯಾಯದಲ್ಲಿ 117 ಸಲಹೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಕೆಲವು ಇಂತಿವೆ ನೋಡಿ: 

9. ಕರ್ನಾಟಕದಲ್ಲಿ ಮೊಟ್ಟಮೊದಲನೆಯದಾಗಿ ಅಧಿಕಾರಿಗಳಿಗೆ ಹಿಂದಿ ತರಬೇತಿ ನೀಡಬೇಕು.

11. ಕಚೇರಿಯ ಅತ್ಯಂತ ಹಿರಿಯ ಅಧಿಕಾರಿಗೆ ಹಿಂದಿ ಬಳಕೆಯ ಮೇಲ್ವಿಚಾರಣೆಯ ಹೊಣೆ ಇರಬೇಕು.

12. ತಡಮಾಡದೆ ಎಲ್ಲಾ ಕಚೇರಿಗಳಲ್ಲಿ ಹಿಂದಿ ಅಧಿಕಾರಿ ಹುದ್ದೆಯನ್ನು ತುಂಬಬೇಕು

15. ಪ್ರತೀ ನೌಕರನಿಗೆ ಹಿಂದೀ ಬಳಕೆಗೆ ಗುರಿ ನೀಡಬೇಕು ಮತ್ತು ಎಷ್ಟು ಬಳಸಿದ್ದಾರೆ ಎಂದು ಅಳೆಯಬೇಕು. ಅದನ್ನು ನೌಕರರ ವಾರ್ಷಿಕ ಗುಪ್ತ ವರದಿಯಲ್ಲಿ ಸೇರಿಸಬೇಕು.

33. ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಿಂದಿಯನ್ನು ಎಲ್ಲೆಡೆ ಕಡ್ಡಾಯ ಮಾಡಬೇಕು. ಮೊದಲಿಗೆ ಸಿಬಿಎಸ್ಸಿ ಹಾಗೂ ಕೇಂದ್ರೀಯ ವಿದ್ಯಾಲಯಗಳಲ್ಲಿ ಹತ್ತನೇ ತರಗತಿವರೆಗೆ ಕಡ್ಡಾಯ ಮಾಡಬೇಕು.

34. ದೇಶದ ಎಲ್ಲಾ ವಿಶ್ವವಿದ್ಯಾಲಯ ಹಾಗೂ ಉನ್ನತ ಕಲಿಕಾ ಕೇಂದ್ರಗಳಲ್ಲಿ ಕಡ್ಡಾಯ ಹಿಂದಿ ಕಲಿಕೆಗೆ ನಿಯಮ ರೂಪಿಸಿ ಸಂಸತ್ತಿನ ಎರಡೂ ಸದನಗಳಲ್ಲಿ ಕಾಯ್ದೆ ರೂಪಿಸಲು ಪ್ರಸ್ತಾಪ ಇಡಬೇಕು.

36. ಹಿಂದಿಯೇತರ ನಾಡುಗಳಲ್ಲಿನ ವಿವಿಗಳು ಹಾಗೂ ಉನ್ನತ ಶಿಕ್ಷಣ ಕೇಂದ್ರಗಳು ಕಡ್ಡಾಯವಾಗಿ ಹಿಂದಿಯಲ್ಲಿ ಉತ್ತರ ಬರೆಯುವ, ಸಂದರ್ಶನ ಎದುರಿಸುವ ಆಯ್ಕೆ ನೀಡಬೇಕು.

44. ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕನಿಷ್ಠ ಮಟ್ಟದ ಹಿಂದಿ ಶಿಕ್ಷಣವನ್ನು ನಿಗದಿಪಡಿಸಬೇಕೆಂದು ಸಲಹೆ ನೀಡುತ್ತೇವೆ.

45. ಕೇಂದ್ರಸರ್ಕಾರದ ಎಲ್ಲಾ ನೇಮಕಾತಿಗಳಲ್ಲಿ ಹಿಂದಿ ಮಾಧ್ಯಮದಲ್ಲಿ ಪ್ರಶ್ನೆಪತ್ರಿಕೆಗಳನ್ನು ಬರೆಯುವ ಆಯ್ಕೆ ಕೊಡಬೇಕು.

46. ಎಲ್ಲಾ ಹುದ್ದೆಗಳಿಗೂ ಕನಿಷ್ಠ ಮಟ್ಟದ ಹಿಂದಿ ಜ್ಞಾನವನ್ನು ನಿಗದಿಪಡಿಸಬೇಕು.

47. ಹತ್ತನೇ ತರಗತಿವರೆಗೆ ಹಿಂದಿ ವಿದ್ಯಾಭ್ಯಾಸವನ್ನು ಕಡ್ಡಾಯ ಮಾಡುವ ಪ್ರಸ್ತಾಪವನ್ನು ಸಂಸತ್ತಿನಲ್ಲಿ ಮಂಡಿಸಬೇಕು.

48. ಜಾಹಿರಾತುಗಳಲ್ಲಿ 50% ಕಡ್ಡಾಯವಾಗಿ ಹಿಂದಿಯಲ್ಲಿರಬೇಕು. ಉಳಿದಂತೆ ಇಂಗ್ಲೀಷ್ ಹಾಗೂ ಪ್ರಾದೇಶಿಕ ಭಾಷೆಗಳಲ್ಲಿ ಒಟ್ಟು 50%ರ ಒಳಗಿರಬೇಕು.

51. ಹಿಂದಿಪತ್ರಿಕೆಯಲ್ಲಿ ಜಾಹೀರಾತುಗಳನ್ನು ಮುಖಪುಟದಲ್ಲಿ ದೊಡ್ಡದಾಗಿಯೂ, ಇಂಗ್ಲೀಷ್ ಪತ್ರಿಕೆಗಳಲ್ಲಿ ಒಳಪುಟಗಳಲ್ಲಿ ಸಣ್ಣದಾಗಿಯೂ ಕೊಟ್ಟು ಹಣ ಉಳಿಸಬೇಕು.

52. ವೈಜ್ಞಾನಿಕ/ ಸಂಶೋಧನಾ ಸಂಸ್ಥೆಗಳ ಆಡಳಿತಾತ್ಮಕ ಮೊತ್ತದ 1% ಪುಸ್ತಕಗಳಿಗಾಗಿ ವೆಚ್ಚ ಮಾಡಬೇಕು. ಕೊಳ್ಳಲಾಗುವ ಎಲ್ಲಾ ಪುಸ್ತಕಗಳ ವೆಚ್ಚದಲ್ಲಿ 50% ಹಿಂದೀ ಪುಸ್ತಕಗಳಿಗೆ ಮಾತ್ರ ವೆಚ್ಚ ಮಾಡಬೇಕು.

65. ಕರ್ನಾಟಕದಾದ್ಯಂತ (ಸಿ ರಾಜ್ಯ) ರೈಲ್ವೇ ಘೋಷಣೆಗಳನ್ನು ಇಂಗ್ಲೀಷ್, ಕನ್ನಡದ ಜೊತೆಯಲ್ಲಿ ಕಡ್ಡಾಯವಾಗಿ ಹಿಂದಿಯಲ್ಲಿ ಮಾಡಲೇಬೇಕು.

66. ರೈಲ್ವೇ ಹಾಗೂ ಅಧೀನ ಸಂಸ್ಥೆಗಳ ಎಲ್ಲಾ ಉತ್ಪನ್ನಗಳ ಮೇಲೆ ಕಡ್ಡಾಯವಾಗಿ ಹಿಂದಿ/ ಇಂಗ್ಲೀಷ್ ಇರಬೇಕು.

69. ರೈಲ್ವೇ ಟಿಕೆಟ್ಟುಗಳ ಮೇಲಿನ ಎಲ್ಲಾ ಮಾಹಿತಿಗಳನ್ನು ದ್ವಿಭಾಷೆಗಳಲ್ಲಿ ಕೊಡಬೇಕು, ಆ ಮೂಲಕ ಹಿಂದಿಯವರಿಗೆ ಅನಾನುಕೂಲ ಆಗದಂತೆ ನೋಡಿಕೊಳ್ಳಬೇಕು.

70. ರೈಲ್ವೇ ಮಂತ್ರಾಲಯ ನೀಡುವ ಎಲ್ಲಾ ಜಾಹೀರಾತುಗಳು, ಮಾಹಿತಿ, ಬ್ಯಾನರುಗಳು (ರೈಲಿನ ಒಳಗೆ, ಪ್ಲಾಟ್‌ಫಾರ್ಮ್‌ನಲ್ಲಿ, ಕಾಂಪೌಂಡ್ ಮೇಲೆ) ಕಡ್ಡಾಯವಾಗಿ ದ್ವಿಭಾಷೆಗಳಲ್ಲಿ ಇರಲೇಬೇಕು.

73. ಪಾಸ್‌ಪೋರ್ಟ್‌ ಕಚೇರಿಗಳಲ್ಲಿ ಹಿಂದಿಯಲ್ಲಿ ತುಂಬಿದ ಅರ್ಜಿಗಳನ್ನು ಮಾನ್ಯ ಮಾಡಬೇಕು.

80. ಏರ್ ಇಂಡಿಯಾ ಹಾಗೂ ಪವನ್ ಹನ್ಸ್ ಹೆಲಿಕಾಪ್ಟರ್ ಸೇವೆಗಳ ಎಲ್ಲಾ ಟಿಕೆಟ್‌ಗಳಲ್ಲಿ ಗರಿಷ್ಟ ಪ್ರಮಾಣದಲ್ಲಿ ಹಿಂದಿ ಬಳಸಬೇಕು.

88. ಎಲ್ಲಾ ಸಚಿವಾಲಯಗಳು ಜಾಹೀರಾತು ವೆಚ್ಚದ 50% ಹಣವನ್ನು ಕಡ್ಡಾಯವಾಗಿ ಹಿಂದಿ ಜಾಹೀರಾತುಗಳಿಗೆ ವೆಚ್ಚ ಮಾಡಬೇಕು.

103. ಲೋಕಾಸೇವಾ ಆಯೋಗದ (ಯುಪಿಎಸ್‌ಸಿ)ಪರೀಕ್ಷೆಗಳಲ್ಲಿ ತಾಂತ್ರಿಕತೆಯ ನೆಪದಲ್ಲಿ ಎಲ್ಲಾ ಪ್ರಶ್ನೆಗಳನ್ನು ಹಿಂದಿಯಲ್ಲಿ ಕೊಡುತ್ತಿಲ್ಲ. ಇದನ್ನು ತಿರಸ್ಕರಿಸಲಾಗಿದೆ. ಎಲ್ಲಾ ಪರೀಕ್ಷೆಗಳು ಹಿಂದಿಯಲ್ಲಿ ಇರಲೇಬೇಕು.

105. ಗೌರವಾನ್ವಿತ ರಾಷ್ಟ್ರಪತಿಗಳೂ ಸೇರಿದಂತೆ ಎಲ್ಲಾ ಮಂತ್ರಿಗಳು, ಅದರಲ್ಲೂ ಹಿಂದಿಯನ್ನು ಓದಲು ಬರೆಯಲು ಬರುವವರು, ಹಿಂದಿಯಲ್ಲೇ ಭಾಷಣ ಮಾಡಬೇಕು/ ಹೇಳಿಕೆ ನೀಡಬೇಕು.

108. ಕೇಂದ್ರಸರ್ಕಾರದಲ್ಲಿ ನೇಮಕಗೊಳ್ಳಲು ಬಯಸುವ ಎಲ್ಲರೂ ಹುದ್ದೆಗೆ ತಕ್ಕಂಥಾ ಸೂಕ್ತ ಹಿಂದಿ ಭಾಷಾ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗಲೇಬೇಕು.

111. ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಉದ್ಯಮಗಳು, ಸರ್ಕಾರದಿಂದ ಅನುದಾನಿತ ಸಂಸ್ಥೆಗಳು, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಖಾಸಗಿ ಕಂಪನಿಗಳಲ್ಲಿ ಹಿಂದಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳನ್ನು ಖರೀದಿಸುವುದನ್ನು ಕಡ್ಡಾಯಗೊಳಿಸಬೇಕು. ಇಂಗ್ಲಿಷ್ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಿಗಿಂತ ಹಿಂದಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಸಂಖ್ಯೆಯ ಹೆಚ್ಚಳಕ್ಕೆ ಒತ್ತು ನೀಡಬೇಕು.

112. ಸರ್ಕಾರಿ ಮುದ್ರಾಣಾಲಯದ ಪ್ರಕಟನೆಗಳಲ್ಲಿ ಹಿಂದಿ ಪ್ರಕಾಶನವು 50%ಕ್ಕಿಂತಾ ಹೆಚ್ಚಾಗಿ ಇರಬೇಕು.

113. ಭಾರತದ ಎಲ್ಲಾ ವಿಮಾನಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪುಸ್ತಕ/ ಪತ್ರಿಕೆ/ ಮ್ಯಾಗಜಿನ್‌ಗಳು ಹಿಂದಿ ಆಗಿರಲೇ ಬೇಕು. ವಿಮಾನದ ಒಳಗೆ ಹಿಂದಿಯಲ್ಲಿ ಮೊದಲು, ನಂತರ ಇಂಗ್ಲೀಷಿನಲ್ಲಿ ಸೂಚನೆಗಳನ್ನು ನೀಡಬೇಕು.

114. ಎಲ್ಲಾ ಉತ್ಪನ್ನಗಳ ಹೆಸರು ಮತ್ತು ಮಾಹಿತಿಗಳು ಹಿಂದಿಯಲ್ಲಿ ಇರಲೇಬೇಕು.

115. ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿನ ನೋಟೀಸ್ ಬೋರ್ಡುಗಳು ಅಥವಾ ನಾಮಫಲಕಗಳು ಕಡ್ಡಾಯವಾಗಿ ಹಿಂದಿಯಲ್ಲಿರಬೇಕು.  ಸರ್ಕಾರಿ, ಅರೆ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳು ಬೇಕಾದರೆ ಕೆಳಗಡೆ ಇಂಗ್ಲೀಷ್ ಬಳಸಲಿ.

ಕನ್ನಡ ಹಾಗೂ ಇನ್ನಿತರ ಭಾರತೀಯ ಭಾಷೆಗಳ ಕತ್ತು ಹಿಸುಕುತ್ತಿರುವ ಇಂಥಾ ಸಮಿತಿಗಳು ನಮ್ಮ ದೇಶಕ್ಕೆ ಕಳಂಕ ಅಲ್ಲವೇ? ಇದು ಹಿಂದೀ ಸಾಮ್ರಾಜ್ಯಶಾಹಿಯ ಕರಾಳವಾದ ಮುಖವಲ್ಲವೇ? ಇಂತಹ ಸಮಿತಿಗಳನ್ನು, ಸಮಿತಿಗಳನ್ನು ನಡೆಸುವ ಇಲಾಖೆಗಳನ್ನು, ಮಂತ್ರಾಲಯಗಳನ್ನು ನಡೆಸಲು ಅವಕಾಶ ಕೊಡುವ ಭಾರತೀಯ ಸಂವಿಧಾನದ ಬದಲಾವಣೆಗಾಗಿ ಎಲ್ಲಾ ಭಾರತೀಯರು ಧ್ವನಿ ಎತ್ತಬೇಕಾದ ಅನಿವಾರ್ಯತೆ ಇಂದು ನಾಡಿನ ಮುಂದಿದೆ.

ಆನಂದ್ ಜಿ

ಅಧ್ಯಕ್ಷರು, ಬನವಾಸಿ ಬಳಗ, ಬೆಂಗಳೂರು

More articles

Latest article