Saturday, September 6, 2025

ಸ್ಥಳೀಯ ಸಂಸ್ಥೆ ಚುನಾವಣೆ: ಬ್ಯಾಲೆಟ್ ಪೇಪರ್ ಬಳಕೆ: ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ದಿಟ್ಟ ಹೆಜ್ಜೆ: ಸುರ್ಜೇವಾಲ

Most read

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪಾಲಿಕೆಗಳು, ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಇವಿಎಂ ಬದಲು ಬ್ಯಾಲೆಟ್ ಪತ್ರಗಳ ಮೂಲಕ ನಡೆಸಲು ಮುಂದಾಗಿರುವ ನಿರ್ಧಾರವನ್ನು ನಾನು ಮನಃಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಎಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.

ಬ್ಯಾಲೆಟ್‌ ಪೇಪರ್‌ ಬಳಸುವ ಕರ್ನಾಟಕ ಸರ್ಕಾರದ ನಿರ್ಧಾರ ಕುರಿತು ಪ್ರಕಟಣೆ ನೀಡಿರುವ ಅವರು, ಸರಕಾರದ ಕ್ರಮವನ್ನು ಪ್ರಜಾಪ್ರಭುತ್ವದ ಮರುಸ್ಥಾಪನೆಗೆ ದಿಟ್ಟ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ.

ಈ ನಿರ್ಧಾರವು ನಮ್ಮ ಪ್ರಜಾಪ್ರಭುತ್ವದ ಆಶಯಗಳನ್ನು ಬಲಪಡಿಸುವ ಮತ್ತು ಮತದಾರರ ನಂಬಿಕೆಯನ್ನು ಮರುಸ್ಥಾಪಿಸುವ ಒಂದು ದಿಟ್ಟ ಹೆಜ್ಜೆಯಾಗಿದೆ. ಕಳೆದ ಕೆಲವು ವರ್ಷಗಳಿಂದ ಇವಿಎಂನ ವಿಶ್ವಾಸಾರ್ಹತೆಯ ಕುರಿತು ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ರಾಜಕೀಯ ವಲಯಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿವೆ. ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ತಾಂತ್ರಿಕ ದೋಷಗಳು, ಹ್ಯಾಕಿಂಗ್ ಸಾಧ್ಯತೆಗಳು ಮತ್ತು ಫಲಿತಾಂಶಗಳ ಕುರಿತು ವ್ಯಕ್ತವಾಗುತ್ತಿರುವ ಗೊಂದಲಗಳು ಮತದಾರರಲ್ಲಿ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿವೆ. ನಮ್ಮ ಪ್ರಜಾಪ್ರಭುತ್ವದ ಹೃದಯ ಭಾಗವಾಗಿರುವ ಮತದಾನ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕ ಮತ್ತು ಎಲ್ಲರ ನಂಬಿಕೆಗೆ ಅರ್ಹವಾಗಿರಬೇಕು.

ಕಾಂಗ್ರೆಸ್ ಪಕ್ಷದ ಮುಖಂಡರು, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಇವಿಎಂ ವಿವಾದದ ಕುರಿತು ಸ್ಪಷ್ಟವಾದ ನಿಲುವು ಹೊಂದಿದ್ದಾರೆ. ಅವರು ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯ ಮರುಸ್ಥಾಪನೆಗೆ ನಿರಂತರವಾಗಿ ಆಗ್ರಹಿಸಿದ್ದಾರೆ. ಪ್ರಜಾಪ್ರಭುತ್ವದ ಮೂಲ ತತ್ವವೇ ಜನರ ಅಭಿಪ್ರಾಯಗಳ ಪ್ರತಿಬಿಂಬ. ಇವಿಎಂ ಮೂಲಕ ವ್ಯಕ್ತವಾಗುವ ಮತದಾನದ ಬದಲು, ಬ್ಯಾಲೆಟ್ ಪೇಪರ್ ಬಳಕೆಯು ಪ್ರತಿ ಮತವೂ ನಿಷ್ಪಕ್ಷಪಾತವಾಗಿ ಎಣಿಕೆಯಾಗುತ್ತಿದೆ ಎಂಬ ಭರವಸೆಯನ್ನು ನೀಡುತ್ತದೆ. ಇದು ಮತದಾರರ ಹಕ್ಕುಗಳನ್ನು ಬಲಪಡಿಸುತ್ತದೆ.

ಕರ್ನಾಟಕ ಸರ್ಕಾರವು ಈಗ ಬ್ಯಾಲೆಟ್ ಪೇಪರ್ ವ್ಯವಸ್ಥೆಗೆ ಮರಳುವ ಮೂಲಕ, ವಿಶ್ವಾಸಾರ್ಹತೆ ಮತ್ತು ಪಾರದರ್ಶಕತೆಗೆ ಹೆಚ್ಚಿನ ಮಹತ್ವ ನೀಡಿದೆ. ಇದು ನಮ್ಮ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಎಲ್ಲರಲ್ಲೂ ಸಮಾನ ನಂಬಿಕೆಯನ್ನು ಮೂಡಿಸಲು ಸಹಾಯ ಮಾಡುತ್ತದೆ. ಈ ನಿರ್ಧಾರವು ದೇಶದ ಇತರ ರಾಜ್ಯಗಳಿಗೂ ಮಾದರಿಯಾಗುವಂಥದ್ದು. ಇದು ಕೇವಲ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮಾತ್ರ ಸೀಮಿತವಾಗಿರದೆ, ಭವಿಷ್ಯದಲ್ಲಿ ಸಾಮಾನ್ಯ ಚುನಾವಣೆಗಳಿಗೂ ಈ ವ್ಯವಸ್ಥೆಯನ್ನು ವಿಸ್ತರಿಸಬೇಕು ಎಂದು ನಾನು ಆಶಿಸುತ್ತೇನೆ. ಈ ಪ್ರಜಾಪ್ರಭುತ್ವ ಪರ ನಿಲುವಿಗಾಗಿ ನಾನು ಕರ್ನಾಟಕ ಸರ್ಕಾರವನ್ನು ಅಭಿನಂದಿಸುತ್ತೇನೆ.

ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯವೂ ಶ್ಲಾಘನೀಯ:

ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ರಾಜ್ಯ ಚುನಾವಣಾ ಆಯೋಗದ ನೇತೃತ್ವದಲ್ಲಿಯೇ ಪ್ರತ್ಯೇಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ನಿರ್ಧಾರವು ಒಂದು ಮಹತ್ವದ ಮತ್ತು ಸ್ವಾಗತಾರ್ಹ ಹೆಜ್ಜೆಯಾಗಿದೆ. ಇದುವರೆಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಭಾರತ ಚುನಾವಣಾ ಆಯೋಗ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನೇ ಬಳಸಲಾಗುತ್ತಿತ್ತು. ಆದರೆ, ಈಗ ಪ್ರತ್ಯೇಕ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದರಿಂದ ಹಲವು ಪ್ರಮುಖ ಅನುಕೂಲಗಳಿವೆ.

ಭಾರತ ಚುನಾವಣಾ ಆಯೋಗವು ಸಿದ್ಧಪಡಿಸುವ ಮತದಾರರ ಪಟ್ಟಿಯು ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗುರಿಯಾಗಿಟ್ಟುಕೊಂಡು ಸಿದ್ಧಪಡಿಸಿರುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆ ಅಥವಾ ಪಾಲಿಕೆಗಳಿಗೆ ಸಂಬಂಧಿಸಿರುವುದರಿಂದ, ಅವುಗಳ ವ್ಯಾಪ್ತಿಯು ಬೇರೆಯಾಗಿರುತ್ತದೆ.  ಪ್ರತ್ಯೇಕ ಪಟ್ಟಿ ಸಿದ್ಧಪಡಿಸುವುದರಿಂದ ಆಯಾ ಸ್ಥಳೀಯ ಸಂಸ್ಥೆಯ ವ್ಯಾಪ್ತಿಗೆ ಸೀಮಿತವಾಗಿ, ಹೆಚ್ಚು ನಿಖರ ಮತ್ತು ಪಾರದರ್ಶಕವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬಹುದು.

ಮತದಾರರ ಮಾಹಿತಿ ಅಪ್‌ ಡೇಟ್:‌

ರಾಜ್ಯ ಚುನಾವಣಾ ಆಯೋಗಕ್ಕೆ ಪ್ರತ್ಯೇಕ ಅಧಿಕಾರ ಸಿಗುವುದರಿಂದ ಮತದಾರರ ಪಟ್ಟಿಯನ್ನು ಕಾಲಕಾಲಕ್ಕೆ ಸ್ಥಳೀಯ ಮಟ್ಟದಲ್ಲಿ ಅಪ್ಡೇಟ್ ಮಾಡಲು ಸಾಧ್ಯವಾಗುತ್ತದೆ. ಇದರಿಂದ, ಮತದಾರರ ಪಟ್ಟಿಯಿಂದ ಹೆಸರು ಕೈಬಿಡದಿರಲು ಅಥವಾ ಅನರ್ಹರ ಹೆಸರು ಸೇರದಂತೆ ಎಚ್ಚರವಹಿಸಲು ಅನುಕೂಲವಾಗುತ್ತದೆ. ರಾಜ್ಯದ ಹಂತದಲ್ಲಿಯೇ ಪಟ್ಟಿಯನ್ನು ಪರಿಶೀಲಿಸಿ, ತಿದ್ದುಪಡಿ ಮಾಡಲು ಸಾಧ್ಯವಾಗುವುದರಿಂದ ಚುನಾವಣೆಗಳು ಸುಗಮವಾಗಿ ನಡೆಯುತ್ತವೆ.

ಒಟ್ಟಾರೆಯಾಗಿ ಹೇಳುವುದಾದರೆ, ಕರ್ನಾಟಕ ಸರ್ಕಾರವು ಬ್ಯಾಲೆಟ್ ಪೇಪರ್‌ಗಳ ಬಳಕೆ ಮತ್ತು ಪ್ರತ್ಯೇಕ ಮತದಾರರ ಪಟ್ಟಿ ಸಿದ್ಧಪಡಿಸುವ ನಿರ್ಧಾರಗಳು ಸ್ಥಳೀಯ ಚುನಾವಣೆಗಳಲ್ಲಿ ಪಾರದರ್ಶಕತೆ, ವಿಶ್ವಾಸಾರ್ಹತೆ ಮತ್ತು ನಿಖರತೆಯನ್ನು ಹೆಚ್ಚಿಸುವ ದಿಕ್ಕಿನಲ್ಲಿ ಪ್ರಮುಖ ಹೆಜ್ಜೆಗಳಾಗಿವೆ. ಇದು ಪ್ರಜಾಪ್ರಭುತ್ವದ ಮೂಲಭೂತ ಆಶಯಗಳನ್ನು ಬಲಪಡಿಸುತ್ತದೆ ಎಂದು ಸುರ್ಜೇಲಾಲ ಅಭಿಪ್ರಾಯಪಟ್ಟಿದ್ದಾರೆ.

More articles

Latest article