ಬಿಜಿಪಿ ಯ ಧರ್ಮಸ್ಥಳ ಯಾತ್ರೆ | ನವ ಹಿಂದುತ್ವದ ಹೊಸ ನಾಟಕವೇ?

Most read

ಬಿಜೆಪಿ ಮತ್ತು ಪರಿವಾರದ ದೊಡ್ಡ ಗುಂಪು ಧರ್ಮಸ್ಥಳ ಯಾತ್ರೆಯಿಂದ ದೂರ ನಿಂತದ್ದು ಯಾಕೆ ಎಂದು ಇವರ ರಾಜ್ಯಾಧ್ಯಕ್ಷರೇ ಹೇಳಬೇಕು. ಧರ್ಮ ಕೇಂದ್ರವನ್ನು ಸರ್ಕಾರ ಅವಹೇಳನ ಮಾಡುತ್ತಿದೆ ಎಂದು ತನ್ನ ಕೆಲವು ಪತ್ರಕರ್ತರನ್ನು, ಹೋರಾಟದವರನ್ನು ಛೂ ಬಿಟ್ಟು ಕೊನೆಗೆ ಈ ಯಾತ್ರೆಯಲ್ಲಿ ಅವರನ್ನು ದೂರ ಇಟ್ಟದ್ದು ಯಾಕೆ? ಅವರೆಲ್ಲರೂ ಸೌಜನ್ಯಾಳ ತಾಯಿಯ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದವರು. ಇವರಿಗೆ ಎರಡು ಕಡೆಯೂ ನಾಟಕದ ಪಾತ್ರ ಹಾಕುವುದಕ್ಕೆ ಇತ್ತು ಅಲ್ಲವೇ? ಎಂ ಜಿ ಹೆಗಡೆ, ಸಾಮಾಜಿಕ ಹೋರಾಟಗಾರರು.  

ಧರ್ಮಸ್ಥಳ ಗ್ರಾಮದ ಸೌಜನ್ಯ ರೇಪ್ ಮತ್ತು ಕೊಲೆ ಪ್ರಕರಣ ನಡೆದು ಹನ್ನೆರಡು ವರ್ಷ ಕಳೆದರೂ ಆ ಮಗುವಿನ ಹತ್ಯೆಗೆ ನ್ಯಾಯ ಸಿಕ್ಕಿಲ್ಲ ಅನ್ನುವುದು  ಪ್ರತಿಯೊಬ್ಬ ನಾಗರಿಕನ ಅಭಿಪ್ರಾಯ. ಈ ದೇಶದಲ್ಲಿ ಇಂತಹ ಪ್ರಕರಣಗಳು ತುಂಬಾ ಸಂಖ್ಯೆಯಲ್ಲಿ ಆಗಿವೆ ಮತ್ತು ಆಗುತ್ತಿವೆ. ಕೆಲವು ಪ್ರಕರಣಗಳಲ್ಲಿ, ಆರೋಪಿಗಳಿಗೆ ಶಿಕ್ಷೆಯಾಗಿದೆ ಮತ್ತು ಕೆಲವು ಪ್ರಕರಣಗಳಲ್ಲಿ ಶಿಕ್ಷೆ ಆಗಿಲ್ಲ.

ಈ ಪ್ರಕರಣದ ವಿವರ ಮತ್ತೆ ಮತ್ತೆ ಹೇಳುವ ಅಗತ್ಯವಿಲ್ಲ, ಯಾಕೆಂದರೆ ಅದು ಕರ್ನಾಟಕದ ಜನ ಮಾನಸದಲ್ಲಿ ಗಾಢವಾಗಿ ಮತ್ತು ಖಾಯಂ ಆಗಿ ಕುಳಿತಿರುವ ವಿಷಯವಾಗಿದೆ. ಇಷ್ಟೊಂದು ದೀರ್ಘಕಾಲ ಹೀಗೆ ಹೋರಾಟದ ಪ್ರಕರಣವಾಗಿ  ಉಳಿದುಕೊಂಡಿರುವುದು ಅಪರೂಪದ ಘಟನೆ ಇದು.

ಇತ್ತೀಚಿಗೆ ಚಿನ್ನಯ್ಯ ಎಂಬ ವ್ಯಕ್ತಿ ಆ ಗ್ರಾಮದ ಸುತ್ತ ಇಂತಹ ಅಸಹಜ ಸಾವು ಕಂಡ ಶವಗಳನ್ನ ಹೂತು ಹಾಕಿದ್ದೆನೆ ಎಂದು ಬಂದ ನಂತರ ಪ್ರಕರಣ ಹೊಸ ದಿಕ್ಕಿನತ್ತ ಸಾಗಿತ್ತು ಮತ್ತು ಆತ ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲೆ ಮಾಡಿದಾಗ, ನೂರಾರು ಸಂಖ್ಯೆಯಲ್ಲಿ ನಾಪತ್ತೆ ಆದವರ ಪಟ್ಟಿ ಇರುವಾಗ, ಇದಕ್ಕೆ SIT ತನಿಖೆ ಆಗಬೇಕು ಎಂಬ ಆಗ್ರಹ ಬಂದಾಗ ಕಾಂಗ್ರೆಸ್ ಸರ್ಕಾರ ಸಿಟ್ ಗೆ ಇದನ್ನು ಒಪ್ಪಿಸಿತ್ತು.

ಆಗ ಬಿಜೆಪಿ ವಿರೋಧ ಮಾಡಲಿಲ್ಲ. ಮತ್ತು ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ ಅವರ ಪರ ವಕ್ತಾರ ಕೂಡ ಇದನ್ನು ಸ್ವಾಗತ ಮಾಡಿದ್ದರು. ಈ ಶವ ಹೂತಿದ್ದೇನೆ ಎಂಬ ವ್ಯಕ್ತಿ ಸ್ಥಳ ತೋರಿಸಲು ಪ್ರಾರಂಭ ಮಾಡಿದಾಗ ಇದು ದೇವಸ್ಥಾನದ ಹೆಸರು ಹಾಳು ಮಾಡುವ ಷಡ್ಯಂತ್ರ ಎಂಬ ವಾದ ಪ್ರಾರಂಭ ಆಯಿತು. ಆಗ ಕೂಡಾ ಸರ್ಕಾರ ಹಾಗೇನಾದರೂ ಇದ್ದರೆ ಅಂತವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದ್ದು ಮಾತ್ರವಲ್ಲ, ಶವಗಳ ಅಸ್ಥಿ ತೋರಿಸಲಾಗದ ವ್ಯಕ್ತಿಯ ಮೇಲೆ ಕ್ರಮ ಜರುಗಿಸಿ ಬಂಧನ ಕೂಡ ಮಾಡಿತ್ತು. ಮಾತ್ರವಲ್ಲ ಇದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ಕುರಿತು ಸಿಟ್ ತನಿಖೆ ಮಾಡುತ್ತಲೇ ಇದೆ.

ಆತ ಬುರುಡೆ ತಂದ ಮೇಲೆ,  ನ್ಯಾಯಾಲಯಕ್ಕೆ ಹೋಗಿ ಹೇಳಿಕೆ ನೀಡಿದ ನಂತರ ಆತನಿಗೆ ಯಾರು ಬೆಂಬಲ ನೀಡಿದ್ದಾರೆ, ಆತ ಬುರುಡೆ ತರುವ ಮೊದಲು ಅಥವಾ ಅದನ್ನು ತರಲು ಯಾರು ಆತನಿಗೆ ಸಹಾಯ ಮಾಡಿದ್ದಾರೆ ಎಂಬುದನ್ನು ತನಿಖೆ ಮೂಲಕವೇ ತಿಳಿದುಕೊಳ್ಳಬೇಕು.

ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ ಮೇಲೆ, ಪೊಲೀಸರ ತಿಳುವಳಿಕೆ ಇದ್ದು ಆತನ ಸಂಪರ್ಕದಲ್ಲಿ  ಯಾರಾದರೂ ಇದ್ದರೆ ಅದು ಕ್ರಿಮಿನಲ್ ಅಪರಾಧ ಆಗ್ಲಿಕ್ಕಿಲ್ಲ. ಆತ ಸಂಚು ಮಾಡಿದ್ದು, ಆ ಸಮಯದಲ್ಲಿ ಆತನಿಗೆ ಸಹಾಯ ಮಾಡಿದ್ದರೆ ಅದು ಅಪರಾಧ ಆಗುತ್ತದೆ.

ಈ ಸಂದರ್ಭದಲ್ಲಿ ಬಿ ಜೆ ಪಿ ನಾಯಕರು ಮತ್ತವರ ಕೆಲವು ಬೆಂಬಲಿಗರು ದೇವರ ಮತ್ತು ಕ್ಷೇತ್ರದ ಹೆಸರು ಹಾಳು ಮಾಡುವ ಸಂಚು ಎಂದು, ಇದಕ್ಕೆ ಮತೀಯ ಬಣ್ಣ ಕೊಡಲು ಪ್ರಯತ್ನ ಮಾಡಿದ್ದರು. ಬಿಜೆಪಿ ಮುಖಂಡರು ಮೊದಲು ಇದು ಮುಸ್ಲಿಂ ಸಂಚು ಎಂದರು. ನಂತರ ಕಾಂಗ್ರೆಸ್‌ ಸಂಸದ ಸೆಂಥಿಲ್ ಅವರ ಸಂಚು ಎಂದರು. ಕೊನೆಗೆ ಕಮ್ಯುನಿಸ್ಟ್, ಮತ್ತೆ ಸರಕಾರದ ಸಂಚು ಎಂದರು. ಕೆಲವರು ಸೌಜನ್ಯ ಪರ ಹೋರಾಟಗಾರರ ಸಂಚು ಎಂದರು. ಒಟ್ಟಾರೆಯಾಗಿ ಬಿಜೆಪಿಗೆ  ಸ್ಪಷ್ಟ ನಿರ್ಧಾರ ತೆಗೆದು ಕೊಳ್ಳುವುದಕ್ಕೂ ಸಾಧ್ಯ ಆಗಲಿಲ್ಲ.

ಆದರೆ ಇವರ ಆಟ ನೋಡುತ್ತಲೇ ಕಾಂಗ್ರೆಸ್ ಸರ್ಕಾರ ಸರಿಯಾದ ದಾರಿಯಲ್ಲೇ ಸಾಗಿತು.

ಅಸಲಿಗೆ ಈ ವರೆಗೂ ತನಿಖೆ ಮಾಡುವ ತಂಡ ಒಂದೇ ಒಂದು ಅಧಿಕೃತ ವಿವರ ನೀಡಿಲ್ಲ. ಕೇವಲ ಮಾಧ್ಯಮಗಳ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅವರವರ ವ್ಯಾಪ್ತಿಯಲ್ಲಿ ವಿಮರ್ಶೆ ನಡೆಯುತ್ತಿದೆ. ಆದರೆ ಹೋರಾಟಗಾರರು ಏಕಾಏಕಿ ಧಾರ್ಮಿಕ ಸ್ಥಳದ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಧರ್ಮಸ್ಥಳಕ್ಕೆ ಬಿಜೆಪಿ ಯಾತ್ರೆ ಮಾಡಿತು. ಮತ್ತು ಒಮ್ಮೆಲೇ ಸಿಟ್ ತನಿಖೆಯನ್ನು ಪ್ರಶ್ನೆ ಮಾಡಿದ್ದಲ್ಲದೆ NIA ತನಿಖೆ ಮಾಡಬೇಕು, ಇ ಡಿ ಬರಬೇಕು ಇತ್ಯಾದಿ ವಿಷಯಗಳನ್ನು  ಮುಂದಿಟ್ಟು ಕಾಂಗ್ರೆಸ್ ಸರಕಾರವನ್ನು ಟೀಕೆ ಮಾಡಿ ಈ ವಿಷಯವನ್ನು ರಾಜಕೀಯಗೊಳಿಸಿ ಲಾಭ ಗಳಿಸಲು ಯತ್ನ ಮಾಡಿತು. ದೇವಸ್ಥಾನದ ಬೆಂಬಲ ಯಾತ್ರೆ ಮಾಡಿ ಕೊನೆಗೆ ಸೌಜನ್ಯಾಳ ಮನೆಗೆ ಭೇಟಿ ನೀಡಿತು. ಈ ಕ್ಷಣದವರೆಗೂ ಬಿಜೆಪಿ ಯ ಒಂದು ವರ್ಗ ಸೌಜನ್ಯಾಳ ತಾಯಿಯ ತೇಜೋವಧೆ ಮಾಡುತ್ತಲೇ ಇದೆ. ಹಾಗಾದರೆ ಸೌಜನ್ಯಾಳ ತಾಯಿಯ ನಿಂದನೆಯನ್ನು ಬಿಜೆಪಿ ಒಪ್ಪುವುದಿಲ್ಲ ಎಂಬ ಒಂದೇ ಒಂದು ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಯಾಕೆ ನೀಡಲಿಲ್ಲ?.

ಇದೀಗ ಸೌಜನ್ಯ ಹತ್ಯೆ ಕುರಿತು ಸಿಟ್ ನವರು ಕೆಲವರನ್ನು ತನಿಖೆ ಮಾಡಿದ್ದಾರೆ ಎಂಬ ಸುದ್ದಿ ಬಂದ ತಕ್ಷಣ ಕೆಲವು ಬಿಜಿಪಿಗರು ಮತ್ತವರ ಮಡಿಲ ಮಾಧ್ಯಮಗಳು, ಸೌಜನ್ಯ ಪ್ರಕರಣ ಮುಗಿದು ಹೋಗಿದೆ, ಅದನ್ನು ತನಿಖೆ ಮಾಡಲು ಸಿಟ್ ಗೆ ಅಧಿಕಾರ ಇಲ್ಲಾ ಎಂಬ ಬೊಬ್ಬೆ ಶುರು ಮಾಡಿದ್ದಾರೆ.

ಕಾನೂನು ಪ್ರಕಾರ ಅವರ ವಾದ ಸರಿ ಇರಬಹುದು. ಆದರೆ ಸಿಟ್ ಗೆ ಕಾಣೆಯಾದ, ಸುಮಾರು 400 ಜನರ ಕುರಿತು ತನಿಖೆಗೆ ಆದೇಶ ಇದೆ. ಹೀಗೆ ತನಿಖೆ ಮಾಡುವಾಗ ಕ್ರೈಂ ಲಿಂಕ್ ನಲ್ಲಿ ಸೌಜನ್ಯ ಪ್ರಕರಣಕ್ಕೆ ಸೇರಿದ ವಿಷಯ ಸಿಕ್ಕರೆ ಅದನ್ನು ತನಿಖಾಧಿಕಾರಿ  ತನಿಖೆ ಮಾಡುವುದು ತಪ್ಪಲ್ಲ. ಮಾಡದಿದ್ದರೆ ತನಿಖೆ ಪೂರ್ಣ ಆಗಲಿಕ್ಕೂ ಇಲ್ಲಾ. ಆದರೆ, ನಂತರದ ಕಾನೂನಾತ್ಮಕ ಕ್ರಮ ಕೈಗೊಳ್ಳಲು ಆಗುವುದಿಲ್ಲ. ಅದಕ್ಕೆ ನ್ಯಾಯಾಲಯವೇ ಆದೇಶಿಸ ಬೇಕು ಅನ್ನುವುದು ಸರಿ.

ಬಿಜೆಪಿಯ ಧರ್ಮಸ್ಥಳ ಯಾತ್ರಾ ಸಮಾವೇಶ

ಈ ತನಿಖೆಯಲ್ಲಿ ಪರ ವಿರೋಧ ನಿಂತವರ, ದೇವಸ್ಥಾನದವರ ಅರಿವಿಗೆ ಬರದಂತೆ ಯಾವುದಾದರೂ ಸೈಕೋ ಕ್ರಿಮಿನಲ್ ಗುಂಪು ಇದೆ ಅಂತಾದರೆ(?)  ಜನರು ಸಂಶಯ ಪಡುವ ಇತರ ಹತ್ಯೆಗೂ ಅದರ ಲಿಂಕ್ ಇದ್ದರೆ, ಅದೆಲ್ಲವೂ ತನಿಖೆಯಿಂದಲೇ ತಿಳಿಯಬೇಕಾಗುತ್ತದೆ.

ಅವನೇ ಮಾಡಿದ್ದು, ಇವನೇ ಮಾಡಿದ್ದು, ಅವನನ್ನು  ಮಾತ್ರ ತನಿಖೆ ಮಾಡಿ , ಇವನನ್ನು ಮಾತ್ರ ತನಿಖೆ ಮಾಡಿ, ಉಳಿದವರ ಹೆಸರೂ ಬರಬಾರದು ಎಂಬ ಬಿಜಿಪಿ ವಾದ  ಅನಗತ್ಯ ಸಂಶಯಕ್ಕೆ ಕಾರಣವಾಗುತ್ತದೆ. ಹೀಗೆ ಯಾರೇ ಹೇಳಿದರೂ ಅದು ಒಪ್ಪತಕ್ಕ ಮಾತಾಗದು.

ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎಂದು ಹೇಳುವ ಜನಗಳು, ಹೋ ಅದ್ರ ತನಿಖೆ ಯಾಕೆ ಎಂದು ಕೇಳುವುದೇ ಎಡಬಿಡಂಗಿತನ. ಮಾಡಲು ಬಿಡಿ. ಫಲಿತಾಂಶ ಬರಲಿ.

ಸೌಜನ್ಯ ಪರ ಹೋರಾಟಗಾರರು ತಮ್ಮ ಬಳಿ ಇರುವ ದಾಖಲೆಯನ್ನು ಕೊಟ್ಟಿದ್ದಾರಂತೆ. ಅದು ಎಷ್ಟು ಸರಿ ತಪ್ಪು ನಮಗೆ ಗೊತ್ತಿಲ್ಲ. ಬಿಜೆಪಿಗರೂ ಅವರ ಪರ ಹೋರಾಟಗಾರರು ಕೂಡಾ ಸಿಟ್ ಗೆ ಹೋಗಿ ದಾಖಲೆ ಕೊಡಿ. ಸರಕಾರ ಬೇಡ ಎಂದಿಲ್ಲವಲ್ಲ.

ಇನ್ನು ಇವರ ಈ ಯಾತ್ರೆಗೆ ಸ್ಥಳೀಯರ, ಜಿಲ್ಲೆಯ  ಜನರ ಬೆಂಬಲ ಎಷ್ಟಿತ್ತು ಎಂಬುದು ಈಗ ಅರ್ಥವಾಗಿದೆ. ಸುನಿಲ್ ಕುಮಾರ್ ಮತ್ತು ಸಿ ಟಿ ರವಿ ಅವರ ದತ್ತ ಮಾಲಾ ಯಾತ್ರೆ ಕೂಡ ಜನರಿಗೆ ನೆನಪಿದೆ.

ಬಿಜೆಪಿ ಮತ್ತು ಪರಿವಾರದ ದೊಡ್ಡ ಗುಂಪು ಧರ್ಮಸ್ಥಳ ಯಾತ್ರೆಯಿಂದ ದೂರ ನಿಂತದ್ದು ಯಾಕೆ ಎಂದು ಇವರ ರಾಜ್ಯಾಧ್ಯಕ್ಷರೇ ಹೇಳಬೇಕು. ಧರ್ಮ ಕೇಂದ್ರ ಅವಹೇಳನ ಸರ್ಕಾರ ಮಾಡುತ್ತಿದೆ ಎಂದು ತನ್ನ ಕೆಲವು ಪತ್ರಕರ್ತರನ್ನು, ಹೋರಾಟದವರನ್ನು ಛೂ ಬಿಟ್ಟು ಕೊನೆಗೆ ಈ ಯಾತ್ರೆಯಲ್ಲಿ ಅವರನ್ನು ದೂರ ಇಟ್ಟದ್ದು ಯಾಕೆ? ಅವರೆಲ್ಲರೂ ಸೌಜನ್ಯಾಳ ತಾಯಿಯ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡಿದವರು. ಇವರಿಗೆ ಎರಡು ಕಡೆಯೂ ನಾಟಕದ ಪಾತ್ರ ಹಾಕುವುದಕ್ಕೆ ಇತ್ತು ಅಲ್ಲವೇ?

ಎಂ ಜಿ ಹೆಗಡೆ

ಸಾಮಾಜಿಕ ಹೋರಾಟಗಾರರು

ಇದನ್ನೂ ಓದಿ- ನೂರಾರು ಸಾವುಗಳಿಗೆ ‘ಪ್ರತಿಷ್ಠೆಯ ರಕ್ಷಣೆ’ : ಎಸ್ಐಟಿ ಓದಬೇಕಾದ ನಿವೃತ್ತ ಎಸಿಪಿ ಜಿ ಎ ಬಾವಾ ಪತ್ರ !

More articles

Latest article