ನಿವೃತ್ತ ಎಸಿಪಿ ಜಿ ಎ ಬಾವಾರವರು ಬರೆದ ಪತ್ರ ಜನರ ಅನುಮಾನಗಳನ್ನು ಗಟ್ಟಿಗೊಳಿಸಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಸಹಜ ಸಾವು, ಕೊಲೆ, ಅತ್ಯಾಚಾರ ಪ್ರಕರಣಗಳು ತನಿಖೆಯಾಗಬೇಕು ಎಂದಷ್ಟೇ ಜನರ ಆಗ್ರಹವಾಗಿದೆ. ಈ ತನಿಖೆಗಳು ಆಗದೇ ಇರಲು, ಅಕ್ರಮವಾಗಿ ದಫನ ಮಾಡಿ ಸಾಕ್ಷ್ಯ ನಾಶ ಮಾಡಲು ‘ಪೊಲೀಸರಿಗೆ ಪ್ರತಿಷ್ಠೆಯ ರಕ್ಷಣೆ’ ಕಾರಣವಾಗಿದೆ ಎಂಬ ಜಿ ಎ ಬಾವ ಮತ್ತು ಅವರ ಹಿರಿಯ ಅಧಿಕಾರಿಯ ಹೇಳಿಕೆ ಕೆಲ ಹೋರಾಟಗಾರರ ‘ನೇರ ಆರೋಪ’ಕ್ಕೆ ಪುಷ್ಠಿ ನೀಡುವಂತಿದೆ. – ನವೀನ್ ಸೂರಿಂಜೆ, ಪತ್ರಕರ್ತರು.
ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಸಹಜ ಸಾವು, ಕೊಲೆ, ಅತ್ಯಾಚಾರ ಬಗ್ಗೆ ನಿವೃತ್ತ ಎಸಿಪಿ ಜಿ ಎ ಬಾವ ಅವರು ಅಭಿಪ್ರಾಯ ಬರೆದಿದ್ದಾರೆ. ಅದನ್ನು ಓದಿದ ಬಳಿಕ ಈವರೆಗೂ ಇಲ್ಲದ ಹಲವು ಅನುಮಾನಗಳು ಮೂಡಲಾರಂಭಿಸಿವೆ.
ಜಿ ಎ ಬಾವರವರ ಬರಹ ಪ್ರಾರಂಭವಾಗುವುದೇ, “ನಾನು ಅವರ ಕೈಯಿಂದ ವಿದ್ಯಾರ್ಥಿ ವೇತನ ಪಡೆದು ಕಲಿತವನು. ನನ್ನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಜೊತೆ ನನ್ನ ಪ್ರತಿ ಬೆಳವಣಿಗೆಯಲ್ಲಿ ನನಗೆ ಪ್ರೋತ್ಸಾಹ ನೀಡಿದವರು. ಇಂದು ದೇವಸ್ಥಾನದ ಅಧೀನ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಗಳಿಂದ ನೆರವು ಪಡೆದು ಸಾವಿರಾರು ಜನರು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದು ಕಾಣುತ್ತೇವೆ. ಇಂದು ಉನ್ನತ ಸ್ಥಾನಗಳಲ್ಲಿ ಇರುವವರು ಇಲ್ಲಿ ಕಲಿತವರು ಇದ್ದಾರೆ. ರಾಜಕೀಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ಅದಕ್ಕಿಂತಲೂ ಮಿಗಿಲಾಗಿ ಲಕ್ಷಾಂತರ ಜನರ ಭಕ್ತಿಯ ಕ್ಷೇತ್ರವಾಗಿ ಬೆಳೆದು ನಿಂತಿದೆ. ಕರ್ನಾಟಕ ರಾಜ್ಯದ ವಿಧಾನ ಸಭಾ ಸ್ಪೀಕರ್ ಶ್ರೀಯುತ ಯುಟಿ ಖಾದರ್ ಸಾಬ್ ಕೂಡ ಇಲ್ಲಿನ ಕಾನೂನು ಕಾಲೇಜಿನಲ್ಲಿ ಕಲಿತವರು” ಎಂದು. ನೀವು ಕಲಿತ ಶಾಲೆಗೂ ಸ್ನಾನಘಟ್ಟ, ಲಾಡ್ಜ್ ಗಳಲ್ಲಿ ನಡೆದ ಅತ್ಯಾಚಾರ, ಕೊಲೆ, ಅಸಹಜ ಸಾವುಗಳಿಗೂ ಏನು ಸಂಬಂಧ ? ಅತ್ಯಾಚಾರ-ಕೊಲೆಗಳಿಗೆ ನ್ಯಾಯ ಕೊಡಿ ಎಂದರೆ ಶಿಕ್ಷಣ, ಆರೋಗ್ಯದ ಉದ್ಯಮವನ್ನು ಯಾಕೆ ಮುನ್ನೆಲೆಗೆ ತರ್ತೀರಿ ?
ಜಿ ಎ ಬಾವಾರವರು ನಿವೃತ್ತ ಪೊಲೀಸ್ ಅಧಿಕಾರಿಯಾದ್ದರಿಂದ ಇದನ್ನು ಪೊಲೀಸ್ ಭಾಷೆಯಲ್ಲೇ ಹೇಳಿದರೆ ಸುಲಭವಾಗಿ ಅವರಿಗೆ ಅರ್ಥವಾಗುತ್ತದೆ.
19 ಮೇ 2025 ರಂದು ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರು ಖತರ್ನಾಕ್ ಮನೆಗಳ್ಳರ ಜಾಲವೊಂದನ್ನು ಪತ್ತೆ ಹಚ್ಚಿ ಬಂಧಿಸಿದರು. ಬಂಧಿತರನ್ನು ಬೇಗೂರು ನಿವಾಸಿ ಶಿವು ಅಲಿಯಾಸ್ ಶಿವರಪ್ಪನ್, ಆತನ ಸ್ನೇಹಿತರಾದ ಅನಿಲ್ ಅಲಿಯಾಸ್ ಜಗ್ಗ ಮತ್ತು ವಿವೇಕ್ ಎಂದು ಗುರುತಿಸಲಾಗಿದೆ. ಈ ಮೂವರ ಪೈಕಿ ಶಿವು ಅಲಿಯಾಸ್ ಶಿವರಪ್ಪನ್ ಈ ಗ್ಯಾಂಗ್ ನ ಮಾಸ್ಟರ್ ಮೈಂಡ್ ಆಗಿದ್ದು, ಹೆಂಡತಿ, ಮಕ್ಕಳಿಲ್ಲದ ಶಿವು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ಏರಿಯಾದಲ್ಲಿ ಸ್ನೇಹಿತರು ಮಕ್ಕಳ ಸ್ಕೂಲ್ ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ನೋಡಿದ್ದ. ಬಳಿಕ ಶಿವು ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಕನ್ನ ಹಾಕಿದ್ದು, ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್ @ ಜಗ್ಗ ಮತ್ತು ವಿವೇಕ್ನ ಸಹಾಯದಿಂದ ಮಾರಾಟ ಮಾಡುತ್ತಿದ್ದ. ಹೀಗೆ ಮಾರಾಟ ಮಾಡಿದ ಹಣವನ್ನು ತಂದು ವಿದ್ಯಾರ್ಥಿಗಳ ಶಾಲಾ-ಕಾಲೇಜು ಫೀಸ್ ಕಟ್ಟುತ್ತಿದ್ದ. ಕಳ್ಳತನದಲ್ಲಿ ಬಂದ ಚಿನ್ನವನ್ನು ಮಾರಿ ಏರಿಯಾದ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜು ಫೀಸ್ ಕಟ್ಟಿದ್ದಾನೆ. ಬ್ಯಾಡರಹಳ್ಳಿ ಪೊಲೀಸರು ಇದನ್ನು ಅಧಿಕೃತವಾಗಿ ಹೇಳಿದ್ದಾರೆ. ಹಾಗಂತ ಕಳ್ಳನನ್ನು ಪೊಲೀಸರು ಬಿಟ್ಟು ಬಿಡಲಿಲ್ಲ. ಸ್ಕೂಲ್ ಫೀಸ್ ಕಟ್ಟಿಸಿಕೊಂಡ ಯಾವ ಮಕ್ಕಳು ಕೂಡಾ ಕಳ್ಳನ ಪರವಾಗಿ ವಕಾಲತ್ತು ಮಾಡಲಿಲ್ಲ. ಮಕ್ಕಳಿಗಿರಬೇಕಾದ ಕನಿಷ್ಠ ಜ್ಞಾನ ಒರ್ವ ನಿವೃತ್ತ ಪೊಲೀಸ್ ಅಧಿಕಾರಿಗೆ ಇಲ್ಲ ಎನ್ನುವುದೇ ಆಶ್ಚರ್ಯ !
ಜಿ ಎ ಬಾವಾರವರ ಇನ್ನೊಂದು ಅಪಕ್ವ, ಬಾಲಿಶ ಮಾತೆಂದರೆ, ‘ನಾನು ಪೊಲೀಸ್ ಇಲಾಖೆಯಲ್ಲಿ ಬಹಳಷ್ಟು ವರ್ಷ ಸೇವೆ ಮಾಡಿದವನು. ಎಷ್ಟೇ ದೊಡ್ಡ ಶಿಫಾರಸು ಇರುವವನು ಅಥವಾ ಬಲಾಢ್ಯನಿಗೂ ನೂರಾರು ಕೊಲೆ ಅಥವಾ ಅತ್ಯಾಚಾರ ಮಾಡಲು ಧೈರ್ಯ ಬರುವುದಕ್ಕೆ ಸಾಧ್ಯವಿಲ್ಲ. ಒಂದು ಎರಡು ಪ್ರಕರಣ ಆದಾಗಲೇ ಅದು ಹೊರಕ್ಕೆ ಬರುತ್ತದೆ. ಕ್ರೈಮ್ ಮಾಡುವುದು ಅಷ್ಟು ಸುಲಭದ ಕೆಲಸವೂ ಅಲ್ಲ. ಮಾಡಿ ರಾಜಾರೋಷವಾಗಿ ಇರುವುದಾದರೆ ಇಂದು ಅದೆಷ್ಟೋ ಬಲಾಢ್ಯರು ಜೈಲಿನಲ್ಲಿ ಇರಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಬರೆಯುತ್ತಾರೆ. ಬಹಳಷ್ಟು ವರ್ಷಗಳ ಸೇವೆ ಬಿಡಿ, ಕೆಲವೇ ಕ್ಷಣವಾದರೂ ಖಾಕಿ ಹಾಕಿಕೊಂಡ ಯಾವ ಪೊಲೀಸ್ ಸಿಬ್ಬಂದಿಯೂ ಹೀಗೆ ಹೇಳಲು ಸಾಧ್ಯವಿಲ್ಲ.
‘ಕ್ರೈಂ ಮುಚ್ಚಿ ಹಾಕುವ ಪ್ರಕ್ರಿಯೆಯಲ್ಲಿ ಪ್ರಭಾವಿಗಳು, ಅಸಹಾಯಕರು ಎಂಬುದು ಇರುವುದಿಲ್ಲ. ಕೆಲವು ಕ್ರೈಂಗಳು ಕಾನೂನಿನ ಕೈಗೇ ಸಿಗದಂತೆ ತಪ್ಪಿಸಿಕೊಂಡು ಸರಣಿಗಳಾಗಿರ್ತವೆ. ಇನ್ನೂ ಕೆಲವು ಕ್ರೈಂಗಳು ತನಿಖೆಯೇ ನಡೆಯದೇ ಸರಣಿಗಳಾಗಿರ್ತವೆ’ ಎಂಬ ಸರಳ ತತ್ವ ಖಾಕಿ ಧರಿಸಿದ್ದ ಯಾವುದೇ ಪೊಲೀಸ್ ಸಿಬ್ಬಂದಿಗೆ ತಿಳಿದಿರುತ್ತದೆ. ಹತ್ತು ವರ್ಷಗಳಲ್ಲಿ ಸೈನೆಡ್ ಕಿಲ್ಲರ್ ಮೋಹನ್ ಕುಮಾರ್ 23 ಹುಡುಗಿಯರ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ. ಹತ್ತು ವರ್ಷಗಳಲ್ಲಿ ಕರ್ನಾಟಕದಲ್ಲಿ ಪೊಲೀಸ್ ಇಲಾಖೆಯೇ ಇರಲಿಲ್ಲವೇ ? ಯಾಕೆ ಐದಾರು ಹುಡುಗಿಯರು ನಾಪತ್ತೆಯಾದಾಗಲೇ, ಅತ್ಯಾಚಾರ ಆದಾಗಲೇ, ಕೊಲೆಯಾದಾಗಲೇ ಕಿಲ್ಲರ್ ಮೋಹನನ ಕ್ರೈಂ ಹೊರಗೆ ಬಂದಿರಲಿಲ್ಲ? ಯಾಕೆಂದರೆ ಆತ ಅತ್ಯಾಚಾರ, ಕೊಲೆ ಎಂಬ ಕ್ರೈಂ ಅನ್ನು ಪೊಲೀಸರ ಕುಣಿಕೆಗೆ ಸಿಗದಂತೆ ಮಾಡುತ್ತಿದ್ದ. ಆತನ ಹಿಂದೆ ಯಾವ ಪ್ರಭಾವವೂ ಇರಲಿಲ್ಲ. ದಕ್ಷ ಪೊಲೀಸ್ ಅಧಿಕಾರಿ ಸುಬ್ರಹ್ಮಣ್ಯೇಶ್ವರ ರಾವ್ ಅವರು ‘ಲವ್ ಜಿಹಾದ್’ ತನಿಖೆ ಮಾಡುವಾಗ ಕಿಲ್ಲರ್ ಮೋಹನ ಪತ್ತೆಯಾಗಿದ್ದ. ಲಕ್ಷಾಂತರ ಭಕ್ತರನ್ನು ಹೊಂದಿರುವ ಡೇರಾ ಸಚ್ಚಾ ಸೌಧದ ಗುರ್ಮಿತ್ ರಾಮ್ ರಹೀಂ ಸಿಂಗ್ ಎಂಬ ಧರ್ಮಗುರುವಿನ ಮೇಲೆ ಹಲವು ಅತ್ಯಾಚಾರ, ಕೊಲೆ ಕೇಸು ದಾಖಲಾಗಿದೆ. ಜಿ ಎ ಬಾವಾರವರು ಹೇಳಿದಂತೆ ಒಂದೆರಡು ಅತ್ಯಾಚಾರ ಆದಾಗಲೇ ಧರ್ಮಗುರು ಗುರ್ಮಿತ್ ರಾಮ್ ಅರೆಸ್ಟ್ ಯಾಕಾಗಲಿಲ್ಲ ? ಆಯಾ ಕಾಲದ ಪ್ರಧಾನಿಯನ್ನೇ ತನ್ನ ಭಕ್ತರನ್ನಾಗಿಸಿಕೊಂಡಿದ್ದ ಅಸಾರಾಂ ಬಾಪೂ ಎಂಬ ಧರ್ಮಗುರು ಇಷ್ಟು ವರ್ಷಗಳ ಕಾಲ ಬಾಲಕಿಯರ ಅತ್ಯಾಚಾರ, ಸಾಕ್ಷಿಗಳ ಕೊಲೆಗಳನ್ನು ಮಾಡಿ 2023ರವರೆಗೂ ಜೈಲಿಗೆ ಹೋಗದೇ ಇರಲು ಕಾರಣವೇನು ? ಅಷ್ಟು ವರ್ಷಗಳ ಕಾಲ ತನಿಖೆಗೆ ಒಳಪಡದ ಕ್ರೈಂಗಳ ಕಾರಣಕ್ಕಾಗಿ ಅವರು ಬಚಾವಾಗಿದ್ದರು. ಸರಳವಾಗಿ ಹೇಳುವುದಾದರೆ 23 ಅತ್ಯಾಚಾರ ಕೊಲೆ ಮಾಡಿದ ಕಿಲ್ಲರ್ ಮೋಹನನದ್ದು ತನಿಖೆಯ ಕೈಗೆ ಸಿಗದ ಕ್ರೈಂ, ಹತ್ತಾರು ವರ್ಷಗಳ ಕಾಲ ಅತ್ಯಾಚಾರ ಕೊಲೆ ಮಾಡಿಕೊಂಡೇ ಬದುಕಿದ ಧರ್ಮಗುರು ಗುರ್ಮಿತ್, ಆಸಾರಾಂ ಬಾಪೂದು ತನಿಖೆಯೇ ಆಗದ ಕ್ರೈಂಗಳು !. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಹತ್ತಾರು ವರ್ಷಗಳ ಕಾಲ ತನಿಖೆಯೇ ಆಗದ ನೂರಾರು ಅಸಹಜ ಸಾವು, ಅತ್ಯಾಚಾರ, ಕೊಲೆ, ಆತ್ಮಹತ್ಯೆಗಳು !
ನಿವೃತ್ತ ಪೊಲೀಸ್ ಅಧಿಕಾರಿ ಜಿ ಎ ಬಾವಾರವರು ಯಾರನ್ನೋ ರಕ್ಷಿಸಲು ಹೆಣಗಾಡುತ್ತಾ “ನನ್ನ ಹಿರಿಯ ಅಧಿಕಾರಿಯೊಬ್ಬರು ಒಂದು ಅಭಿಪ್ರಾಯ ಹೇಳಿದರು. ಲಕ್ಷಾಂತರ ಭಕ್ತರು ಬರುತ್ತಾರೆ. ಇಲ್ಲಿ ಸಾವುಗಳು, ಆತ್ಮಹತ್ಯೆಗಳು ನಡೆದಿವೆ. ಸರಕಾರಿ ನಿಯಮಗಳನ್ನು ಪಾಲಿಸದೇ ಶವಸಂಸ್ಕಾರ ಮಾಡಿರಲೂ ಬಹುದು. ಈ ನಿಯಮ ಉಲ್ಲಂಘನೆಯನ್ನು ದೇವಸ್ಥಾನದ ಪ್ರತಿಷ್ಠೆಯ ಧೈರ್ಯದಿಂದ ಅಧಿಕಾರಿಗಳು ಮಾಡಿರಬಹುದು” ಎಂದು ಬರೆಯುತ್ತಾರೆ. ನೂರಾರು ಅಸಹಜ ಸಾವುಗಳ ಬಗ್ಗೆ ಹೋರಾಟ ನಡೆಯುತ್ತಿರುವುದೆ ಈ ಕಾರಣಕ್ಕಾಗಿ ! ಸಾವು, ಆತ್ಮಹತ್ಯೆ, ಕೊಲೆಗಳನ್ನು ಅದೇ ದಿನ ಸುಟ್ಟು ಹಾಕಲು, ಹೂಳಲು ಕಾರಣವೇನು ? ಸ್ನಾನಘಟ್ಟದಲ್ಲಿ ಪತ್ತೆಯಾದ ಅಪರಿಚಿತ ಶವ, ಯಾರೋ ಮಾಡಿದ ಕೊಲೆಯ ಶವ ದೇವಸ್ಥಾನಕ್ಕೆ ಹೇಗೆ ಸಂಬಂಧ ಪಡುತ್ತದೆ ? ‘ದೇವಸ್ಥಾನದ ಪ್ರತಿಷ್ಠೆಯ ಧೈರ್ಯದಿಂದ ಅಧಿಕಾರಿಗಳು ಹೀಗೆ ಮಾಡಿರಬಹುದು’ ಎಂದು ನಿವೃತ್ತ ಎಸಿಪಿಯವರ ಮಾತುಗಳ ಅರ್ಥ ‘ದೊಡ್ಡವರು ನಮ್ಮನ್ನು ರಕ್ಷಣೆ ಮಾಡುತ್ತಾರೆ ಎಂಬ ಧೈರ್ಯದಿಂದಲೇ ಅಧಿಕಾರಿಗಳು ಹೀಗೆ ಮಾಡಿದ್ದಾರೆ’ ಎಂಬುದಾಗಿದೆ ! ಇದು ತನಿಖೆಯಾಗಬೇಕಾದ ಬಹು ದೊಡ್ಡ ಹಗರಣ. ಜಿ ಎ ಬಾವ ಮತ್ತು ಅವರ ಹಿರಿಯ ಅಧಿಕಾರಿಯನ್ನು ಎಸ್ಐಟಿ ತನಿಖೆ ನಡೆಸಬೇಕು. ಒಂದು ವೇಳೆ ದೊಡ್ಡವರ ಪ್ರಭಾವಕ್ಕೊಳಗಾಗಿ ಅಥವಾ ಅವರ ಧೈರ್ಯದಿಂದ ಕಾನೂನು ಉಲ್ಲಂಘಿಸಿ ನೂರಾರು ಶವ ದಫನ ಮಾಡಿದ್ದಾರೆ ಎಂದಾದರೆ ದೊಡ್ಡವರ ಪಾತ್ರದ ಬಗ್ಗೆ ನಿಖರ, ಪಾರದರ್ಶಕ ತನಿಖೆಯಾಗಬೇಕು. ಪದ್ಮಲತಾ, ವೇದವಲ್ಲಿ, ಆನೆಮಾವುತ ನಾರಾಯಣ, ಯಮುನಾ ಕೊಲೆಯನ್ನೂ ಹೀಗೇ ‘ದೊಡ್ಡವರ ನಿರ್ದೇಶನದಂತೆ ಮುಚ್ಚಿ’ಹಾಕಿದರೆ ? ಜಿ ಎ ಬಾವಾರವರು ಆರೋಪಿಸಿದ ‘ಪೊಲೀಸರಿಗೆ ಪ್ರತಿಷ್ಠೆಯ ಧೈರ್ಯ’ದ ಬಗ್ಗೆಯೇ ತನಿಖೆಯಾಗಬೇಕು. ಇಲ್ಲದೇ ಇದ್ದರೆ ಜಿ ಎ ಬಾವಾರವರು ಧರ್ಮಸ್ಥಳ ಠಾಣೆಯ ಪೊಲೀಸರ ಮೇಲೆ ಈಗ ಆರೋಪಿಸಿದಂತೆ, ಮುಂದೊಂದು ದಿನ ಪ್ರಾಮಾಣಿಕ, ದಕ್ಷ ಅಧಿಕಾರಿಗಳೇ ಇರುವ ಎಸ್ಐಟಿ ಮೇಲೆಯೂ ಇಂತಹುದೇ ಆರೋಪ ಬರಬಹುದು.
ಜಿ ಎ ಬಾವಾರವರು ಮುಂದುವರೆದು “ಎಲ್ಲಿಯಾದರೂ ಇವರು ಆರೋಪಿಸುವಂತೆ ಇದ್ದಿದ್ದರೆ ಇಂದು ರಾಜ್ಯದ ಮೂಲೆ ಮೂಲೆಯಲ್ಲೂ ಸಂತ್ರಸ್ತರಿಂದ ಕೇಸು ದಾಖಲು ಆಗುತ್ತಿತ್ತು. ಸಿಕ್ಕಿದ ಸಮಯವನ್ನು ಅನ್ಯಾಯವನ್ನು ಹೇಳಿಕೊಳ್ಳಲು ಸರತಿ ಸಾಲಿನಲ್ಲಿ ಬರುತ್ತಿದ್ದರು” ಎಂದು ಬರೆಯುತ್ತಾರೆ. ಕಳೆದ 20 ವರ್ಷಗಳಿಂದ ನಾಪತ್ತೆಯಾದ, ಹೂತು ಹೋದ ಶವಗಳ ಕುಟುಂಬಸ್ಥರು ರಾಜ್ಯದ ಮೂಲೆಮೂಲೆಗಳಿಂದ ಧರ್ಮಸ್ಥಳ ಠಾಣೆಗೆ ಬಂದು ತಮ್ಮ ಮಗಳು/ಮಗ/ಪತ್ನಿ/ತಾಯಿಯ ಶವ ಕೇಳಿದ್ದಾರೆ. ಹಾಗೆ ವಿಚಾರಿಸಿಕೊಂಡು ಬಂದವರನ್ನು ಪೊಲೀಸರು ಲಾಠಿಯಲ್ಲಿ ಬಡಿದು ಬೆನ್ನಟ್ಟಿದ್ದಾರೆ. ಲಾಕಪ್ಪಿನಲ್ಲಿ ಹಾಕಿ ಹಿಂಸಿಸಿದ್ದಾರೆ. ಇವೆಲ್ಲವೂ ವಿಧಾನಸಭೆ ದಾಖಲೆಗಳಲ್ಲೇ ಇವೆ. ಈಗ ಎಸ್ಐಟಿ ಮುಂದೆ ಹಾಜರಾದ ಸಾಕ್ಷಿಗಳನ್ನು, ದೂರುದಾರರನ್ನು ಸರ್ಕಾರ ನಡೆಸಿಕೊಳ್ಳುವ ರೀತಿ ನೋಡಿದರೆ ಯಾರು ತಾನೆ ದೂರು ನೀಡಲು ಮುಂದೆ ಬರಲು ಸಾಧ್ಯ ? ದೂರು ನೀಡುವುದನ್ನೇ ಸರ್ಕಾರ/ವಿಪಕ್ಷಗಳು ಷಡ್ಯಂತ್ರ, ಅಪಪ್ರಚಾರ, ದೇವರ ಮೇಲಿನ ದಾಳಿ ಎಂದು ಘೋಷಿಸಿದರೆ ಸಂತ್ರಸ್ತರು ಮುಂದೆ ಬರುವುದಾದರೂ ಹೇಗೆ ?
ನಿವೃತ್ತ ಎಸಿಪಿ ಜಿ ಎ ಬಾವಾರವರು ಬರೆದ ಪತ್ರ ಜನರ ಅನುಮಾನಗಳನ್ನು ಗಟ್ಟಿಗೊಳಿಸಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಸಹಜ ಸಾವು, ಕೊಲೆ, ಅತ್ಯಾಚಾರ ಪ್ರಕರಣಗಳು ತನಿಖೆಯಾಗಬೇಕು ಎಂದಷ್ಟೇ ಜನರ ಆಗ್ರಹವಾಗಿದೆ. ಈ ತನಿಖೆಗಳು ಆಗದೇ ಇರಲು, ಅಕ್ರಮವಾಗಿ ದಫನ ಮಾಡಿ ಸಾಕ್ಷ್ಯ ನಾಶ ಮಾಡಲು ‘ಪೊಲೀಸರಿಗೆ ಪ್ರತಿಷ್ಠೆಯ ರಕ್ಷಣೆ’ ಕಾರಣವಾಗಿದೆ ಎಂಬ ಜಿ ಎ ಬಾವ ಮತ್ತು ಅವರ ಹಿರಿಯ ಅಧಿಕಾರಿಯ ಹೇಳಿಕೆ ಕೆಲ ಹೋರಾಟಗಾರರ ‘ನೇರ ಆರೋಪ’ಕ್ಕೆ ಪುಷ್ಠಿ ನೀಡುವಂತಿದೆ.
ನವೀನ್ ಸೂರಿಂಜೆ
ಪತ್ರಕರ್ತರು
ಇದನ್ನೂ ಓದಿ- ‘ದಿ ರೈಸ್ ಆಫ್ ವೀರೇಂದ್ರ ಹೆಗ್ಗಡೆ’: ಗ್ರಾಮೀಣಾಭಿವೃದ್ಧಿಯ ಮರೆಯಲ್ಲಿ ರಾಷ್ಟ್ರಪತಿ ಕನಸು!