ಕರ್ನಾಟಕವನ್ನು ಏಕೀಕರಣಗೊಳಿಸುವ ಸಂದರ್ಭದಲ್ಲಿ ಕನ್ನಡವನ್ನು ಕೇವಲ ಹಿಂದುತ್ವವನ್ನು ಪ್ರತಿಪಾದಿಸುವ ಭುವನೇಶ್ವರಿ ದೇವಿಯ ಪ್ರತಿಮೆಯಾಗಿಸಿದ್ದು ಐತಿಹಾಸಿಕವಾಗಿ ಘಟಿಸಿದ ತಪ್ಪು. ಧರ್ಮನಿರಪೇಕ್ಷತೆಯ ನೆಲದಲ್ಲಿ ಅದರ ಪರಿಪಾಠ ಇಂದಿಗೂ ಮುಂದುವರಿದು ಬಂದಿರುವುದು ಮತ್ತೊಂದು ದುರಂತ. ವಾಸ್ತವ ಹೀಗಿರುವಾಗ ತಾಯಿ ಭುವನೇಶ್ವರಿಯ ತೆಕ್ಕೆಗೆ ಬಾರದ ಅನೇಕರ ಧ್ವನಿ ಬಾನು ಮುಷ್ತಾಕ್ ಅವರು ಅಂದು ಜನಸಾಹಿತ್ಯ ಸಮಾವೇಶದಲ್ಲಿ ಆಡಿದ ಮಾತುಗಳಲ್ಲಿದ್ದವು. ಅವರಾಡಿದ್ದು ಕನ್ನಡ ಭಾಷೆಯ ಅಥವಾ ಕನ್ನಡತನದ ವಿರುದ್ಧವಾಗಿರಲಿಲ್ಲ; ಬದಲಿಗೆ ಧರ್ಮನಿರಪೇಕ್ಷ ರಾಜ್ಯದಲ್ಲಿ ಕಾಣಿಸಿಕೊಳ್ಳುವ ಸಾಂಸ್ಕೃತಿಕ ಸಂಕೇತಗಳು ಹೇಗೆ ಸರ್ವಜನಾಂಗವನ್ನೂ ಒಳಗೊಳ್ಳಬೇಕು ಎಂಬುದರ ಕುರಿತಾಗಿತ್ತು – ಸೌಮ್ಯಾ ಕೋಡೂರು, ಸಹಾಯಕ ಪ್ರಾಧ್ಯಾಪಕರು
ಬಹುಶಃ ನಾನು ಹೇಳಲು ಹೊರಟ ವಿಚಾರವನ್ನು ಸುಮಾರು 1862-1915 ಕಾಲಮಾನದಲ್ಲಿ ಬಾಳಿಹೋದ ತೆಲುಗಿನ ನವೋದಯ ಸಾಹಿತ್ಯದ ಕವಿ ಗುರಜಾಡ ಅಪ್ಪಾರಾವು ಅವರ “ದೇಶವೆಂದರೆ ಬರಿ ಮಣ್ಣಲ್ಲವೋ, ದೇಶವೆಂದರೆ ಮನುಜರು!” ಎಂಬ ಕವಿತೆಯ ಮೂಲಕವೇ ಆರಂಭಿಸುವುದು ಸೂಕ್ತವೆನಿಸುತ್ತದೆ. (ಕನ್ನಡಕ್ಕೆ: ಕೇಶವ ಮಳಗಿ)
ದೇಶಭಕುತಿ ನನ್ನೊಬ್ಬನ ಸೊತ್ತೆನ್ನುತ
ಟೊಳ್ಳು ದನಿಯಲಿ ಕೇಕೆ ಹಾಕದಿರು
ಎಂತಾದರೂ ಒಳಿತು ಮಾಡುತ
ಜನರ ಜತನವ ಧ್ಯಾನಿಸೋ!
ಮತವು ಬೇರಾದರೇನೋ
ಮನುಜರಾದರೆ ಮನಸು ಒಂದೇ
ಮನುಜ ಕುಲವು ಎದ್ದು ನಿಂತರೆ
ಲೋಕವು ಮೆರೆಯುವುದೋ
ದೇಶವೆಂದರೆ ಮಣ್ಣಲ್ಲವೋ
ದೇಶವೆಂದರೆ ಮನುಜರು!!
ಸ್ನೇಹಿತರೇ, ದಿಟ್ಟ ನಿಲುವಿನ ಸಮಾಜದಲ್ಲಿ ಒಲ್ಲದ್ದನ್ನು ಪ್ರಶ್ನಿಸುವ ಬಂಡಾಯ ಮನೋಧರ್ಮದ ಬಾನು ಮುಷ್ತಾಕ್ ಅವರನ್ನು ಕನ್ನಡ ನೆಲದ ಹಬ್ಬ ದಸರಾವನ್ನು ಉದ್ಘಾಟಿಸಲು ರಾಜ್ಯಸರ್ಕಾರವು ಆಹ್ವಾನಿಸಿದ್ದು ಇದೀಗ ಸೋಕಾಲ್ಡ್ ದೇಶಪ್ರೇಮಿಗಳನ್ನು, ಕನ್ನಡ ಪ್ರೇಮಿಗಳನ್ನು ಚಿಂತೆಗೀಡು ಮಾಡಿದೆ. ಕರ್ನಾಟಕ ಸರ್ಕಾರದ ಈ ನಡೆ ಇಡೀ ದೇಶವನ್ನೇ ದಾರಿತಪ್ಪಿಸುವ ನಡೆ ಎನ್ನುವಂತೆ ಇವರು ಬಿಂಬಿಸಲು ಯತ್ನಿಸುತ್ತಿದ್ದಾರೆ.
ನಮ್ಮ ಮುಖ್ಯವಾಹಿನಿಯ ಮೀಡಿಯಾಗಳಂತೂ ಹರಕು ಬಾಯಿಗಳಿಗೇ ತಮ್ಮ ಮೈಕು ಕೊಟ್ಟು ಕೂಗಿಸಿ ಸಮಾಜದ ಸ್ವಾಸ್ಥ್ಯವನ್ನು ತಮ್ಮ ನಿರೀಕ್ಷೆಗೂ ಮೀರಿ ಹಾಳುಗೆಡವಲು ಪ್ರಯತ್ನಿಸುತ್ತಿವೆ. ಜೋ ದಿಖೇಗಾ ವಹೀ ಭಿಖೇಗಾ – ಎನ್ನುವಂತೆ ಜನರ ಕಣ್ಣಿಗೆ ಹೆಚ್ಚು ಬೀಳುವುದೇ ಸತ್ಯವೂ, ಶಾಶ್ವತವೂ ಆಗಿ ಬಿಡುತ್ತವೆ. ಹಾಗೆ ಹೆಚ್ಚೆಚ್ಚು ಭ್ರಾಂತುಗಳನ್ನೇ ಕಾಣುವಂತೆ ಮಾಡುವುದು ಇಂತಹ ಮಾಧ್ಯಮಗಳ ಪ್ರತಿಕ್ಷಣದ ಕೆಲಸ. ದಸರಾ ನಾಡಹಬ್ಬವೇ ಹೊರತು ಯಾವುದೇ ಒಂದು ಸಮುದಾಯದ ಜನರಿಗೆ ಸೇರಿದ್ದಲ್ಲ ಎನ್ನುವ ಕನಿಷ್ಠ ಜ್ಞಾನವಾದರೂ ಇವುಗಳಿಗೆ ಇದ್ದಿದ್ದರೆ, ಬಹುಶಃ ಬಾನು – ಭುವನೇಶ್ವರಿಯರ ಈ ಅಂತರ ಈಗಾಗಿರುವ ರೂಪ ತಾಳುತ್ತಿರಲಿಲ್ಲ. ಸಾಮಾನ್ಯ ಜ್ಞಾನವೂ ತೀರಾ ಸಾಮಾನ್ಯವಲ್ಲ ಎಂದು ನಮ್ಮಷ್ಟಕ್ಕೆ ನಾವೇ ಸಮಾಧಾನ ಮಾಡಿಕೊಂಡು ಕರುನಾಡು ಸರ್ವಜನಾಂಗದ ಶಾಂತಿಯ ತೋಟ ಎನ್ನುವುದನ್ನು ಮತ್ತೆ ಮತ್ತೆ ಇಂತಹ ಕೂಗುಮಾರಿಗಳಿಗೆ ಕಿವಿಹಿಂಡಿ ನೆನಪಿಸಬೇಕಾಗಿದೆ.
ಇದನ್ನೂ ಓದಿ- ದಸರಾ ಉದ್ಘಾಟನೆ ವಿವಾದ; ಭಾನು ಮುಷ್ತಾಕ್ ಯಾಕೆ ಬೇಡ?
ಈ ಸಲದ ನಾಡಹಬ್ಬದ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಹ್ವಾನಿಸಿರುವುದು – ಆಕೆ ಕನ್ನಡ ನೆಲದಲ್ಲಿ ವೈಚಾರಿಕ ಪ್ರಜ್ಞೆಯನ್ನು ಸದಾ ಚಾಲ್ತಿಯಲ್ಲಿಡುವ ವ್ಯಕ್ತಿ ಎನ್ನುವ ಕಾರಣಕ್ಕೆ ಎಂದು ಭಾವಿಸದೆ ಕೇವಲ ಅದನ್ನು ವೋಟಿನ ರಾಜಕಾರಣ ಎಂದು ಅರ್ಥೈಸಲಾಗುತ್ತಿದೆ. ಇದೇ ಹಿನ್ನೆಲೆಯಲ್ಲಿ ಆಕೆ ಹಿಂದೊಮ್ಮೆ ಆಡಿದ್ದ ಮಾತುಗಳನ್ನು ಗ್ರಹಿಸಿಕೊಂಡು ಈಗ ಆಕೆಯ ವ್ಯಕ್ತಿತ್ವದ ಮೇಲೆ ಚಾಟಿ ಬೀಸುತ್ತಿರುವುದು ಕನ್ನಡಿಗರ ಪರಿಕಲ್ಪನೆಗೆ ಎಸಗುತ್ತಿರುವ ದ್ರೋಹ.
ಪ್ರಿಯ ಪ್ರತಿಮೆಗಳೇ ಪ್ರೀತಿ ಕಲಿಸಿ ಎನ್ನುವ ಒಂದು ಲೇಖನದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ ಅವರು ನಮ್ಮ ಸುತ್ತಮುತ್ತ ಪ್ರತಿಷ್ಠಾಪನೆಯಾಗುವ ನೂರಾರು ಪ್ರತಿಮೆಗಳು ಹೇಗೆ ಸಮಾಜದ ಸಾಮರಸ್ಯವನ್ನು ಸುಸ್ಥಿತಿಯಲ್ಲಿರಿಸುವ ಆಶಯವನ್ನು ಹೊಂದಿರಬೇಕು ಎನ್ನುವುದನ್ನು ವಿವರಿಸುತ್ತಾರೆ. ಈಗ ಮತ್ತೊಮ್ಮೆ ಪ್ರಿಯ ಪ್ರತಿಮೆಗಳೇ ಸಹಬಾಳ್ವೆ ಕಲಿಸಿ ಎಂದು ಗಟ್ಟಿಯಾಗಿ ಪ್ರತಿಪಾದಿಸಬೇಕಾದ ಸಂದರ್ಭ ಸೃಷ್ಟಿಯಾಗಿದೆ.
ಕನ್ನಡ ಭಾಷೆಯ ಅಸ್ಮಿತೆಗೆ ಭುವನೇಶ್ವರಿಯ ಪ್ರತಿಮೆಯನ್ನು ಮೂರ್ತ ರೂಪವನ್ನಾಗಿಸಿ ಹಲವು ದಶಕಗಳೇ ಕಳೆದಿವೆ. ಈ ಪ್ರತಿಮೆಯ ಕುರಿತು ಜನಸಾಹಿತ್ಯ ಸಮಾವೇಶದಲ್ಲಿ ಬಾನು ಮುಷ್ತಾಕ್ ಅವರು ಆಡಿದ್ದ ಮಾತುಗಳನ್ನು ಸಂಕುಚಿತವಾಗಿ ಅರ್ಥೈಸಿಕೊಂಡು ಈಗ ಅನಗತ್ಯವಾಗಿ ಚರ್ಚೆಗೆ ಎಳೆಯಲಾಗುತ್ತಿದೆ.
ಕರ್ನಾಟಕವನ್ನು ಏಕೀಕರಣಗೊಳಿಸುವ ಸಂದರ್ಭದಲ್ಲಿ ಕನ್ನಡವನ್ನು ಕೇವಲ ಹಿಂದುತ್ವವನ್ನು ಪ್ರತಿಪಾದಿಸುವ ಭುವನೇಶ್ವರಿ ದೇವಿಯ ಪ್ರತಿಮೆಯಾಗಿಸಿದ್ದು ಐತಿಹಾಸಿಕವಾಗಿ ಘಟಿಸಿದ ತಪ್ಪು. ಧರ್ಮನಿರಪೇಕ್ಷತೆಯ ನೆಲದಲ್ಲಿ ಅದರ ಪರಿಪಾಠ ಇಂದಿಗೂ ಮುಂದುವರಿದು ಬಂದಿರುವುದು ಮತ್ತೊಂದು ದುರಂತ. ವಾಸ್ತವ ಹೀಗಿರುವಾಗ ತಾಯಿ ಭುವನೇಶ್ವರಿಯ ತೆಕ್ಕೆಗೆ ಬಾರದ ಅನೇಕರ ಧ್ವನಿ ಬಾನು ಮುಷ್ತಾಕ್ ಅವರು ಅಂದು ಜನಸಾಹಿತ್ಯ ಸಮಾವೇಶದಲ್ಲಿ ಆಡಿದ ಮಾತುಗಳಲ್ಲಿದ್ದವು. ಅವರಾಡಿದ್ದು ಕನ್ನಡ ಭಾಷೆಯ ಅಥವಾ ಕನ್ನಡತನದ ವಿರುದ್ಧವಾಗಿರಲಿಲ್ಲ; ಬದಲಿಗೆ ಧರ್ಮನಿರಪೇಕ್ಷ ರಾಜ್ಯದಲ್ಲಿ ಕಾಣಿಸಿಕೊಳ್ಳುವ ಸಾಂಸ್ಕೃತಿಕ ಸಂಕೇತಗಳು ಹೇಗೆ ಸರ್ವಜನಾಂಗವನ್ನೂ ಒಳಗೊಳ್ಳಬೇಕು ಎಂಬುದರ ಕುರಿತಾಗಿತ್ತು. ಬಾನು – ಭುವನಗಳ ಅಂತರವನ್ನು ಇಲ್ಲವಾಗಿಸುವ ಚಿಕಿತ್ಸಕ ಮನೋಧರ್ಮ ಅವರ ಧ್ವನಿಯಲ್ಲಿತ್ತು.
ಬರಗೂರು ರಾಮಚಂದ್ರಪ್ಪ ಅವರು ದಸರಾ ಉದ್ಘಾಟಿಸುವ ಸಂದರ್ಭದಲ್ಲಿ “ಮೊದಲಿನಿಂದಲೂ ಚಾಮುಂಡೇಶ್ವರಿಯ ಪೂಜೆಯಿಂದ ದಸರಾಹಬ್ಬ ಆರಂಭಿಸಿಲ್ಲವೇ ಎಂದು ಪ್ರಶ್ನಿಸಬಹುದು. ದಸರಾ ಹಬ್ಬ ಆರಂಭವಾದಾಗ ಉದ್ಘಾಟನೆಯ ಪರಿಕಲ್ಪನೆಯೇ ಇರಲಿಲ್ಲ. ಉದ್ಘಾಟನೆ ಎನ್ನುವುದು ಇತ್ತೀಚಿನ ಸೇರ್ಪಡೆ. ಆದ್ದರಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿದ ಪೂಜೆಯ ಪಾಡಿಗೆ ಪೂಜೆ; ಉದ್ಘಾಟನೆಯ ಪಾಡಿಗೆ ಉದ್ಘಾಟನೆ ಎಂದು ಭಾವಿಸುವುದು ಸೂಕ್ತವೆಂದು ನಾನು ಭಾವಿಸುತ್ತೇನೆ. ನಾನು ದಸರಾ ಉದ್ಘಾಟನೆಯನ್ನು ಈ ವೇದಿಕೆಯಲ್ಲಿ ದೀಪ ಬೆಳಗಿಸುವುದರ ಮೂಲಕ ಮಾಡಿದ್ದೇನೆ. ಚಾಮುಂಡೇಶ್ವರಿ ಪೂಜೆಯಲ್ಲಿ ನಾನು ಭಾಗವಹಿಸಲಿಲ್ಲ. ಉದ್ದೇಶ ಪೂರ್ವಕವಾಗಿಯೇ ಭಾಗವಹಿಸಲಿಲ್ಲ. ಸರ್ಕಾರವು ವ್ಯವಸ್ಥೆಗೊಳಿಸುವ ಯಾವುದೇ ಸಮಾರಂಭವು ಸಂವಿಧಾನ ಆಶಯಕ್ಕೆ ಬದ್ಧವಾಗಿರಬೇಕೆಂದು ತೋರಿಸಿಕೊಡಲು ನಾನು ಈ ಸಮಾರಂಭವನ್ನು ಬಳಸಿಕೊಂಡಿದ್ದೇನೆ” ಎಂದಿದ್ದರು.
ನಿಸಾರ್ ಅಹಮದ್ ಅವರು ದಸರಾ ಉದ್ಘಾಟಿಸಿದಾಗ ಅವರೊಬ್ಬ ಮುಸ್ಲಿಂ ಎನ್ನುವ ವಿಚಾರ ಈ ಮಟ್ಟಿಗೆ ಸುಳಿದಿರಲಿಲ್ಲ. ಆದರೆ ಅಲ್ಪಸಂಖ್ಯಾತ ಸಮುದಾಯದ ದಿಟ್ಟ ಹೆಣ್ಣೊಬ್ಬಳನ್ನು ಆಹ್ವಾನಿಸಿದಾಕ್ಷಣ ಸಮಸ್ಯೆಗಳು ಭುಗಿಲೆದ್ದು ಬಿಡುತ್ತವೆ. ದುರಂತವೆಂದರೆ ವಿಶಾಲ ವೈಚಾರಿಕತೆ ನಮ್ಮಲ್ಲಿದೆ ಎಂದು ಬಿಂಬಿಸಿಕೊಳ್ಳುತ್ತಿರುವ ಹೆಣ್ಣುಗಳೇ ಬಾನು ಅವರ ಮಾತುಗಳನ್ನು ತಮಗೆ ಬೇಕಾದಂತೆ ತಿರುಚಿಕೊಳ್ಳುತ್ತಿರುವುದು, ಅರಚಿಕೊಳ್ಳುತ್ತಿರುವುದನ್ನು ನೋಡಿದಾಗೆಲ್ಲಾ ಮನುವಾದಿ ಗಂಡಾಳ್ವಿಕೆಯ ಧೋರಣೆ ಹೇಗೆ ಹೆಣ್ಣಿಗೆ ಹೆಣ್ಣನ್ನೇ ಶತ್ರುವಾಗಿಸಿ ಬೇಳೆ ಬೇಯಿಸಿಕೊಳ್ಳುತ್ತಿದೆ ಅನಿಸುತ್ತದೆ.
ಕುವೆಂಪು ಹೇಳುವ ನಮ್ಮೊಳಗಿನ ಚೇತನವು ಅನಿಕೇತನವಾಗುವ ಪ್ರಕ್ರಿಯೆ ನಿರಂತರತೆಯದ್ದು. ನಮ್ಮೊಳಗಿನ ಪ್ರಜ್ಞೆಯನ್ನು ನಿರಂತರವಾಗಿ ಜಾಗೃತ ಸ್ಥಿತಿಯಲ್ಲಿರಿಸಿಕೊಳ್ಳುತ್ತಾ, ನಮ್ಮ ಮಿತಿಗಳನ್ನು ನಾವೇ ಮೀರಿ ವೈಶಾಲ್ಯತೆಯೆಡೆಗೆ ಚಲಿಸುವಂತದ್ದು. ಇದಕ್ಕೆ ಈಗಾಗಲೇ ನಾವು ವೈಚಾರಿಕರು, ಪ್ರಗತಿಪರರು ಎಂದೆಲ್ಲ ಗುರುತಿಸಿಕೊಂಡವರೂ ಹೊರತಲ್ಲ.
ದಸರಾ ನಾಡಹಬ್ಬ ಎನ್ನುವುದನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಳ್ಳುತ್ತಾ ಸರ್ಕಾರಗಳೂ ಸಹ ತಾವು ಆಯೋಜಿಸುವ ಇಂತಹ ಕಾರ್ಯಕ್ರಮದ ಸ್ವರೂಪವನ್ನು ಪುನರ್ವಿಮರ್ಶಿಸಿಕೊಳ್ಳಬೇಕಾದ ಜರೂರಿದೆ. ಏಕೆಂದರೆ ನಾವಿರುವುದು ಜನಪ್ರತಿನಿಧಿಗಳ ಸರ್ಕಾರದಲ್ಲಿ. ರಾಜರ ದರ್ಬಾರನ್ನು ಮೆರೆಸುವ ಯಾವ ನೆನಪುಗಳೂ ನಮಗೀಗ ಬೇಕಿಲ್ಲ ಎನ್ನುವುದೇ ನನ್ನ ಅಭಿಮತ.
ಸೌಮ್ಯಾ ಕೋಡೂರು
ಸಹಾಯಕ ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿನಿ , ಬೆಂಗಳೂರು.
ಇದನ್ನೂ ಓದಿ- ಬಾನು ಹೇಳಿದ್ದರಲ್ಲಿ ತಪ್ಪೇನಿದೆ?