Latest Posts

ದಸರಾ ಉದ್ಘಾಟನೆ ವಿವಾದ; ಭಾನು ಮುಷ್ತಾಕ್ ಯಾಕೆ ಬೇಡ?

ಈ ವರ್ಷದ ದಸರಾ ಸಾಂಸ್ಕೃತಿಕ ಹಬ್ಬದ  ಉದ್ಘಾಟಕರಾಗಿ ಆಯ್ಕೆಯಾದ ಭೂಕರ್ ಪ್ರಶಸ್ತಿ ವಿಜೇತೆ ಬಾನುರವರ ಸಾಧನೆ ಬಗ್ಗೆ ಚರ್ಚೆ ಆಗಬೇಕಿತ್ತು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕವಾಗಿ ಕನ್ನಡದ ಕಥೆಗಳ ಸಾಮರ್ಥ್ಯವನ್ನು ತೋರಿಸಿ ಕೊಟ್ಟಿದ್ದಕ್ಕಾಗಿ ಕನ್ನಡಿಗರು ಹೆಮ್ಮೆ ಪಡಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೆ ರಾಜಕೀಯ ದುರುದ್ದೇಶಕ್ಕಾಗಿ, ಮತಾಂಧತೆಯ ಮೋಹಕ್ಕಾಗಿ, ಧರ್ಮಾಂಧತೆಯ ದ್ವೇಷಕ್ಕಾಗಿ ಅವರನ್ನು ವಿರೋಧಿಸುತ್ತಿರುವ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ನಾಡ ಹಬ್ಬ ದಸರಾ ಉದ್ಘಾಟನೆಗೆ ಕಥೆಗಾರ್ತಿ ಬಾನು ಮುಷ್ತಾಕ್ ರವರನ್ನು ಸಿಎಂ ಸಿದ್ದರಾಮಯ್ಯನವರು ಆಯ್ಕೆ ಮಾಡಿದ್ದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಇಂತಹುದಕ್ಕೆ ಸದಾ ಕಾಯುತ್ತಿರುವ ಬಿಜೆಪಿಗರು ಕೆಂಡವಾಗಿದ್ದಾರೆ. ಈ ಕೇಸರಿಗರ ಅಸಮಾಧಾನಕ್ಕೆ ಮೊದಲ ಕಾರಣ ಬಾನು ಮುಸ್ಲಿಂ ಸಮುದಾಯದವರು ಎಂಬುದು. ಎರಡನೆಯ ಕಾರಣ ಮಹಿಳೆ ಎಂಬುದು ಹಾಗೂ ಮೂರನೆಯ ಕಾರಣ ಪ್ರಗತಿಪರರು ಎಂಬುದು. ಮುಸ್ಲಿಮರ ತುಷ್ಟೀಕರಣಕ್ಕೆ ಕಾಂಗ್ರೆಸ್ ಸರಕಾರ ಈ ಆಯ್ಕೆ ಮಾಡಲಾಗಿದೆ ಎಂಬುದು ಮತಾಂಧರ ಮಾಮೂಲಿ ವಿರೋಧ.  ಇನ್ನು ಕೆಲವರ ಆರೋಪ ಬಾನುರವರು ನಾಸ್ತಿಕರು ಎಂಬುದು. ಮತ್ತೆ ಕೆಲವರದ್ದು “ಬಾನುರವರು ಕನ್ನಡದ ಬಾವುಟದ ಬಣ್ಣಕ್ಕೆ, ಕನ್ನಡ ತಾಯಿ ಭುವನೇಶ್ವರಿಗೆ ಅವಮಾನ ಮಾಡಿದ್ದಾರೆ” ಎಂಬುದು. ಒಟ್ಟಾರೆಯಾಗಿ ಹಿಂದೂ ದೇವಾನು ದೇವತೆಗಳ ಗುತ್ತಿಗೆದಾರರ ಪ್ರಕಾರ ಅನ್ಯ ಧರ್ಮೀಯರ ಚಿತ್ತ ಹಿಂದೂ ದೇವರುಗಳತ್ತ ಇರಲೇಬಾರದು ಎಂಬುದು.

ಭಾನುರವರು ಕನ್ನಡದಲ್ಲಿ ಬರೆದು ದೀಪಾರವರು ಇಂಗ್ಲೀಷಿಗೆ ಅನುವಾದಿಸಿದ  ಕಥಾ ಸಂಕಲನಕ್ಕೆ ಇತ್ತೀಚೆಗೆ ಪ್ರತಿಷ್ಠಿತ ಅಂತಾರಾಷ್ಟ್ರೀಯ ಭೂಕರ್ ಪ್ರಶಸ್ತಿ ದೊರಕಿತ್ತು. ಇದು ಕನ್ನಡಿಗರಿಗೆ ಮಾತ್ರವಲ್ಲ ಇಡೀ ದೇಶಕ್ಕೆ ಹೆಮ್ಮೆ ತರುವ ಸಂಗತಿಯಾಗಿತ್ತು. ಬೇರೆ ಯಾರಾದರೂ ಹಿಂದೂ ಲೇಖಕರಿಗೆ ಅದರಲ್ಲೂ ಮೇಲ್ವರ್ಗದ ಪುರುಷರಿಗೆ ಈ ಪ್ರಶಸ್ತಿ ಬಂದಿದ್ದರೆ ಇದೇ ಕೇಸರಿ ಪಡೆ ತಲೆ ಮೇಲೆ ಹೊತ್ತು ಮೆರೆಸುತ್ತಿತ್ತು. ಪ್ರಧಾನಿಗಳು ಅಭಿನಂದನೆ ಸಲ್ಲಿಸಿ ಸಹಭೋಜನಕ್ಕೆ ಆಹ್ವಾನಿಸುತ್ತಿದ್ದರು. ಆದರೆ ಕಥೆ ಬರೆದಿದ್ದು ಹಾಗೂ ಪ್ರಶಸ್ತಿ ಬಂದಿದ್ದು ಒಬ್ಬ ಮುಸ್ಲಿಂ ಸಮುದಾಯದ ಮಹಿಳೆಗೆ ಎಂಬುದೇ ಈ ಮತಾಂಧರಿಗೆ ನುಂಗಲಾರದ ತುತ್ತಾಯಿತು. ಸಹಭೋಜನದ ಮಾತು ಆಮೇಲಿರಲಿ ಕನಿಷ್ಠ ಮಾತಿಗಾದರೂ ಪ್ರಧಾನಿಗಳು ಅಭಿನಂದನೆ ಸಲ್ಲಿಸಲಿಲ್ಲ.

ಬಾನು ಮುಷ್ತಾಕ್

ಈ ಹಿಂದುತ್ವವಾದಿಗಳ ಅಸ್ತಿತ್ವ ಇರುವುದೇ ಧರ್ಮದ್ವೇಷದ ಮತಾಂಧತೆಯಲ್ಲಿ. ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಗಿಂತ, ಬರೆದ ಅತ್ಯುತ್ತಮ ಕಥೆಗಳಿಗಿಂತ, ಬರೆದವರು ಒಬ್ಬ ಮಹಿಳೆ ಎನ್ನುವುದಕ್ಕಿಂತ ಮುಸ್ಲಿಂ ಎನ್ನುವುದೇ ಬಹಳ ಬಾಧಿಸಿದೆ. ಇತ್ತ ಈ ಹಿಂದುತ್ವವಾದಿ ಮತಾಂಧರು ‘ಮುಸಲ್ಮಾನ ಮಹಿಳೆ ಬಾನುರವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ದೊರಕಿದ್ದಕ್ಕೆ’ ಒಳಗೊಳಗೆ ಅಸಮಾಧಾನ ಹೊಂದಿದ್ದರೆ, ಅತ್ತ ಮುಸಲ್ಮಾನ ಸಮಾಜದವರಿಗೂ ಈ ಸಂತಸದ ಸುದ್ದಿ ಅಪಥ್ಯವಾಗಿತ್ತು.

ಯಾಕೆಂದರೆ ಬಾನು ಮುಷ್ತಾಕ್ ರವರ ಬಹುತೇಕ ಕಥೆಗಳು ಹಾಗೂ ಬರಹಗಳಲ್ಲಿ ಮುಸ್ಲಿಂ ಧರ್ಮದೊಳಗಿನ ಧರ್ಮಾಂಧತೆ, ಪುರುಷ ಪ್ರಧಾನತೆ, ಅನಕ್ಷರತೆ ಹಾಗೂ ಅತಿರೇಕಗಳನ್ನು ಹೇಳುತ್ತಲೇ ಮಹಿಳೆಯರ ಬಾಳಿನ ಗೋಳನ್ನು ಎಳೆಎಳೆಯಾಗಿ ಬಿಡಿಸಿಡುತ್ತಲೇ ಬಂದಿದ್ದಾರೆ. ಕೆಲವಾರು ಪ್ರಗತಿಪರ ವ್ಯಕ್ತಿಗಳು ಹಾಗೂ ಸಂಘಟನೆಗಳ ಜೊತೆಗೆ ತಮ್ಮನ್ನು ಗುರುತಿಸಿಕೊಂಡು ಎಲ್ಲಾ ರೀತಿಯ ದೌರ್ಜನ್ಯ ಹಾಗೂ ಶೋಷಣೆಗಳ ವಿರುದ್ಧ ಧ್ವನಿ ಎತ್ತುತ್ತಲೇ ಬಂದಿದ್ದಾರೆ. ಮಹಿಳೆಯ ಈ ರೀತಿಯ ಪ್ರತಿರೋಧದ ಸ್ವಾತಂತ್ರ್ಯವನ್ನು ಮುಸ್ಲಿಂ ಧರ್ಮಾಂಧರು ಎಂದೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಬಾನುರವರನ್ನು ಮುಸ್ಲಿಂ ಮತಾಂಧರು ದ್ವೇಷಿಸುತ್ತಲೇ ಬಂದಿದ್ದಾರೆ. ಫತ್ವಾ ಹೊರಡಿಸಿದ್ದಾರೆ. ಯಾವುದಕ್ಕೂ ಹೆದರದ ಅವರು ಬರವಣಿಗೆ ಹಾಗೂ ಹೋರಾಟಗಳ ಮೂಲಕ ಅನೇಕ ನೊಂದ ಮುಸ್ಲಿಂ ಮಹಿಳೆಯರ ಧ್ವನಿಯಾಗಿದ್ದಾರೆ.

ಇಂತಹ ಪ್ರಗತಿಪರ ಲೇಖಕಿಯನ್ನು ಅತ್ತ ಧರ್ಮಾಂಧ ಹಿಂದುತ್ವವಾದಿಗಳು ಹಾಗೂ ಇತ್ತ ಮತಾಂಧ ಮುಸ್ಲಿಮರು ವಿರೋಧಿಸುತ್ತಲೇ ಇದ್ದಾಗ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ದೊರಕಿದೆ. ಅದನ್ನು ಹೇಗೋ ಸಹಿಸಿಕೊಂಡಿದ್ದ ಈ ಮತಾಂಧ ಪಡೆಗೆ ಈಗ ಕರ್ನಾಟಕ ಸರಕಾರ ದಸರಾ ಉದ್ಘಾಟನೆಗೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದ್ದನ್ನು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲದಂತಾಗಿದೆ. ಹೀಗಾಗಿ ಬಿಜೆಪಿಯಲ್ಲೇ ಮೂಲೆ ಗುಂಪಾಗಿ ತನ್ನ ಅಸ್ತಿತ್ವಕ್ಕಾಗಿ ಪರದಾಡುತ್ತಿರುವ ಪ್ರತಾಪ ಸಿಂಹ ನಿಂದ ಹಿಡಿದು ಶೋಭಕ್ಕ, ಬೆಲ್ಲದ, ಸುನಿಲ್ ಕುಮಾರ್ ನಂತಹ ಕೋಮುವಾದಿ ನಾಯಕರುಗಳು ಹಾಗೂ ಅವರ ಸಹಚರರು ‘ಬಾನುರವರು ದಸರಾ ಉದ್ಘಾಟಿಸಬಾರದು’ ಎಂದು ಅಪಸ್ವರ ತೆಗೆದಿದ್ದಾರೆ.  ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದವರು, ಹಿಂದೂ ಆಚರಣೆಗಳ ಬಗ್ಗೆ ಭಯ ಭಕ್ತಿ ಇಲ್ಲದವರು, ಹಿಂದೂಗಳಲ್ಲದವರು ಹಿಂದೂ ಧರ್ಮದ ಹಬ್ಬವನ್ನು ಯಾಕೆ ಉದ್ಘಾಟಿಸಬೇಕು? ಎಂಬ ವಾದವನ್ನು ಮಂಡಿಸುತ್ತಿದ್ದಾರೆ.

ಈ ಮಹಾಮಹಿಮರಿಗೆ ಅರ್ಥವಾಗದ ಸಂಗತಿಗಳು ಬೇಕಾದಷ್ಟಿವೆ.

  • ಮೊದಲನೆಯದಾಗಿ ದಸರಾ ಕನ್ನಡಿಗರ ನಾಡ ಹಬ್ಬ. ಹುಟ್ಟು ಕನ್ನಡಿಗರಾದ, ತಮ್ಮ ಪ್ರತಿಭೆಯ ಮೂಲಕ ಕನ್ನಡದ ಕೀರ್ತಿ ಮತ್ತು ಹೆಮ್ಮೆಯನ್ನು ಇಡೀ ಜಗತ್ತಿಗೆ ಸಾರಿದ ಬಾನುರವರು ಜನ್ಮತಃ ಕನ್ನಡಿಗರಾಗಿದ್ದರಿಂದ ಕನ್ನಡ ನಾಡ ಹಬ್ಬ ಉದ್ಘಾಟಿಸಲು ಅರ್ಹತೆ ಹೊಂದಿದ್ದಾರೆ.
  • ಮೈಸೂರು ದಸರಾ ಹಬ್ಬದ ಆಚರಣೆಯು ಯಾವುದೇ ಮತಾಂಧರ ಹಣದಲ್ಲಿ ನಡೆಯುತ್ತಿಲ್ಲ. ಸಮಸ್ತ ಕನ್ನಡಿಗರು ಕೊಟ್ಟ ತೆರಿಗೆ ಹಣದಲ್ಲಿಅದನ್ನು ಆಚರಿಸುತ್ತಿರುವುದರಿಂದ, ಈ ಸಮಸ್ತ ಕನ್ನಡಿಗರಲ್ಲಿ ಅಲ್ಪಸಂಖ್ಯಾತ ಸಮುದಾಯದವರ ತೆರಿಗೆ ಕೊಡುಗೆಯೂ ಬೇಕಾದಷ್ಟಿರುವುದರಿಂದ ಮುಸ್ಲಿಂ ಸಮುದಾಯದ ಬಾನುರವರು ಈ ನಾಡ ಹಬ್ಬ ಉದ್ಘಾಟಿಸುವ ಅವಕಾಶಕ್ಕೆ ಭಾಜನರಾಗಿದ್ದಾರೆ.
  • ಬಾನುರವರು ನಾಸ್ತಿಕರಾಗಿದ್ದರಿಂದ ಆಸ್ತಿಕರ ಹಬ್ಬ ಉದ್ಘಾಟಿಸಬಾರದು ಎಂಬುದೇ ಮತಾಂಧತೆಯಾಗಿದೆ. ದೇವರ ದೃಷ್ಟಿಯಲ್ಲಿ ಆಸ್ತಿಕ ನಾಸ್ತಿಕ, ಹಿಂದೂ ಮುಸ್ಲಿಂ ಎಲ್ಲಾ ಒಂದೇ. ಈ ಭಕ್ತಾಸುರರು ಮಾತ್ರ ಮನುಜರನ್ನು ಧರ್ಮದ ಆಧಾರದಲ್ಲಿ ಒಡೆದು ನೋಡುತ್ತಾರೆ. ಇಷ್ಟಕ್ಕೂ ಬಾನುರವರು ನಾಸ್ತಿಕರು ಎಂದು ಎಲ್ಲಿ ಯಾವಾಗ ಹೇಳಿದ್ದಾರೆ?. ‘ಈಶ್ವರ ಅಲ್ಲಾ ಎಲ್ಲಾ ಒಂದೇ’ ಎನ್ನುವಾಗ, ಈ ಸನಾತನಿಗಳ ಪ್ರಕಾರ ‘ಸರ್ವೇ ಜನೋ ಸುಖಿನೋ ಭವಂತು’ ಎನ್ನುವಾಗ, ದೇವರ ದೃಷ್ಟಿಯಲ್ಲಿ ಸಕಲ ಚರಾಚರಗಳೂ ಒಂದೇ ಎನ್ನುವಾಗ, ಪಂಪನ ಮಾತಲ್ಲಿ ‘ಮನುಜ ಕುಲಂ ತಾನೊಂದೇ ವಲಂ’ ಎನ್ನುವಾಗ ಈ ಹಿಂದೂ ಮುಸ್ಲಿಂ ಎನ್ನುವ ಬೇಧ ಇಲ್ಲ, ದಸರಾ ಉದ್ಘಾಟನೆಗೆ ಭಾನುರವರ ಆಯ್ಕೆಯಲ್ಲಿ ತಪ್ಪಿಲ್ಲ.
  • ಬಾನುರವರು “ಹಿಂದೂ ಸಂಪ್ರದಾಯದ ಪ್ರಕಾರ ಹೂ ಮುಡಿದುಕೊಂಡು, ಕುಂಕುಮ ಇಟ್ಟುಕೊಂಡು, ಬಳೆ ತೊಟ್ಟುಕೊಂಡು ಭಯ ಭಕ್ತಿಯಿಂದ ಬಂದು ಉದ್ಘಾಟನೆ ಮಾಡಬೇಕು” ಎನ್ನುವ ಕರ್ಮಠ ಸನಾತನ ಪಡೆ ಒಂದಿದೆ. ಅವರು ಯಾಕೆ ಇದೆಲ್ಲವನ್ನೂ ಮಾಡಬೇಕು? ಹಿಂದೂಗಳು ಎಂದು ಕರೆಯಲ್ಪಡುವ ಎಲ್ಲಾ ಮಹಿಳೆಯರೂ ಸಂಪ್ರದಾಯಬದ್ಧವಾಗಿ ಸನಾತನ ಅವತಾರದಲ್ಲೇ ಚಾಮುಂಡೇಶ್ವರಿ ದೇವಿಯ ಸನ್ನಿಧಿಗೆ ಬರಬೇಕಾ? ಆಚರಣೆಗಳನ್ನು ಜನರ ಮೇಲೆ ಹೇರುವುದೇ ಸಂವಿಧಾನ ವಿರೋಧಿತನ ಅಲ್ವಾ?
ಬಾನು, ಬಿಜೆಪಿಯ ಸುರೇಶ್‌ ಗೌಡ ಮತ್ತು ಸಿದ್ದರಾಮಯ್ಯ.
  • ಇಷ್ಟಕ್ಕೂ ಬಾನುರವರನ್ನು ಆಯ್ಕೆ ಮಾಡಿದ್ದು ದೇವಸ್ಥಾನದ ಅರ್ಚಕ ವೃತ್ತಿಗೆ ಅಲ್ಲ, ದಸರಾ ಉದ್ಘಾಟನೆಗೆ. ಭಾರತ ದೇಶದಲ್ಲಿ ಯಾವ ಮಹಿಳೆಯೂ ಇಲ್ಲಿಯವರೆಗೂ ಮಾಡದ ಸಾಧನೆಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಬಾನುರವರು ಮಾಡಿದ್ದರಿಂದ, ಕನ್ನಡ ನಾಡು ನುಡಿಗೆ ಜಾಗತಿಕವಾಗಿ ಘನತೆ ಗೌರವ ತಂದುಕೊಟ್ಟಿದ್ದರಿಂದ ಅವರನ್ನು ದಸರಾ ಉದ್ಘಾಟನೆಗೆ ಕರ್ನಾಟಕ ಸರಕಾರ ಆಯ್ಕೆ ಮಾಡಿದೆ. ಕೇಸರಿಗರ ಕಾಮಾಲೆ ಕಣ್ಣಿಗೆ ಕಾರದಪುಡಿ ಬಿದ್ದಂತಾಗಿದೆ.

ಕೇವಲ ಬಿಜೆಪಿಗರಷ್ಟೇ ಅಲ್ಲ ಕೆಲವು ಕನ್ನಡಿಗರು ಬಾನುರವರ ನಡೆ ನುಡಿಯ ಬಗ್ಗೆ ಅಪಸ್ವರ ಎತ್ತಿದ್ದಾರೆ. ಯಾವತ್ತೋ ಮಾಡಿದ ಭಾಷಣ ಒಂದರಲ್ಲಿ ಆಡಿದ ‘ಅರಿಶಿನ ಕುಂಕುಮ ಭುವನೇಶ್ವರಿ’ ಕುರಿತ ನುಡಿಗಳನ್ನು ತಮ್ಮ ಮೂಗಿನ ನೇರಕ್ಕೆ ತಿರುಚಿ ಅವರ ಆಯ್ಕೆಯನ್ನು ವಿರೋಧಿಸುತ್ತಿದ್ದಾರೆ. ಈ ಅಲ್ಪ ಮತಿಗಳಿಗೆ ಬಾನುರವರ ಮಾತಿನ ಒಳಾರ್ಥ ಅರಿವಾಗಿಲ್ಲ. ಮೇಲ್ನೋಟಕ್ಕೆ ಅವರ ಮಾತುಗಳು ಕನ್ನಡ ವಿರೋಧಿ ಎನ್ನಿಸಿದರೂ ಆಳಕ್ಕಿಳಿದು ಯೋಚಿಸಿದಾಗ ಅದು ಮಹಿಳಾ ಪರ, ಪುರುಷಹಂಕಾರ ವಿರೋಧಿಯಾಗಿದೆ. “ಕನ್ನಡದ ಬಾವುಟವನ್ನು ಉದ್ದೇಶಪೂರ್ವಕವಾಗಿ ಅರಿಶಿನ ಕುಂಕುಮ ಬಣ್ಣದ್ದಾಗಿ ಮಾಡಿದ್ದಾರೆ. ‘ಯತ್ರ ನಾರ್ಯಸ್ತು ಪೂಜ್ಯಂತೆ ತತ್ರ ದೇವತಾಃ’ ಎಂದು ಹೇಳುವ ಮೂಲಕ ಮಹಿಳೆಯರನ್ನು ದೇವತೆಯನ್ನಾಗಿಸಿ ಚೌಕಟ್ಟಿನಲ್ಲಿಟ್ಟು ಬಂಧಿಸಿಡಲಾಗಿದೆ” ಎಂಬುದು ಬಾನುರವರ ಭಾಷಣದ ಸಾರ. ಸ್ತ್ರೀವಾದದ ದೃಷ್ಟಿಕೋನದಲ್ಲಿ ಅವರ ವಾದ ಸರಿಯಾಗಿಯೇ ಇದೆ. ಸನಾತನಿಗಳು ಹಾಗೂ ವೈದಿಕಶಾಹಿ ಮನುವಾದಿ ಸಂತತಿ ಮಾಡಿದ್ದೇ ಅದನ್ನು. ಒಂದು ಕಡೆ “ನ ಸ್ತ್ರೀ ಸ್ವಾತಂತ್ರ್ಯಂ ಅರ್ಹತಿ” ಎನ್ನುತ್ತಾ ಇನ್ನೊಂದು ಕಡೆ “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎನ್ನುತ್ತಾರೆ. ಅಂದರೆ ಹೆಣ್ಣು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ ಹಾಗೂ ಹೆಣ್ಣನ್ನು ಪೂಜಿಸಿದಲ್ಲಿ ದೇವತೆಗಳಿರುತ್ತಾರೆ” ಎಂದು ಹೇಳುವುದರ ಹಿಂದೆ ಪಿತೃಪ್ರಧಾನತೆಯ ಗಂಡಾಳ್ವಿಕೆಯ ತಂತ್ರಗಾರಿಕೆ ಇದೆ. “ಪೂಜೆಗೆ ಮಾತ್ರ ಅರ್ಹಳಾಗಿರುವ ಹೆಣ್ಣು ಸ್ವಾತಂತ್ರ್ಯಕ್ಕೆ ಅನರ್ಹಳು” ಎಂಬುದರ ಹಿಂದೆ ಮಹಿಳೆಯರನ್ನು ಚೌಕಟ್ಟಿನಲ್ಲಿಟ್ಟು ಆಳುವ ಹುನ್ನಾರವಿದೆ. ಅದೆಷ್ಟೇ ನಾಗರೀಕತೆ ಬೆಳೆದಿದ್ದರೂ, ಸಂವಿಧಾನ ಲಿಂಗಸಮಾನತೆ ಕೊಟ್ಟಿದ್ದರೂ ಈಗಲೂ ಪುರುಷ ಪ್ರಧಾನತೆಯೇ ಮಹಿಳೆಯರನ್ನು ಆಳುತ್ತಿದೆ ಎಂಬುದು ಬಾನುರವರ ಮಾತಿನ ಹಿಂದಿರುವ ಅರ್ಥ.

ಶೋಭಾ ಕರಂದ್ಲಾಜೆ

ಅರಿಶಿಣ ಹಾಗೂ ಕುಂಕುಮಗಳೆಂಬ ಸನಾತನ ಸಂಪ್ರದಾಯಗಳಿಗೆ ಮಹಿಳೆಯರನ್ನು ಕಟ್ಟಿಹಾಕುವ ಸಾಂಕೇತಿಕತೆಯನ್ನು ಬಾನು ಪ್ರಶ್ನಿಸಿದ್ದಾರೆಯೇ ಹೊರತು ಕನ್ನಡ ಬಾವುಟವನ್ನಲ್ಲ. ಮಹಿಳೆಯರನ್ನು ನಿತ್ಯ ಶೋಷಿಸುತ್ತಾ ಭುವನೇಶ್ವರಿಯನ್ನು ಮಹಿಳೆಯರ ಪ್ರತೀಕವಾಗಿ ನಾಡ ದೇವಿಯನ್ನಾಗಿ ಮಾಡಿ ಕೂಡಿಸಿ ಪೂಜಿಸುವ ಪಾಶಂಡಿತನವನ್ನು ಬಾನುರವರು ಸಂದೇಹಿಸಿದ್ದಾರೆಯೇ ಹೊರತು ನಾಡಿನ ಮೇಲಿನ ನಿಷ್ಠೆ ಬದ್ಧತೆಗಳನ್ನಲ್ಲ. ಮಹಿಳೆಯರಿಗೆ ಸಮಾನತೆ ಹಾಗೂ ಸ್ವಾತಂತ್ರ್ಯವನ್ನು ಒದಗಿಸದ ಪುರುಷ ಪ್ರಧಾನ ಸಮಾಜ ಈ ಸನಾತನ ಸಂಪ್ರದಾಯಗಳ ಗಡಿಯೊಳಗೆ ಮಡಿ ಮಾಡಿ ಮಹಿಳೆಯರನ್ನು ಕಟ್ಟಿಹಾಕುವ ಹಿಂದಿನ ಮನುವಾದಿ ಮನಸ್ಥಿತಿಯನ್ನು ಅವರು ಧಿಕ್ಕರಿಸಿದ್ದಾರೆಯೇ ಹೊರತು ಕೇವಲ ಅರಿಶಿನ ಕುಂಕುಮಗಳನ್ನಲ್ಲ. ಈ ಸೂಕ್ಷ್ಮತೆ ಕೆಲವು ಪ್ರಗತಿಪರ ಮುಖವಾಡದ ಮಹಿಳೆಯರಿಗೂ ಅರ್ಥವಾಗದೇ ಇರುವುದು ವಿಪರ್ಯಾಸ.

ಈ ವರ್ಷದ ದಸರಾ ಸಾಂಸ್ಕೃತಿಕ ಹಬ್ಬದ  ಉದ್ಘಾಟಕರಾಗಿ ಸರಕಾರದಿಂದ ಆಯ್ಕೆಯಾದ ಬೂಕರ್ ಪ್ರಶಸ್ತಿ ವಿಜೇತೆ ಬಾನುರವರ ಸಾಧನೆ ಬಗ್ಗೆ ಚರ್ಚೆ ಆಗಬೇಕಿತ್ತು. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕವಾಗಿ ಕನ್ನಡದ ಕಥೆಗಳ ಸಾಮರ್ಥ್ಯವನ್ನು ತೋರಿಸಿ ಕೊಟ್ಟಿದ್ದಕ್ಕಾಗಿ ಕನ್ನಡಿಗರು ಹೆಮ್ಮೆ ಪಡಬೇಕಿತ್ತು. ಧರ್ಮ ಕರ್ಮಗಳ ತಡೆ ಗೋಡೆಗಳೆಲ್ಲವ ದಾಟಿ ಅಪರೂಪದ ಸಾಧಕಿಗೆ ಸಿಕ್ಕ ದಸರಾ ಉದ್ಘಾಟನಾ ಅವಕಾಶವನ್ನು ಸ್ವಾಗತಿಸಬೇಕಿತ್ತು. ಆದರೆ ಇದ್ಯಾವುದನ್ನೂ ಮಾಡದೇ ರಾಜಕೀಯ ದುರುದ್ದೇಶಕ್ಕಾಗಿ, ಮತಾಂಧತೆಯ ಮೋಹಕ್ಕಾಗಿ, ಧರ್ಮಾಂಧತೆಯ ದ್ವೇಷಕ್ಕಾಗಿ ಬಾನು ಮುಷ್ತಾಕ್ ರವರನ್ನು ವಿರೋಧಿಸುತ್ತಿರುವ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕನ್ನಡ ನಾಡಿನ ಸಾಧಕಿಯನ್ನು ಕನ್ನಡಿಗರು ಬೆಂಬಲಿಸಬೇಕಿದೆ. ನಾಡ ಹಬ್ಬ ಎಲ್ಲರಿಂದ ಎಲ್ಲರಿಗಾಗಿ ಎಲ್ಲರಿಗೋಸ್ಕರ ಆಚರಿಸಬೇಕಿದೆ. ದಸರಾ ಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಪಸ್ವರ ಎತ್ತಿದ ಜೀವಿಗಳೆಲ್ಲಾ ಕುವೆಂಪುರವರು ವಿರಚಿತ ನಾಡಗೀತೆಯ ಈ ಸಾಲುಗಳನ್ನು ಓದಿ ಅರಿಯಬೇಕಿದೆ.

ಸರ್ವ ಜನಾಂಗದ ಶಾಂತಿಯ ತೋಟ
ರಸಿಕರ ಕಂಗಳ ಸೆಳೆಯುವ ನೋಟ
ಹಿಂದೂ, ಕ್ರೈಸ್ತ, ಮುಸಲ್ಮಾನ,
ಪಾರಸಿಕ, ಜೈನರುದ್ಯಾನ…
ಜನಕನ ಹೋಲುವ ದೊರೆಗಳ ಧಾಮ
ಗಾಯಕ ವೈಣಿಕರಾರಾಮ…
ಜಯ ಹೇ ಕರ್ನಾಟಕ ಮಾತೆ!

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಬಾನು ಹೇಳಿದ್ದರಲ್ಲಿ ತಪ್ಪೇನಿದೆ?

Latest Posts

spot_imgspot_img

Don't Miss

Stay in touch

To be updated with all the latest news, offers and special announcements.