ಅದೊಂದು ದೊಡ್ಡ ಕತೆ-ಆತ್ಮಕಥನ ಸರಣಿ – 2

Most read

ನನ್ನ ಅಪ್ಪ ಮುದಿಯಾರು ರಾಮಪ್ಪ ಗೌಡರು ದೇಲಂಪಾಡಿ ಗ್ರಾಮದ ಮುದಿಯಾರು ಕುಟುಂಬದವರು. ದೇಲಂಪಾಡಿ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಒಂದು ಗ್ರಾಮ. ಅಲ್ಲಿಗೆ ಪುತ್ತೂರು- ಸುಳ್ಯ ರಸ್ತೆಯ ಕನಕಮಜಲು ಮೂಲಕವೂ ಹೋಗಬಹುದು, ಹಾಗೆಯೇ ಸುಳ್ಯ -ಬದಿಯಡ್ಕ ರಸ್ತೆಯ ಪರಪ್ಪೆ ಎಂಬಲ್ಲಿಂದಲೂ ಹೋಗಬಹುದು.  ದೇಲಂಪಾಡಿಗೆ ಹತ್ತಿರದ ಇತರ ಪ್ರದೇಶಗಳೆಂದರೆ ಪಂಜಿಕಲ್ಲು ಮತ್ತು ಜಾಲ್ಸೂರು.

ಸ್ವಾತಂತ್ರ್ಯ ಪೂರ್ವದ ಆ ದಿನಗಳಲ್ಲಿ ದೇಲಂಪಾಡಿ ತೀರಾ ಹಿಂದುಳಿದ ಒಂದು ಗ್ರಾಮೀಣ ಪ್ರದೇಶ. ವಿರಳ ಜನಸಂಖ್ಯೆ. ಅನಕ್ಷರಸ್ಥ ಜನ. ಪಟ್ಟಣ ಪ್ರದೇಶದಿಂದ ದೂರ ಅಂದಮೇಲೆ ರಸ್ತೆ, ಸಂಚಾರ ಸೌಲಭ್ಯ, ಆಸ್ಪತ್ರೆ, ಶಾಲೆ ಇತ್ಯಾದಿ ಸವಲತ್ತುಗಳ ಕತೆ ಪ್ರತ್ಯೇಕ ಹೇಳಬೇಕಾಗಿಲ್ಲ ಅಲ್ಲವೇ?

ಇಂತಹ ಊರಿನಲ್ಲಿ 1927 ರಲ್ಲಿ ನನ್ನ ಅಪ್ಪ ಜನಿಸಿದರು. ಸಣ್ಣ ಮಟ್ಟಿನ ಕೃಷಿ ಜಮೀನು ಇತ್ತಂತೆ ನನ್ನ ಅಪ್ಪನ ಅಪ್ಪ ಕುಕ್ಕಪ್ಪ ಗೌಡರಿಗೆ. ಆದರೂ ತೀರಾ ಬಡ ಕುಟುಂಬ. ಶಾಲೆಗೆ ಹೋಗಬೇಕೆಂದರೆ ಪಕ್ಕದಲ್ಲಿ ಆ ಸೌಲಭ್ಯ ಇಲ್ಲ. ಕೊನೆಗೆ ನನ್ನ ಅಪ್ಪನನ್ನು ಸುಳ್ಯದ ಶಾಲೆಗೆ ಸೇರಿಸಲಾಯಿತು. ಮುದಿಯಾರಿನಿಂದ ಸುಳ್ಯಕ್ಕೆ ಸುಮಾರು 18 ಕಿಲೋಮೀಟರ್‌ ಗಳ ದೂರ. ಅಪ್ಪ ಸುಳ್ಯದ ಯಾರದೋ ಮನೆಯಲ್ಲಿ ನಿಂತು, ಕಷ್ಟಪಟ್ಟು ಆರನೇ ತರಗತಿಯ ತನಕ ಓದಿದ್ದರು ಎಂದು ನನ್ನಮ್ಮ ಹೇಳುತ್ತಾರೆ. ನೆನಪಿರಲಿ, ಈ ಕಾಲಕ್ಕೆ ಹೋಲಿಸಿದರೆ ಆ ಕಾಲದ ಆರನೇ ಕ್ಲಾಸ್‌ ಎಂದರೆ ದೊಡ್ಡ ಓದು. ಈಗಿನ ಹತ್ತನೆಯ ತರಗತಿಯ ಮಕ್ಕಳಿಗಿಂತ ಹೆಚ್ಚಿನ ಜ್ಞಾನ ಅವರಿಗಿರುತ್ತಿತ್ತು. ಇಷ್ಟು ಓದಿನ ಮೂಲಕವೂ ಸರಕಾರಿ ಕೆಲಸಕ್ಕೆ ಸೇರಿಕೊಳ್ಳಬಹುದಿತ್ತು ಆ ಕಾಲದಲ್ಲಿ.

ಅಪ್ಪನ ಓದು ಯಾಕೆ ನಿಂತಿತು ಗೊತ್ತಿಲ್ಲ. ಅದಕ್ಕೆ ಬಡತನ, ಶಾಲೆಗಿರುವ ದೂರ ಒಂದು ಕಾರಣವಾದರೆ, ಇನ್ನೊಂದು ಅಲ್ಲಿ ಆಗ ನಡೆದ ಒಂದು ವಿಶಿಷ್ಟ ಘಟನೆ ಇರಬಹುದು ಅನಿಸುತ್ತದೆ. ಆ ಘಟನೆ ಏನೆಂದರೆ, 1943 ರಲ್ಲಿ ಪೆರಡಾಲ ಸಮೀಪದ ಕೀರಿಕ್ಕಾಡಿನಲ್ಲಿ ಅಧ್ಯಾಪಕ, ಯಕ್ಷಗಾನ ಪ್ರಸಂಗಕರ್ತೃ, ಅರ್ಥಧಾರಿ ಎಂದು ಅದಾಗಲೇ ಹೆಸರು ಮಾಡಿದ್ದ, ಅಲ್ಲದೆ ಯಕ್ಷಗಾನದ ಭೀಷ್ಮ ಎಂದು ಹೆಸರು ಮಾಡಿದ ಶೇಣಿ ಗೋಪಾಲಕೃಷ್ಣ ಭಟ್ಟರಿಗೇ ಯಕ್ಷಗಾನದ ಪಾಠ ಹೇಳಿದ್ದ ಯಕ್ಷಗುರು ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರು (1913-1986) ದೇಲಂಪಾಡಿಯ ಬನಾರಿಯಲ್ಲಿ ಜಮೀನು ಖರೀದಿಸಿ ಅಲ್ಲಿ ನೆಲೆ ನಿಲ್ಲಲು ಬಂದದ್ದು. ಅದು ಕರಾವಳಿ ಭಾಗದ ಜನರು ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಕಾಲ. ಎಲ್ಲೆಲ್ಲೂ ಯಕ್ಷಕೂಟಗಳು, ಯಕ್ಷಗಾನ ಕಲಿಯುವ ಆಸಕ್ತಿ ಇರುವ ದೊಡ್ಡ ಸಂಖ್ಯೆ ಯುವಕರು.

ಯುವ ಹರೆಯದಲ್ಲಿ ಮುದಿಯಾರು ರಾಮಪ್ಪ ಗೌಡರು

ಭಟ್ಟರು ಯಕ್ಷಗಾನ ಕಲಾವಿದ ಎಂಬುದು ತಿಳಿಯುತ್ತಲೇ ಪರಿಸರದ ಹುಡುಗರಲ್ಲಿ ವಿಶೇಷ ಉತ್ಸಾಹ ಮೂಡಿತು. ಅವರನ್ನು ಪರಿಚಯ ಮಾಡಿಕೊಂಡು ತಮಗೆ ಯಕ್ಷಗಾನ ಕಲಿಸುವಂತೆ ಕೇಳಿಕೊಳ್ಳತೊಡಗಿದರು. ಮೊದಲೇ ಭಟ್ಟರಿಗೆ ಯಕ್ಷಗಾನ ಕಲಿಸಿಕೊಡುವುದು ಎಂದರೆ ಇಷ್ಟದ ಕೆಲಸ. ಅಲ್ಲದೆ ಅಲ್ಲಿನ ಜನರ ಮೇಲೆ ಅದಾಗಲೇ ಭಟ್ಟರಿಗೆ ಪ್ರೀತಿ ಹುಟ್ಟಿತ್ತು. “ಶುದ್ಧ ಮಲೆನಾಡ ಹಳ್ಳಿ, ಹೆಚ್ಚು ಜನರು ಅಕ್ಷರಾಭ್ಯಾಸವಿಲ್ಲದ ಅಜ್ಞಾನಿಗಳೇ. ಆದರೂ ನನಗವರ ಅತ್ಯಂತ ಸರಳ ಜೀವನ, ದೈವಭಕ್ತಿ, ನಿಗರ್ವ, ಮಾನವಪ್ರೇಮ ಮುಂತಾದ ಸರ್ವೋತ್ಕೃಷ್ಟ ನಡತೆ ಆನಂದವನ್ನುಂಟು ಮಾಡುತ್ತಿದೆ” ಎಂದು ಅವರು ಒಂದೆಡೆ ದೇಲಂಪಾಡಿ ಮತ್ತು ಅಲ್ಲಿನ ಜನರ ಬಗ್ಗೆ ಬರೆಯುತ್ತಾರೆ.

ಸರಿ 1944 ರಲ್ಲಿ ತಮ್ಮ ಮುಳಿ ಹುಲ್ಲಿನ ಮನೆಯನ್ನೇ ಕಲಾಶಾಲೆ ಮಾಡಿಕೊಂಡು ಮಾಸ್ತರ್‌ ರು ಮಕ್ಕಳಿಗೆ ಯಕ್ಷಗಾನ ತರಗತಿ ಶುರು ಮಾಡಿಯೇ ಬಿಡುತ್ತಾರೆ. ಈ ಆರಂಭದ ದಿನಗಳಲ್ಲಿಯೇ ಅವರ ಪಟ್ಟ ಶಿಷ್ಯನಾಗಿ ನನ್ನ ತಂದೆಯ ಯಕ್ಷ ಯಾನ ಆರಂಭವಾಗಿಯೇ ಬಿಟ್ಟಿತು

ಧೀಂ ಕಿಟ ಕಿಟತಕ ತರಿಕಿಟ ಕಿಟತಕ

ನನ್ನ ತಂದೆಯ ಜತೆಯಲ್ಲಿ ಕೇದಗಡಿ ಗುಡ್ಡಪ್ಪ ಗೌಡ (ಮುಂದೆ ಇವರು ಕಟೀಲು ಮೇಳದಲ್ಲಿ ಬಹಳ ದೊಡ್ಡ ಕಲಾವಿದನಾಗಿ ಹೆಸರು ಮಾಡಿದರು), ಕೆ ವಿ ನಾರಾಯಣ ರೈ, ಅಣ್ಣಯ್ಯ ಭಂಡಾರಿ, ಕಂಪ ನಾರಾಯಣ ರೈ, ಗುತ್ತು ನಾರಾಯಣ ರೈ, ಯು ಬಿ ಗೋವಿಂದಯ್ಯ, ಎಂಕಣ್ಣಮೂಲೆ ಕೃಷ್ಣ ಮನೋಳಿತ್ತಾಯ. ಮೈಯಾಳ ರಘುನಾಥ ರೈ, ಬಂದಿಯಡ್ಕ ಮಹಾಲಿಂಗ ಗೌಡ, ಬೆಳ್ಳಿಪ್ಪಾಡಿ ಕುಂಞಣ್ಣ ರೈ, ಬನದ ಮೂಲೆ ಸೇಸಪ್ಪ ಗೌಡ ಹೀಗೆ ಇನ್ನೂ ಕೆಲವರನ್ನು ಸೇರಿಸಿಕೊಂಡು ವಿಷ್ಣು ಮಾಸ್ತರರು ಮನೆಯಲ್ಲಿಯೇ ಯಕ್ಷಗಾನದ ಪಾಠ ಹೇಳಲಾರಂಭಿಸಿದರು (ಮಾಹಿತಿ:‌ ಕೀರಿಕ್ಕಾಡು ಮಾಸ್ತರ್ ವಿಷ್ಣುಭಟ್ಟರ ಆತ್ಮವೃತ್ತಾಂತ ʼಯಕ್ಷರಸ ಜೀವನʼ). ಅದರಲ್ಲಿ ಅವರಿಗೊಂದು ಸಣ್ಣ ಸ್ವಾರ್ಥವೂ ಇತ್ತು. ಈ ಹುಡುಗರಿಗೆ ಯಕ್ಷಗಾನದ ತರಬೇತಿ ಸಿಕ್ಕರೆ, ಭಟ್ಟರಿಗೆ ಈ ಹುಡುಗರಿಂದ ಕೃಷಿಯಲ್ಲಿ ಸಣ್ಣ ಪುಟ್ಟ ನೆರವೂ ಲಭಿಸುತ್ತಿತ್ತು.

1945 ರಲ್ಲಿ ಕೀರಿಕ್ಕಾಡು ವಿಷ್ಣು ಮಾಸ್ಟರ್‌ ಅವರು ʼಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಸಂಘʼವನ್ನು ಸ್ಥಾಪಿಸಿದರು. ಅಲ್ಲಿ ಯಕ್ಷಗಾನ ನಾಟಕಗಳಲ್ಲಿ ಅಭಿನಯಿಸುತ್ತಾ ನನ್ನ ತಂದೆ ಯಕ್ಷಗಾನ ನಾಟ್ಯದಲ್ಲಿ ಪರಿಣತಿ ಗಳಿಸಲಾರಂಭಿಸಿದರು.

1946 ರಲ್ಲಿ ಯಕ್ಷಗಾನ ನಾಟಕ ಶುರು ಮಾಡುವ ಮನಸಾಯಿತು ಭಟ್ಟರಿಗೆ. ಯಕ್ಷಗಾನ ನಾಟಕ ಒಂದು ವಿಶಿಷ್ಟವಾದ ಕಲಾಪ್ರಕಾರ. ನಾಟ್ಯವಿಲ್ಲದ ಈ ಬಯಲಾಟ ಪ್ರದರ್ಶನದಲ್ಲಿ ಅಭಿನಯಕ್ಕೇ ಹೆಚ್ಚಿನ ಒತ್ತು.  ಸರಿ,  ʼಶ್ರೀ ಗೋಪಾಲಕೃಷ್ಣ ಯಕ್ಷಗಾನ ನಾಟಕ ಸಂಘ, ಬನಾರಿʼ ಸ್ಥಾಪಿತವಾಯಿತು. ಈ ಸಂಘದಿಂದ ಪ್ರತೀ ಶನಿವಾರವೂ ಸಂಘದ ಕಲಾಮಂದಿರದಲ್ಲಿ ಯಕ್ಷಗಾನ ನಾಟಕ ಪ್ರದರ್ಶನ ನಡೆಯುತ್ತಿತ್ತು. ಕುರುಕ್ಷೇತ್ರ, ಸಂಪೂರ್ಣ ರಾಮಾಯಣ, ಧಕ್ಷಾಧ್ವರ ಮೊದಲಾದ ನಾಟಕ ಜನಮೆಚ್ಚುಗೆ ಗಳಿಸಿದವು.

ಆರಂಭದ ದಿನಗಳಲ್ಲಿ ಅಪ್ಪ ಮಾಡುತ್ತಿದ್ದುದು ಹೆಚ್ಚಾಗಿ ರಜಕ ಇತ್ಯಾದಿ ವಿದೂಷಕನ ಪಾತ್ರ. ವಿಷ್ಣು ಭಟ್ಟರ ನೇತೃತ್ವದಲ್ಲಿ ಈ ಯಕ್ಷಗಾನ ನಾಟಕ ಸಂಘವು ಸ್ವಾತಂತ್ರ್ಯ ಪೂರ್ವದ ಆ ಕಾಲದಲ್ಲಿಯೇ ಕೊಡಗಿನ ಕಡೆಗೂ ಹೋಗಿ ಯಕ್ಷಗಾನ ನಾಟಕ ಪ್ರದರ್ಶನಗಳನ್ನು ನೀಡಿತ್ತಂತೆ (ಶುಂಠಿಕೊಪ್ಪದಲ್ಲಿ ನೀಡಿದ ಪ್ರದರ್ಶನದ ಬಗ್ಗೆ ವಿಷ್ಣು ಭಟ್ಟರು ತಮ್ಮ ಆತ್ಮ ಕಥನದಲ್ಲಿ ವಿವರವಾಗಿ ಹೇಳಿಕೊಂಡಿದ್ದಾರೆ).

ಶುಂಟಿಕೊಪ್ಪದ ಸ್ವಾರಸ್ಯಕರ ಪ್ರಸಂಗ

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ವಾರ್ಷಿಕೋತ್ಸವದಲ್ಲಿ ಮುದಿಯಾರು ರಾಮಪ್ಪ ಗೌಡರ ಒಂದು ವೇಷ. ಭಾಗವತರು ಬಲಿಪರು.

ಕೀರಿಕ್ಕಾಡು ಮಾಸ್ತರ್‌ ರಿಗೆ ನನ್ನ ತಂದೆಯ ಮೇಲೆ ಅಪಾರ ಪ್ರೀತಿ, ವಿಶ್ವಾಸ ಮತ್ತು ಅಭಿಮಾನ. ಅವರ ಯಕ್ಷಗಾನ ನಾಟಕಗಳಲ್ಲಿ ನನ್ನ ಅಪ್ಪ ಖಾಯಂ ಕಲಾವಿದ. ಅಪ್ಪನ ಸಮಯಸ್ಫೂರ್ತಿ ಅಸಾಧಾರಣವಾಗಿತ್ತು. ಈ ಬಗ್ಗೆ 1947 ರ ಆ ದಿನಗಳಲ್ಲಿ ಶುಂಟಿಕೊಪ್ಪದಲ್ಲಿ ನಡೆದ ಪ್ರದರ್ಶನದ ಒಂದು ಸ್ವಾರಸ್ಯಕರ ಪ್ರಸಂಗವನ್ನು ಭಟ್ಟರು ಹೀಗೆ ವರ್ಣಿಸುತ್ತಾರೆ “ಒಂದು ನಾಟಕದ ದಿನ  ವ್ಯವಸ್ಥಾಪಕರಲ್ಲೊಬ್ಬರು ನನ್ನೊಡನೆ ʼಮಾಸ್ತರೇ, ಈ ದಿನ ಕಥಾ ಪ್ರಸಂಗದ ಮೊದಲು ನನಗೊಮ್ಮೆ ಪ್ರವೇಶ ಕೊಡಿ. ಜೊತೆಗೆ ನಿಮ್ಮ ರಾಮಪ್ಪನನ್ನೂ ಬಿಡಿ, ನಾನೊಬ್ಬ ಕಂಟ್ರಾಕ್ಟರ್‌, ಅವ ನನ್ನ ಆಪ್ತ ಕಾರ್ಯದರ್ಶಿ. ಹಾಗೊಂದು ಪ್ರದರ್ಶನ, ಅರ್ಧ ಘಂಟೆ ಅವಕಾಶ ಸಾಕು, ನನಗೂ  ಉಮೇದು ಬಂದು ಬಿಟ್ಟಿದೆ. ನೋಡಿ ಗಮ್ಮತ್ತು ಆಗದೇ?ʼ ಎಂದರು. ನನಗೆ ಅದನ್ನು ಕೇಳಿ ಬಹಳ ಆಶ್ಚರ್ಯವಾಯಿತು. ಅವರು ಅಲ್ಲಿಯ  ಗಣ್ಯ ವ್ಯಕ್ತಿ. ಅಂಥವರಿಗೂ ಇಂಥಾದ್ದೊಂದು ಬಯಕೆಯೆ? ಆದರೆ, ಒಪ್ಪದೆ ನಿರ್ವಾಹವೇ ಇಲ್ಲ. ʼಆಗಲಿ, ಅತ್ಯಂತ ಸಂತೋಷʼ ಎಂದು ಅನುಮತಿ ಕೊಟ್ಟೆ. ರಾಮಪ್ಪನಂತೂ ನಮ್ಮ ಸಂಘದ ಹಾಸ್ಯಗಾರನೇ. ಇವರ ಆಸೆ ಕೈಗೂಡಲಿ ಏನಾಗುತ್ತದೋ ನೋಡೋಣ ಎಂದೇ ಸಮಾಧಾನ ತೆಕ್ಕೊಂಡೆ. ಅವರ ಆನಂದಕ್ಕೆ ಪಾರವೇ ಇರಲಿಲ್ಲ. ನಿಶ್ಚಿತ ಸಮಯಕ್ಕೆ ಬಣ್ಣ ಹಚ್ಚಿ ಸಿದ್ಧರಾಗಿಯೇಬಿಟ್ಟರು. ವೇಷ ನೋಡಿದರೆ ಪ್ರತ್ಯಕ್ಷ ಕಂಟ್ರಾಕ್ಟರರೇ. ರಾಮಪ್ಪನ ಜೊತೆಯೂ ಅಂಥಾದ್ದೇ. ಪರದೆ ಎತ್ತಿ ಪ್ರವೇಶವೂ ಆಯಿತು. ನಾನು ಒಳಗಿನಿಂದ ಒಂದು ಪಕ್ಕಕ್ಕೆ ನಿಂತು ನೋಡುತ್ತಲೇ ಇದ್ದೆ.

ಕಿಕ್ಕಿರಿದು ತುಂಬಿದ ಸಭಾಸಂದಣಿಯನ್ನು ಕಂಡಾಕ್ಷಣವೇ ಕಂಟ್ರಾಕ್ಟರರು ಅಡಿಯಿಂದ ಮುಡಿಯವರೆಗೆ ಗಡಗಡನೆ ನಡುಗತೊಡಗಿದರು. ಏನು ಮಾತಾಡುವ ತಯಾರಿಯಲ್ಲಿದ್ದರೋ ಅವರಿಗೇ ಗೊತ್ತು. ಅಲ್ಲ, ಮರೆತೇ ಹೋಯಿತೋ. ಮಿಟ ಮಿಟನೆ ಕಣ್ಣು ಬಿಟ್ಟು ನಾಲಗೆ ಸವರುವಂತೆ ಕಂಡು, ನನಗೆ ಅರ್ಥವಾಗಿ ರಾಮಪ್ಪನಿಗೆ ಸನ್ನೆ ಮಾಡಿದೆ. ಒಡನೆಯೇ ಅವ ಅವರತ್ತ ನೋಡಿ, ʼಏನಾಯಿತು ಯಜಮಾನರೇ, ಚಳಿಜ್ವರ ಬರುತ್ತದೋ?ʼ ಎಂದ. ಪುಣ್ಯಕ್ಕೆ ಅವರು ʼಹೌದುʼ ಎಂಬಂತೆ ತಲೆಯಲ್ಲಾಡಿಸಿಬಿಟ್ಟರು. ತತ್‌ ಕ್ಷಣ ರಾಮಪ್ಪ ʼಎಂಥಾ ಕಷ್ಟದ ಪರಿಸ್ಥಿತಿ ಬಂತು! ನಮ್ಮ ಯಜಮಾನರೂ ನಾನೂ ದೊಡ್ಡ ಕಂಟ್ರಾಕ್ಟ್‌ ಕೆಲಸವೊಂದನ್ನು ಪಡೆಯುವುದಕ್ಕಾಗಿ ಹೊರಟು ಮಧ್ಯದಲ್ಲಿಯೇ ಹೀಗಾಯಿತಲ್ಲ! ಅವರಿಗೆ ಭಯಂಕರ ಜ್ವರ ಪ್ರಾರಂಭವಾದ ಹಾಗಿದೆ. ಮೆಲ್ಲನೆ ಕೈ ಹಿಡಿದುಕೊಂಡು ಆದರಿಸಿಕೊಂಡು ಹತ್ತಿರದ ದವಾಖಾನೆಗೆ ಸಾಗುತ್ತೇನೆ, ಬೇರೆ ಉಪಾಯವೇ ಇಲ್ಲʼ ಎಂದವನೇ ಸಮಯಸ್ಫೂರ್ತಿಯಿಂದ ಅವರ ಹಸ್ತ ಸ್ಪರ್ಶಿಸಿದ್ದೇ ತಡ ಪರದೆ ಇಳಿಸುವಂತೆ ಸೂಚಿಸಿದೆ. ಸಭಿಕರಿಗೆ ತಲೆ ಬುಡವೊಂದೂ ಅರ್ಥವಾಗದೆ ಆಶ್ಚರ್ಯಪಟ್ಟಂತೆ ಕಂಡಿತು. ಆದರೂ ಗಲಭೆಯೇನೂ ಆಗದೆ ಮರ್ಯಾದೆ ಉಳಿಯಿತು. ಕಂಟ್ರಾಕ್ಟರ್‌ ಕಂಗಾಲು. ನನ್ನತ್ತ ಬಂದವನೇ ನನಗೆ ಸಾಕು ಸ್ವಾಮಿ, ಈ ಬಣ್ಣ ಬಳಿವ ಕೆಲಸ. ಇದು ನಮ್ಮಿಂದೆಲ್ಲ ಆಗುವಂಥಾದ್ದಲ್ಲ. ಸಭೆ ನೋಡಿದ್ದೇ ನೋಡಿದ್ದು ಲೋಕವೇ ಮರೆತುಹೋಯಿತು ನೋಡಿ ಎಂದು ಧೊಪ್ಪನೆ ಆಸನದಲ್ಲಿ ಕುಳಿತ. ಆದರೆ ಕಲೆಯ ಆಕರ್ಷಣೆ ಎಷ್ಟೊಂದು ಮಹತ್ವದ್ದುʼ.

ಹೀಗೆ ಮಾಸ್ತರ್‌ ರ ಪ್ರಿಯ ಶಿಷ್ಯನಾಗಿ ನಾಲ್ಕೈದು ವರ್ಷಗಳ ಕಾಲ ಬನಾರಿ ಯಕ್ಷಗಾನ ಸಂಘದಲ್ಲಿ ಕಲಾವಿದನಾಗಿ ದುಡಿದ ನನ್ನ ತಂದೆ ಮುಂದೆ ಸರಿ ಸುಮಾರು 1948 ನೇ ಇಸವಿಯ ಕಾಲಕ್ಕೆ ವೃತ್ತಿ ಮೇಳವನ್ನು ಸೇರುವ ಅನಿರೀಕ್ಷಿತ ಸಂದರ್ಭವೊಂದು ಒದಗಿಬಂತು. ಅದನ್ನು ವಿಷ್ಣುಭಟ್ಟರು ಹೀಗೆ ವಿವರಿಸುತ್ತಾರೆ-

ಮೇಳ ಸೇರಿದರು ಅಪ್ಪ

“ಹೀಗೆ ನಮ್ಮ ಸಂಘದ ಕ್ರಮ ಬದ್ಧ ನಾಟಕದ ಕೀರ್ತಿ ಹೇಗೋ ಅಂದಿನ ಸುಪ್ರಸಿದ್ಧ ದಶಾವತಾರ ಮೇಳಗಳಲ್ಲೊಂದಾದ ಶ್ರೀ ಕದ್ರಿ ಮಂಜುನಾಥೇಶ್ವರ ಕೃಪಾಪೋಷಿತ ಮೇಳದ ವ್ಯವಸ್ಥಾಪಕರೂ, ಆಗರ್ಭ ಶ್ರೀಮಂತರೂ ಆದ ಮಂಗಳೂರಿನ ಕೊಡಿಯಾಲಗುತ್ತು ಶಂಭು ಹೆಗ್ಡೆಯವರ ಕಿವಿಗೆ ತಲಪಿ ಒಂದು ದಿನ ನಮ್ಮ ಕಲಾಮಂದಿರದ ನಾಟಕ ಪ್ರದರ್ಶನದಂದೇ ಸಾಯಂಕಾಲ ಬಂತೇ ಬಂತು ಸವಾರಿ. ಅದುವರೆಗೂ ನನಗವರಲ್ಲಿ ಸ್ವತಃ ಮಾತಾಡಿ ಪರಿಚಯವಿಲ್ಲದಿದ್ದರೂ ನೋಡಿದ ಗುರುತಿತ್ತು. ಜೊತೆಯಲ್ಲೇ ಹಿಂದೆ ನನ್ನ ಒಡನಾಡಿಯಾಗಿದ್ದ ಏವುಂಜೆ ರಾಮಯ್ಯ ರೈಗಳೂ ಇದ್ದುದು ಬಹಳ ಅನುಕೂಲವಾಯಿತು. ಅವರು ಬಂದಾಕ್ಷಣವೇ ಸ್ವಾಗತಿಸಿ ಉಪಚರಿಸಿದೆ. ಯೋಗಕ್ಷೇಮ ವಿಚಾರ, ಆತಿಥ್ಯ ಸ್ವೀಕಾರ, ಎಲ್ಲ ಆಗಿ ಬೆಳಗ್ಗಿನವರೆಗೆ ಉತ್ಸಾಹದಿಂದ ಕುಳಿತು ನಾಟಕವನ್ನೂ ನೋಡಿದರು. ಬಳಿಕ ನನ್ನನ್ನು ಹತ್ತಿರಕ್ಕೆ ಕರೆದು ʼಮಾಸ್ತರರೇ ನಾನು ಬಂದುದು ಈ ವರ್ಷದ ನಮ್ಮ ಮೇಳದ ತಿರುಗಾಟಕ್ಕೆ ನಿಮ್ಮ ಶಿಷ್ಯರನ್ನು ಸೇರಿಸಿಕೊಳ್ಳಬೇಕು ಅಂತ. ಆದ್ದರಿಂದ ನಿನ್ನೆ ಒಳ್ಳೇ ನಾಟ್ಯ ಪ್ರದರ್ಶಿಸಿದ ಗುಡ್ಡಪ್ಪ ಗೌಡ, ರಾಮಪ್ಪ ಗೌಡ, ಕೆ ವಿ ನಾರಾಯಣ ರೈ ಎಂಬವರನ್ನು ಕಳುಹಿಸಿಕೊಡಿ, ಆಗದೇ? ಎಂದರು. ನಾನು ಅಲ್ಲೇ ಇದ್ದ ಆ ಹುಡುಗರನ್ನು ಕರೆದು ವಿಷಯ ಹೇಳಿ ವಿಚಾರಿಸಿದಾಗ ಅವರು ʼನಿಮ್ಮ ಅಪ್ಪಣೆಯಾದರೆ ನಮಗೆ ಒಪ್ಪಿಗೆʼ ಎಂದು ಸಮ್ಮತಿಯಿತ್ತರು. ಬಳಿಕ ಹೆಗ್ಡೆಯವರಲ್ಲಿ ʼತಮ್ಮ ಅಪೇಕ್ಷೆಗೆ ಆಕ್ಷೇಪವಿಲ್ಲʼ ಎಂದಾಗ ʼಇಂತಹ ದಿವಸ ತಾವೇ ಕರಕೊಂಡು ಬನ್ನಿʼ ಎಂದು ನಿಶ್ಚಿತ ಸಮಯ ಹೇಳಿ ಉಪಾಹಾರ, ಸ್ವೀಕರಿಸಿ ನಿರ್ಗಮಿಸಿದರು. ಆಮೇಲೆ ನಾನು ಮಾತುಕೊಟ್ಟು ಒಪ್ಪಿಕೊಂಡಂತೆ ತಕ್ಕವೇಳೆಗೆ ಅವರನ್ನು ಕರೆದೊಯ್ದು ಮೇಳಕ್ಕೆ ಸೇರಿಸಿ ಬಂದೆʼ

ಹೀಗೆ ನನ್ನ ತಂದೆಯವರು ವೃತ್ತಿ ಯಕ್ಷಗಾನ ಮೇಳ ಸೇರಿದರು. ಕದ್ರಿ, ಕೂಡ್ಳು, ಮುಲ್ಕಿ, ಹೀಗೆ ಬೇರೆ ಬೇರೆ ಮೇಳಗಳಲ್ಲಿ ವೇಷ ಹಾಕುತ್ತಾ, ಯಶಸ್ವಿ ಕಲಾವಿದನಾಗಿ ಪ್ರಸಿದ್ಧಿಯನ್ನು ಪಡೆಯುತ್ತಾ ಹೋದರು.

ಶ್ರೀನಿವಾಸ ಕಾರ್ಕಳ

ಇದನ್ನೂ ಓದಿ- ಅದೊಂದ್ ದೊಡ್ಡ ಕಥೆ- ಆತ್ಮಕಥನ ಸರಣಿ ಭಾಗ-1

More articles

Latest article