ವ್ಯಕ್ತಿ : (ಸರಕಾರಿ ಕಚೇರಿ ಪ್ರವೇಶಿಸಿ) ನಮಸ್ಕಾರ ದೇವ್ರು
ಅಧಿಕಾರಿ : ಯಾರಯ್ಯಾ ನೀನು?. ಯಾರು ನಿನ್ನ ಒಳಗೆ ಬಿಟ್ಟಿದ್ದು?, ನಡಿ ಆಚೆ
ವ್ಯಕ್ತಿ : ನಾನು ಸರ್ ಬಡವಾ..
ಅಧಿಕಾರಿ : ಅದಕ್ಕೇ ಹೇಳಿದ್ದು ಯಾರು ನಿನ್ನ ಒಳಗೆ ಬಿಟ್ಟಿದ್ದು ಅಂತಾ.
ವ್ಯಕ್ತಿ : ಯಾರಾನಾ ಬಿಟ್ಟಿರ್ಲಿ ಬಿಡಿ ಬುದ್ದಿ. ಇವತ್ತು ಸ್ವಸಂತ್ರ ದಿನಾಚರಣೆ.. ಅದಕ್ಕೆ
ಅಧಿಕಾರಿ : ಏನು ಅದಕ್ಕೆ..
ವ್ಯಕ್ತಿ : ಅದೇ ಈ ಬಾವುಟ…
ಅಧಿಕಾರಿ : ಏನು ಬಾವುಟಾ.. ಹೋಗು ಹೊರಗೆ..
ವ್ಯಕ್ತಿ : ಅದು ಹಾಗಲ್ಲಾ ಸಾರ್.. ಈ ಬಾವುಟ ಹಾರಿಸ್ಬೇಕಾಗಿತ್ತು.. ದೇಶಭಕ್ತಿ ವಿಷಯ ಅಲ್ವಾ ಸಾರು..
ಅಧಿಕಾರಿ : ಹೊರಗೆ ಹೋಗಿ ಯಾವುದಾದರೂ ಕಂಬಕ್ಕೆ ಬಾವುಟ ಕಟ್ಟಿ, ಜನಗಣಮನ ಹಾಡಿ ದೇಶಭಕ್ತಿ ತೋರ್ಸು ಹೋಗು..
ವ್ಯಕ್ತಿ : ಅದೆಂಗಾಗುತ್ತೇ ದೇವ್ರು.. ಹಂಗೆಲ್ಲಾ ಮಾಡಿದ್ರೆ ಪ್ರಧಾನಿಗಳಿಗೆ ಅವಮಾನ ಮಾಡಿದಂಗಾಗುತ್ತೆ ಅಲ್ವರಾ..
ಅಧಿಕಾರಿ : ಯೋ.. ನಿನ್ನ ಬಾವುಟಕ್ಕೂ ಪ್ರಧಾನ ಮಂತ್ರಿಗಳಿಗೂ ಏನಯ್ಯಾ ಸಂಬಂಧ..
ವ್ಯಕ್ತಿ : ಐತೆ.. ಸಂಬಂಧ ಐತೆ ಸಾಹೇಬ್ರೇ.. ಪ್ರಧಾನಿಗಳೇ ಹೇಳಿದ್ದಾರೆ ಅದೇನು ಅದು ಹಿಂದಿಯಲ್ಲಿ.. ಹಾಂ.. ಹರ್ ಘರ್ ತಿರಂಗಾ ಅಂತಾ.. ಅಂದ್ರೆ ಪ್ರತಿ ಮನೆ ಮೇಲೂ ದೇಶದ ಬಾವುಟ ಹಾರಿಸ್ಬೇಕು ಅಂತಾ ಅಲ್ವರಾ..
ಅಧಿಕಾರಿ : ಅಯ್ತಯ್ಯಾ.. ಅವರು ಹೇಳಿದ್ದು ಮನೆ ಮೇಲೆ ಬಾವುಟ ಹಾರಿಸು ಅಂತಾ. ಇದು ಮನೆ ಅಲ್ಲಾ ಕಚೇರಿ ಕಣಯ್ಯಾ..
ವ್ಯಕ್ತಿ : ಅದಕ್ಕೆ ಇಲ್ಲಿಗೆ ಬಂದೆ ಬುದ್ದಿ.. ಎಷ್ಟೇ ಆದರೂ ನಮ್ಮ ಪ್ರಧಾನಿಗಳು ಅಲ್ವರಾ.. ಅವರ ಮಾತು ಮೀರಾಕಾಯ್ತದಾ?
ಅಧಿಕಾರಿ : ಥೋ ಥೋ.. ಇದು ಮನೆ ಅಲ್ಲಾ.. ಆಫೀಸು ಕಣಯ್ಯಾ ಸರಕಾರಿ ಆಫೀಸು, ಹೋಗಿ ನಿನ್ನ ಮನೆ ಮೇಲೆ ಉದ್ದಕ್ಕೊಂದು ಕಂಬ ನೆಟ್ಟು ಬಾವುಟ ಕಟ್ಟು ಹೋಗು.. ಸುಮ್ಕೆ ನನ್ನ ತಲೆ ತಿನ್ನಬೇಡಾ..
ವ್ಯಕ್ತಿ : ಹೂಂ ಸಾರು.. ಅದಕ್ಕೆ ಇಲ್ಲಿಗೆ ಬಂದೆ.. ಇಲ್ನೋಡಿ ಚೆಂದದ ಬಾವುಟ ತಂದಿವ್ನಿ. ಇದು ನಂದೆಯಾ.. ನನ್ನತ್ರ ಕೇಸರಿ ಬಿಳಿ ಹಸಿರು ಬಣ್ಣದ ಬಾವುಟ ಐತೆ. ನೋಡಿ ಸ್ವಾಮಿ ನಡುವೆ ಚಕ್ರಾನೂ ಐತೆ..
ಅಧಿಕಾರಿ : ಹೌದಯ್ಯಾ.. ನನಗೂ ಕಣ್ಣು ಐತೆ.. ನಿಂದು ಬಾವುಟ ಅಂತಾ ಗೊತ್ತಾಗೈತೆ.. ಆದರೆ ಇದು ಸರಕಾರಿ ಕಚೇರಿ ಅನ್ನೋದು ನಿನಗೆ ಹೇಗಯ್ಯಾ ತಿಳಿಸಿ ಹೇಳೋದು.
ವ್ಯಕ್ತಿ : ಇದು ಅದೇ ಅಂತಾ ತೊಳ್ಕೊಂಡೇ ಬಂದಿವ್ನಿ ಸಾರು.. ನನ್ನತ್ರ ಬಾವುಟ ಐತೆ.. ಎದೆಯಲ್ಲಿ ದೇಶಭಕ್ತಿ ಐತೆ. ಇದನ್ನ ಹಾರಿಸಿ ಭಾರತ್ ಮಾತಾಕೀ ಜೈ ಅಂತಾ ಹೇಳಬೇಕಿದೆ.. ಅದಕ್ಕೆ ಇಲ್ಲಿಗೆ ಬಂದೆ..
ಅಧಿಕಾರಿ : ಯೋ.. ಈ ಬಾವುಟ ತಗೊಂಡು, ನಿನ್ನ ಮನೆಗೆ ಹೋಗಿ, ಟೆರೇಸ್ ಹತ್ತಿ, ಒಂದು ಗೂಟಾ ಹೊಡದು, ಬಾವುಟಾ ಕಟ್ಟಿ ಭಾರತ ಮಾತಾಕಿ ಜೈ ಅನ್ನು. ಇಲ್ಲಿ ಯಾಕೆ ಬಂದು ನನ್ನ ತಲೆ ತಿಂತಿದ್ದೀಯಾ. ಹೋಗಯ್ಯೋ
ವ್ಯಕ್ತಿ : ಅದಕ್ಕೆ ಬಂದೆ ಸ್ವಾಮಿ.. ನನ್ನತ್ರ ಬಾವುಟ ಐತೆ.. ದೇಶಭಕ್ತಿ ತೋರಿಸೋಕೆ..
ಅಧಿಕಾರಿ : ತೋರ್ಸಯ್ಯಾ.. ಹೊರಗೆ ಹೋಗಿ ಎಷ್ಟು ಬೇಕಾದ್ರೂ ದೇಶಭಕ್ತಿ ತೋರ್ಸು, ಎಷ್ಟು ಸಲ ಬೇಕಾದ್ರೂ ಭಾರತ್ ಮಾತಾಕೀ ಜೈ ಅನ್ನು. ಬೇಡಾ ಅನ್ನೋರು ಯಾರು. ಮೊದಲು ಇಲ್ಲಿಂದಾ ತೊಲಗು.
ವ್ಯಕ್ತಿ : ಅದೆಂಗೆ ಆಗುತ್ತೆ ಸಾರು.. ಪ್ರಧಾನ ಮಂತ್ರಿಗಳು ಹೇಳಿದ್ದಾರೆ ‘ಘರ್ ಘರ್ ತಿರಂಗಾ, ಹರ್ ಘರ್ ತಿರಂಗಾ’ ಅಂತಾ. ಅವರ ಮಾತಿಗಾದ್ರೂ ನೀವು ಬೆಲೆ ಕೊಡಲೇ ಬೇಕಲ್ವಾ ಸಾರು.
ಅಧಿಕಾರಿ : ಆಯ್ತಪ್ಪಾ.. ನಾನು ಬೆಲೆ ಕೊಡ್ತೀನಿ.. ನೀನು ಇಲ್ಲಿಂದ ಕಳಚ್ಕೋ.
ವ್ಯಕ್ತಿ : ಬೆಲೆ ಕೊಡ್ತಿನಿ ಅಂತಾ ಹೇಳಿದ್ರಲ್ಲಾ.. ಅಷ್ಟು ಸಾಕು. ನೀವೂ ದೇಶಭಕ್ತರು ಅಂತಾ ಗೊತ್ತಾಯ್ತು. ಈಗ ಈ ಬಾವುಟ..
ಅಧಿಕಾರಿ : ಆಯ್ತು.. ಅದನ್ನ ಎತ್ಕೊಂಡು, ಘೋಷಣೆ ಹಾಕ್ಕೊಂಡು ಹೋಗಯ್ಯಾ..
ವ್ಯಕ್ತಿ : ಹಂಗೆ ಹೋಗು ಅಂದ್ರೆ ಹೆಂಗೆ ದೇವ್ರು. ನನ್ನತ್ರ ಬಾವುಟ ಐತೆ, ಎದೆಯಲ್ಲಿ ದೇಶಭಕ್ತಿ ಐತೆ. ಪ್ರಧಾನಿಗಳು ಹೇಳಿದಂತೆ ಮನೆ ಮನೆಯಲ್ಲಿ ಬಾವುಟ ಹಾರಿಸಬೇಕಲ್ವಾ ದೇವ್ರು.
ಅಧಿಕಾರಿ : ( ಸಹನೆ ಕಳೆದುಕೊಂಡು) ಆಯ್ತಯ್ಯಾ.. ಪ್ರಧಾನಿಗಳು ಹೇಳಿದ್ದು ಮನೆ ಮನೆಯಲ್ಲಿ ಬಾವುಟ ಅಂತಾ.. ಆದರೆ ಇದು ಕಚೇರಿ.. ಸರಕಾರಿ ಕಚೇರಿ. ಮನೆ ಅಲ್ವಲ್ಲಾ.. ಹೋಗು ನಿನ್ನ ಮನೆ ಮೇಲೆ ಈ ನಿನ್ನ ಬಾವುಟ ಹಾರಿಸು ಹೋಗು.
ವ್ಯಕ್ತಿ : ಮನೆ ಮೇಲೆನೇ ಹಾರಿಸ್ಬೇಕು ಬುದ್ದಿ. ನನ್ನ ಹತ್ರ ಬಾವುಟಾ ಐತೆ.. ಆದರೆ ಇದನ್ನ ಹಾರಿಸೋಕೆ ನನ್ನ ಹತ್ರ ಅದೇ ಇಲ್ವಲ್ಲಾ.
ಅಧಿಕಾರಿ : ಅದೇ ಅಂದ್ರೆ ಕೋಲು ಇಲ್ವೇನಯ್ಯಾ. ಯಾವುದೋ ಒಂದು ಮರದ ಕೊಂಬೆ ಮುರಿದು ಅದಕ್ಕೆ ಬಾವುಟ ಕಟ್ಟಿಕೊಂಡು ಹೋಗು..
ವ್ಯಕ್ತಿ : ಐತೆ ಸಾರು.. ಬಾವುಟಾನೂ ಐತೆ.. ಅದನ್ನ ಸಿಗಿಸೋದಿಕ್ಕೆ ಕೋಲೂ ಐತೆ. ಆದರೆ ಬಾವುಟ ಹಾರಿಸೋದಕ್ಕೆ ನನಗೆ ಮನೇನೇ ಇಲ್ವಲ್ಲಾ ದೇವ್ರು. ಅದಕ್ಕೆ ಮನೆ ಇಲ್ಲದವರಿಗೆ ಮನೆ ಮಂಜೂರು ಮಾಡೋ ದೊಡ್ಡ ಸಾಹೇಬ್ರು ನೀವಂತಾ ಗೊತ್ತಾಯ್ತು. ಸ್ವಾಮಿ ನಿಮ್ಮ ಕಾಲಿಗೆ ಬೀಳ್ತೀನಿ, ಈ ಬಾವುಟ ಹಾರಿಸೋದಕ್ಕಾದ್ರೂ ಒಂದೇ ಒಂದು ಮನೆ ಮಂಜೂರು ಮಾಡಿ ಪುಣ್ಯ ಕಟ್ಕೊಳ್ಳಿ..
ಅಧಿಕಾರಿ : ( ಟೇಬಲ್ ಮೇಲಿದ್ದ ಬೆಲ್ ಬಾರಿಸಿ) ಯಾರಯ್ಯಾ ಇವನನ್ನ ಒಳಗೆ ಬಿಟ್ಟಿದ್ದು. ಯೋ ಅಟೆಂಡರ್ರು ಬಾರಯ್ಯಾ.. ಇವನನ್ನ ಮೊದಲು ಎತ್ತಿ ಹೊರಗೆ ಹಾಕು.
ಅಟೆಂಡರ್ : ಏ ಯಾರಯ್ಯಾ ನೀನು.. ನಡಿ ಹೊರಗೆ.. ( ಹೊರಗೆ ತಳ್ಳಲು ಪ್ರಯತ್ನಿಸುತ್ತಾನೆ)
ವ್ಯಕ್ತಿ : ನಾನು ಬಾವುಟ ಹಾರಿಸಲೇ ಬೇಕು, ಬಿಡಯ್ಯಾ ನನ್ನ.. ಮನೆ ಮನೆ ಬಾವುಟಾ..
ಅಟೆಂಡರ್ : ( ಅನಾಮತ್ತಾಗಿ ಎತ್ತಿ ಹೊರಕ್ಕೆ ಹಾಕುತ್ತಾನೆ)
ವ್ಯಕ್ತಿ : ಸ್ವಾಮಿ ಇಲ್ಲಿ ನೋಡಿ.. ಬಾವುಟ ಇದೆ, ಮನೆ ಇಲ್ಲಾ.. ಎಲ್ಲಿ ಹಾರಿಸೋದು.. ಮನೆ ಕೊಡಿ ಸ್ವಾಮಿ ಮನೆ.. ಬೊಲೋ ಭಾರತ್ ಮಾತಾ ಕೀ ಜೈ.. ಒಂದೇ ಮಾತರಂ.. ಬಾವುಟ ಇದೆ, ಮನೆ ಇಲ್ಲಾ.. ಭಾರತ್ ಮಾತಾಕಿ ಜೈ..
(ವ್ಯಕ್ತಿ ಘೋಷಣೆ ಕೂಗ್ತಾನೇ ಇರ್ತಾನೆ.. ಅಟೆಂಡರ್ ಎತ್ತಿಕೊಂಡು ಹೋಗಿ ಹೊರಗೆ ಬಿಸಾಕುತ್ತಾನೆ. ಅಷ್ಟರಲ್ಲಿ ವ್ಯಕ್ತಿಯ ಕೈಯಲ್ಲಿರುವ ಬಾವುಟ ಕೆಳಗೆ ಬೀಳುತ್ತದೆ)
ವ್ಯಕ್ತಿಯ ಧ್ವನಿ : ಅಯ್ಯೋ ನನ್ನ ಬಾವುಟ. ಮನೆ ಬೇಕು, ಬಾವುಟ ಬೇಕು.. ಧ್ವಜ ಹಾರಿಸ್ಬೇಕು, ದೇಶಭಕ್ತಿ ತೋರಿಸಬೇಕು. ಹರ್ ಘರ್ ತಿರಂಗಾ.. ಘರ್ ಘರ್ ತಿರಂಗಾ.. ಘರ್ ಇಲ್ಲಾ, ತಿರಂಗಾ ಇಲ್ಲಾ.. ಬೊಲೋ ಭಾರತ್ ಮಾತಾಕೀ…
ಅಧಿಕಾರಿ : (ಎದ್ದು ಬಂದು ಬಿದ್ದ ಬಾವುಟವನ್ನು ಕೈಗೆತ್ತಿಕೊಂಡು ಅಲ್ಲೇ ಇದ್ದ ಕಸದಬುಟ್ಟಿಗೆ ಎಸೆಯುತ್ತಾನೆ. ಅಧಿಕಾರಿಯ ಫೋನ್ ರಿಂಗ್ ಆಗುತ್ತದೆ. ವಂದೇ ಮಾತರಂ ಸುಜಲಾಂ ಸುಫಲಾಂ..ಹಾಡು ಕೇಳಿಬರುತ್ತದೆ. )
ಶಶಿಕಾಂತ ಯಡಹಳ್ಳಿ
ರಂಗಕರ್ಮಿ
ಇದನ್ನೂಓದಿ- http://ಎಸ್ಐಟಿಯನ್ನು ‘ಕ್ಲೋಸ್’ ಮಾಡಬಹುದೇ ? ಕಾನೂನಿನ ಕುಣಿಕೆಗೆ ಸಿಲುಕಲಿರುವ ಸಿಎಂ ಮತ್ತು ಗೃಹ ಸಚಿವರು ! https://kannadaplanet.com/can-the-sit-be-closed/