ಸ್ವಾತಂತ್ರ್ಯೋತ್ಸವ ವಿಶೇಷ ಲೇಖನ
ಕಳೆದುಕೊಂಡಿರುವುದನ್ನು ಮರುಶೋಧಿಸುವ ಆತ್ಮಾವಲೋಕನದ ಸಮಯ ಈ ದಿನ. ನಾವು ಎತ್ತ ಸಾಗುತ್ತಿದ್ದೇವೆ ? ಎಂಬ ಪ್ರಶ್ನೆ ಪದೇಪದೇ ನಮ್ಮೊಳಗೆ ಮೂಡುತ್ತಿದ್ದರೆ, ಅದಕ್ಕೆ ಸೂಕ್ತ ಉತ್ತರ ಕಂಡುಕೊಳ್ಳುವ ದಿಕ್ಕಿನಲ್ಲಿ ಈ ವಂಚಿತ ಸಮಾಜವು ಸ್ವಾತಂತ್ರ್ಯದ ಪೂರ್ವಸೂರಿಗಳ ಮರುಭೇಟಿಗಾಗಿ ಹಾತೊರೆಯುತ್ತದೆ. ಈ ಹಪಹಪಿಯೇ ನಮ್ಮೊಳಗಿನ ಅತ್ಮಗೌರವದ, ಸ್ವ-ಘನತೆಯ ದೀಪಗಳನ್ನು ಹೊತ್ತಿಸಿದರೆ, ಆ ಮೋಂಬತ್ತಿಯ ಬೆಳಕಿನಲ್ಲೇ 80ನೆ ವಾರ್ಷಿಕೋತ್ಸವದ ಕಡೆಗೆ ಭರವಸೆಯ ಹೆಜ್ಜೆಗಳನ್ನು ಹಾಕಬಹುದು – ನಾ ದಿವಾಕರ, ಚಿಂತಕರು.
ಸ್ವಾತಂತ್ರ್ಯದ ಕನಸುಗಳು ಎಂದಾಕ್ಷಣ ನಮ್ಮ ಕಣ್ಣೆದುರು ತೆರೆದುಕೊಳ್ಳುವುದು ಸಮ ಸಮಾಜದ ಕಲ್ಪನೆ, ರಾಜಕೀಯ-ಸಾಮಾಜಿಕ-ಆರ್ಥಿಕ-ಸಾಂಸ್ಕೃತಿಕ ಸಮಾನತೆಯ ಆಶಯ ಮತ್ತು ಪ್ರತಿಯೊಬ್ಬ ಪ್ರಜೆಯ ನಿತ್ಯ ಜೀವನದಲ್ಲಿ ಕಾಣಬೇಕಾಗಿದ್ದ ಸ್ವಾವಲಂಬಿ ಬದುಕಿನ ಹಾದಿಗಳು. ಈ ಮೌಲ್ಯಗಳನ್ನು ಸಾಧಿಸುವ ಸಲುವಾಗಿಯೇ ಒಂದು ಒಕ್ಕೂಟ ರಾಷ್ಟ್ರವಾಗಿ ರೂಪಿಸಿಕೊಂಡ ಭಾರತ, ತನ್ನ ಒಡಲಲ್ಲಿಟ್ಟುಕೊಂಡಿರುವ ಬಹುಭಾಷಿಕ, ಬಹುಸಾಂಸ್ಕೃತಿಕ, ಬಹುಧಾರ್ಮಿಕ ಸಮಾಜಗಳನ್ನು ಎಲ್ಲ ತಡೆಬೇಲಿಗಳನ್ನೂ ದಾಟಿ ಒಂದಾಗಿಸಲು ಸಾಧ್ಯವಾಗಿದೆಯೇ ? ಈ ಜಟಿಲ ಪ್ರಶ್ನೆಗೆ ಉತ್ತರ ಏಕಮುಖಿಯಾಗಿರಲು ಸಾಧ್ಯವಿಲ್ಲ.
ಈ ಸುಡು ವಾಸ್ತವವನ್ನು ಮನಸಾರೆ ಸ್ವೀಕರಿಸದೆ ಹೋದರೆ, ಬಹುಶಃ ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ನಾವು ಆತ್ಮರತಿಯಲ್ಲಿ ಮಿಂದು ನೆಲದ ವಾಸ್ತವಗಳಿಂದ ದೂರ ಸಾಗಿಬಿಡುತ್ತೇವೆ. ಏಕೆಂದರೆ ಸ್ವಾತಂತ್ರ್ಯದ ಮೂಲ ಕನಸು ಮತ್ತು ಕಲ್ಪನೆ ಎರಡೂ ಸಹ ಇಂದಿಗೂ ಅಪೂರ್ಣವಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟ, ಉತ್ತರ ಭಾರತದಲ್ಲಿ ಜಾತಿ ಸಮೀಕ್ಷೆಯ ಸುತ್ತ ನಡೆಯುತ್ತಿರುವ ಸಂಕಥನಗಳು ಸಾಮಾಜಿಕ ತಾರತಮ್ಯಗಳ ವಿರಾಟ್ ಸ್ವರೂಪವನ್ನು ಸೂಚಿಸಿದರೆ, ದೇಶದ ಶೇಕಡಾ 1ರಷ್ಟು ಜನರ ಬಳಿ ದೇಶದ ಶೇಕಡಾ 40ರಷ್ಟು ಸಂಪತ್ತು ಕ್ರೋಢೀಕೃತವಾಗಿರುವುದು ಆರ್ಥಿಕ ತರತಮಗಳಿಗೆ ಸಾಕ್ಷಿಯಾಗಿದೆ.
ವಿಕಾಸದ ಹಾದಿಯಲ್ಲಿ ಭಾರತ
ವಿಕಸಿತ ಭಾರತ ಆಗುವ ಹಾದಿಯಲ್ಲಿ ಅತಿ ಉತ್ಸಾಹದಿಂದ ಸಾಗುತ್ತಿರುವ ನವ ಭಾರತ ತನ್ನ 79ನೆ ಸ್ವಾತಂತ್ರ್ಯ ದಿನವನ್ನು ಹೆಮ್ಮೆಯಿಂದ ಆಚರಿಸುತ್ತಿದೆ. ಒಂದು ಸರ್ವ ಸಾರ್ವಭೌಮ ರಾಷ್ಟ್ರವಾಗಿ ಉದಯಿಸಿದ ದೇಶ ತನ್ನದೇ ಆದ ಸಂವಿಧಾನವನ್ನು ರೂಪಿಸಿಕೊಂಡು 75 ವರ್ಷಗಳು ಕಳೆದಿವೆ (ನವಂಬರ್ 26 2025ಕ್ಕೆ 75 ತುಂಬುತ್ತದೆ). ಈ ಎರಡೂ ಅಂಶಗಳ ನೆಲೆಯಲ್ಲಿ ಭಾರತದ ತ್ರಿವರ್ಣ ಧ್ವಜ ಇಂದು ಜಗತ್ತಿನ ಅಗ್ರಗಣ್ಯ ರಾಷ್ಟ್ರಗಳ ಪೈಕಿ ಹೆಮ್ಮೆಯಿಂದ ಪಟಪಟಿಸುತ್ತಿದೆ. ಈ ಆತ್ಮಾಭಿಮಾನದ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುವ, ದೇಶದ ಸಾಮಾನ್ಯ ಜನತೆಯ ಮನಸ್ಸುಗಳಲ್ಲಿ ಇಂದಿಗೂ ಮನೆಮಾಡಿರುವ ಹಲವು ರೀತಿಯ ಆತಂಕಗಳು, ತುಮುಲಗಳು ಹಾಗೂ ಎದೆಯಲ್ಲಿ ಅವಿತಿರುವ ನೋವು, ಯಾತನೆ ಮತ್ತು ತಣ್ಣನೆಯ ಆಕ್ರೋಶಗಳು, ಈ ಸುದಿನವನ್ನು ಸಂಭ್ರಮದೊಂದಿಗೇ ಆತ್ಮಾವಲೋಕನದ ದಿನವನ್ನಾಗಿಯೂ ಮಾಡುತ್ತದೆ/ಮಾಡಬೇಕಿದೆ.
ವಸಾಹತು ದಾಸ್ಯದಿಂದ ವಿಮೋಚನೆ ಪಡೆದ ಯಾವುದೇ ದೇಶದಂತೆ ಭಾರತದಲ್ಲೂ ಈ ಪ್ರಕ್ರಿಯೆ ಸಹಜವೇ ಆಗಿರುತ್ತದೆ. ಏಕೆಂದರೆ ಏಳು ದಶಕಗಳ ಅವಧಿಯೊಳಗೇ ನಮಗೆ ನಾವೇ ಅರ್ಪಿಸಿಕೊಂಡ ಸಂವಿಧಾನ ಮತ್ತು ಅದರ ಮೌಲ್ಯಗಳು ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ಕಟ್ಟಕಡೆಯ ವ್ಯಕ್ತಿಯವರೆಗೂ ವ್ಯಾಪಿಸಿ, ಅಲ್ಲಿರುವ ಅಪಾರ ಸಂಖ್ಯೆಯ ಜನಸಮುದಾಯಗಳನ್ನು ಭರವಸೆಯ ಭವಿಷ್ಯದತ್ತ ಕರೆದೊಯ್ಯುವ ಹಾದಿಯಲ್ಲಿ, ಭಾರತ ಇಂದಿಗೂ ಹಲವು ತಡೆಗೋಡೆಗಳನ್ನು, ಹಾದಿ ಕಂದಕಗಳನ್ನು, ಒಳಬಿರುಕುಗಳನ್ನು ಎದುರಿಸುತ್ತಲೇ ಇದೆ. ಗ್ರಾಂಥಿಕವಾಗಿ ಸಂವಿಧಾನದ ಆಶಯಗಳನ್ನು ಶಾಸನಬದ್ಧತೆಯಿಂದ, ಕಾನೂನುಗಳ ಮೂಲಕ ಜಾರಿಗೊಳಿಸಲಾಗಿದ್ದರೂ, 1947ರ ನಡು ರಾತ್ರಿಯಲ್ಲಿ ವಿಧಿಯೊಡನೆ ಸಂಧಾನ ನಡೆಸಿದ ಸ್ವತಂತ್ರ ಭಾರತ ಕಂಡ ಕನಸುಗಳು ಈಡೇರದೆ ಇರುವ ಹಲವು ವಿದ್ಯಮಾನಗಳನ್ನು ವರ್ತಮಾನದ ಸಂದರ್ಭದಲ್ಲಿ ಗುರುತಿಸಬಹುದಾಗಿದೆ.
ನೆಲದ ವಾಸ್ತವಗಳನ್ನು ತೆರೆದಿಟ್ಟಾಗ
ಮತ್ತೊಂದೆಡೆ ಸ್ವಾತಂತ್ರ್ಯೋತ್ತರ ಭಾರತದ ಆರಂಭಿಕ ದಿನಗಳಲ್ಲಿದ್ದ ಸಂವಹನ ಪ್ರಪಂಚ 78 ವರ್ಷಗಳ ನಂತರ ಕ್ರಾಂತಿಕಾರಿ ಬದಲಾವಣೆಗಳೊಳಗಾಗಿದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿದ್ಯುನ್ಮಾನ ಸಾಧನಗಳ ಪರಿಣಾಮವಾಗಿ ಇಂದು ಸುದ್ದಿ ಪ್ರಸರಣದ ಸೇತುವೆಗಳು ದೇಶವ್ಯಾಪಿಯಾಗಿ ವಿಸ್ತರಿಸಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ವ್ಯಾಪಕವಾಗಿ ನೆಲೆ ಕಂಡಿದೆ. ಇದು ದೇಶ ಕಂಡ ಸಕಾರಾತ್ಮಕ ಬೆಳವಣಿಗೆ. ಮೊಬೈಲ್ ತಂತ್ರಜ್ಞಾನ, ಅಂತರ್ಜಾಲ ಹಾಗೂ ವಿದ್ಯುನ್ಮಾನ ಸುದ್ದಿ ವಾಹಿನಿಗಳು ಇಂದು ಭಾರತದ ಪ್ರತಿಯೊಬ್ಬ ಪ್ರಜೆಗೂ ಕ್ಷಣಮಾತ್ರದಲ್ಲಿ ಮಾಹಿತಿ ಒದಗಿಸುವ ಕ್ಷಮತೆಯನ್ನು ಗಳಿಸಿವೆ. ಈ ಸಾಧನೆಯನ್ನು ಮನಗಾಣುತ್ತಲೇ, ಮತ್ತೊಂದು ಬದಿಯಲ್ಲಿ ಮಾಧ್ಯಮಗಳು ತಮ್ಮ ಸ್ವಂತಿಕೆಯನ್ನು ಕಳೆದುಕೊಂಡು, ಸೃಜನಶೀಲತೆಯಿಂದ ದೂರವಾಗಿ, ನವ ಉದಾರವಾದಿ ಬಂಡವಾಳಿಗರ, ಕಾರ್ಪೋರೇಟ್ ಮಾರುಕಟ್ಟೆಯ ನಿರ್ದೇಶನದಂತೆ ನಡೆಯುತ್ತಿರುವುದು, ತಳಸಮಾಜದ ಜನತೆಯ ದೃಷ್ಟಿಯಲ್ಲಿ ಸ್ವಾಗತಾರ್ಹ ಎನಿಸಲಾರದು.
ಬಹುತೇಕ ವಿದ್ಯುನ್ಮಾನ ಮಾಧ್ಯಮಗಳು ಮಾರುಕಟ್ಟೆ ವೃದ್ಧಿಯ ದೃಷ್ಟಿಯಿಂದಲೇ ಸುದ್ದಿ ಬಿತ್ತರಿಸುವುದರಿಂದ, ಕಾರ್ಪೋರೇಟ್ ಹಿತಾಸಕ್ತಿ ಮತ್ತು ಆಳ್ವಿಕೆಗೆ ನಿಕಟವಾಗಿರುವ ಹಂಬಲ ಈ ಕ್ಷೇತ್ರದ ಸ್ವಂತಿಕೆ ಮತ್ತು ಸ್ವಾಯತ್ತತೆಯನ್ನು ಸಂಪೂರ್ಣವಾಗಿ ಕಸಿದುಕೊಂಡಿದೆ. ಆಡಳಿತಾರೂಢ ಸರ್ಕಾರಗಳಿಗೆ ನಿಕಟವಾಗುವ ಮೂಲಕ ತಮ್ಮ ಮಾರುಕಟ್ಟೆ ಅಸ್ತಿತ್ವವನ್ನು ರೂಪಿಸಿಕೊಳ್ಳುತ್ತಿರುವ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳು ( ಕೆಲವು ಅಪವಾದಗಳನ್ನು ಹೊರತುಪಡಿಸಿ) ತಳಸಮಾಜದ ಜನತೆ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಕುರುಡಾಗಿರುವುದೂ ಸಹ ಕಟು ಸತ್ಯ. ಇದನ್ನು ಸರಿದೂಗಿಸುವ ನಿಟ್ಟಿನಲ್ಲಿ ಯು ಟ್ಯೂಬ್‌ನಂತಹ ವಿದ್ಯುನ್ಮಾನ ಸಾಧನಗಳು ಹೆಚ್ಚು ಜನಪ್ರಿಯವಾಗಿದ್ದರೂ ಸಹ, ಸರ್ಕಾರಗಳ ನಿರ್ಬಂಧಗಳಿಗೊಳಗಾಗಿ ತಮ್ಮ ಸೃಜನಶೀಲ ಶಕ್ತಿಯನ್ನು ಕಳೆದುಕೊಳ್ಳುತ್ತಿವೆ. ಹಾಗಾಗಿ ಭಾರತದ ಡಿಜಿಟಲ್ ಕ್ರಾಂತಿ ಮೇಲ್ನೋಟಕ್ಕೆ ಸುಂದರವಾಗಿ ಕಂಡರೂ, ಆಂತರಿಕವಾಗಿ ಸಾರ್ವತ್ರಿಕ-ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವುದು ವಿಷಾದಕರ ಬೆಳವಣಿಗೆ.
ಸಾಧನೆಯ ನಡುವೆ ವೈರುಧ್ಯಗಳು
ವಿಜ್ಞಾನ ಕ್ಷೇತ್ರದಲ್ಲಿ ಸ್ವತಂತ್ರ ಭಾರತದ ಸಾಧನೆ ಅಪ್ರತಿಮ. ಮಂಗಳ ಯಾನ, ಚಂದ್ರಯಾನದಂತಹ ಸಾಹಸಗಳಲ್ಲಿ ಗೆಲುವು ಸಾಧಿಸಿರುವ ಭಾರತದ ವಿಜ್ಞಾನಿಗಳು, ಬಾಹ್ಯಾಕಾಶ ತಂತ್ರಜ್ಞರು ವಿಶ್ವ ಭೂಪಟದಲ್ಲಿ ಭಾರತದ ಹೆಸರನ್ನು ಅಜರಾಮರವಾಗಿಸಿರುವುದು ಹೆಮ್ಮೆಯ ವಿಚಾರ. ಶೈಕ್ಷಣಿಕ ವಲಯದಲ್ಲಿ ಭಾರತ ಗಳಿಸಿರುವ ಔನ್ನತ್ಯ ಮತ್ತು ಸಾಧನೆಗಳು ಶ್ಲಾಘನೀಯವೇ ಆದರೂ, ಶಿಕ್ಷಣ ಇಂದಿಗೂ ಸಹ ಸಾಮಾನ್ಯ ಜನತೆಯ, ಅವಕಾಶವಂಚಿತ ಸಮುದಾಯಗಳ ಕೈಗೆಟುಕದಂತೆ ಆಗಿರುವುದು ʼಸರ್ವರಿಗೂ ಶಿಕ್ಷಣʼ ಎಂಬ ಸ್ವಾತಂತ್ರ್ಯದ ಕನಸನ್ನು ಭಂಗಗೊಳಿಸಿದೆ. ಉನ್ನತ ವಿಶ್ವವಿದ್ಯಾಲಯಗಳಷ್ಟೇ ಅಲ್ಲದೆ ಶಾಲಾ ಕಾಲೇಜು ಶಿಕ್ಷಣವೂ ಸಹ ಕಾರ್ಪೋರೇಟಿಕರಣಕ್ಕೆ ಒಳಗಾಗುತ್ತಿರುವುದರ ಪರಿಣಾಮ, ಶಿಕ್ಷಣ ಎನ್ನುವುದೇ ಒಂದು ಮಾರುಕಟ್ಟೆಯ ವಿನಿಮಯ ಸರಕಾಗಿದ್ದು, ತಳಸಮಾಜದ ಜನತೆಗೆ ಗಗನ ಕುಸುಮವಾಗುತ್ತಿದೆ.
ಮತ್ತೊಂದು ಆಯಾಮದಲ್ಲಿ ನೋಡಿದಾಗ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತದ ಅಪ್ರತಿಮ ಸಾಧನೆಯ ಹೊರತಾಗಿಯೂ ವಿಶಾಲ ಸಮಾಜದಲ್ಲಿ, ನಗರ ಪ್ರದೇಶಗಳ ಸುಶಿಕ್ಷಿತರನ್ನೂ ಒಳಗೊಂಡಂತೆ, ಅವೈಜ್ಞಾನಿಕ ಮೌಢ್ಯಾಚರಣೆಗಳು, ಅವೈಚಾರಿಕ ಆಲೋಚನಾ ಕ್ರಮಗಳು ಇಡೀ ದೇಶವನ್ನು ಆವರಿಸುತ್ತಿವೆ. ವಿಜ್ಞಾನ, ಶಿಕ್ಷಣ ಮತ್ತು ಉನ್ನತ ವೈಜ್ಞಾನಿಕ ಸಂಸ್ಥೆಗಳು ವ್ಯಾಪಿಸುತ್ತಿರುವ ಹಾಗೆಯೇ, ವೈಜ್ಞಾನಿಕ ಮನೋಭಾವವನ್ನು ಬೆಳೆಸುವ ಪ್ರಯತ್ನಗಳು ಹಿಂದಕ್ಕೆ ಜಾರುತ್ತಿವೆ. ಪ್ರಾಚೀನ, ಮಧ್ಯಕಾಲೀನ ಯುಗದ ಮೂಢ ನಂಬಿಕೆಗಳು, ಆಚರಣೆಗಳು, ಜೀವನ ಪದ್ಧತಿಗಳು ಸಮಾಜಗಳನ್ನು ಒಳಗಿನಿಂದಲೇ ಶಿಥಿಲಗೊಳಿಸುತ್ತಿವೆ. ಹಾಗಾಗಿಯೇ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ, ಮಹಿಳಾ ದೌರ್ಜನ್ಯ ಮತ್ತು ಇವುಗಳಿಗೆ ಆಧಾರವಾದ ಪಿತೃಪ್ರಧಾನತೆ, ಊಳಿಗಮಾನ್ಯತೆ, ಜಾತಿ ವ್ಯವಸ್ಥೆಯ ಮೌಲ್ಯಗಳು ಇಂದಿಗೂ ವ್ಯವಸ್ಥಿತವಾಗಿ ಸಾಂಸ್ಥೀಕರಣಗೊಳ್ಳುತ್ತಿವೆ. ಈ ಎಲ್ಲ ಬೆಳವಣಿಗೆಗಳೂ ಮೂಲತಃ ಅವಲಂಬಿಸುವ ರಾಜಕೀಯ ಅಧಿಕಾರ ಕೇಂದ್ರಗಳು, ಸ್ವಾತಂತ್ರ್ಯದ ಕನಸುಗಳಿಂದ ಬಹುದೂರ ಸಾಗಿರುವುದು ಕಣ್ಣಿಗೆ ರಾಚುವ ಸತ್ಯ.
ಖಂಡಿತವಾಗಿಯೂ ಭಾರತ ಎಲ್ಲ ಕ್ಷೇತ್ರಗಳಲ್ಲೂ ಅಪ್ರತಿಮ ಸಾಧನೆ ಮಾಡಿದೆ. ಇದನ್ನು ಹಾಲಿ ಸರ್ಕಾರದತ್ತ ನೋಡುತ್ತಾ ಅಲ್ಲಗಳೆಯಲಾಗುವುದಿಲ್ಲ. ಈ ಎಂಟು ದಶಕಗಳ ದೇಶ ನಿರ್ಮಾಣವಾಗಿರುವುದು ತಳಸಮಾಜದ ಶ್ರಮಜೀವಿಗಳ ಬೆವರಿನ ದುಡಿಮೆಯಿಂದ, ಅನ್ನ ಬೆಳೆಯುವ ರೈತಾಪಿಯಿಂದ, ಜೀವತೆತ್ತು ದೇಶದ ರಕ್ಷಣೆ ಮಾಡುವ ಯೋಧರಿಂದ ಮತ್ತು ಸಂಪತ್ತಿನ ಉತ್ಪಾದನೆಗಾಗಿ ತಮ್ಮ ಜೀವವನ್ನೇ ಮುಡಿಪಾಗಿಡುವ ಕೋಟ್ಯಂತರ ಶ್ರಮಿಕರಿಂದ. ಭಾರತದ ವಿಶ್ವದ ಮೂರನೆ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದರೆ ಅದರ ಹಿಂದೆ ಈ ಬೆವರಿನ ವಾಸನೆ ಕಾಣಲೇಬೇಕಲ್ಲವೇ ? ಕಾರ್ಪೋರೇಟ್ ಸುಗಂಧ ದ್ರವ್ಯ ಪೂಸುವುದರಿಂದ ಈ ವಾಸನೆ, ಮೂಗಿಗೆ ಅಹಿತಕರವಾದರೂ, ಹೃದಯಕ್ಕೆ ಅಪ್ಯಾಯಮಾನವಾಗುತ್ತದೆ. ಏಕೆಂದರೆ ಇಂದು ಹರ್ ಘರ್ ತಿರಂಗ ಅಭಿಯಾನಕ್ಕೆ ಕಾರಣರಾಗಿರುವವರು, ಈ ತಿರಂಗವನ್ನು ತಮ್ಮ ಎದೆಯಲ್ಲೇ ಬಚ್ಚಿಟ್ಟುಕೊಂಡು, ಬೆವರು ಬಸಿದು ದುಡಿದು ಆಗಿ ಹೋಗಿರುವ, ಇರುವ ಕೋಟ್ಯಂತರ ಶ್ರಮಜೀವಿಗಳು.
ಆತ್ಮಾವಲೋಕನದ ಕದ ತಟ್ಟೋಣ
79ರ ಹೊಸ್ತಿಲಲ್ಲಿ ಭಾರತ ಆತ್ಮವಿಮರ್ಶೆಗೆ ಮುಕ್ತವಾಗಿ ತೆರೆದುಕೊಳ್ಳುವುದೇ ಆದರೆ, ಈಗ ಕಾಣುತ್ತಿರುವ ಮುಂದುವರೆದ, ಅಭಿವೃದ್ಧಿ ಹೊಂದಿದ, ವೈಜ್ಞಾನಿಕ ಮೇರು ಶಿಖರದಲ್ಲಿರುವ ಭಾರತ ಮತ್ತು ಅದರ ಅಪಾರ ಸಂಪತ್ತಿನ ಭಂಡಾರದ ಫಲಾನುಭವಿಗಳು ಯಾರಾಗಿದ್ದಾರೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕಿದೆ. ಶೇಕಡಾ 1ರಷ್ಟು ಸಿರಿವಂತ ಜನಸಂಖ್ಯೆ ಶೇಕಡಾ 40ರಷ್ಟು ಸಂಪತ್ತಿನ ಒಡೆಯರಾಗಿರುವುದು ಈ ಪ್ರಶ್ನೆಗೆ ಉತ್ತರ ನೀಡುತ್ತದೆ. ಪ್ರಜಾಪ್ರಭುತ್ವದ ವಾರಸುದಾರರಾಗಬೇಕಾದ ಈ ಸಂಪತ್ತಿನ ನಿರ್ಮಾತೃಗಳು, ಉತ್ಪಾದಕರು ಇಂದು ತಮ್ಮ ನಾಳಿನ ದಿನಗಳನ್ನು ಆತಂಕದಿಂದ ಎದುರು ನೋಡುವ ಸ್ಥಿತಿ ತಲುಪಿರುವುದು, ಸ್ವಾತಂತ್ರ್ಯದ ಕನಸನ್ನು ಭಂಗಗೊಳಿಸಿರುವುದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.
ದೇಶದ ಒಂದು ವಲಯದ ಸಮಾಜವು ನವ ಉದಾರವಾದ-ಬಂಡವಾಳಶಾಹಿ-ಕಾರ್ಪೋರೇಟ್ ಮಾರುಕಟ್ಟೆಯ ಫಲಾನುಭವಿಯಾಗಿದೆ. ಮತ್ತೊಂದು ಸಮಾಜವು ದೇಶದ ಸಾಮಾಜಿಕ ಒಳಬಿರುಕುಗಳನ್ನು, ಸಾಂಸ್ಕೃತಿಕ ವೈರುಧ್ಯಗಳನ್ನು ಬಳಸಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಆಳ್ವಿಕೆಯಲ್ಲಿ ಪ್ರಮುಖ ಫಲಾನುಭವಿಯಾಗಿದೆ. ಈ ಎರಡೂ ಸಮಾಜಗಳಿಗೆ ನೆಲದ ವಾಸ್ತವಗಳು, ಅಲ್ಲಿನ ನಾಡಿಬಡಿತಗಳು ಕಾಣುವುದೂ ಇಲ್ಲ ಕೇಳಿಸುವುದೂ ಇಲ್ಲ. ಇದರಿಂದಾಚೆ ನೋಡಿದಾಗ ಪುರುಷಾಧಿಪತ್ಯದ ಆಳ್ವಿಕೆಯಲ್ಲಿ ದೌರ್ಜನ್ಯ-ಅತ್ಯಾಚಾರಕ್ಕೊಳಗಾಗುತ್ತಿರುವ ಲಕ್ಷಾಂತರ ಮಹಿಳೆಯರು, ಊಳಿಗಮಾನ್ಯ ವ್ಯವಸ್ಥೆಯಲ್ಲಿ ದೌರ್ಜನ್ಯಗಳಿಗೊಳಗಾಗುತ್ತಿರುವ ತಳಸಮುದಾಯಗಳು, ಅಭಿವೃದ್ಧಿಯ ಹಾದಿಯಲ್ಲಿ ಅವಕಾಶವಂಚಿತರಾಗುತ್ತಿರುವ ಬುಡಕಟ್ಟು ಸಮುದಾಯಗಳು, ಕಾರ್ಪೋರೇಟ್ ಔದ್ಯಮಿಕ ಜಗತ್ತಿನಲ್ಲಿ ಭವಿಷ್ಯದ ಹಾದಿ ಕಾಣದಾಗಿರುವ ನಿರುದ್ಯೋಗಿ ಯುವ ಸಮೂಹ ಹಾಗೂ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ತಮ್ಮ ಕೃಷಿ ಭೂಮಿಯನ್ನು ಕಳೆದುಕೊಂಡು ಅತಂತ್ರರಾಗುತ್ತಿರುವ ಲಕ್ಷಾಂತರ ಅನ್ನದಾತರು ಒಂದು ಸಮಾಜದ ರೂಪದಲ್ಲಿ ವಂಚಿತ ಜನತೆಯಾಗಿ ಕಾಣುತ್ತಿದ್ದಾರೆ.
ನಾವು ಎತ್ತ ಸಾಗುತ್ತಿದ್ದೇವೆ ? ಎಂಬ ಪ್ರಶ್ನೆ ಪದೇಪದೇ ನಮ್ಮೊಳಗೆ ಮೂಡುತ್ತಿದ್ದರೆ, ಅದಕ್ಕೆ ಸೂಕ್ತ ಉತ್ತರ ಕಂಡುಕೊಳ್ಳುವ ದಿಕ್ಕಿನಲ್ಲಿ ಈ ವಂಚಿತ ಸಮಾಜವು ಸ್ವಾತಂತ್ರ್ಯದ ಪೂರ್ವಸೂರಿಗಳ ಮರುಭೇಟಿಗಾಗಿ ಹಾತೊರೆಯುತ್ತದೆ. ಈ ಹಪಹಪಿಯೇ ನಮ್ಮೊಳಗಿನ ಅತ್ಮಗೌರವದ, ಸ್ವ-ಘನತೆಯ ದೀಪಗಳನ್ನು ಹೊತ್ತಿಸಿದರೆ, ಆ ಮೋಂಬತ್ತಿಯ ಬೆಳಕಿನಲ್ಲೇ 80ನೆ ವಾರ್ಷಿಕೋತ್ಸವದ ಕಡೆಗೆ ಭರವಸೆಯ ಹೆಜ್ಜೆಗಳನ್ನು ಹಾಕಬಹುದು. ದೇಶ ಗಗನ ಮುಖಿಯಾಗಲಿ, ನಾವು ಮೊದಲು ನೆಲ ನೋಡಿ ನಡೆಯೋಣ, ನೆಲದ ಸುಡು ವಾಸ್ತವಗಳು ಕಾಣುತ್ತವೆ. ಕಳೆದುಕೊಂಡ ಮೌಲ್ಯಾದರ್ಶಗಳನ್ನಾದರೂ.
ನಾ ದಿವಾಕರ, ಚಿಂತಕರು.
ಇದನ್ನೂ ಓದಿ- 47 ರ ಸ್ವಾತಂತ್ರ್ಯ – ಯಾರಿಗೆ ಬಂತು, ಎಲ್ಲಿಗೆ ಬಂತು?