ಪತ್ರಕರ್ತರ ಮೇಲೆ ಹಲ್ಲೆಯಾಗಿದೆ, ಪೊಲೀಸರ ಮೇಲೆ ದಾಳಿ ಮಾಡಲಾಗಿದೆ, ರೌಡಿತನ ಮಾಡಿದವರ ಮುಖಗಳು ಸ್ಪಷ್ಟವಾಗಿಯೇ ಗೋಚರವಾಗಿದೆ. ಆದರೂ ಈ ರೌಡಿ ಎಲೆಮೆಂಟ್ ಗಳನ್ನು ತಕ್ಷಣ ಬಂಧಿಸಿ ಕ್ರಮ ತೆಗೆದುಕೊಳ್ಳುವಲ್ಲಿ ಪೊಲೀಸ್ ವ್ಯವಸ್ಥೆ ವಿಫಲವಾಗಿದೆ. ಹಾಗಾದರೆ ಈ ದಾಳಿಕೋರರ ಹಿಂದೆ ಆ ಪ್ರಭಾವಿ ಸೂತ್ರಧಾರರು ಇದ್ದಾರೆ, ಅವರೇ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಆದೇಶ ಕೊಡುತ್ತಿದ್ದಾರೆ, ಆ ಮೂಲಕ ದಾಳಿಕೋರ ಪಡೆಯನ್ನು ರಕ್ಷಿಸುತ್ತಿದ್ದಾರೆ ಎಂಬುದು ಖಾತರಿಯಾದಂತಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ರಿಪಬ್ಲಿಕ್ ಆಫ್ ಧರ್ಮಸ್ಥಳದವರು ದಮನಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ. ಧರ್ಮಸ್ಥಳದ ಗ್ರಾಮಸ್ಥರು ಹಾಗೂ ಭಕ್ತರ ಹೆಸರಲ್ಲಿ ಈ ರಿಪಬ್ಲಿಕ್ ಗೂಂಡಾ ಪಡೆ ಆಗಸ್ಟ್ 6 ರಂದು ಯುಟ್ಯೂಬರ್ ಗಳ ಮೇಲೆ ದಾಂಧಲೆ ಮಾಡಿ ದಾಳಿ ಮಾಡಿದ್ದಾರೆ.
ಕುಡ್ಲ ರ‍್ಯಾಂಪೇಜ್ ಯುಟ್ಯೂಬರ್ ಅಜಯ್ ಅಂಚನ್, ಸಂಚಾರಿ ಸ್ಟುಡಿಯೋದ ವಿಜಯ್, ಯುನೈಟೆಡ್ ಮೀಡಿಯಾದ ಅಭಿಷೇಕ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಈ ʼDʼ ಗ್ಯಾಂಗ್ ಅಟ್ಟಹಾಸ ಮೆರೆದಿದೆ. 50 ಜನರಿದ್ದ ದಾಳಿಕೋರರು ತಡೆಯಲು ಬಂದ ಪೊಲೀಸರ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ. ಹಲ್ಲೆಗೊಳಗಾದ ಪತ್ರಕರ್ತರಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸೇರಿಸಲಾಗಿದೆ. ಈ ದಾಳಿಯ ಸೂತ್ರದಾರರು ಮುಂದಿನ ದಾಳ ಉರುಳಿಸುವ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ.
ಆಗಿದ್ದಿಷ್ಟೇ.. ಬಿಗ್ ಬಾಸ್ ರಿಯಾಲಿಟಿ ಶೋ ಖ್ಯಾತಿಯ ರಜತ್ ದುಷ್ಕರ್ಮಿಗಳಿಂದ ಹತ್ಯೆಗೊಳಗಾಗಿದ್ದ ಸೌಜನ್ಯರವರ ಮನೆಗೆ ಭೇಟಿ ಕೊಟ್ಟಿದ್ದರು. ಈ ವಿಷಯ ತಿಳಿದ ಯುಟ್ಯೂಬರ್ ಗಳು ರಜತ್ ಸಂದರ್ಶನ ಪಡೆಯಲು ಬಂದಿದ್ದರು. ಈ ಸಂದರ್ಭವನ್ನು ಬಳಸಿಕೊಂಡು ದಾಂಧಲೆ ಸೃಷ್ಟಿಸುವ ಉದ್ದೇಶದಿಂದ ʼಡಿʼ ಗ್ಯಾಂಗ್ ಪಡೆಯನ್ನು ಸೂತ್ರಧಾರರು ಕಳುಹಿಸಿದ್ದರು. ಪೂರ್ವಯೋಜನೆಯಂತೆ ಕಾಲುಕೆರೆದುಕೊಂಡು ಜಗಳ ತೆಗೆದು ಯುಟ್ಯೂಬರ್ ಗಳ ಮೇಲೆ ದಾಳಿ ಮಾಡಿದ ಈ ಭಕ್ತರ ವೇಷದ ರೌಡಿಗಳು ಪೊಲೀಸರ ಮೇಲೆಯೂ ತಮ್ಮ ಆಟಾಟೋಪ ಪ್ರದರ್ಶಿಸಿದರು. ಸೂತ್ರಧಾರನ ಕೃಪಾಕಟಾಕ್ಷ ಇರುವಾಗ ಯಾವ ಪೊಲೀಸರೂ ಏನೂ ಮಾಡಲು ಸಾಧ್ಯವಿಲ್ಲ ಎನ್ನುವ ನಂಬಿಕೆಯೇ ಈ ರೌಡಿ ಪಡೆಗೆ ಶ್ರೀರಕ್ಷೆಯಾಗಿದೆ.
ಹೋಗಲಿ ಈ ಭಕ್ತಾಸುರರು ದಾಳಿಗೆ ಕೊಟ್ಟ ಕಾರಣವೂ ಧರ್ಮಸ್ಥಳದ ಪಾವಿತ್ರ್ಯವನ್ನು ಕಾಪಾಡುವುದಂತೆ. ಈ ಸ್ವತಂತ್ರ ಪತ್ರಕರ್ತರುಗಳು ಈ ಕ್ಷೇತ್ರದ ಕುರಿತು ಅಪಪ್ರಚಾರ ಮಾಡುತ್ತಿದ್ದಾರಂತೆ. ಹೀಗೆ ಹಿಂಸಾತ್ಮಕ ದಾಳಿ ಮಾಡುವ ಮೂಲಕ ಪಾವಿತ್ರ್ಯತೆಯನ್ನು ಉಳಿಸುವ ಮಹತ್ತರ ಕಾರ್ಯವನ್ನು ಈ ರೌಡಿ ಎಲೆಮೆಂಟ್ ಗಳು ಮಾಡಿದ್ದಾರೆ.
ಇದೇ ಧರ್ಮಸ್ಥಳದಲ್ಲಿ ಬಾಲಕಿಯರ ಮೇಲೆ, ಯುವತಿಯರ ಮೇಲೆ ಅಮಾನವೀಯ ಅತ್ಯಾಚಾರ ಕೊಲೆಗಳು ನಡೆದಾಗ ಈ ಗೂಂಡಾಗಳಿಗೆ ದೇವಸ್ಥಾನದ ಪಾವಿತ್ರ್ಯದ ಬಗ್ಗೆ ಎಚ್ಚರಿಕೆ ಇರಲಿಲ್ಲವೇ?. ಧರ್ಮಸ್ಥಳ ವ್ಯಾಪ್ತಿಯ ಭೂಮಿಗಾಗಿ ಅವ್ಯಾಹತವಾಗಿ ಹಲ್ಲೆ ಹತ್ಯೆಗಳು ನಡೆದಾಗ ಈ ಭಕ್ತಾಸುರ ಪಡೆಗೆ ಧರ್ಮಸ್ಥಳದ ಪಾವಿತ್ರ್ಯದ ಬಗ್ಗೆ ಕಾಳಜಿ ಯಾಕಿರಲಿಲ್ಲ. ಈಗ ಧರ್ಮಸ್ಥಳದ ವ್ಯಾಪ್ತಿಯಲ್ಲಿ ನಡೆದ ಅತ್ಯಾಚಾರ ಅನಾಚಾರ ಹಲ್ಲೆ ಹತ್ಯೆಗಳ ಕುರಿತು ಸ್ವತಂತ್ರ ಪತ್ರಿಕಾ ಮಾಧ್ಯಮಗಳು ಪ್ರಶ್ನಿಸಿದಾಗ, ಪ್ರಚಾರ ಮಾಡಿದಾಗ ಧರ್ಮಸ್ಥಳದ ಪಾವಿತ್ರ್ಯಕ್ಕೆ ಭಂಗ ಬಂದಿತೆಂದೂ, ಈ ದುಷ್ಟ ಕಾರ್ಯಗಳ ರೂವಾರಿಗಳ ಮುಖವಾಡಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಯಲು ಗೊಳಿಸಿದರೆ ಪಾವಿತ್ರ್ಯಕ್ಕೆ ಅಪಚಾರ ಆಯಿತೆಂದೂ ಈ ರೌಡಿ ಪಡೆಗಳು ದಾಳಿಗೆ ಇಳಿದಿವೆ.
ಇಷ್ಟಕ್ಕೂ ಧರ್ಮಸ್ಥಳದ ಸೂತ್ರಧಾರರು ಅನಾಚಾರಗಳಿಂದ ಅಪವಿತ್ರವಾದ ಧರ್ಮಸ್ಥಳದ ಪಾವಿತ್ರ್ಯವನ್ನು ಹಾಗೂ ತಮ್ಮ ಕುಟುಂಬದೊಳಗಿನ ದುಷ್ಕರ್ಮಿಗಳನ್ನು ಕಾಪಾಡಿಕೊಳ್ಳಲು ಏನೆಲ್ಲಾ ಸಾಧ್ಯವಾಗಿದೆಯೋ ಅದೆಲ್ಲವನ್ನೂ ಮಾಡುತ್ತಲೇ ಬಂದರು. ಪೊಲೀಸ್ ವ್ಯವಸ್ಥೆಯನ್ನೇ ತಮ್ಮ ನಿಯಂತ್ರಣದಲ್ಲಿಟ್ಟುಕೊಂಡರು. ಕಾಲಕಾಲಕ್ಕೆ ಎಲ್ಲಾ ಪಕ್ಷಗಳ ರಾಜಕಾರಣಿಗಳನ್ನು ಬಳಸಿಕೊಂಡರು. ಸುದ್ದಿ ಮಾಧ್ಯಮಗಳನ್ನೇ ತಮ್ಮ ಹಿತಾಸಕ್ತಿಗೆ ತಕ್ಕಂತೆ ನಡೆಸಿಕೊಂಡರು. ಆದರೆ ಇವರ ನಿಯಂತ್ರಣಕ್ಕೆ ಸಿಕ್ಕದೇ ಇರುವುದು ಸ್ವತಂತ್ರ ಪತ್ರಿಕಾ ಮಾಧ್ಯಮ. ಯುಟ್ಯೂಬರ್ ಗಳು, ಸಾಮಾಜಿಕ ಜಾಲತಾಣದ ಎಚ್ಚೆತ್ತ ಮನಸುಗಳು ಮಾತ್ರ ಧರ್ಮಸ್ಥಳದಲ್ಲಾದ ಅಧರ್ಮ ಕ್ರಿಯೆಗಳನ್ನು ಪ್ರಶ್ನಿಸಿದರು, ಮುಚ್ಚಿಟ್ಟ ಸತ್ಯಗಳನ್ನು ಎತ್ತಿ ತೋರಿಸಿದರು, ಹೂತ ಶವಗಳ ಹಿಂದಿನ ರಹಸ್ಯಗಳನ್ನು ಬಯಲಿಗೆಳೆದರು, ಪದ್ಮಲತಾ, ಸೌಜನ್ಯಾ, ಯಮುನಾ, ವೇದವಲ್ಲಿಯಾದಿಯಾಗಿ ಅತ್ಯಾಚಾರಕ್ಕೊಳಗಾಗಿ ಕೊಲೆಯಾದವರ ಪರ ನಿಂತರು. ಈ ಜನ ಮಾಧ್ಯಮಗಳ ಬಾಯಿ ಮುಚ್ಚಿಸಲು ನ್ಯಾಯಾಲಯಕ್ಕೆ ಹೋಗಿ ನೂರಾರು ಯುಟ್ಯೂಬ್, ವೆಬ್ ತಾಣಗಳನ್ನು ಬ್ಯಾನ್ ಮಾಡಿಸುವ ಆದೇಶವನ್ನು ತರಲಾಯಿತು. ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಿತು.
ಯಾವಾಗ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿ, ಈ ಸೂತ್ರಧಾರರ ವಿರುದ್ಧವಾಗಿ ಹೈಕೋರ್ಟ್ ತೀರ್ಪು ಬಂತೋ ಆಗ ತಳಮಳ ಶುರುವಾಯಿತು. ಯಾವಾಗ ಕಾನೂನಿನ ಮೂಲಕ ಸ್ವತಂತ್ರ ಪತ್ರಿಕಾ ಮಾಧ್ಯಮದವರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲವೋ ಆಗ ಕಾನೂನನ್ನೇ ಕೈಗೆ ತೆಗೆದುಕೊಂಡು ಅಭಿವ್ಯಕ್ತಿ ಸ್ಬಾತಂತ್ರ್ಯವನ್ನು ಹತ್ತಿಕ್ಕಲು ಯೋಜನೆ ರೂಪಿತವಾಯ್ತು. ಡಿ ಎಲೆಮೆಂಟ್ ನಾಯಕತ್ವದಲ್ಲಿ ಧರ್ಮಸ್ಥಳದ ಕೆಲವು ಗ್ರಾಮಸ್ಥರನ್ನು ಹಾಗೂ ಭಕ್ತರನ್ನು ಯುಟ್ಯೂಬರ್ ಗಳ ಮೇಲೆ ಎತ್ತಿಕಟ್ಟಲಾಯ್ತು. ಇವರಿಂದಲೇ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬಂದಿರೋದು ಎಂದು ನಂಬಿಸಲಾಯ್ತು. ರಜತ್ ಬಂದ ಸಂದರ್ಭವನ್ನು ಆಯ್ಕೆ ಮಾಡಿಕೊಂಡು ಯುಟ್ಯೂಬರ್ ಗಳ ಮೇಲೆ ಮಾರಣಾಂತಿಕ ದಾಳಿಯನ್ನು ನಡೆಸಲಾಯ್ತು.
ಅಪವಿತ್ರಗೊಂಡಿರುವ ದೇವಭೂಮಿಯ ಪಾವಿತ್ರ್ಯತೆಯನ್ನು ಹಿಂಸೆಯ ಮೂಲಕ ಉಳಿಸಲು ಪ್ರಯತ್ನಿಸಿದ ಸೂತ್ರಧಾರ ದಾಳಿ ಮಾಡಿಸಿದ ನಂತರ ಧರಣಿ ಮಾಡಿಸುವ ತಂತ್ರಗಾರಿಕೆಯನ್ನು ಜಾರಿಗೆ ತಂದಿದ್ದಾರೆ. ಲೋಕಲ್ ವ್ಯಾಪಾರಿಗಳು, ಗ್ರಾಮಸ್ಥರು ಹಾಗೂ ಮತಿಗೆಟ್ಟ ಭಕ್ತಾದಿಗಳು ಧರ್ಮಸ್ಥಳದ ಪೊಲೀಸ್ ಠಾಣೆಯ ಮುಂದೆ ” ನ್ಯಾಯ ಬೇಕು” ಎಂದು ಘೋಷಣೆ ಕೂಗುತ್ತಾ ಧರಣಿ ಕೂತಿದ್ದಾರೆ. ದಾಳಿಕೋರರನ್ನು ಬಂಧಿಸಿ, ಧರಣಿ ನಿರತರ ಮೇಲೆ ಲಾಠಿ ಪ್ರಯೋಗಿಸಿ ಚದುರಿಸುವ ಬದಲು ಎಸ್ಪಿ ಸಾಹೇಬರು ಮಾತುಕತೆಗೆ ಮುಂದಾಗಿದ್ದಾರೆ.
ಈಗ ನ್ಯಾಯ ಬೇಕಾದದ್ದು ಅಪಹರಣ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಎಲ್ಲಾ ಹೆಣ್ಣುಮಕ್ಕಳಿಗೆ ಹಾಗೂ ಅವರ ಕುಟುಂಬದವರಿಗೆ. ಇಲ್ಲಿ ನ್ಯಾಯ ಬೇಕಾಗಿದ್ದು ಭೂಮಿ ಜಮೀನಿಗಾಗಿ ಕೊಲೆಯಾದ ವ್ಯಕ್ತಿಗಳು ಹಾಗೂ ಅವರ ಕುಟುಂಬದವರಿಗೆ. ಇಲ್ಲಿ ನ್ಯಾಯ ಬೇಕಾದದ್ದು ಈ ಧರ್ಮಾಂಧ ಪಡೆಯಿಂದ ತೀವ್ರತರ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿರುವ ಯುಟ್ಯೂಬರ್ ಗಳಿಗೆ. ಆದರೆ ಇಲ್ಲಿ ನ್ಯಾಯ ಬೇಕೆಂದು ಕೇಳುತ್ತಿರುವುದು ಬೇಟೆಗಾರರ ಕಡೆಯವರು, ಸೂತ್ರಧಾರನ ಕಾಲಾಳುಗಳು. ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಬೇಕೆಂದು ಹಿಂಸೆಗಿಳಿದ ಈ ಧರ್ಮಾಂಧರಿಗೆ ಆ ಪಾವಿತ್ರ್ಯತೆಯನ್ನು ಯಾರು ಹಾಳುಮಾಡಿದ್ದು ಎಂಬುದರ ಅರಿವೂ ಇದ್ದಂತಿಲ್ಲ. ಪಾವಿತ್ರ್ಯತೆಗೆ ಕಳಂಕ ತಂದವರ ಪರವಾಗಿ ಬೀದಿಗಿಳಿದು ದಾಳಿ ಮಾಡುವ ಈ ಧರ್ಮಾಂಧರು ಧರ್ಮಸ್ಥಳದ ಕರ್ಮಕಾಂಡಗಳ ವಿರುದ್ಧ ನಿಲ್ಲಬೇಕಿತ್ತು, ಅನಾಚಾರಿಗಳ ವಿರುದ್ದ ಪ್ರತಿಭಟಿಸಬೇಕಿತ್ತು. ಸಂತ್ರಸ್ತರಿಗೆ ನ್ಯಾಯ ಬೇಕೆಂದು ಆಗ್ರಹಿಸಬೇಕಿತ್ತು.
ಆದರೆ ಈ ಲೋಕಲ್ ಭಕ್ತಾಸುರರಿಗೆ ಹಾಗೂ ಅಲ್ಲಿಯ ವ್ಯಾಪಾರಿ ವರ್ಗಕ್ಕೆ ಇದೆಲ್ಲಾ ಬೇಕಾಗಿಲ್ಲ. ಎಲ್ಲಿ ಈಗ ನಡೆಯುತ್ತಿರುವ ಸಮಾಧಿ ಉತ್ಕನನದಿಂದ ಸತ್ಯಗಳು ಹೊರಬರುತ್ತವೋ, ಇಷ್ಟು ವರ್ಷಗಳಿಂದ ಮಂಜುನಾಥ ದೇವರ ಹೆಸರಲ್ಲಿ ಜನರಲ್ಲಿ ಹುಟ್ಟಿಸಲಾದ ಭಯ ಭಕ್ತಿಗೆ ಚ್ಯುತಿ ಬರುತ್ತದೋ, ಎಲ್ಲಿ ಧರ್ಮಸ್ಥಳಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಕಡಿಮೆಯಾಗುತ್ತದೋ, ಜನರು ಬರದೇ ಹೋದರೆ ಈ ವ್ಯಾಪಾರಿಗಳ ವ್ಯವಹಾರಕ್ಕೆ ಸಂಚಕಾರ ಬರುತ್ತದೋ, ಗ್ರಾಮಸ್ಥರ ಆದಾಯ ಹಾಗೂ ಕೆಲಸಕ್ಕೆ ಧಕ್ಕೆ ಬರುತ್ತದೋ ಎನ್ನುವ ಆತಂಕ ಈ ದಾಳಿಕೋರರದ್ದಾಗಿದೆ. ಈ ಆತಂಕಗಳಿಗೆ ಪ್ರಚೋದನೆ ಕೊಡುತ್ತಿರುವ ಧರ್ಮಸ್ಥಳದ ಸೂತ್ರದಾರ ಮಂಡಳಿಯು ಸ್ವತಂತ್ರ ಮಾಧ್ಯಮದವರ ಮೇಲೆ ಈ ಆತಂಕ ಪೀಡಿತರನ್ನು ಛೂ ಬಿಟ್ಟಿದೆ. ಅದರ ಭಾಗವಾಗಿಯೇ ಈಗಿನ ದಾಳಿ ಪ್ರಾಯೋಜಿತಗೊಂಡಿದೆ.
ಹೀಗೆ ಇನ್ನಷ್ಟು ದಾಳಿಗಳನ್ನು ಮಾಡಿಸುವ ಮೂಲಕ, ಧರಣಿಗಳನ್ನು ಆಯೋಜಿಸುವ ಮೂಲಕ, ಸಮಾಧಿಯಿಂದ ಹೊರಬರಲು ಕಾಯುತ್ತಿರುವ ಸತ್ಯ ಸಂಗತಿಗಳನ್ನು ಮುಚ್ಚಿ ಹಾಕಲು ಶಡ್ಯಂತ್ರ ರಚಿತವಾಗಿದೆ. ಹೀಗೆ ಭಕ್ತಾದಿಗಳನ್ನು ದಾಳಿ ಧರಣಿಗೆ ಪ್ರಚೋದಿಸಿ ಎಸ್ಐಟಿ ತನಿಖಾಧಿಕಾರಿಗಳ ಮೇಲೆ ಒತ್ತಡ ತಂದು ಉತ್ಕನನ ಕಾರ್ಯವನ್ನು ಇಲ್ಲಿಗೆ ನಿಲ್ಲಿಸುವಂತೆ ಮಾಡುವುದು ಹಾಗೂ ರಾಜ್ಯ ಸರಕಾರದ ಆಳರಸರ ಮೇಲೆ ಭಕ್ತರ ಪ್ರತಿರೋಧದ ನೆಪದಲ್ಲಿ ಪ್ರಭಾವ ಬೀರಿ ಇಡೀ ತನಿಖಾ ವರದಿಯನ್ನೇ ಮರೆ ಮಾಚುವುದು ಸೂತ್ರದಾರನ ತಂತ್ರಗಾರಿಕೆಯಾಗಿದೆ.
ತನ್ನ ಕ್ಷೇತ್ರದಲ್ಲಿ ಇಷ್ಟೆಲ್ಲಾ ಅನಾಚಾರ ಅವಘಡಗಳು ಅವ್ಯಾಹತವಾಗಿ ನಡೆಯುತ್ತಿದ್ದರೂ, ನ್ಯಾಯ ನೀತಿ ಮೂರ್ತವೆತ್ತ ಸತ್ಯ ದೇವರು ಮೌನವಾಗಿದ್ದಾರೆ. ಪವಿತ್ರ ಕ್ಷೇತ್ರದ ಪಾವಿತ್ರ್ಯತೆ ಕಾಪಾಡಬೇಕಾದವರೇ ಅಪಸವ್ಯಗಳನ್ನು ಮರೆಮಾಚಿ ಅನಾಚಾರಿಗಳ ಬೆಂಬಲಕ್ಕೆ ಕಟಿಬದ್ಧವಾಗಿರುವಾಗ ಬೆಟ್ಟದ ಮೇಲಿನ ಅಣ್ಣಪ್ಪ ಸ್ವಾಮಿ ಕಲ್ಲಾಗಿ ನಿಂತಿದ್ದಾರೆ. ಸಮಾಧಿಯಾದ ಸತ್ಯಗಳು ಹೊರಬರಲು ಹಾತೊರೆಯುತ್ತಿವೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ-ಧರ್ಮಸ್ಥಳ ಹತ್ಯೆಗಳು: ಎಸ್ ಐಟಿಗೆ ಹೆಚ್ಚುವರಿ ಭದ್ರತೆ; ಘರ್ಷಣೆ ನಡೆಸದಂತೆ ಜಿಲ್ಲಾ ಎಸ್ ಪಿ ಎಚ್ಚರಿಕೆ