ಇಂದಿನ ಭಾರತದ ಒಟ್ಟು ವ್ಯವಸ್ಥೆ ಮತ್ತು ಜಾಗತಿಕ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ನಾವು ಖಂಡಿತವಾಗಲೂ ಜಾಗೃತ ಮನಸ್ಥಿತಿ ಹೊಂದಲೇ ಬೇಕಾಗುತ್ತದೆ. ಇಲ್ಲದಿದ್ದರೆ ಒಳಗಿನ ಮತ್ತು ಹೊರಗಿನ ಘರ್ಷಣೆಗೆ ಸಿಲುಕಿ, ಸಂವಿಧಾನದ ಬದಲಾವಣೆಗೆ ಪ್ರಯತ್ನಗಳಾಗಿ ಈ ದೇಶದ ಭಿನ್ನತೆಯಲ್ಲಿ ಐಕ್ಯತೆ ನಾಶವಾಗಿ ʼಏಕ್ ಭಾರತ್ ಶ್ರೇಷ್ಠ ಭಾರತ್ʼ ಎಂಬ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಬರುವುದು ನಿಶ್ಚಿತ- ವಿವೇಕಾನಂದ ಎಚ್ ಕೆ.
ಮನುಸ್ಮೃತಿ ಆಧಾರಿತ ಏಕ ಭಾರತ ಬೇಕೆ ಅಥವಾ ಸಂವಿಧಾನ ಆಧಾರಿತ ಬಹುತ್ವ ಭಾರತ ಬೇಕೆ ಎಂದು ಯೋಚಿಸುವ ಸರದಿ ನಮ್ಮದು. ಆ ಕಾಲಘಟ್ಟದಲ್ಲಿ ನಾವಿದ್ದೇವೆ.
ಮತ್ತೊಮ್ಮೆ ತನ್ನ ಅಘೋಷಿತ ಕಾರ್ಯಸೂಚಿಯನ್ನು ಬಯಲು ಗೊಳಿಸುವ ಮೂಲಕ ಆರ್. ಎಸ್. ಎಸ್. ಈ ಚರ್ಚೆಯನ್ನು ಮುನ್ನಲೆಗೆ ತಂದಿದೆ.
ಏಕೆಂದರೆ ಆರ್. ಎಸ್. ಎಸ್. ನ ಸಹ ಮುಖ್ಯ ಕಾರ್ಯವಾಹಕ ದತ್ತಾತ್ರೇಯ ಹೊಸ ಬಾಳೆಯವರು ಸಂವಿಧಾನದ ಮೂಲ ಆಶಯವನ್ನು ಪುನರ್ ಸ್ಥಾಪಿಸುವ ಸಲುವಾಗಿ, ಅದರ ಪೀಠಿಕೆಯಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ತಿದ್ದುಪಡಿ ಮಾಡಿ ಸೇರಿಸಲಾದ ಸಮಾಜವಾದ ಮತ್ತು ಜಾತ್ಯತೀತ ಎಂಬ ಪದಗಳನ್ನು ತೆಗೆಯುವ ಮೂಲಕ ಮತ್ತೆ ಪುನಾರಚಿಸಿ ಮೂಲ ಸಂವಿಧಾನ ಪೀಠಿಕೆ ಜಾರಿಗೊಳಿಸುವ ಮಾತುಗಳನ್ನು ಹೇಳಿದ್ದಾರೆ. ಇದನ್ನು ಆರ್ ಎಸ್ ಎಸ್ ನ ಮುಖವಾಣಿ ಆರ್ಗನೈಸರ್ ಸಹ ಸಮರ್ಥಿಸಿದೆ.
ಮೊದಲಿಗೆ ಆರ್ ಎಸ್ ಎಸ್ ಎಂಬ ರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆ ಸ್ಥಾಪನೆಗೊಂಡಿದ್ದೇ ಸನಾತನ ಧರ್ಮದ ಆಶಯಗಳನ್ನು ಜಾರಿಗೊಳಿಸುವ ಉದ್ದೇಶದಿಂದ. ಹಿಂದು ಜೀವನ ಶೈಲಿಯಲ್ಲಿರುವ ವರ್ಣಾಶ್ರಮ ವ್ಯವಸ್ಥೆ, ಬ್ರಾಹ್ಮಣ್ಯದ ಆಚರಣೆಗಳು, ಕೆಲ ಅಸಮಾನತೆ, ಕೆಲವು ಅನಾಗರಿಕ ನಡವಳಿಕೆಗಳನ್ನು ಅದು ಪರೋಕ್ಷವಾಗಿ ಈ ಕ್ಷಣಕ್ಕೂ ಬೆಂಬಲಿಸಿದೆ ಮತ್ತು ಪೋಷಿಸಿಕೊಂಡು ಬಂದಿದೆ. ಆದರೆ ಮೇಲ್ನೋಟಕ್ಕೆ ಆ ಎಲ್ಲಾ ಅಸಮಾನತೆಗಳನ್ನು ವಿರೋಧಿಸಿ ಪ್ರಗತಿಪರವಾಗಿ ಮಾತನಾಡುತ್ತದೆ. ಆದರೂ ಆಗಾಗ ಅದರ ಪ್ರಮುಖರು ಅದರ ನಿಜರೂಪ ಹೊರಗೆ ಹಾಕುತ್ತಾರೆ.
ಭಾರತದ ಮಣ್ಣಿನಲ್ಲಿ ನಿಜವಾಗಲೂ ಬೆರೆತಿರುವ ಸರ್ವಧರ್ಮ ಸಮನ್ವಯದ ವಿಶ್ವಮಾನವ ಸಂದೇಶಕ್ಕೆ ವಿರುದ್ಧವಾಗಿ ಸಂಕುಚಿತ ಮನೋಭಾವದ, ಶ್ರೇಷ್ಠತೆಯ ವ್ಯಸನದ ಆಚರಣೆಗಳ ಮೂಲಕ ಸಮಾಜದ ಮೇಲೆ, ವ್ಯಕ್ತಿಗಳ ಮೇಲೆ ತನ್ನ ಹಿಡಿತ ಸಾಧಿಸುವ ಉದ್ದೇಶವನ್ನು ಆರ್ ಎಸ್ ಎಸ್ ಹೊಂದಿರುವುದು ಬಹಿರಂಗ ಸತ್ಯ.
ಸ್ವಾತಂತ್ರ್ಯಾ ನಂತರ ಮುಖ್ಯವಾಗಿ 1950 ಜನವರಿ 26ರ ನಂತರ ಈ ದೇಶದಲ್ಲಿ ಜಾರಿಯಾದ ಡಾಕ್ಟರ್ ಬಾಬಾ ಸಾಹೇಬರೆಂಬ ಜಗತ್ತಿನ ಮಹಾನ್ ಮಾನವತಾವಾದಿ ಅಂಬೇಡ್ಕರ್ ನೇತೃತ್ವದ ಸಂವಿಧಾನ ಮನುಷ್ಯರನ್ನು ಮನುಷ್ಯರಂತೆ ಕಾಣುವ ” ಭಾರತೀಯತೆ ” ಎಂಬ ಅದ್ಭುತ ಸಮಾನತೆಯ ಪರಿಕಲ್ಪನೆಯನ್ನು ಸಂವಿಧಾನದ ಮೂಲಕ ಎಲ್ಲರಿಗೂ ಸಮಾನ ಸ್ವಾತಂತ್ರ್ಯ, ಹಕ್ಕು, ಕರ್ತವ್ಯಗಳನ್ನು ನೀಡಿದ ಮೇಲೆ ಆರ್ ಎಸ್ ಎಸ್ ಗೆ ಈ ಸಂವಿಧಾನವನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿತ್ತು. ಆದರೆ ಅದರ ಅಸಮಾಧಾನ ಮಾತ್ರ ಒಳಗೊಳಗೆ ಕುದಿಯುತ್ತಾ ಇದ್ದಿತು. ಎಷ್ಟೋ ವರ್ಷಗಳವರೆಗೆ ನಾಗಪುರದ ಆರ್ ಎಸ್ ಎಸ್ ಕಚೇರಿಯ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಸಹ ಅದು ಹಾರಿಸಲಿಲ್ಲ. ಭಾರತದ ರಾಷ್ಟ್ರಗೀತೆ, ಭಾರತದ ರಾಷ್ಟ್ರ ಧ್ವಜದ ಬಗ್ಗೆ ಅದರ ಅಸಹನೆಯ, ವಿರೋಧದ ನಿಲುವುಗಳು ಈಗಲೂ ಇದೆ. ಆದರೆ ದೇಶದ ಬಹುತೇಕ ಜನರ ಮನಸ್ಥಿತಿ ಅದಕ್ಕೆ ವಿರುದ್ಧವಾಗಿರುವುದರಿಂದ ತನ್ನ ಕಾರ್ಯ ಸೂಚಿಯನ್ನು ಅದು ಅಡಗಿಸಿಕೊಂಡಿದೆ ಮತ್ತು ಅಧಿಕಾರದ ಬಲದಿಂದ ಆ ಕಾರ್ಯ ಸೂಚಿಯನ್ನು ಜಾರಿಗೊಳಿಸುವ ಮಹತ್ವಾಕಾಂಕ್ಷೆಗಾಗಿ ಕಳೆದ ನೂರು ವರ್ಷಗಳಿಂದ ಕೆಲಸ ಮಾಡುತ್ತಿದೆ. ಇದೀಗ ಕೇಂದ್ರ ಸರ್ಕಾರದಲ್ಲಿ ಆರ್ ಎಸ್ ಎಸ್ ಬೆಂಬಲಿತ ಬಿಜೆಪಿಯೇ ಅಧಿಕಾರದಲ್ಲಿರುವುದರಿಂದ ಆ ಕಾರ್ಯ ಸೂಚಿಯ ಒಂದೊಂದೇ ಅಂಶಗಳು ಹೊರಗೆ ಬರುತ್ತಿವೆ.
ಎರಡನೆಯದಾಗಿ, ಸಮಾಜವಾದ ಮತ್ತು ಜಾತ್ಯತೀತ ಎಂಬ ಪದಗಳ ಅರ್ಥವನ್ನು ಸ್ಪಷ್ಟವಾಗಿ ತಿಳಿದುಕೊಳ್ಳುವ ಪ್ರಯತ್ನ ನಾವು ಮಾಡಬೇಕಿದೆ.
ಜಾತ್ಯತೀತ ಎಂಬ ಪದ ಒಂದು ಸೀಮಿತ ಅರ್ಥ ವ್ಯಾಪ್ತಿಯನ್ನು ಹೊಂದಿಲ್ಲ. ಅದೊಂದು ಸೃಷ್ಟಿಯ ಮೂಲಭೂತ ಜೀವಿಗಳಲ್ಲಿ ಒಬ್ಬನಾದ ಮನುಷ್ಯ ಪ್ರಾಣಿಯ ಸಮಾನತೆಯನ್ನು ಸ್ಪಷ್ಟವಾಗಿ ಸೂಚಿಸುವ ಪದ. ಅಂದರೆ ಭಾರತ ದೇಶದ ಎಲ್ಲಾ ಜನರು ಸಮಾನರು, ಜಾತಿ, ಭಾಷೆ, ಮತ, ವರ್ಗ, ಲಿಂಗ ಎಲ್ಲವನ್ನು ಮೀರಿ ಸಮಾನವಾಗಿ ಹಕ್ಕು ಮತ್ತು ಕರ್ತವ್ಯಗಳನ್ನು ಹೊಂದಿರುವ ಪ್ರಜೆಗಳು ಎಂಬಂತ ಅರ್ಥವನ್ನು ನೀಡುತ್ತದೆ. ಕೆಲವು ರಾಜಕೀಯ ಕಾರಣಗಳಿಗಾಗಿ ಜಾತ್ಯತೀತ ಪದದ ಅರ್ಥಗಳು ದುರುಪಯೋಗವಾಗಿರಬಹುದು, ಹಾಗೆಂದು ಜಾತ್ಯತೀತ ಎಂಬ ಪದಕ್ಕೆ ಸಮಾನತೆ ಎಂಬ ಪರ್ಯಾಯ ಅರ್ಥ ಹೊಂದಿರುವುದರಿಂದ ಅದನ್ನು ವಿರೋಧಿಸುವುದರಲ್ಲಿ ಯಾವುದೇ ಅರ್ಥವೂ ಇಲ್ಲ.
ಜಾತ್ಯತೀತ ಎಂಬುದು ಈ ನೆಲದ ಮೂಲಗುಣ. ಆದ್ದರಿಂದ ಆ ಪದದ ಬಗೆಗಿನ ವಿರೋಧವನ್ನು ಖಂಡಿತ ಒಪ್ಪಲಾಗದು. ಅದರ ದುರುಪಯೋಗದ ಬಗ್ಗೆ ಪ್ರಶ್ನೆಗಳಿದ್ದರೆ ಅದನ್ನು ಬಗೆಹರಿಸಿಕೊಳ್ಳುವ ಪ್ರಯತ್ನ ಮಾಡಬಹುದು.
ಹಾಗೆಯೇ ಸಮಾಜವಾದ ಸಾಮಾಜಿಕ ಸಾಮರಸ್ಯದ, ಸಾಮಾಜಿಕ ಸಮಾನತೆಯ ಮತ್ತೊಂದು ಪದ.
ಸಮಾಜವಾದ ಕಮ್ಯುನಿಸ್ಟ್ ಸಿದ್ಧಾಂತದ ಮೂಲ ಆಶಯದ ಉದಾರವಾದಿತನ. ಇದು ಬಹುತೇಕ ಆರ್ಥಿಕ ನೀತಿ ನಿರೂಪಣೆಗೆ ಸಂಬಂಧಿಸಿದ ಪರಿಕಲ್ಪನೆ. ಆದರೆ ಸಮಾಜವಾದ ಎಂಬುದು ಮತ್ತದೇ ಜಾತ್ಯತೀತ ಪದದಷ್ಟೇ ವಿಶಾಲ ಅರ್ಥವನ್ನು ಹೊಂದಿದೆ. ಸಮಾಜದಲ್ಲಿ ಎಲ್ಲರಿಗೂ ಸಮಾನವಾದ ಹಕ್ಕು, ಕರ್ತವ್ಯ, ಮೂಲಭೂತ ಅಗತ್ಯಗಳು ಎಲ್ಲವನ್ನು ಕ್ರಮಬದ್ಧಗೊಳಿಸುವ ಒಂದು ಆರ್ಥಿಕ ಮತ್ತು ಸಾಮಾಜಿಕ ಸಿದ್ಧಾಂತ. ಬಂಡವಾಳಶಾಹಿ ವ್ಯವಸ್ಥೆಯ ಶೋಷಣೆಯನ್ನು ನಿಯಂತ್ರಿಸಲು ಸಮಾಜವಾದ ಭಾರತ ದೇಶದ ಸಾಮಾಜಿಕ ವ್ಯವಸ್ಥೆಗೆ, ದೇಶದ ಸಮಗ್ರ ಆರ್ಥಿಕ ಅಭಿವೃದ್ಧಿಗೆ ಖಂಡಿತವಾಗಲೂ ಅವಶ್ಯವಿದೆ. ಆದರೆ ಎಂದಿನಂತೆ ಸಮಾಜವಾದ ಸಿದ್ಧಾಂತದಿಂದ ಏನಾದರೂ ಲೋಪಗಳಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬಹುದೇ ಹೊರತು ಸಮಾಜವಾದಿ ಎಂಬ ಪದವನ್ನು ಸಂವಿಧಾನದ ಪೀಠಿಕೆಯಿಂದ ತೆಗೆಯುವುದು ಭಾರತದ ಮೂಲ ಆಶಯಕ್ಕೆ ಖಂಡಿತ ವಿರುದ್ಧವಾಗಿದೆ.
ಮೂರನೆಯದಾಗಿ, ಸಂವಿಧಾನದ ಪೀಠಿಕೆಯ ಮೊದಲ ಸಾಲುಗಳು ಪ್ರಾರಂಭವಾಗುವುದು
“….. ಭಾರತೀಯರಾದ ನಾವು…….” ಎಂಬ ಭಾರತೀಯತೆಯ ಸಮಾನತೆಯನ್ನು ಸಾರುವ ಅದ್ಭುತ ನುಡಿಗಳು. ಅದು ನಾನು ಹಿಂದೂ, ನಾನು ಮುಸ್ಲಿಂ, ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಸಿಖ್, ನಾನು ಜೈನ, ನಾನು ಲಿಂಗಾಯತ ಇತ್ಯಾದಿ ಯಾವುದೇ ಧರ್ಮದ ಹೆಸರುಗಳನ್ನು ಉಲ್ಲೇಖಿಸುವುದಿಲ್ಲ. ಯಾವುದೇ ಜಾತಿಯ ಹೆಸರು, ಯಾವುದೇ ಸಿದ್ಧಾಂತದ ಪರವಾಗಿ ನಿಲ್ಲುವುದಿಲ್ಲ. ಯಾವುದೇ ಮೌಢ್ಯ ಅಥವಾ ಮೂಲಭೂತವಾದವನ್ನು ಪೋಷಿಸುವುದಿಲ್ಲ. ಮಾನವ ಸಮಾನತೆಯ ವೈಚಾರಿಕ ಮನೋಭಾವದ ಬಗ್ಗೆ ಇಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
ಈಗ ಆ ಪದಗಳನ್ನು ಗುರಿ ಮಾಡಿರುವ ಉದ್ದೇಶ ಮತ್ತೆ ತನ್ನ ಅಘೋಷಿತ ಮನುವಾದ ಅಥವಾ ಸನಾತನ ಧರ್ಮದ ಅಸಮಾನತೆಯ ಅಂಶಗಳನ್ನು ಈ ದೇಶದ ಮೇಲೆ ಹೇರುವ ಹುನ್ನಾರವಾಗಿದೆ. ಅದಕ್ಕಾಗಿ ವಿತಂಡವಾದವನ್ನು ಮಂಡಿಸಲಾಗುತ್ತಿದೆ.
ನಾಲ್ಕನೆಯದಾಗಿ, ಆರ್ ಎಸ್ ಎಸ್ ನ ತಂತ್ರಗಾರಿಕೆ ಈ ನಿಟ್ಟಿನಲ್ಲಿ ಬಟಾ ಬಯಲಾಗಿದೆ. ಈಗ ದೇಶ ಸಂವಿಧಾನದ ಪಥದಲ್ಲಿ ಚಲಿಸುತ್ತಿರುವಾಗ ಅದನ್ನು ದುರ್ಬಲಗೊಳಿಸುವ, ವಿಭಜನಾತ್ಮಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ, ತನ್ನ ಕಾರ್ಯ ಸೂಚಿಯನ್ನು ಜಾರಿಗೊಳಿಸುವ ಮುಂದುವರಿದ ಭಾಗವಾಗಿ ಈ ರೀತಿಯ ಕೆಲವು ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿಯೇ ನೀಡುವುದು, ಅದರ ಸಾರ್ವಜನಿಕ ಪ್ರತಿಕ್ರಿಯೆಗಳನ್ನು ಗಮನಿಸುವುದು ಮತ್ತು ಪ್ರತಿಭಟನೆ ಅಥವಾ ವಿರೋಧಗಳನ್ನು ದುರ್ಬಲಗೊಳಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಮಾಡುವುದು ಆರ್ ಎಸ್ ಎಸ್ ಹಿಂದಿನಿಂದಲೂ ಮಾಡಿಕೊಂಡು ಬಂದಿರುವ ಬಹುದೊಡ್ಡ ತಂತ್ರಗಾರಿಕೆಗಳು. ಅದರ ಎಲ್ಲಾ ಕಾರ್ಯ ಚಟುವಟಿಕೆಗಳು ಬಹುತೇಕ ಇದೇ ರೀತಿಯಲ್ಲಿರುತ್ತದೆ ಅಥವಾ ಅದನ್ನು ದುರುಪಯೋಗಪಡಿಸಿಕೊಂಡು ಜನರಲ್ಲಿ ಮತೀಯವಾದವನ್ನು ಹುಟ್ಟು ಹಾಕುವ ಮೂಲಕ ಉದ್ರೇಕಕಾರಿ ಭಾವನೆಯನ್ನು ಉಂಟು ಮಾಡಿ, ತದನಂತರ ತನ್ನ ಕಾರ್ಯ ಸೂಚಿಯನ್ನು ಅನುಷ್ಠಾನಗೊಳಿಸುವ ವಿಧಾನ ಖಂಡಿತವಾಗಲೂ ಅಪಾಯಕಾರಿಯಾದದ್ದು. ಅದು ಸದಾಕಾಲವೂ ಇದನ್ನೇ ಮಾಡುತ್ತಿದೆ. ಆ ಕಾರಣದಿಂದ ಇದನ್ನು ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ವಿರೋಧಿಸಬೇಕಿದೆ.
ಕೊನೆಯದಾಗಿ, ಈಗ ಇಡೀ ದೇಶದಲ್ಲಿ ಕೊಳ್ಳುಬಾಕ ಮನೋಭಾವದ ” ಗ್ರಾಹಕ ಸಂಸ್ಕೃತಿ ” ಎಲ್ಲ ಕಡೆಯೂ ಬೇರೂರುತ್ತಿದೆ. ಇಲ್ಲಿನ ಮೂಲ ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿ ಹಣ ಕೇಂದ್ರೀಕೃತ, ವೇಗ ಮತ್ತು ಸ್ಪರ್ಧಾತ್ಮಕ ಜಗತ್ತು ಜನರ ಯೋಚನಾ ಶಕ್ತಿಯನ್ನೇ ನಿರ್ವೀರ್ಯಗೊಳಿಸುತ್ತಿದೆ. ಈ ಹಂತದಲ್ಲಿ ಎಂದಿನಂತೆ ಅದೇ ಪುರೋಹಿತಶಾಹಿ ವರ್ಗ ಬೇರೆ ರೂಪದಲ್ಲಿ ಸಮಾಜದ ಮೇಲೆ ತನ್ನ ನಿಯಂತ್ರಣವನ್ನು ಹೇರಿ ಅಸಮಾನ ಸಮಾಜಕ್ಕೆ ಮುನ್ನುಡಿ ಬರೆಯುವ ಕೆಲಸವನ್ನು ಒಳಗೊಳಗೆ ಮಾಡುತ್ತಿದೆ. ಇದನ್ನು ಗ್ರಹಿಸುವ ಸೂಕ್ಷ್ಮ ಮನಸ್ಥಿತಿಯನ್ನು ಸಾಮಾನ್ಯ ಜನರಲ್ಲಿ ನಾಶ ಮಾಡಲಾಗಿದೆ ಅಥವಾ ಕಿತ್ತುಕೊಂಡಿದೆ. ಇಂದು ಹೊಸ ಮಧ್ಯಮ ವರ್ಗ ತನ್ನ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳಲೇ ತನ್ನೆಲ್ಲ ಶ್ರಮ ಮತ್ತು ಸಮಯವನ್ನು ವಿನಯೋಗಿಸುವ ಜೀವನ ಶೈಲಿಯನ್ನು ಒತ್ತಾಯಪೂರ್ವಕವಾಗಿ ಆರಿಸಿಕೊಂಡಿದೆ. ಅದರಲ್ಲೇ ಅವರು ಮುಳುಗಿ ಹೋಗಿರುವಾಗ ಈ ರೀತಿಯ ಕೆಲವು ಆಘಾತಕಾರಿ, ಮಾನವ ದ್ರೋಹಿ, ಸಮಾಜ ದ್ರೋಹಿ, ಸಂವಿಧಾನ ದ್ರೋಹಿ ಕೆಲಸಗಳನ್ನು ಮಾಡಲು ಪ್ರಚೋದಿಸುತ್ತಿದೆ. ಇದು ಖಂಡಿತ ಸ್ವೀಕಾರಾರ್ಹವಲ್ಲ.
ಇಂದಿನ ಭಾರತದ ಒಟ್ಟು ವ್ಯವಸ್ಥೆ ಮತ್ತು ಜಾಗತಿಕ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ನಾವು ಖಂಡಿತವಾಗಲೂ ಜಾಗೃತ ಮನಸ್ಥಿತಿ ಹೊಂದಲೇ ಬೇಕಾಗುತ್ತದೆ. ಇಲ್ಲದಿದ್ದರೆ ಒಳಗಿನ ಮತ್ತು ಹೊರಗಿನ ಘರ್ಷಣೆಗೆ ಸಿಲುಕಿ, ಸಂವಿಧಾನದ ಬದಲಾವಣೆಗೆ ಪ್ರಯತ್ನಗಳಾಗಿ ಈ ದೇಶದ ಭಿನ್ನತೆಯಲ್ಲಿ ಐಕ್ಯತೆ ನಾಶವಾಗಿ ಏಕ್ ಭಾರತ್ ಶ್ರೇಷ್ಠ ಭಾರತ ಎಂಬ ಕೇಂದ್ರೀಕೃತ ವ್ಯವಸ್ಥೆ ಜಾರಿಗೆ ಬರುವುದು ನಿಶ್ಚಿತ.
ಆದರೆ ಈ ನೆಲದ ಮೂಲ ಸೈದ್ಧಾಂತಿಕ ನಿಲುವೆಂದರೆ ” ಬಹುತ್ವ ಭಾರತ ಬಲಿಷ್ಠ ಭಾರತ “. ಅದಕ್ಕೆ ವಿರುದ್ಧವಾದ ಎಲ್ಲವನ್ನು ಸಂವಿಧಾನದ ಅಡಿಯಲ್ಲಿ ವಿರೋಧಿಸೋಣ. ಸಂವಿಧಾನದ ಮಹತ್ವವನ್ನು, ಸಮಾನತೆ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯೋಣ.
ಒಂದು ವೇಳೆ, ಕಾಂಗ್ರೆಸ್ ಮುಸ್ಲಿಂ ತುಷ್ಟೀಕರಣಕ್ಕೆ ಪರ್ಯಾಯವಾಗಿ ಅಥವಾ ಕೆಲವು ಮುಸ್ಲಿಂ ಮೂಲಭೂತವಾದಿಗಳ ಇಸ್ಲಾಮೀಕರಣಕ್ಕೆ ಪರ್ಯಾಯವಾಗಿ ಕೇಸರಿಕರಣ ಉತ್ತರವಲ್ಲ. ಅದಕ್ಕೆ ಭಾರತೀಯತೆ ಎಂಬ ಸಂವಿಧಾನದ ಪೀಠಿಕೆಯೇ ಉತ್ತರವಾಗಬೇಕು. ಆ ನಿಟ್ಟಿನಲ್ಲಿ ಆರ್ ಎಸ್ ಎಸ್ ಕೂಡ ಚಿಂತಿಸುವಂತಾಗಲಿ, ಕಾರ್ಯೋನ್ಮುಖವಾಗಲಿ ಎಂದು ಆಶಿಸೋಣ.
(ಮನಸ್ಸುಗಳ ಅಂತರಂಗದ ಚಳವಳಿ)
ವಿವೇಕಾನಂದ. ಎಚ್. ಕೆ.
ಬರಹಗಾರರು ಹಾಗೂ ಪತ್ರಕರ್ತರು
ಇದನ್ನೂ ಓದಿ-ಬೌದ್ಧರ ಜೀವನ ಕ್ರಮ- ಪರಿಯೆತ್ತಿ ಪಟಿಪತ್ತಿ ಪಟಿವೇದ