ಬೆಂಗಳೂರು: ಬಾಲ್ಯ ವಿವಾಹಗಳನ್ನು ನಡೆಸಲು ಪ್ರಯತ್ನಿಸುವ, ಸಿದ್ಧತೆ ಕೈಗೊಳ್ಳುವ ಅಥವಾ ಅಪ್ರಾಪ್ತ ವಯಸ್ಸಿನ ಬಾಲಕ- ಬಾಲಕಿ ನಡುವೆ ಮದುವೆ ಮಾಡುವ ಉದ್ದೇಶದಿಂದ ನಿಶ್ಚಿತಾರ್ಥ ಮಾಡುವವರ ವಿರುದ್ಧವೂ ಕ್ರಮ ತೆಗೆದುಕೊಳ್ಳುವ ಉದ್ದೇಶದಿಂದ ‘ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ– 2025’ ಅನ್ನು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
ಬಾಲ್ಯ ವಿವಾಹಗಳನ್ನು ಮಾಡಲು ಯತ್ನಿಸಿದರೆ, ಸಿದ್ಧತೆ ನಡೆಸಿದರೆ ಅಥವಾ ಚಿಕ್ಕ ವಯಸ್ಸಿನ ಬಾಲಕ ಬಾಲಕಿಯರಿಗೆ ನಿಶ್ಚಿತಾರ್ಥ ಮಾಡಿದರೆ 2 ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಅಥವಾ ರೂ.1 ಲಕ್ಷದವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಪ್ರಸ್ತಾವ ತಿದ್ದುಪಡಿ ಮಸೂದೆಯಲ್ಲಿದೆ.
ಬಾಲ್ಯ ವಿವಾಹ ಈಗಾಗಲೇ ಶಿಕ್ಷಾರ್ಹ ಅಪರಾಧವಾಗಿದೆ. ಇದಕ್ಕೆ ಕಾರಣರಾಗುವ ಪೋಷಕರು ಮತ್ತು ಸಂಸ್ಥೆಯವರಿಗೆ 2 ವರ್ಷ ಸೆರೆಮನೆ ಮತ್ತು ರೂ.1 ಲಕ್ಷ ದಂಡ ವಿಧಿಸುವ ಅವಕಾಶ ಈಗಾಗಲೇ ಜಾರಿಯಲ್ಲಿರುವ ‘ಬಾಲ್ಯ ವಿವಾಹ ನಿಷೇಧ ಕಾಯ್ದೆ –2006’ ರಲ್ಲಿದೆ. ಈ ಕಾಯ್ದೆಯ ಪ್ರಕಾರ, ವಿವಾಹವಾಗಲು ಹುಡುಗನಿಗೆ ಕನಿಷ್ಠ 21, ಹುಡುಗಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಬಾಲ್ಯ ವಿವಾಹ ಪ್ರಕರಣ ವರದಿಯಾದ ಬಳಿಕ ಈ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ.
ಆದರೆ, ಕೆಲವು ಸಮುದಾಯಗಳಲ್ಲಿ ಬಾಲ್ಯ ವಿವಾಹ ನೆರವೇರಿಸುವ ಉದ್ದೇಶದಿಂದ ‘ಒಪ್ಪಂದ’ ಅಥವಾ ನಿಶ್ಚಿತಾರ್ಥ ಮಾಡಿಕೊಳ್ಳುವ ಪದ್ಧತಿ ಜಾರಿಯಲ್ಲಿದೆ.
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಜತೆ ನಡೆಸಿದ ಸಭೆಯಲ್ಲಿ ಬಾಲ್ಯ ವಿವಾಹಗಳನ್ನು ತಡೆಗಟ್ಟುವ ಕುರಿತು ಚರ್ಚೆ ನಡೆಸಿದ್ದರು. ಬಾಲ್ಯ ವಿವಾಹ ನಡೆಯುವ ಹಂತವಷ್ಟೇ ಅಲ್ಲದೆ, ಅದರ ಸಿದ್ಧತೆಯ ಹಂತಗಳನ್ನೂ ತಡೆಯುವ ಗುರಿಯನ್ನು ಈ ಮಸೂದೆ ಹೊಂದಿದೆ. ಅಲ್ಲದೆ, ಚಿಕ್ಕ ಮಕ್ಕಳ ವಿವಾಹ ಸಿದ್ಧತೆ ಅಥವಾ ನಿಶ್ಚಿತಾರ್ಥದಲ್ಲಿ ತೊಡಗಿರುವವರನ್ನೂ ಶಿಕ್ಷೆಗೆ ಒಳಪಡಿಸುವ ಜೊತೆಗೆ, ಅಂತಹ ನಿಶ್ಚಿತಾರ್ಥಗಳನ್ನು ಅನೂರ್ಜಿತವೆಂದು ಘೋಷಿಸಲು ಮತ್ತು ಅಂತಹ ನಿಶ್ಚಿತಾರ್ಥಗಳಿಗೆ ನ್ಯಾಯಾಲಯಗಳು ತಡೆಯಾಜ್ಞೆ ಹೊರಡಿಸುವ ಆದೇಶ ನೀಡುವ ಅಧಿಕಾರವನ್ನು ಈ ಮಸೂದೆ ಕಲ್ಪಿಸಲಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಮೂಲಗಳು ತಿಳಿಸಿವೆ.