ದೇಶದ ಜನತೆಗೆ ನೀಡಿದ್ದ ಭರವಸೆ ಈಡೇರಿಸಲು ಮೋದಿ ಸಂಪೂರ್ಣ ವಿಫಲ: ಶಿವಸೇನಾ ನಾಯಕಿ ಪ್ರಿಯಾಂಕಾ ಚತುರ್ವೇದಿ ಟೀಕೆ

Most read

ದೆಹಲಿ: ಕಳೆದ ಹತ್ತು ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ನೀಡಿದ ಭರವಸೆಗಳು ಹುಸಿಯಾಗಿವೆ. ದೇಶದಲ್ಲಿ ಬಂಡವಾಳಶಾಹಿಗಳ ಪರವಾಗಿ ಕೆಲಸಗಳು ನಡೆಯುತ್ತಿವೆ. ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಿದ್ದಾರೆ. ಬಡವರು ಮತ್ತಷ್ಟು ಬಡತನಕ್ಕೆ ದೂಡಲ್ಪಡುತ್ತಿದ್ದಾರೆ ಎಂದು ಶಿವಸೇನಾ (ಉದ್ಧವ ಠಾಕ್ರೆ ಬಣ)ದ ನಾಯಕಿ ಪ್ರಿಯಾಂಕಾ ಚತುರ್ವೇದಿ ಟೀಕಿಸಿದ್ದಾರೆ.

ಇಂದಿನಿಂದ ಆರಂಭವಾಗಿರುವ ಕೇಂದ್ರ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿಗಳ ಭಾಷಣದ ಕುರಿತು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ರಾಷ್ಟ್ರಪತಿಗಳು ಸರಕಾರದ ಸೌಲಭ್ಯಗಳ ಕುರಿತು ಮಾತನಾಡಿದ್ದಾರೆ. ಸರಕಾರಿ ಸೌಲಭ್ಯಗಳ ಪ್ರಮುಖ ಅಂಶಗಳನ್ನು ತಿಳಿಸುತ್ತಿದ್ದಾರೆ. ಆದರೆ, ಪ್ರಧಾನಿಗಳು ಕಳೆದ 10 ವರ್ಷಗಳ ಹಿಂದೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ದೇಶದ ಜನತೆಗೆ ನೀಡಿದ ಭರವಸೆಗಳನ್ನು ಜಾರಿಗೊಳಿಸುವಲ್ಲಿ ಸೋತಿದ್ದಾರೆ. ಆ ಸಂದರ್ಭದಲ್ಲಿ ಪ್ರಧಾನಿಯವರು ಬ್ರಷ್ಟಾಚಾರದ ವಿರುದ್ಧ ಕೆಲಸ ಮಾಡುವುದಾಗಿ ಹೇಳಿದ್ದರು. ಆದರೆ ನಾವಿಂದು ಬ್ರಷ್ಟಾಚಾರಿಗಳು ಹೇಗೆ ದೇಶ ಬಿಟ್ಟು ವಿದೇಶಕ್ಕೆ ಓಡಿ ಹೋಗುತ್ತಾರೆ ಎಂಬುದನ್ನು ನೋಡುತ್ತಿದ್ದೇವೆ. ಬ್ರಷ್ಟಾಚಾರದಲ್ಲಿ ತೊಡಗಿರುವ ದೇಶದ ಬಂಡವಾಳಶಾಹಿಗಳು ಜಗತ್ತಿನ ಅತ್ಯಂತ ಶ್ರೀಮಂತರಾಗುತ್ತಿದ್ದಾರೆ.

ಆ ಸಂದರ್ಭದಲ್ಲಿ ಮೋದಿಯವರು ರೈತರ ಆದಾಯ ದ್ವಿಗುಣಗೊಳ್ಳುತ್ತದೆ ಎಂದು ಹೇಳಿದ್ದರು. ಆದರೆ ಇಂದು ರಾಷ್ಟ್ರಪತಿಗಳು ರೈತರ ಆದಾಯ ಏಕೆ ದ್ವಿಗುಣಗೊಳ್ಳಲಿಲ್ಲ ಎನ್ನುವ ಕುರಿತು ಮಾತನಾಡಲೇ ಇಲ್ಲ. ನಿರುದ್ಯೋಗಿ ಯುವ ಜನತೆ ಉದ್ಯೋಗ ಸೃಷ್ಟಿಗೆ ಬೇಡಿಕೆ ಇಡುತ್ತಿದ್ದಾರೆ. ಆದರೆ ಉದ್ಯೋಗ ಸೃಷ್ಟಿಸುವ ಮಾಧ್ಯಮವನ್ನೇ ಇವರು ಸಂಪೂರ್ಣ ನಾಶಮಾಡಿದ್ದಾರೆ. ಬೆಲೆಏರಿಕೆಯ ಹೊಡೆತ ಜನಸಾಮಾನ್ಯರ ಮೇಲೆ ಬಿದ್ದಿದೆ. ಈ ಯಾವ ಪ್ರಶ್ನೆಗಳ ಬಗ್ಗೆಯೂ ಇಲ್ಲಿ ಮಾತನಾಡುತ್ತಿಲ್ಲ. ಕೇವಲ ಬಂಡವಾಳಶಾಹಿಗಳ ಪರವಾಗಿ ಕೆಲಸಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

More articles

Latest article