ತಾರಕಕ್ಕೇರಿದ ಇರಾನ್ –ಇಸ್ರೇಲ್ ಯುದ್ಧ; ಇರಾನ್‌ ಚಾನೆಲ್ ಮೇಲೆ ದಾಳಿ‌, ಫೈಟರ್ ಜೆಟ್‌ ಧ್ವಂಸ

Most read

ಟೆಹರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷವು ತಾರಕಕ್ಕೇರಿದೆ. ಸತತ ಐದನೆಯ ದಿನವೂ ಉಭಯ ರಾಷ್ಟ್ರಗಳ ನಡುವನ ಕದನ ಉಲ್ಬಣಿಸುತ್ತಿದೆ. ಇಂದು ಇಸ್ರೇಲ್ ಇರಾನ್‌ನ ಪ್ರಮುಖ 2 ಫೈಟರ್ ಜೆಟ್‌ ಗಳನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ.

ಟೆಹರಾನ್‌ ವಿಮಾನ ನಿಲ್ದಾಣದಲ್ಲಿದ್ದ ಅಮೆರಿಕಾ ನಿರ್ಮಿತ ಎಫ್-14 ಯುದ್ಧ ವಿಮಾನಗಳು ಇಸ್ರೇಲ್ ನಡೆಸಿದ ದಾಳಿಗೆ ಛಿದ್ರ ಛಿದ್ರವಾಗಿದೆ. ಅಲ್ಲದೇ ಡ್ರೋಣ್‌ ಗಳನ್ನು ಹಾರಿಸಲು ಸಜ್ಜಾಗಿದ್ದ ಇರಾನಿನ ಸೈನಿಕರ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇದೆ.

ಇರಾನ್ ರಾಷ್ಟ್ರದ ಮೇಲೆ ಇಸ್ರೇಲ್ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದು, ಟೆಹರಾನ್‌  ವಾಯುಪ್ರದೇಶವನ್ನು ವಶಕ್ಕೆ ಪಡೆಯಲು ಪ್ರಯತ್ನಿಸುತ್ತಿದೆ. ಇರಾನ್‌ ನ ಕನಿಷ್ಠ100 ಸ್ಥಳಗಳನ್ನ ಗುರಿಯಾಗಿಸಿ ಇಸ್ರೇಲ್ ವಾಯು ದಾಳಿ ನಡೆಸುತ್ತಿದ್ದು, ಈಗಾಗಲೇ ಇಸ್ರೇಲ್ 120ಕ್ಕೂ ಹೆಚ್ಚು ಇರಾನ್ ಕ್ಷಿಪಣಿಗಳನ್ನು ನಾಶಪಡಿಸಿದೆ ಎಂದು ವರದಿಯಾಗಿದೆ. 

ಇಸ್ರೇಲ್, ಇರಾನ್ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಇರಾನ್‌ನ ವಿಶ್ವದ ಅತಿದೊಡ್ಡ ಅನಿಲ ಸಂಗ್ರಹಾಗಾರದ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇಸ್ರೇಲ್ ದಾಳಿಗೆ ಈವರೆಗೆ 200ಕ್ಕೂ ಹೆಚ್ಚು ಇರಾನ್ ನಾಗರಿಕರು ಅಸು ನೀಗಿದ್ದಾರೆ.

ಕಳೆದ ರಾತ್ರಿ ಟೆಹರಾನ್‌ನಲ್ಲಿ ನಾಗರಿಕರ ಸ್ಥಳಾಂತರಕ್ಕೆ ಎಚ್ಚರಿಕೆ ನೀಡಿತ್ತು. ಇದರ ಬೆನ್ನಲ್ಲೇ ಇಸ್ರೇಲ್‌, ಇರಾನ್‌ ನ ರಾಷ್ಟ್ರೀಯ ಸುದ್ದಿವಾಹಿನಿ ಇಸ್ಲಾಮಿಕ್‌ ರಿಪಬ್ಲಿಕ್‌ ಆಫ್‌ ಇರಾನ್‌ ನ್ಯೂಸ್‌ ನೆಟ್‌ವರ್ಕ್‌ ಕಚೇರಿ ಮೇಲೆ ದಾಳಿ ನಡೆಸಿದೆ.

ಇರಾನ್‌– ಇಸ್ರೇಲ್‌  ಯುದ್ಧ ಕುರಿತು ನೇರಪ್ರಸಾರ ಮಾಡುತ್ತಿರುವಾಗಲೇ ಸುದ್ದಿವಾಹಿನಿ ಕಚೇರಿ ಬಳಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದೆ. ನೇರಪ್ರಸಾರದ ಮಧ್ಯೆಯೇ ವಾಹಿನಿಯ ಸ್ಟುಡಿಯೊ ಕಟ್ಟಡದ ಅವಶೇಷಗಳು ಮತ್ತು ದೂಳಿನಿಂದ ಆವೃತವಾಗಿತ್ತು. 

ಚಾನೆಲ್‌ ನ ನಿರೂ‍ಪಕರು ಆತಂಕದಿಂದಲೇ ಸ್ಟುಡಿಯೋದಿಂದ ಎದ್ದು ಹೋಗಿದ್ದಾರೆ. ಕ್ಯಾಮೆರಾಮೆನ್‌ ಗಳು ಕೂಡಲೇ ಕ್ಯಾಮೆರಾಗಳನ್ನು ಬಂದ್‌ ಮಾಡಿದ್ದಾರೆ. ಅಲ್ಲಿನ ಸಿಬ್ಬಂದಿ ‘ಅಲ್ಲಾಹು ಅಕ್ಬರ್‌’ ಎಂದು ಪ್ರಾರ್ಥಿಸುತ್ತಿರುವ ಧ್ವನಿ ಕೇಳಿ ಬಂದಿದೆ.

More articles

Latest article