ನವದೆಹಲಿ: ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಡೆಸುವ ನೀಟ್ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ರಾಜಸ್ಥಾನದ ಮಹೇಶ್ ಕುಮಾರ್ ಮೊದಲ ರ್ಯಾಂಕ್ ಗಳಿಸಿದ್ದರೆ, ಮಧ್ಯಪ್ರದೇಶದ ಉತ್ಕರ್ಷ ಅವಾಧಿಯಾ 2ನೇ ರ್ಯಾಂಕ್ ಪಡೆದಿದ್ದಾರೆ. ಮಹಾರಾಷ್ಟ್ರದ ಕೃಷಾಂಗ್ ಜೋಶಿ, ದೆಹಲಿಯ ಮೃಣಾಲ್ ಕಿಶೋರ್ ಜಾ ಕ್ರಮವಾಗಿ 3 ಹಾಗೂ 4ನೇ ರ್ಯಾಂಕ್ ಪಡೆದಿದ್ದಾರೆ. ಬಾಲಕಿಯರ ಪೈಕಿ ದೆಹಲಿಯ ಅವಿಕಾ ಅಗರವಾಲ್ ಟಾಪರ್ ಆಗಿದ್ದಾರೆ. ಇವರು ರಾಷ್ಟ್ರಮಟ್ಟದಲ್ಲಿ 5ನೇ ರ್ಯಾಂಕ್ ಪಡೆದಿದ್ದಾರೆ.
ಈ ವರ್ಷ 22.09 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆದಿದ್ದರು. ಇವರಲ್ಲಿ 12.36 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದುಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಈ ವರ್ಷ ಕಡಿಮೆ ಫಲಿತಾಂಶ ದಾಖಲಾಗಿದೆ. ಕಳೆದ ವರ್ಷ 23.33 ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿ 13.15 ಲಕ್ಷ ಅಭ್ಯರ್ಥಿಗಳು ಅರ್ಹರಾಗಿದ್ದರು.
ನೀಟ್ ಪರೀಕ್ಷೆಯಲ್ಲಿ ಉತ್ತರ ಪ್ರದೇಶದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ (1.70 ಲಕ್ಷ) ಅರ್ಹತೆ ಪಡೆದಿದ್ದಾರೆ. ಮಹಾರಾಷ್ಟ್ರದ 1.25 ಲಕ್ಷ ಮತ್ತು ರಾಜಸ್ಥಾನದ 1.19 ಲಕ್ಷ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ಗಳಿಗೆ ಅರ್ಹರಾಗಿದ್ದಾರೆ.
ದೇಶದಲ್ಲಿ ಒಟ್ಟು 1.08 ಲಕ್ಷ ವೈದ್ಯಕೀಯ ಸೀಟುಗಳಿವೆ. ಇದರಲ್ಲಿ 56 ಸಾವಿರ ಸರ್ಕಾರಿ ಮತ್ತು 52 ಸಾವಿರ ಖಾಸಗಿ ಕಾಲೇಜುಗಳಲ್ಲಿ ಸೀಟುಗಳು ಲಭ್ಯ. ಇದರೊಂದಿಗೆ ದಂತ ವೈದ್ಯಕೀಯ, ಆಯುರ್ವೇದ, ಉನಾನಿ, ಸಿದ್ಧ ಕೋರ್ಸ್ಗಳನ್ನು ಸೇರಲು ನೀಟ್ ಪರೀಕ್ಷೆ ಪಾಸಾಗಿ ಅರ್ಹತೆ ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ.