ನವದೆಹಲಿ: ಗುಜರಾತ್ ನ ಅಹಮದಾಬಾದ್ನಲ್ಲಿ ಸಂಭವಿಸಿದ ಭೀಕರ ವಿಮಾನ ದುರಂತದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ‘171’ ಸಂಖ್ಯೆಯನ್ನು ಬಳಸದಿರಲು ನಿರ್ಧರಿಸಿವೆ ಎಂದು ವಿಮಾನಯಾನ ಇಲಾಖೆ ಮೂಲಗಳು ತಿಳಿಸಿವೆ.
ಗಂಭೀರ ಅಪಘಾತಗಳು ನಡೆದ ಸಂದರ್ಭದಲ್ಲಿ ವಿಮಾನಯಾನ ಸಂಸ್ಥೆಗಳು ನಿರ್ದಿಷ್ಟ ಸಂಖ್ಯೆಗಳನ್ನು ಬಳಸುವುದನ್ನು ನಿಲ್ಲಿಸುವುದು ವಾಡಿಕೆಯಾಗಿದೆ. ಹಾಗಾಗಿ, ಇದೇ 17ರಿಂದ ಅಹಮದಾಬಾದ್ನಿಂದ ಲಂಡನ್ಗೆ ಹೊರಡುವ ವಿಮಾನ ಸಂಖ್ಯೆಯನ್ನು ‘AI 171’ ಬದಲಿಗೆ ‘AI 159’ ಆಗಿ ಬದಲಾಯಿಸಲಾಗಿದೆ. ಬುಕಿಂಗ್ ವ್ಯವಸ್ಥೆಯಲ್ಲೂ ಅಗತ್ಯ ಬದಲಾವಣೆಗಳನ್ನು ಮಾಡಲಾಗಿದೆ. ʼ171’ ವಿಮಾನ ಸಂಖ್ಯೆಯನ್ನು ರದ್ದುಪಡಿಸುವುದು ಅಗಲಿದ ಆತ್ಮಗಳಿಗೆ ಗೌರವ ಸಲ್ಲಿಸುವ ಸಂಕೇತವಾಗಿದೆ ಎಂದು ಮೂಲಗಳು ಖಚಿತಪಡಿಸಿವೆ.
2020ರ ಆಗಸ್ಟ್ 7ರಂದು ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಳೆಯಿಂದ ಒದ್ದೆಯಾಗಿದ್ದ ರನ್ ವೇಯಿಂದ ಜಾರಿ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನ 1344 ಕಂದಕಕ್ಕೆ ಬಿದ್ದಿತ್ತು. ಈ ವಿಮಾನದಲ್ಲಿದ್ದ 190 ಮಂದಿ ಪ್ರಯಾಣಿಕರ ಪೈಕಿ ಇಬ್ಬರು ಪೈಲಟ್ಗಳು ಸೇರಿ 21 ಮಂದಿ ಮೃತಪಟ್ಟಿದ್ದರು. ಈ ದುರಂತದ ಬೆನ್ನಲ್ಲೇ ಏರ್ ಇಂಡಿಯಾ ಎಕ್ಸ್ಪ್ರೆಸ್ ‘1344’ ಸಂಖ್ಯೆಯನ್ನು ಬಳಸುವುದನ್ನು ನಿಲ್ಲಿಸಿತ್ತು.
ಕಳೆದ ಗುರುವಾರ ಮಧ್ಯಾಹ್ನ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ಗೆ ಹೊರಟಿದ್ದ ಬೋಯಿಂಗ್ 787 ಡ್ರೀಮ್ ಲೈನರ್ (ಏರ್ ಇಂಡಿಯಾ 171) ವಿಮಾನವು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು, ಗುಜರಾತ್ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸೇರಿದಂತೆ ಕನಿಷ್ಠ 270 ಮಂದಿ ಮೃತಪಟ್ಟಿದ್ದರು.