ಕದನ ವಿರಾಮಕ್ಕೆ ತಾನೇ ಕಾರಣ ಎಂದು ಹೇಳುತ್ತಿದ್ದರೂ ಪ್ರಧಾನಿ ಮೌನ ತಾಳಿರುವುದೇಕೆ?: ಕಾಂಗ್ರೆಸ್‌ ಪ್ರಶ್ನೆ

Most read

ನವದೆಹಲಿ:ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರ ವಹಿವಾಟಿನ ಭರವಸೆಯ ಮೂಲಕ ತಾನೇ ಬಗೆಹರಿಸಿದ್ದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಿದ್ದರೂ ಪ್ರಧಾನಿ ಮೋದಿ ಈ ವಿಷಯ ಕುರಿತು ಚಕಾರ ಎತ್ತುತ್ತಿಲ್ಲವೇಕೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಭಾರತ ಪಾಕ್‌ ನಡುವಿನ ಕದನ ವಿರಾಮಕ್ಕೆ ತಾನು ಕಾರಣ ಎಂದು ಪದೇ ಪದೇ ಹೇಳುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯನ್ನು ತಿರಸ್ಕರಿಸಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿದೇ ಇರುವುದಕ್ಕೆ ಕಾಡುತ್ತಿರುವ ಭಯವಾದರೂ ಏನು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.

ಹನ್ನೊಂದು ದಿನಗಳಲ್ಲಿ ಎಂಟು ಬಾರಿ, ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮದ ಸಂಪೂರ್ಣ ಶ್ರೇಯಸ್ಸನ್ನು ಪಡೆದುಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ಪ್ರಧಾನಿಗಳನ್ನು ಸಮಾನವಾಗಿ ಹೊಗಳಿದ್ದಾರೆ.. ಎರಡು ದೇಶಗಳು ಕದನ ವಿರಾಮ ಘೋಷಿಸುವಂತೆ ಮಾಡಲು ಅಮೆರಿಕದೊಂದಿಗಿನ ವ್ಯಾಪಾರವೇ ಅವರು ಬಳಸಿದ ಅಸ್ತ್ರ ಎಂದು ಟ್ರಂಪ್‌ ಹೇಳುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದ್ದಾರೆ.

ಡೊನಾಲ್ಡ್ ಭಾಯ್ ಅವರ ಉತ್ತಮ ಸ್ನೇಹಿತರಾಗಿರುವ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷರು ಪದೇ ಪದೇ ಹೇಳಿಕೆ ನೀಡುತ್ತಿದ್ದರೂ ಸಂಪೂರ್ಣವಾಗಿ ಮೌನವಹಿಸಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ವ್ಯಾಪಾರವನ್ನು ಮುಂದಿಟ್ಟುಕೊಂಡು ಸ್ಥಗಿತಗೊಳಿಸಿರುವುದಾಗಿ ಟ್ರಂಪ್, ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಫೋಸಾ ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಪುನರುಚ್ಚರಿಸಿದ್ದಾರೆ.

ಪಾಕಿಸ್ತಾನದಲ್ಲಿ ಕೆಲ ಒಳ್ಳೆಯ ನಾಯಕರಿದ್ದಾರೆ. ಭಾರತದ ಪ್ರಧಾನಿ ಮೋದಿ ನನ್ನ ಸ್ನೇಹಿತ ಎಂದು ಟ್ರಂಪ್ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿದೆ ಎಂದು ಅಮೆರಿಕ ಅಧ್ಯಕ್ಷರು ಪದೇ ಪದೇ ಹೇಳಿಕೊಳ್ಳುತ್ತಿದ್ದರೂ ಪ್ರಧಾನಿ ಮೌನತಾಳಿರುವುದು ಏಕೆ ಎಂದು ಜೈರಾಂ ರಮೇಶ್‌ ಕೇಳಿದ್ದಾರೆ.

More articles

Latest article