ಮಾಧ್ಯಮಗಳ ಯುದ್ಧೋನ್ಮಾದ ಹಾಗೂ ಜಲದಿಗ್ಬಂಧನ ದುಸ್ಸಾಹಸ

Most read

ಈ ಯುದ್ಧೋನ್ಮಾದ ಎನ್ನುವುದು ಸರ್ವನಾಶಕ್ಕೆ ರಹದಾರಿ. ಶತ್ರು ರಾಷ್ಟ್ರದತ್ತ ಹರಿಯುವ ನದಿ ನೀರನ್ನು ನಿಲ್ಲಿಸಿ ಬರವನ್ನೋ ಇಲ್ಲಾ ನೀರು ಹರಿಸಿ ಪ್ರಳಯವನ್ನೋ ಸೃಷ್ಟಿಸುತ್ತೇವೆ ಎನ್ನುವುದು ಮೂರ್ಖತನ ಹಾಗೂ ನಿಸರ್ಗ ನಿಯಮದ ಉಲ್ಲಂಘನೆ. ಉಗ್ರರು ಹಾಗೂ ಉಗ್ರವಾದದ ಪೋಷಕರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಪಾಕಿಸ್ತಾನದ ಪ್ರಜೆಗಳ ಮೇಲೆ ಯಾಕೆ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಬೇಕು-ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಥೊ ಥೋ.. ಹರಿಯೋ ನೀರಿಗೆ ದೊಣ್ಣೆ ನಾಯಕರ ಅಪ್ಪಣೆ ಬೇಕಾ?

ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ನಿಲ್ಲಿಸ್ತೇವೆ, ನೀರಿನ ಹಾಹಾಕಾರದಿಂದಲೇ ಪಾಕಿಸ್ತಾನ ನಾಶವಾಗುತ್ತದೆ. ನಮ್ಮ ಆಣೆಕಟ್ಟೆಯಿಂದ ನೀರು ಹರಿಸಿ ಪಾಕಿಸ್ತಾನದಲ್ಲಿ ಪ್ರವಾಹ ಸೃಷ್ಟಿಸುತ್ತೇವೆ. ಇಡೀ ಪಾಪಿ ಪಾಕಿಸ್ತಾನ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತದೆ. ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಗುದ್ದಾಡುವುದೇ ಬೇಕಿಲ್ಲ. ಈ ರೀತಿ ಜಲ ಬಾಂಬ್ ಸಿಡಿಸಿ ನೆರೆ ಬರ ಸೃಷ್ಟಿಸಿದರೆ ಸಾಕಿ ಪಾಕಿಗಳು ನರಕವಾಸಿಗಳಾಗುತ್ತಾರೆ.

ಹೀಗೆ… ಹಲವಾರು ಊಹಾಪೋಹದ ಅತಿರೇಕದ ಮಾತುಗಳು ಮಾರಿಕೊಂಡ ಮಾಧ್ಯಮಗಳಲ್ಲಿ ಏಪ್ರಿಲ್ 22 ರಿಂದ ವಿಸರ್ಜನೆಗೊಳ್ಳುತ್ತಿವೆ. ಪಹಲ್ಗಾಮ್ ನಲ್ಲಿ ಮತಾಂಧ ಉಗ್ರರು ನಡೆಸಿದ ಭಯೋತ್ಪಾದಕ ದುಷ್ಕೃತ್ಯದಲ್ಲಿ 26 ಜನ ಪ್ರವಾಸಿಗರು ಹತ್ಯೆಗೀಡಾದ ನಂತರ ಇಡೀ ದೇಶದಲ್ಲಿ ವಾರ್ ಮೇನಿಯಾ ಸೃಷ್ಟಿಸಲಾಗಿದೆ. ಉಗ್ರರ ಕೃಪಾ ಪೋಷಿತ ದೇಶ ಪಾಕಿಸ್ತಾನ ಸರ್ವನಾಶವಾಗಬೇಕು ಎಂದು ಬಯಸುವ ಭಾವಾತಿರೇಕ ಹುಟ್ಟಿಸಲಾಗುತ್ತಿದೆ. ಇದಕ್ಕೆ ಮಾಧ್ಯಮಗಳ ಕೊಡುಗೆ ಅಪಾರವಾಗಿದೆ.

ಪೆಹಲ್‌ಗಾಮ್‌ ನ ಬೈಸರನ್‌ ಹುಲ್ಲುಗಾವಲು

ಪ್ರತೀಕಾರ.. ಈಗ ಭಾರತದಾದ್ಯಂತ ಪ್ರತೀಕಾರದ ಉನ್ಮಾದ ಉಕ್ಕೇರುತ್ತಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಪ್ರತೀಕಾರಕ್ಕೆ ಹಾತೊರೆಯುತ್ತಿದೆ. ಅದರ ಭಾಗವಾಗಿ ಭಾರತದಿಂದ ಪಾಕಿಸ್ತಾನದತ್ತ ಹರಿಯುವ ಸಿಂಧು ಹಾಗೂ ಅದರ ಉಪನದಿಗಳ ನೀರನ್ನು ನಿಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಮತಾಂಧ ಸರಕಾರ ಹಾಗೂ ಅದರ ಸಮರ್ಥಕ ಮಾಧ್ಯಮಗಳು ಹೇಳುತ್ತಿವೆ. ಇದಕ್ಕೆ ಪ್ರತಿಯಾಗಿ ‘ನೀರು ನಿಲ್ಲಿಸಿದರೆ ರಕ್ತ ಹರಿಸುತ್ತೇವೆ’ ಎಂದು ಪಾಕಿಸ್ತಾನದ ಅವಿವೇಕಿ ಮತಾಂಧ ನಾಯಕರು ಕೂಗುತ್ತಿದ್ದಾರೆ.

“ಇನ್ನೇನು ಪಾಕಿಸ್ತಾನಕ್ಕೆ ಸಿಂಧೂ ಕಣಿವೆಯ ನೀರು ನಿಂತೇ ಬಿಡುತ್ತದೆ, ಆ ದೇಶದ ಜನ ನೀರಿಲ್ಲದೆ, ಬದುಕಿಲ್ಲದೆ ನಾಶವಾಗುತ್ತಾರೆ” ಎಂಬ ಗೋದಿ ಮಾಧ್ಯಮಗಳ ವ್ಯಾಪಕ  ಪ್ರಚಾರವನ್ನು ಬಹುತೇಕರು ನಂಬಿದ್ದಾರೆ. ಕೇಂದ್ರ ಸರಕಾರ ಪ್ರತೀಕಾರದ ಕ್ರಮವಾಗಿ ಸಿಂಧೂ ಜಲ ಒಪ್ಪಂದವನ್ನು ಅಮಾನತ್ತು ಮಾಡಿದೆ. ಆದರೆ..

ವಾಸ್ತವದಲ್ಲಿ ತನ್ನಿಚ್ಛೆಯಂತೆ ಹರಿಯುವ ನೀರನ್ನು ಇವರಿಚ್ಛೆಯಂತೆ ನಿಲ್ಲಿಸುವುದು ಅಸಾಧ್ಯ. ಪ್ರಾಕೃತಿಕವಾಗಿ ಭಾರತವು ಪಾಕಿಸ್ತಾನದ ಭೂಭಾಗಕ್ಕಿಂತ ಎತ್ತರದಲ್ಲಿರುವುದರಿಂದ ಸಹಜವಾಗಿ ಸಿಂಧೂ ಹಾಗೂ ಅದರ ಉಪನದಿಗಳ ನೀರು ಪಾಕಿಸ್ತಾನದತ್ತ ಹರಿಯುತ್ತವೆ. ಈ ಹರಿವನ್ನು ನಿಲ್ಲಿಸಿ ಹಾಹಾಕಾರ ಸೃಷ್ಟಿಸುವ ಹರಸಾಹಸ ಈಗ ಸಧ್ಯಕ್ಕಂತೂ ಸಾಧ್ಯವಿಲ್ಲ. ಯಾಕೆಂದರೆ ಅಷ್ಟೂ ನೀರನ್ನು ಹಿಡಿದಿಡುವ ಅಣೆಕಟ್ಟೆಗಳು ಇಂಡೋ ಪಾಕ್ ಗಡಿಯಲ್ಲಿ ಇಲ್ಲ. ಕಣಿವೆ ಪ್ರದೇಶದಲ್ಲಿ ಆಗುವ ಮಳೆ ಆಗುತ್ತಲೇ ಇರುತ್ತದೆ, ನದಿ ಹರಿಯುತ್ತಲೇ ಇರುತ್ತದೆ. ನದಿಯ ಹೆಸರಲ್ಲಿ ಮತಾಂಧರ ಉಗ್ರ ಭಾಷಣ ಘೋಷಣೆಗಳು ಮೊಳಗುತ್ತಲೇ ಇರುತ್ತವೆ.

ಹೋಗಲಿ..ನಮ್ಮ ಅಣೆಕಟ್ಟಲ್ಲಿ ನೀರನ್ನು ಸಂಗ್ರಹಿಸಿ ಒಮ್ಮೆಲೇ ಎಲ್ಲಾ ಗೇಟ್ ಗಳನ್ನು ತೆಗೆದರೆ ಸಾಕು ಪಾಕಿಸ್ತಾನದಲ್ಲಿ ಜಲಪ್ರಳಯ ಉಂಟಾಗುತ್ತದೆ ಎಂಬ ಸುದ್ದಿಗೂ ತಲೆ ಬಾಲ ತರ್ಕಗಳಿಲ್ಲ. ಯಾಕೆಂದರೆ ಈ ನದಿಗಳ ಮೇಲೆ ಭಾರತ ಕಟ್ಟಿರುವ ಅಣೆಕಟ್ಟೆಗಳೆಲ್ಲಾ ಪಾಕಿಸ್ತಾನದ ಗಡಿಯಿಂದ ದೂರದಲ್ಲಿವೆ. ಹಾಗೇನಾದರೂ ಮಾಡಿದರೆ ಭಾರತದ ಭೂಪ್ರದೇಶಗಳಲ್ಲೆ ನೆರೆಹಾವಳಿ ಹೆಚ್ಚಾಗಿ ಹಾನಿಯುಂಟಾಗುತ್ತದೆ.

ಹರಿಯುವ ನೀರನ್ನು ಜಲವಿದ್ಯುತ್ ಘಟಕಗಳಿಗೆ ಬಳಸಲು ಸಾಧ್ಯವಿಲ್ಲ, ಯಾಕೆಂದರೆ ಅಂತಹ ಘಟಕಗಳಿಗೆ ಹರಿಯುವ ನೀರು ಬೇಕೇ ಹೊರತು ಆಣೆಕಟ್ಟೆಗಳಲ್ಲಿ ನಿಲ್ಲಿಸಿದ ನೀರಲ್ಲ. ವಿದ್ಯುತ್ ಉತ್ಪಾದನೆಗೆ ನೀರು ಬಳಸಿದರೂ, ಬಳಸಿದ ನಂತರ ಉಳಿಕೆ ನೀರು ಮತ್ತೆ ಹರಿದು ಮುಂದೆ ಹೋಗಲೇ ಬೇಕು.

ಪಾಕಿಸ್ತಾನದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲೇ ಬೇಕೆಂದರೆ ಆ ದೇಶದತ್ತ ಹರಿಯುವ ನೀರಿನ ದಿಕ್ಕನ್ನೇ ಬದಲಿಸಬೇಕು. ಅದು ಅತ್ಯಂತ ವೆಚ್ಚದಾಯಕ ಹಾಗೂ ಅಪಾಯಕಾರಿ ಉಪಾಯ.‌ ಹತ್ತಾರು ವರ್ಷಗಳ ಸಮಯವೂ ಬೇಕಾಗುತ್ತದೆ. ಸಧ್ಯಕ್ಕಂತೂ ನದಿಯ ದಿಕ್ಕು ಬದಲಾವಣೆ ಅಸಾಧ್ಯ.

ಇನ್ನು ಸಿಂಧೂ ನದಿ ಹಾಗೂ ಉಪನದಿಗಳಿಗೆ ಅಡ್ಡವಾಗಿ ಬೃಹತ್ ಡ್ಯಾಂ ಕಟ್ಟಿ ನೀರನ್ನು ನಿಲ್ಲಿಸುತ್ತೇವೆ ಎಂದು ಮಾಧ್ಯಮಗಳ ಕೂಗುಮಾರಿಗಳು ಕೂಗುತ್ತಿವೆ. 2016 ರಲ್ಲಿ ಸಿಂಧೂ ಜಲಾನಯನ ಪ್ರದೇಶದಲ್ಲಿ ಹೊಸ ಡ್ಯಾಂ ಹಾಗೂ ಜನವಿದ್ಯುತ್ ಘಟಕ ಕಟ್ಟಲಾಗುವುದು ಎಂದು ಮೋದಿ ಸರಕಾರವೇ ಸಾರಿ ಸಾರಿ ಹೇಳಿತ್ತು. ಆದರೆ ಆ ಆಶ್ವಾಸನೆಗಳು ಸಿಂಧೂ ನದಿಯಲ್ಲಿ ತೇಲಿಹೋಗಿ ದಶಕವೇ ಉರುಳಿದೆ. ಈಗ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಡ್ಯಾಂ ನಿರ್ಮಾಣ ಆರಂಭಿಸಿದರೂ ಅವು ಪೂರ್ಣಗೊಳ್ಳಲು ಹತ್ತಾರು ವರ್ಷಗಳೇ ಬೇಕು.‌ ಅಷ್ಟರಲ್ಲಿ ಮುಂಬರುವ ಯಾವ ಪ್ರಧಾನಿ ಪಾಕಿಸ್ತಾನಕ್ಕೆ ಬಸ್ ಬಿಡುತ್ತಾರೋ, ಇನ್ಯಾವ ಪ್ರಧಾನಿ ಆ ದೇಶಕ್ಕೆ ಹೋಗಿ ಬಿರಿಯಾನಿ ತಿನ್ನುತ್ತಾರೋ ಅರಿತವರು ಯಾರು?.

ಸಿಂಧೂನದಿ

ಮೊದಲೇ ಮಿಲಿಟರಿ ಹಿಡಿತದಲ್ಲಿರುವ ಮತಿಗೆಟ್ಟ ಮತಾಂಧ ದೇಶ ಪಾಕಿಸ್ತಾನ. ಭಾರತ ನದಿ ನೀರನ್ನು ನಿಲ್ಲಿಸಿದ್ದೇ ಆದರೆ ಇರುವ ಡ್ಯಾಂಗಳ ಮೇಲೆಯೇ ಡ್ರೋಣ್ ದಾಳಿ ಮಾಡಬಹುದು, ಕ್ಷಿಪಣಿಗಳನ್ನು ಹಾರಿಸಬಹುದು, ಸಾವು ಬದುಕಿನ ಪ್ರಶ್ನೆ ಬಂದರೆ ಅಣ್ವಸ್ತ್ರವನ್ನೇ ಪ್ರಯೋಗಿಸುವ ದುಸ್ಸಾಹಸ ಮಾಡಬಹುದು.‌ ಪ್ರತೀಕಾರಕ್ಕೆ ಪ್ರತಿಯಾಗಿ ಪ್ರತೀಕಾರವನ್ನು ನಿಯಂತ್ರಿಸುವುದು ಅಷ್ಟು ಸುಲಭದ ಕೆಲಸವಲ್ಲ. ಯುದ್ಧ ಎನ್ನುವುದು ಅಪಾರ ಹಿಂಸೆಗೆ ಕಾರಣವಾಗುತ್ತದೆಯೇ ಹೊರತು ಯಾರಿಗೂ ನೆಮ್ಮದಿ ತರಲು ಸಾಧ್ಯವಿಲ್ಲ. ಯಾಕೆಂದರೆ ಭಾರತದ ಬಳಿ 172 ಅಣ್ವಸ್ತ್ರಗಳಿದ್ದರೆ, ಪಾಕಿಸ್ತಾನದ ಬಳಿ 170 ವಿನಾಶಕಾರಿ ಅಣ್ವಸ್ತ್ರಗಳ ಸಂಗ್ರಹವಿದೆ. ಪರಸ್ಪರ ಪ್ರತೀಕಾರಕ್ಕಾಗಿ  ಅಣ್ವಸ್ತ್ರ ಪ್ರಯೋಗ ಆರಂಭವಾದರೆ ಎರಡೂ ದೇಶಗಳು ಸರ್ವನಾಶವಾಗುವುದು ಖಚಿತ.

ಈ ಯುದ್ಧೋನ್ಮಾದ ಎನ್ನುವುದು ಸರ್ವನಾಶಕ್ಕೆ ರಹದಾರಿ. ಶತ್ರು ರಾಷ್ಟ್ರದತ್ತ ಹರಿಯುವ ನದಿ ನೀರನ್ನು ನಿಲ್ಲಿಸಿ ಬರವನ್ನೋ ಇಲ್ಲಾ ನೀರು ಹರಿಸಿ ಪ್ರಳಯವನ್ನೋ ಸೃಷ್ಟಿಸುತ್ತೇವೆ ಎನ್ನುವುದು ಮೂರ್ಖತನ ಹಾಗೂ ನಿಸರ್ಗ ನಿಯಮದ ಉಲ್ಲಂಘನೆ.

ಹೌದು.. ಮತಾಂಧರು ಪಹಲ್ಗಾಮ್ ನಲ್ಲಿ ಅಮಾನವೀಯ ಕ್ರೌರ್ಯ ಮೆರೆದಿದ್ದಾರೆ. ಅಂತವರನ್ನು ಹಿಡಿದು ಶಿಕ್ಷಿಸಬೇಕು. ಇಂತಹ ಉಗ್ರರನ್ನು ತರಬೇತಿಗೊಳಿಸುವ ಭಯೋತ್ಪಾದಕ ಶಿಬಿರಗಳನ್ನು ನಾಶಗೊಳಿಸಬೇಕು. ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ಕೊಡುತ್ತಿರುವ ಪಾಕಿಸ್ತಾನದ ಪ್ರಭುತ್ವ ಹಾಗೂ ಮಿಲಿಟರಿಗೆ ರಾಜತಾಂತ್ರಿಕ ನಿರ್ಬಂಧಗಳ ಮೂಲಕ ಮತ್ತೆ ಹಿಂಸೋತ್ಪಾದನೆ ಮರುಕಳಿಸದಂತಹ ಪಾಠ ಕಲಿಸಬೇಕು. ಅಂತಾರಾಷ್ಟ್ರೀಯ ಸಮುದಾಯದ ಬೆಂಬಲವನ್ನು ಪಡೆದು ಉಗ್ರಪೋಷಕ ಪಾಕಿಸ್ತಾನವನ್ನು ಕಟ್ಟಿಹಾಕಬೇಕು.

ಇದೆಲ್ಲವನ್ನೂ ಬಿಟ್ಟು, ಉಗ್ರರು ಹಾಗೂ ಉಗ್ರವಾದದ ಪೋಷಕರ ಮೇಲೆ ಕ್ರಮ ತೆಗೆದುಕೊಳ್ಳುವುದನ್ನು ಬಿಟ್ಟು ಪಾಕಿಸ್ತಾನದ ಪ್ರಜೆಗಳ ಮೇಲೆ ಯಾಕೆ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳಬೇಕು?. ಪಾತಕಿ ಪ್ರಭುತ್ವ ಮಾಡಿದ ಪಾಪದ ಕಾರ್ಯಕ್ಕೆ ಅಮಾಯಕ ಪ್ರಜೆಗಳು ಯಾಕೆ ಬಾಧೆ ಪಡಬೇಕು?. ಏನು ತಪ್ಪು ಮಾಡಿದ್ದಾರೆಂದು ಅಧಿಕೃತವಾಗಿ ವೀಸಾ ಪಡೆದು ಭಾರತಕ್ಕೆ ಬಂದ ಪಾಕಿ ಪ್ರಜೆಗಳನ್ನು ಇದ್ದಕ್ಕಿದ್ದ ಹಾಗೇ ದೇಶದಿಂದ ಹೊರಗೆ ಹಾಕಬೇಕು?

ಯಾಕೆಂದರೆ ಈ ಪ್ರತೀಕಾರ ಎಂದರೆ ಹೀಗೆ ಮತಾಂಧರ ದಾಳಿಗೆ ಅಮಾಯಕರು ಬಲಿಯಾಗಬೇಕು. ಪ್ರಭುತ್ವಗಳ ಮೇಲಾಟಗಳಿಗೆ ಪ್ರಜೆಗಳು ನರಳಬೇಕು. ಅದಕ್ಕೆ ಕುವೆಂಪುರವರು ಹೇಳಿದ್ದು “ಆಳುವವರೆಲ್ಲಾ ಜಿಗಣಿಗಳೇ ಜನರ ನೆತ್ತರಿಗೆ” ಎಂದು. ಯುದ್ಧೋನ್ಮಾದ ನಿಲ್ಲಲಿ, ಹಿಂಸೆಗೆ ಹಿಂಸೆಯೇ ಪ್ರತ್ಯುತ್ತರವಾಗದಿರಲಿ. ಪ್ರತೀಕಾರಗಳಿಗೆ ಪ್ರಜೆಗಳು ಬಲಿಯಾಗದಿರಲಿ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಪಹಲ್ಗಾಮ್ ಉಗ್ರರ ದಾಳಿ| ಹರಡಿದ ಸುಳ್ಳು ಸುದ್ದಿಗಳು

More articles

Latest article