ವ್ಯಾಟಿಕನ್ ಸಿಟಿ: ಪೋಪ್ ಫ್ರಾನ್ಸಿಸ್ ಅವರು ನಿಧನ ಹೊಂದಿದ್ದು, ವ್ಯಾಟಿಕನ್ ಸಿಟಿಯಲ್ಲಿ ಹತ್ತಾರು ಧಾರ್ಮಿಕ ಪ್ರಕ್ರಿಯೆಗಳು ಮತ್ತು ಹೊಸ ಪೋಪ್ ಆಯ್ಕೆ ನಡೆಯಲಿದೆ. ಇದರ ವಿಧ ವಿಧಿವಿಧಾನಗಳು ವಿಶಿಷ್ಟವಾಗಿದ್ದು ಕುತೂಹಲಕಾರಿ ಆಂಶಗಳು ಇಲ್ಲಿವೆ.
ಹೊಸ ಪೋಪ್ ಆಯ್ಕೆಯಾಗುವವರೆಗಿನ ಅವಧಿಯನ್ನು ಕ್ಯಾಥೋಲಿಕ್ ಚರ್ಚ್‌ನ ‘ಸೆಡ್ ವೆಕೆಂಟೆ’ (ಖಾಲಿ ಅವಧಿ) ಎಂದು ಕರೆಯಲಾಗುತ್ತದೆ. ಈ ಅವಧಿಯಲ್ಲಿ ಹಿರಿಯ ಕಾರ್ಡಿನಲ್ ಅವರು ದೈನಂದಿನ ಕೆಲಸಗಳನ್ನು ನಿರ್ವಹಿಸುತ್ತಾರೆ.
ಕಾರ್ಡಿನಲ್ ಅವರನ್ನು ‘ಕ್ಯಾಮೆರ್ಲೆಂಗೊ’ ಎಂದೂ ಕರೆಯಲಾಗುತ್ತದೆ. 2019ರಲ್ಲಿ ಪೋಪ್ ಫ್ರಾನ್ಸಿಸ್ ನೇಮಿಸಿದ ಐರಿಷ್–ಅಮೆರಿಕನ್ ಕೆವಿನ್ ಫಾರೆಲ್ ಅವರು ಈಗ ಆ ಕೆಲಸವನ್ನು ನಿಬಾಯಿಸಲಿದ್ದಾರೆ. ‘ಕ್ಯಾಮೆರ್ಲೆಂಗೊ’ ಹೊರತುಪಡಿಸಿ ಚರ್ಚ್ ನ ಅಧಿಕಾರದಲ್ಲಿರುವ ಎಲ್ಲರೂ ಪೋಪ್ ನಿಧನದ ಕೂಡಲೇ ರಾಜೀನಾಮೆ ನೀಡಬೇಕಾಗುತ್ತದೆ.
ಅಂತ್ಯ ಸಂಸ್ಕಾರ ನಡೆಯುವುದು ಹೀಗೆ:
ಸಾಂಪ್ರದಾಯಿಕವಾಗಿ, ‘ಕ್ಯಾಮೆರ್ಲೆಂಗೊ’ ಅವರ ಪ್ರಮುಖ ಕೆಲಸ ಪೋಪ್ ಅವರ ಮರಣವನ್ನು ದೃಢೀಕರಿಸುವುದು. ವಿಶೇಷ ಬೆಳ್ಳಿಯ ಸುತ್ತಿಗೆಯಿಂದ ಪೋಪ್ ತಲೆಗೆ ತಟ್ಟಿ, ಅವರ ಹುಟ್ಟು ಹೆಸರನ್ನು ಕರೆಯುತ್ತಾರೆ. ಪೋಪ್ ಧರಿಸಲೆಂದೇ ವಿಶೇಷವಾಗಿ ತಯಾರಿಸಲಾಗುವ ಫಿಶರ್ ಮ್ಯಾನ್ಸ್ ರಿಂಗ್ ಎಂದು ಕರೆಯಲಾಗುವ ಚಿನ್ನದ ಉಂಗುರವನ್ನು ಒಡೆದು ಹಾಕಲಾಗುತ್ತದೆ. ಈ ಉಂಗುರವನ್ನು ದಾಖಲೆಗಳಿಗೆ ಮೊಹರು ಹಾಕಲು ಬಳಸಲಾಗುತ್ತಿತ್ತು.ಈ ಹಿಂದೆ ನಕಲನ್ನು ತಡೆಯಲು ಉಂಗುರವನ್ನು ಒಡೆದು ಹಾಕಲಾಗುತ್ತಿತ್ತು. ಈಗ ಕಾರ್ಡಿನಲ್‌ಗಳ ಸೆಡ್ ವೆಕೆಂಟೆ ಸಮಾವೇಶದಲ್ಲಿ ಹಾಲಿ ಪೋಪ್ ಅಧಿಕಾರ ಕೊನೆಗೊಂಡಿದೆ ಎನ್ನುವುದರ ಸಂಕೇತವಾಗಿ ಉಂಗುರವನ್ನು ಒಡೆದು ಹಾಕಲಾಗುತ್ತದೆ.
ಜಗತ್ತಿನಾದ್ಯಂತ ಇರುವ ಕಾರ್ಡಿನಲ್‌ಗಳು ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಯನ್ನು ‘ಜನರಲ್ ಕಾಂಗ್ರೆಗೇಷನ್ಸ್’ (general congregations) ಎಂದು ಕರೆಯಲಾಗುತ್ತದೆ. ಕಾರ್ಡಿನಲ್ ಗಳು ಮೃತದೇಹ ಸಂಸ್ಕಾರದ ದಿನವನ್ನು ನಿಗದಿಪಡಿಸುತ್ತಾರೆ. ಇದು ಮರಣ ಹೊಂದಿದ ನಾಲ್ಕು ದಿನಗಳಿಂದ ಆರು ದಿನಗಳ ಒಳಗಾಗಿ ನಡೆಯಬೇಕು.
ಫ್ರಾನ್ಸಿಸ್ ಅವರ ಹಿಂದಿನ ಪೋಪ್ ಅವರನ್ನು ವ್ಯಾಟಿಕನ್ ಸಿಟಿಯ ಸಂತ ಪೀಟರರ ಬೆಸಿಲಿಕಾದಲ್ಲಿ (St Peter’s Basilica) ಅಂತ್ಯ ಸಂಸ್ಕಾರ ಮಾಡಲಾಗಿತ್ತು. ಫ್ರಾನ್ಸಿಸ್ ಅವರು ತಮ್ಮನ್ನು ರೋಮ್ ನಲ್ಲಿರುವ ಸಂತ ಮರಿಯಾ ಮಗ್ಗಿಯೋರ್ ಬೆಸಿಲಿಕಾದಲ್ಲಿ ಅಂತ್ಯ ಸಂಸ್ಕಾರ ಮಾಡಬೇಕು ಎಂದು ಈ ಮೊದಲೇ ತಿಳಿಸಿದ್ದರು.
ಅವರ ಪಾರ್ಥೀವ ಶರೀರವನ್ನು ಮರ ಹಾಗೂ ಸತುವಿನಿಂದ ಮಾಡಲಾದ ಶವಪೆಟ್ಟಿಯಲ್ಲಿ ರಕ್ಷಿಸಲಾಗುತ್ತದೆ. ಬಳಿಕ ಸಂಪ್ರದಾಯದ ಪ್ರಕಾರ ಅದನ್ನು ಒಡೆಯಲಾಗುತ್ತದೆ. ಸೇಂಟ್ ಪೀಟರ್ಸ್ ಬೆಸಿಲಿಕಾದಲ್ಲಿ ಅವರ ಪಾರ್ಥೀವ ಶರೀರವನ್ನು ಭಕ್ತರ ದರ್ಶನಕ್ಕೆ ಇರಿಸಲಾಗುತ್ತದೆ. ಸಾಂಪ್ರದಾಯಿಕವಾಗಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ಮೃತದೇಹವನ್ನು ಇಡಲಾಗುತ್ತದೆ.
ಭಾರಿ ಗೌಪ್ಯವಾಗಿ ನಡೆಯಲಿದೆ ಪೋಪ್ ಚುನಾವಣೆ :
ಪೋಪ್ ಅವರ ಚುನಾವಣೆಯು ಭಾರಿ ಗೌಪ್ಯವಾಗಿ ನಡೆಯುತ್ತದೆ. ಮತದಾನ ಪ್ರಕ್ರಿಯೆಯ ಸಮಯದಲ್ಲಿ ಕಾರ್ಡಿನಲ್ ಗಳು ಗೋಪ್ಯತೆಗೆ ಪ್ರತಿಜ್ಞೆ ಮಾಡುತ್ತಾರೆ. ಹೊರಗಿನ ಪ್ರಪಂಚದ ಸಂಪರ್ಕದಿಂದ ದೂರವಿರುತ್ತಾರೆ. ಯಾರಿಗೂ ಪ್ರವೇಶ ಇರದ ಕೋಣೆಯಲ್ಲಿ ಕಾರ್ಡಿನಲ್ ಗಳು ವಿಶ್ರಾಂತಿ ಪಡೆಯುತ್ತಾರೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಹೊರತುಪಡಿಸಿ, ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಲು ಅವರಿಗೆ ಅವಕಾಶ ಇರುವುದಿಲ್ಲ. ಮೊಬೈಲ್, ರೇಡಿಯೋ, ದೂರದರ್ಶನ ಮತ್ತು ಪತ್ರಿಕೆಗಳನ್ನೂ ಅವರಿಗೆ ನೀಡಲಾಗುವುದಿಲ್ಲ. ಮನೆಗೆಲಸ ಮತ್ತು ಭದ್ರತಾ ಸಿಬ್ಬಂದಿ ಕೂಡ ಗೋಪ್ಯತೆ ಪಾಲಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ. ಹೊಸ ಪೋಪ್ ಆಯ್ಕೆಯಾಗುವವರೆಗೂ ಕಾರ್ಡಿನಲ್ ಗಳು ಅಲ್ಲಿಯೇ ಇರುತ್ತಾರೆ.
80 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾರ್ಡಿನಲ್ ಗಳು ಮಾತ್ರ ಚುನಾವಣೆಗೆ ಸ್ಪರ್ಧೆ ಮಾಡಬಹುದು. ಕಾರ್ಡಿನಲ್ ಗಳು ಮತ ಚಲಾಯಿಸಿದ ನಂತರ, ಮತಪತ್ರಗಳನ್ನು ಮಿಶ್ರಣ ಮಾಡಿ ಎಣಿಕೆ ಮಾಡಲಾಗುತ್ತದೆ. ಪೋಪ್ ಆಗಿ ಆಯ್ಕೆಯಾಗಲು ಮೂರನೇ ಎರಡರಷ್ಟು ಮತಗಳನ್ನು ಪಡೆಯಬೇಕಾಗಿರುತ್ತದೆ.
ಪ್ರತಿ ಮತದಾನದ ನಂತರ, ಮತಪತ್ರಗಳನ್ನು ಸುಡಲಾಗುತ್ತದೆ. ಯಾವುದೇ ಅಭ್ಯರ್ಥಿಯು ಸಾಕಷ್ಟು ಮತಗಳನ್ನು ಪಡೆಯದಿದ್ದರೆ, ಸಿಸ್ಟೀನ್ ಚಾಪೆಲ್ ನ ಚಿಮಣಿಯಿಂದ ಕಪ್ಪು ಹೊಗೆ ಮೇಲೇರುತ್ತದೆ. ಪೋಪ್ ಆಯ್ಕೆ ಪೂರ್ಣವಾಗಿಲ್ಲ, ಮತದಾನ ಮುಂದುವರಿಯಲಿದೆ ಎಂದು ಹೊರ ಜಗತ್ತಿಗೆ ಸೂಚನೆ ನೀಡುವ ವಿದಾನ ಇದಾಗಿದೆ.
ಒಬ್ಬ ಅಭ್ಯರ್ಥಿ ಮೂರನೇ ಎರಡರಷ್ಟು ಮತಗಳನ್ನು ಪಡೆಯುವವರೆಗೆ ಪ್ರತಿದಿನ ಬೆಳಿಗ್ಗೆ ಮತ್ತು ಮಧ್ಯಾಹ್ನ ಎರಡು ಬಾರಿ ಚುನಾವಣೆ ನಡೆಯುತ್ತದೆ. ಪ್ರತಿ ಅಧಿವೇಶನದ ಕೊನೆಯಲ್ಲಿ, ಮತಪತ್ರಗಳನ್ನು ಚಾಪೆಲ್ ನ ಒಲೆಯ ಮೇಲೆ ಸುಡಲಾಗುತ್ತದೆ. ಅಪೋಸ್ಟೋಲಿಕ್ ಅರಮನೆಯ ಮೇಲೆ ಹೊಗೆಯನ್ನು ಬಿಡಲಾಗುತ್ತದೆ. ಆಯ್ಕೆ ಯಶಸ್ವಿಯಾದರೆ ಬಿಳಿ ಬಣ್ಣದ ಹೊಗೆ ಬರುತ್ತದೆ. ಬಿಳಿ ಹೊಗೆ ಬರುವಾಗ ಸಂತ ಪೀಟರರ ಬೆಸಿಲಿಕಾದಲ್ಲಿ ಘಂಟನಾದ ಮೊಳಗುತ್ತದೆ.
ಸದ್ಯ 135 ಕಾರ್ಡಿನಲ್‌ಗಳಿದ್ದು, ಇದರಲ್ಲಿ 108 ಮಂದಿಯನ್ನು ಫ್ರಾನ್ಸಿಸ್ ನೇಮಕ ಮಾಡಿದ್ದಾರೆ. ಈ ಪೈಕಿ ಯೂರೋಪಿನ 53, ಉತ್ತರ ಅಮೆರಿಕದ 20, ಆಫ್ರಿಕಾದ 18, ಏಷ್ಯಾದ 23, ಓಷಿಯಾನಿಯಾದ 4 ಮತ್ತು ದಕ್ಷಿಣ ಅಮೆರಿಕದ 17 ಮಂದಿ ಇದ್ದಾರೆ.
ಹೊಸದಾಗಿ ಆಯ್ಕೆಯಾದ ಪೋಪ್‌ಗೆ ತಮ್ಮ ಆಯ್ಕೆಯನ್ನು ಒಪ್ಪಿಕೊಳ್ಳಲು ಕಾರ್ಡಿನಲ್ ಗಳ ಡೀನ್ (ಸದ್ಯ ಕಾರ್ಡಿನಲ್ ಜಿಯೋವಾನಿ ಬಟಿಸ್ಟಾ ರೆ ಅವರು ಇದ್ದಾರೆ) ಕೇಳಿಕೊಳ್ಳುತ್ತಾರೆ. ಅಲ್ಲದೆ ಮುಂದೆ ಬಳಕೆ ಮಾಡಲು ಬಯಸುವ ಹೆಸರನ್ನೂ ಸೂಚಿಸಲು ತಿಳಿಸುತ್ತಾರೆ. ಅದಾದ ಕೂಡಲೇ ಅವರು ರೋಮ್‌ನ ಬಿಷಪ್ ಹಾಗೂ ಪೋಪ್ ಆಗಿ ಆಯ್ಕೆಯಾದಂತೆ ಆಗುತ್ತದೆ.