ಮೊದಲನೆಯದಾಗಿ ನೀವು ಒಂದಲ್ಲ, ಎರಡಲ್ಲ, ಹತ್ತು ಬಾರಿ ಸಮೀಕ್ಷೆ ಮಾಡಿಸಿ, ನಿಮ್ಮ ಜನಸಂಖ್ಯೆ ಏನಿರುತ್ತದೆಯೋ ಅದೇ ಇರುತ್ತದೆ..
ಕರ್ನಾಟಕದ ಒಟ್ಟು ಜನಸಂಖ್ಯೆಯಲ್ಲಿ ನಿಮ್ಮ ಮೂರು ಜಾತಿಗಳು, ಉಪಜಾತಿಗಳ ಪ್ರಮಾಣ ಶೇ.25 ದಾಟಲು ಸಾಧ್ಯವಿಲ್ಲ. ನಿಮ್ಮ ಉತ್ಪ್ರೇಕ್ಷೆಯ ಬೆಲೂನಿಗೆ ಸತ್ಯದ ಸೂಜಿ ಚುಚ್ಚುವ ದಿನಗಳು ಹತ್ತಿರದಲ್ಲಿದೆ…
ಕಾಂತರಾಜ ಸಮೀಕ್ಷೆ ಬಹಿರಂಗವಾಗಲಿ..
ಅಲ್ಲಿಯವರೆಗೆ ನೀವು ಮೌನವಾಗಿರುವುದು ಪ್ರಜಾಪ್ರಭುತ್ವದ ಲಕ್ಷಣ…
ಎರಡನೆಯದಾಗಿ ವರದಿ ಬಹಿರಂಗವಾಗದಿದ್ದರೂ ಜಾತಿ ಗಣತಿ ಅವೈಜ್ಞಾನಿಕವಾಗಿದೆ ಎಂದು ಆರೋಪಿಸುತ್ತಿದ್ದೀರಿ…
ಹೌದು ಗಣತಿದಾರರು ಗೊತ್ತಿದ್ದೂ, ಗೊತ್ತಿಲ್ಲದೆ ತಪ್ಪು ಮಾಡುತ್ತಾರೆ.. ಇದು ಎಲ್ಲಾ ಸಮೀಕ್ಷೆಗಳ ಸಂದರ್ಭದಲ್ಲಿಯೂ ಸತ್ಯ. ಇದನ್ನು ಸರಿಪಡಿಸಬೇಕು…
ಆದರೆ ಸಮೀಕ್ಷೆ ನಡೆಸುವಾಗ ನಿಮ್ಮ ನಿಮ್ಮ ಜಾತಿಗಳ ಕುಟುಂಬದವರಿಗೆ ಸೂಕ್ತ ತರಬೇತಿ ನೀಡಬೇಕಾಗಿದ್ದು ನಿಮ್ಮ ಜವಾಬ್ದಾರಿಯಲ್ಲವೇ?
ಉಪಜಾತಿ ಹೇಳಬೇಕೆ ಬೇಡವೇ? ಕೇವಲ ಜಾತಿ ಹೆಸರು ಹೇಳಿದರೆ ಸಾಕೆ? ಹೀಗೆ ನಿಮ್ಮ ಕುಲಸ್ಥರಿಗೆ ಮಾರ್ಗದರ್ಶನ ನೀಡದೆ ಈಗ ‘ಅನ್ಯಾಯ, ಅನ್ಯಾಯ ‘ ಎಂದು ಕೂಗಾಡಿದರೆ ನಿಮ್ಮ ಉತ್ತರದಾಯಿತ್ವ ಲೋಪದ ಆರೋಪದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ…
ಮೂರನೆಯದಾಗಿ ಕಳೆದ 73 ವರ್ಷಗಳಲ್ಲಿ ಲಿಂಗಾಯತರು 14 ಬಾರಿ, ಒಕ್ಕಲಿಗರು 5 ಬಾರಿ, ಬ್ರಾಹ್ಮಣರು ಎರಡು ಬಾರಿ ಮುಖ್ಯಮಂತ್ರಿಗಳಾಗಾದ್ದೀರಿ. ಸಚಿವ ಸಂಪುಟದಲ್ಲಿ ಶೇ.60ಕ್ಕೂ ಹೆಚ್ಚು ಪಾಲು ಪಡೆದುಕೊಂಡಿದ್ದೀರಿ. ಆದರೂ ನಿಮ್ಮ ಈ ದಬ್ಬಾಳಿಕೆ ಮುದುವರಿದಿದೆ…
ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಪರಿಶಿಷ್ಟ ಸಮುದಾಯದಿಂದ ಇದುವರೆಗೂ ಒಬ್ಬರೂ ಮುಖ್ಯಮಂತ್ರಿಗಳಾಗಿಲ್ಲ.. ಅವರು ಸಿಡಿದೆದ್ದರೆ?…
ಇಂತಹ ಅನ್ಯಾಯವನ್ನು ಯಾವುದೇ ಪ್ರಜಾಪ್ರಭುತ್ವದಲ್ಲಿ ನಡೆಯಬಾರದು…
ಆದರೆ ಜಾತಿಯ ಗರ ಬಡೆಸಿಕೊಂಡಿರುವ ನಿಮಗಿದು ಬೇಕಾಗಿಲ್ಲ…
ನಾಲ್ಕನೆಯದಾಗಿ ಕಾಂತರಾಜ ಆಯೋಗದ ಸಮೀಕ್ಷೆಯ ವರದಿ ಸಾರ್ವಜನಿಕವಾಗಿ ಪ್ರಕಟಗೊಳ್ಳುವವರೆಗೂ ಕಾಯದೆ ಬಾಯಿಗೆ ಬಂದಂತೆ ಮಾತಾಡುವ ನಿಮ್ಮ ಜಾತಿ ಅಹಮಿಕೆ ಪ್ರಜಾಪ್ರಭುತ್ವದಲ್ಲಿ ತಿರಸ್ಕರಿಸಲ್ಪಡುತ್ತದೆ….
ಐದನೆಯದಾಗಿ ಅಹಿಂದ ಸಮರ್ಥವಾಗಿ ಸಂಘಟಿತರಾಗಿದ್ದರೆ, ಇಲ್ಲಿನ ಫ್ಯೂಡಲ್, ಮತಧರ್ಮಾಂದ ರಾಜಕಾರಣದ ವಿರುದ್ಧ ಖಚಿತವಾದ, ಸಂಘಟಿತವಾದ ರಾಜಕೀಯ ಪ್ರಯೋಗ ನಡೆದಿದ್ದರೆ ನಿಮ್ಮ ಮೂರು ಜಾತಿಗಳ ಮತಗಳು ನಿರ್ಣಾಯಕವೇ ಅಲ್ಲ. ನಿಮ್ಮ ಬೆಂಬಲವಿಲ್ಲದೆಯೇ ಅಧಿಕಾರಕ್ಕೆ ಬರಬಹುದು…
2023ರಲ್ಲಿ ದಲಿತರು, ಮುಸ್ಲಿಂರು, ಮಹಿಳೆಯರ ಬೆಂಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ನಿಮಗೆ ಮರೆತು ಹೋಯಿತೇ?(ಇದು ಶಾಶ್ವತವಲ್ಲ… ತಮ್ಮ ನಿರೀಕ್ಷೆ ಹುಸಿಯಾದರೆ ಅವರ ನಿರ್ಧಾರ ಬದಲಾಗುತ್ತದೆ ಎನ್ನುವುದು ಬೇರೆಯದೇ ಚರ್ಚೆ)
ಆರನೆಯದಾಗಿ 1969-1979ರ ಕರ್ನಾಟಕದ ರಾಜಕಾರಣದಲ್ಲಿ ದೇವರಾಜ ಅರಸು ಅವರ ಹಿಂದುಳಿದ, ಅತಿ ಹಿಂದುಳಿದ ಪ್ರಾತಿನಿಧ್ಯ ರಾಜಕಾರಣದ ಕಾರಣಕ್ಕೆ ನಿಮ್ಮ ಪ್ರಾಬಲ್ಯ ಕುಂಠಿತವಾಗಿದ್ದು…
ನಂತರ ಕಾಂಗ್ರೆಸ್ ಪಕ್ಷ ಹರಾಕಿರಿ ಮಾಡಿಕೊಂಡಿದ್ದು, ಅದೇ ಸಮಯದಲ್ಲಿ ಜನತಾ-ಜನತಾದಳದ ಫ್ಯೂಡಲ್ ರಾಜಕಾರಣದ ಫಲವಾಗಿ ನೀವು ಮರಳಿ ಪ್ರವರ್ಧಮಾನಕ್ಕೆ ಬಂದಿದ್ದು…
2013ರಲ್ಲಿ ಸಿಕ್ಕ ಅವಕಾಶವನ್ನು ಸಿದ್ದರಾಮಯ್ಯ ಸರ್ಕಾರ ವ್ಯರ್ಥಗೊಳಿಸಿದ್ದು… ಹೀಗೆ ಎಲ್ಲದರ ಗಂಟು ಬಿಚ್ಚಿದರೆ ನಿಮ್ಮ ಬಣ್ಣ ಬಯಲಾಗುತ್ತದೆ…
ಕಡೆಯದಾಗಿ ನೀವು ಕಾಂತರಾಜ ಸಮೀಕ್ಷೆ ಬಹಿರಂಗಗೊಳ್ಳುವವರೆಗೂ ಸುಮ್ಮನಿರಬೇಕಾಗಿರುವುದು ಪ್ರಜಾ ಧರ್ಮ..
ಸಮೀಕ್ಷೆ ಪ್ರಕಟಗೊಂಡ ನಂತರವೂ ಪ್ರಜಾತಾಂತ್ರಿಕವಾಗಿ ಚರ್ಚೆ, ಸಂವಾದ ನಡೆಸಬೇಕು… ಅದರಾಚೆಗೆ ಠೇಂಕಾರದ, ಜಾತಿ ಅಹಮಿಕೆಯ
ಮಾತುಗಳು ತಿರಸ್ಕರಿಸಲ್ಪಡುತ್ತವೆ…
ಪಾರ್ಕಲಾಂ…
ಬಿ. ಶ್ರೀಪಾದ ಭಟ್
ಇದನ್ನೂ ಓದಿ- http://ಜಾತಿಗಣತಿ ವರದಿ | ಬಿಜೆಪಿಯಲ್ಲಿರುವ ದಲಿತ ಶೋಷಿತ ಸಮುದಾಯದ ನಾಯಕರು ತಮ್ಮ ನಿರ್ಧಾರ ಪ್ರಕಟಿಸಬೇಕು https://kannadaplanet.com/caste-census-oppressedleaders-in-bjp-should-annonce-their-decission/